ಜೈಪುರದಲ್ಲಿ ಕಾಂಗ್ರೆಸ್ ಕಹಳೆ
ದೀರ್ಘಕಾಲದ ಅನಂತರ ರಾಜಸ್ಥಾನದ ಜೈಪುರದಲ್ಲಿ ಮುಂದಿನವಾರ ಸಮಾವೇಶಗೊಳ್ಳಲಿರುವ ಅಖಿಲ ಭಾತರ ಕಾಂಗ್ರೆಸ್ ಸಮಿತಿಯ ಅಧಿವೇಶನದಲ್ಲಿ ಲೋಕಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ರಾಜಕೀಯ ತಂತ್ರಕ್ಕೇ ಆದ್ಯತೆ ಸಿಗುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ.
ಈ ಅಧಿವೇಶನದಲ್ಲಿನ ನಿರ್ಣಯಗಳು ಹಾಗೂ ಬಹಿರಂಗ. ಮುಕ್ತ ಚರ್ಚೆಯಲ್ಲಿ ಪ್ರಮುಖ ಕಾಂಗ್ರೆಸ್ಸಿಗರು ಪ್ರಕಟಿಸುವ ಅನಿಸಿಕೆ - ಅಭಿಪ್ರಾಯಗಳು, ಕರ್ನಾಟಕವೂ ಸೇರಿದಂತೆ ಈ ವರ್ಷದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ನಾಲ್ಕು ದೊಡ್ಡ ರಾಜ್ಯಗಳ ಮೇಲೂ ಪರಿಣಾಮ ಬೀರುವುದು ಖಚಿತ. ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಕೂಟದ ಸರ್ಕಾರದ ಸಾಧನೆ - ಸೋಲುಗಳು ಹಾಗೂ ಒಕ್ಕೂಟದ ಉಪಯುಕ್ತತೆ ಕುರಿತಂತೆ, ಅಂದರೆ, ಈಗಿನ ಮಿತ್ರ ಪಕ್ಷಗಳ ಜೆತೆಯಲ್ಲೇ ಒಕ್ಕೂಟ ಮುಂದುವರಿಯ ಬೇಕೇ ಎನ್ನುವ ಪ್ರಶ್ನೆ ಕುರಿತು, ಬಹಿರಂಗ ಚರ್ಚೆ ನಡೆಯದೇ ಇದ್ದರೂ ಅಂತರಂಗದ ಮಾತುಕತೆಗಳಲ್ಲಿ ಅದಕ್ಕೆ ಹೆಚ್ಚು ಪ್ರಾಮುಖ್ಯ ಸಿಗಲೂ ಬಹುದು. ಹಲವು ಪ್ರಕಟಿತ ವರದಿಗಳನ್ನು ಗಮನಿಸಿದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಸಂಂಗಾತಿಗಳು ಚುನಾವಣೆಯಲ್ಲಿ ಸಕ್ರಿಯವಾಗಿ ನೆರವು ನೀಡಬಲ್ಲ, ಸಾಮಾನ್ಯ ಜನರ ಬೆಂಬಲವನ್ನು ಗಳಿಸಿಕೊಡಬಲ್ಲ ಹೊಸ ಜನಪ್ರಿಯ ಯೋಜನೆಗಳ ಪ್ರಕಟಣೆಯ ಮೂಲಕ ಚುನಾವಣೆಯ ರಣಕಹಳೆಯನ್ನು ಮೊಳಗಿಸುವ ಚಿಂತನೆ ನಡೆಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಈಗಾಗಲೇ ಸಾಕಷ್ಟು ಚಿಂತನೆ ನಡೆದಿರುವ ಆಹಾರ ಭದ್ರತೆಯ ಕಾಯಿದೆ, ಈ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದೀಯ ಸಮಿತಿಯೊಂದು ಪರಿಶೀಲನೆ ನಡೆಸಿ, ಸಂಸತ್ತಿಗೆ ವರದಿಯನ್ನು ಸಲ್ಲಿಸಲು ಸಿದ್ಧವಾಗಿದೆ.
ಕಾಂಗ್ರೆಸ್ಸಿನ ನೂತನ ಚಿಂತನೆಯಂತೆ, ಅಗ್ಗದ ಆಹಾರಧಾನ್ಯ ಪೂರೈಕೆಯ ಯೋಜನೆಯಂತೆ, ಇನ್ನು ಮುಂದೆ ಜನವರ್ಗಗಳನ್ನು ಬಡತನದ ರೇಖೆಯ ಕೆಳಗಿನವರು ಮತ್ತು ಮೇಲಿನವರೆಂದು ಪ್ರತ್ಯೇಕಗೊಳಿಸುವ ವಿಧಾನವನ್ನು ಕೈಬಿಟ್ಟು ಆಹಾರದ ಭದ್ರತೆ ಯೋಜನೆಯ ಫಲ ಯಾರಿಗುಂಟು, ಯಾರಿಗಿಲ್ಲ ಎನ್ನುವ ವರ್ಗೀಕರಣವನ್ನು ಜಾರಿಗೆ ತರುವುದು ಸೂಕ್ತ. ಈಗಿನ ಅಂದಾಜಿನಂತೆ ಗ್ರಾಮೀಣ ಪ್ರದೇಶಗಳ ಶೇಕಡಾ 75 ರಷ್ಟು ಜನ, ನಗರಪ್ರದೇಶಗಳಲ್ಲಿ ಶೇಕಡಾ 50 ರಷ್ಟು ಜನರಿಗೆ ಆಹಾರ ಭದ್ರತೆಯ ಖಾತ್ರಿ ಲಭ್ಯವಾಗಬಹುದು. ಅಂದರೆ ಒಟ್ಟು ಜನಸಂಖ್ಯೆಯ ಶೇಕಡ 67ರಷ್ಟು ಜನರಿಗೆ ಸೌಲಭ್ಯ ಸಿಕ್ಕರೆ, ಶೇಕಡಾ 33ರಷ್ಟು ಮಂದಿ ಯೋಜನೆಯ ಹೊರಗೇ ಉಳಿಯಲಿದ್ದಾರೆ - ಇದು ಇನ್ನೂ ಪರಿಶೀಲನೆಯಲ್ಲಿರುವ ಚಿಂತನೆ. ಇದರ ಜತೆಯಲ್ಲೇ ಸರ್ವರಿಗೂ ದುಡಿಯುವ ಹಕ್ಕಿನ ಯೋಜನೆಯೂ ಜಾರಿಗೆ ತರಬೇಕೆನ್ನುವ ಒತ್ತಾಯವೂ ಬರಬಹುದು. ಆಹಾರದ ಭದ್ರತೆ ಯೋಜನೆಯಂತೆ ಕೇಂದ್ರ ಸರ್ಕಾರದ ಬೊಕ್ಕಸದ ಮೇಲೆ ವರ್ಷದಲ್ಲಿ ಸುಮಾರು 1,15,000 ಲಕ್ಷ ಕೋಟಿ ರುಪಾಯಿಗಳ ಹೊರೆ ಬೀಳಬಹುದು. ಈಗಿನ ಚಿಂತನೆಯಂತೆ, ಕೇಂದ್ರ ಸರ್ಕಾರ ಯೋಜನೆಯ ಹಂದರ ಹಾಗೂ ಚೌಕಟ್ಟನ್ನು ನಿರ್ಮಿಸಿ, ಕೆಲವು ವಿವರಗಳನ್ನು ರಾಜ್ಯಗಳ ಸರ್ಕಾರಗಳ ವಿವೇಚನೆಗೇ ಬಿಡಲೂ ಬಹುದು. ಕಾಂಗ್ರೆಸ್ ಅಧಿವೇಶನದಲ್ಲಿ ತೀರ್ಮಾನವಾಗುವ ವಿಷಯವಲ್ಲ ಇದು. ಆದರೆ ಆಹಾರ ಭದ್ರತೆಯಂತಹ ಗಂಭೀರವಾದ ವಿಚಾರದಲ್ಲಿ ಕಾಂಗ್ರೆಸ್ ಸಂಘಟನೆಯ ಚಿಂತನೆಯ ಕಾಣಿಕೆ ಇತ್ತು ಎನ್ನುವುದರ ಪ್ರದರ್ಶನ ಮುಖ್ಯ. ಜೈಪುರದಲ್ಲಿ ಕಾಂಗ್ರೆಸ್ ಚುನಾವಣೆ ರಣ ಕಹಳೆ ಮೊಳಗುವುದಂತೂ ಖಚಿತವಾಗಿದೆ.