ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪರಿಶಿಷ್ಟ ರೈತರಿಗೆ ನೆರವು

Lingaraj Badiger
Updated On : 17 Jan 2013, 2:49 am

ರಾಜ್ಯದಲ್ಲಿ ಕೃಷಿಕರಿಗೆ ಈಗಾಗಲೇ ಸರ್ಕಾರ ನೀಡುತ್ತಿರುವ ನೆರವಿನ ಜತೆಯಲ್ಲೇ ಪರಿಶಿಷ್ಟ ಜಾತಿ-ಪಂಗಡಗಳಿಗೆ ಸೇರಿದ ರೈತರಿಗೆ ಒಂದು ವಿಶೇಷ ಕೃಷಿ ನೆರವಿನ ಕಾರ್ಯಕ್ರಮವನ್ನು ರೂಪಿಸಲು ಕೃಷಿ ಮಂತ್ರಿ ಉಮೇಶ್ ಕತ್ತಿ ಅವರು ಚಿಂತನೆ ನಡೆಸಿರುವುದು ಸ್ವಾಗತಕ್ಕೆ ಅರ್ಹವಾದ ವಿಚಾರವೇ. ಈಗ ಇಡೀ ದೇಶದಲ್ಲಿ ರೈತರ ಧ್ವನಿ ಮೆತ್ತಗಾಗಿದೆ. ಕರ್ನಾಟಕದಲ್ಲಿ ರೈತ ಸಂಘಟನೆಗಳು ಹಿಂದೆ ಪಡೆದಿದ್ದ ಹೋರಾಟದ ಶಕ್ತಿಯನ್ನು ಕಳೆದುಕೊಂಡಂತಿದೆ. ಈ ಹಿನ್ನೆಲೆಯಲ್ಲಿ, ಪರಿಶಿಷ್ಟ ಜಾತಿ ಪಂಗಡಗಳಿಗೆ ಸೇರಿದ ರೈತರ ಪಾಡು ಇತರ ರೈತರ ಪಾಡಿಗಿಂತ ಭಿನ್ನವಾಗಿದೆ ಎನ್ನುವ ಅಭಿಪ್ರಾಯ ಕೃಷಿ ಇಲಾಖೆಯಲ್ಲಿ ಮೂಡಿದಂತಿದೆ. ಸಾಧ್ಯವಾದರೆ, ಉಮೇಶ್ ಕತ್ತಿ ಅವರ ಚಿಂತನೆಯನ್ನು ಈ ವರ್ಷವೂ ಮಂಡಿಸಲಿರುವ ಕೃಷಿ ಬಜೆಟ್‌ನಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪ್ರಕಟಿಸಲೂ ಬಹುದು. ಬಜೆಟ್‌ನ ಅಂಗದ ರೂಪದಲ್ಲೇ ಕಂಡುಬರುವ ವಿಶೇಷ ಕೃಷಿ ಬಜೆಟ್‌ನಲ್ಲಿ ಇನ್ನೊಂದು ವಿಭಾಗವನ್ನು ಸೃಷ್ಟಿಸುವ ಈ ಪ್ರಯತ್ನ ಎಷ್ಟು ಸಫಲವಾದೀತೋ ಗೊತ್ತಿಲ್ಲ. ವಾರ್ಷಿಕ ಯೋಜನೆಯಲ್ಲೇ ಪರಿಶಿಷ್ಟ ಜಾತಿ ಪಂಗಡಗಳ ಜನರಿಗಾಗಿಯೇ ಒಂದು ವಿಶೇಷ ಉಪ ಯೋಜನೆಯನ್ನು ಅಳವಡಿಸುವ ಪದ್ಧತಿ ಇದೆ. ಪರಿಶಿಷ್ಟ ಜಾತಿ-ಪಂಗಡಗಳನ್ನು ಶೋಷಿತ ವರ್ಗಗಳೆಂದು ನೋಡಲೇ ಬೇಕಾದ ಪರಿಸ್ಥಿತಿ ಇನ್ನೆಷ್ಟು ದಿನ ಮುಂದುವರಿಯ ಬೇಕು. ಪರಿಶಿಷ್ಟ ರೈತರು, ಪರಿಶಿಷ್ಟ ಕಾರ್ಮಿಕರು ಎನ್ನುವಂತಹ ವಿಶೇಷ ವರ್ಗಗಳನ್ನು ಉಳಿಸಿಕೊಳ್ಳುವಂತಹ ಅಗತ್ಯವಿಲ್ಲದ ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವುದು ಯಾವಾಗ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement