ವಿನೋಬಾ ಭಾವೆಯವರು ಗಾಂಧೀಜಿಯವರ ಅನುಯಾಯಿಗಳಾಗಿ, ಬಡವರ, ರೈತರ ಮತ್ತು ಶ್ರಮಿಕರ ಪರವಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ದೇಶದ ಉದ್ದಗಲಕ್ಕೂ ಸುತ್ತಿ ಸಹಸ್ರಾರು ಎಕರೆ ಭೂಮಿಯನ್ನು ದಾನವನ್ನಾಗಿ ಸ್ವೀಕರಿಸಿ ಅದನ್ನು ಭೂ ರಹಿತರಿಗೆ ನೀಡಿ ಒಂದು ಹೊಸ ಕ್ರಾಂತಿಯನ್ನೇ ಮಾಡಿದ ಮಹಾ ಪುರುಷರು. ಅವರ ಭೂದಾನ ಚಳವಳಿ ವಿಶ್ವಕ್ಕೇ ಮಾದರಿಯಾಗಿದೆ. ಸರ್ವೋದಯ ನಾಯಕರಾಗಿ, ಅಹಿಂಸಾತತ್ವದಲ್ಲಿ ನಂಬಿಕೆಯುಳ್ಳವರಾಗಿ, ಸ್ವಾತಂತ್ರ ಹೋರಟಗಾರರಾಗಿ ಪ್ರಸಿದ್ಧರಾಗಿದ್ದ ವಿನೋಬಾ ಒಳ್ಳೆಯ ಗೀತಾ ಪ್ರವಚನಕಾರರೂ ಆಗಿದ್ದರು.
ವಿನೋಬಾಜಿಯವರು ಒಮ್ಮೆ ಪೌನಾರ್ ಆಶ್ರಮದಲ್ಲಿದ್ದಾಗ ಅಲ್ಲಿನ ಮಾರುಕಟ್ಟೆಗೆ ಹೋಗಿದ್ದರು. ಅಲ್ಲಿ ಅವರಿಗೊಂದು ಕಂಬಳಿ ಬೇಕಾಗಿದ್ದರಿಂದ ಕೊಳ್ಳಲು ಹೋಗಿದ್ದರು. ಒಬ್ಬ ಹೆಂಗಸು ಸುಂದರವಾದ ಕಂಬಳಿಗಳನ್ನು ಮಾರುತ್ತಿದ್ದುದನ್ನು ನೋಡಿ ಒಂದನ್ನು ಕೈಗೆ ತೆಗೆದುಕೊಂಡು ಅದರ ಬೆಲೆ ಎಷ್ಟೆಂದು ವಿಚಾರಿಸಿದರು. ಆಕೆ ಅದಕ್ಕೆ ಒಂದೂವರೆ ರುಪಾಯಿ ಎಂದು ಹೇಳಿದಳು. ವಿನೋಬಾ ಯೋಚಿಸತೊಡಗಿದರು. ಆ ಕಂಬಳಿಗೆ ಉಪಯೋಗಿಸಿದ ಉಣ್ಣೆಯ ಬೆಲೆ ಎಷ್ಟಿರಬಹುದು, ಒಂದು ಕಂಬಳಿ ನೇಯಲು ನೀಡುವ ಕೂಲಿ ಎಷ್ಟಿರಬಹುದು, ಕುರಿ ಸಾಕಣಿಕೆಗೆ ಎಷ್ಟು ಖರ್ಚಾಗಿರಬಹುದು ಎಂದೆಲ್ಲಾ ಯೋಚಿಸುವುದನ್ನು ನೋಡಿ, ಆ ಮಹಿಳೆ ಬಹುಶಃ ತಾನು ಹೇಳಿದ ಬೆಲೆ ಜಾಸ್ತಿಯೆಂದು ತಿಳಿದರೇನೋ ಎಂದುಕೊಂಡು 'ಬೇಕಾದರೆ ಎರಡಾಣೆ ಕಡಿಮೆ ಕೊಡಿ ಸ್ವಾಮಿ' ಎಂದಳು.
ಆಗ ವಿನೋಬಾ ಹೇಳಿದರು, 'ತಾಯಿ, ಈ ಕಂಬಳಿಗೆ ಏನಿಲ್ಲವೆಂದರೂ ಐದು ರುಪಾಯಿಯಾಗುತ್ತದೆ. ಇಷ್ಟು ಕಡಿಮೆ ಬೆಲೆಗೆ ನೀಡಿದರೆ ನಿನ್ನ ಶ್ರಮಕ್ಕೆ ಏನು ಪ್ರತಿಫಲ ನೀಡಿದಂತಾಯಿತು?' ಎಂದು ಹೇಳಿ ಐದು ರುಪಾಯಿಗಳನ್ನೂ ನೀಡಿ ಆ ಕಂಬಳಿಯನ್ನು ತೆಗೆದುಕೊಂಡು ಹೋದರು. ಆ ಮಹಿಳೆಗೆ ದಿಗ್ಭ್ರಮೆಯಾಯಿತು. ಹೇಳಿದ ಬೆಲೆಗೆ ಚೌಕಾಸಿ ಮಾಡುವವರೇ ಹೆಚ್ಚು ಜನವಿರುವಾಗ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಇಂಥವರೂ ಇದ್ದಾರೆಯೇ ಎಂದು ಅಚ್ಚರಿಯಾಯಿತು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ