ಸಂಪಾದಕೀಯ

ರಸ್ತೆ ತಿರುವಿನ ಕೌತುಕವನ್ನೇ ಕನಸಂತೆ ಹೊದ್ದ ಕತೆಗಳು!

ಕೆಲವು ವಿಷಯಗಳೇ ಹಾಗೆ: ಅವು ಕೆಲವೇ ಪದಗಳೊಂದಿಗೆ ಮುಗಿದು ಹೋಗುತ್ತವೆ. ಆದರೆ, ಒಂದೇ ನಿಮಿಷದ ಓದಿಗೆ ಮುಗಿದು ಹೋಗುವ ಪ್ರಸಂಗಗಳು ಕೆಲವೊಮ್ಮೆ ಇಡೀ ದಿನ ಕಾಡುತ್ತವೆ. ಬದುಕಿನ ಅರ್ಥವಾಗದ ತಿರುವುಗಳ ಬಗ್ಗೆ ಯೋಚಿಸುವಂತೆ, ಧ್ಯಾನಿಸುವಂತೆ ಮಾಡುತ್ತವೆ. ಕೆಲವೊಂದು ಸಂದರ್ಭಗಳಲ್ಲಂತೂ ಕಣ್ಣೀರು ಹಾಕುವಂತೆ ಮಾಡಿ ಬಿಡುತ್ತವೆ. ಅಂತರ್ಜಾಲದಲ್ಲಿ ಸಿಕ್ಕಿದ ಅಂಥ ಕೆಲವು ಪ್ರಸಂಗಗಳ ಗುಚ್ಛ ನಿಮ್ಮೆದುರಿಗಿದೆ...
----
- ಅಜ್ಜನಿಗೆ ಆಗಲೇ 70 ವರ್ಷ ತುಂಬಿದೆ. ಜಿಲ್ಲೆಯ ಯಶಸ್ವೀ ಉದ್ಯಮಿ ಎಂಬ ಹಣೆಪಟ್ಟಿ ಅವನಿಗೆ ಅಂಟಿಕೊಂಡಿದೆ. ವ್ಯಾಪಾರ-ವ್ಯವಹಾರದ ಎಲ್ಲ ಒಳಗುಟ್ಟುಗಳೂ ಅವನಿಗೆ ಕರತಲಾಮಲಕ. ಹೀಗಿದ್ದರೂ, ಈ ವಯಸ್ಸಿನಲ್ಲಿ ಬಿ.ಕಾಂ. ಪದವಿ ಪಡೆಯಲೇಬೇಕು ಎಂದು ಹಠ ಹಿಡಿದ. ಕರೆಸ್ಪಾಂಡೆನ್ಸ್‌ನಲ್ಲಿ ಪರೀಕ್ಷೆ ತೆಗೆದುಕೊಂಡ. ಹಗಲಿರುಳೂ ಓದಿದ. ಕಡೆಗೊಮ್ಮೆ ಸೆಕೆಂಡ್ ಕ್ಲಾಸ್‌ನೊಂದಿಗೆ ಪದವಿ ಮುಗಿಸಿದ. ಈ ವಯಸ್ಸಲ್ಲಿ ಡಿಗ್ರಿ ಮಾಡಿ ಏನು ಸಾಧಿಸಬೇಕಿದೆ ಎಂದು ಕೇಳಿದಾಗ ಆತ ಹೇಳಿದ್ದಿಷ್ಟು: 50 ವರ್ಷದ ಹಿಂದೇನೇ ನಮ್ಮ ಅಮ್ಮ ಕ್ಯಾನ್ಸರ್‌ನಿಂದ ತೀರಿಕೊಂಡ್ಳು. ಸಾಯುವ ಮುನ್ನ ಆಕೆ-ನೀನು ಡಿಗ್ರಿ ಮಾಡಲೇಬೇಕು ಮಗೂ ಅಂದಿದ್ದಳು. ಬದುಕಿನ ಹೋರಾಟದಲ್ಲಿ ಈವರೆಗೂ ಡಿಗ್ರಿ ಓದಲು ಅವಕಾಶವೇ ಸಿಕ್ಕಿರಲಿಲ್ಲ. ಈಗ ನಿಜವಾಗಿ ನನಗೆ ನೆಮ್ಮದಿ ಸಿಕ್ಕಿದೆ. ಅಮ್ಮನ ಆಸೆ ಈಡೇರಿಸಿದ್ದೇನೆ ಎಂಬ ಹೆಮ್ಮೆ ಜೊತೆಗಿದೆ.
- ನಿನ್ನೆ ಬೆಳಗ್ಗೆ, ಅಪರಿಚಿತನೊಬ್ಬ ನಮ್ಮ ನಾಯಿಯ ಮೇಲೆ ಕಾರ್ ಹರಿಸಿ ಪರಾರಿಯಾಗಿಬಿಟ್ಟ. ಕಳೆದ ಆರು ವರ್ಷಗಳಿಂದ ನನ್ನ ಜೊತೆಗಿದ್ದ ನಾಯಿ ಅದು. ಅಪಘಾತದ ತೀವ್ರತೆ ಹೇಗಿತ್ತು ಅಂದರೆ, ನಾಯಿ ಖಂಡಿತ ಬದುಕುವುದಿಲ್ಲ ಎಂದು ನನಗೆ ಖಚಿತವಾಗಿ ಗೊತ್ತಾಗಿಬಿಡ್ತು. ಅಸಹಾಯಕತೆ ಮತ್ತು ನೋವಿನಿಂದ ನಾನು ಬಿಕ್ಕಳಿಸಿ ಅಳತೊಡಗಿದೆ. ಕೊನೆಯುಸಿರು ಬಿಡುವ ಮುನ್ನ, ನಮ್ಮ ನಾಯಿ, ತುಂಬ ಪ್ರಯಾಸದಿಂದ ಎದ್ದು ನಿಂತು, ನನ್ನ ಕೆನ್ನೆಯ ಮೇಲಿದ್ದ ಕಣ್ಣೀರನ್ನು ನೆಕ್ಕಿಕೊಂಡಿತು. ಎರಡು ನಿಮಿಷಗಳ ತರುವಾಯ, ಕುಸಿದು ಬಿದ್ದು ಉಸಿರು ನಿಲ್ಲಿಸಿತು.
- ಅವರಿಬ್ಬರೂ ವಿಚ್ಛೇದನ ಪಡೆದು ಎರಡು ವರ್ಷಗಳಾಗಿದ್ದವು. ಅವನೇ ಒಂದು ಕಡೆ ಇದ್ದ. ಇವಳು ಬೇರೊಂದು ತುದಿಯಲ್ಲಿದ್ದಳು. ಅದೊಂದು ಬಾರಿ ಪರಸ್ಪರರಿಗೆ ಭೇಟಿಯಾಗಬೇಕೆಂಬ ಹುಕಿ ಏಕಕಾಲಕ್ಕೆ ಬಂತು. ಅವನೇ ಮುಂದಾಗಿ ಫೋನ್ ಮಾಡಿದ. ಒಂದು ಹೋಟೆಲ್‌ನಲ್ಲಿ ಊಟಕ್ಕೆ ಆಹ್ವಾನಿಸಿದ. ಊಟ ಮಾಡುತ್ತಾ, ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಪರಸ್ಪರ ರೇಗಿಸುತ್ತಾ ಇಬ್ಬರೂ ಕಾಲ ಕಳೆದರು. ಬೀಳ್ಕೊಡುವ ಮುನ್ನ ಆಕೆ ಪತ್ರಗಳಿಂದ ತುಂಬಿದ್ದ ಒಂದು ಫೈಲ್ ಕೊಟ್ಟಳು. ಬೇರೆ ಇದ್ದ ಸಂದರ್ಭದಲ್ಲಿ ವಾರಕ್ಕೆ ಒಂದರಂತೆ ಇವನಿಗೆ ಬರೆದಿದ್ದ ಪ್ರೇಮಕತೆಗಳ ಫೈಲ್ ಅದಾಗಿತ್ತು. ಆ ಕವರ್‌ನ ಮೇಲೆ ಆಕೆ ಬರೆದಿದ್ದಳು. ನನ್ನ ಆಜ್ಞೆಯನ್ನು ಧಿಕ್ಕರಿಸಿ ಮನಸ್ಸು ತಾನೇ ಮುಂದಾಗಿ ಮಾಡಿದ ಒಳ್ಳೆಯ ಕೆಲಸ ಇದು...
- ತುಂಬಾ ಗಡಿಬಿಡಿಯಲ್ಲಿದ್ದೆ. ಬೇರೊಂದು ಮೀಟಿಂಗ್‌ಗೆ ಹೋಗಬೇಕಿತ್ತು. ಟೈಂ ಆಗಿಹೋಯ್ತು ಎಂದುಕೊಂಡು ಓಡುವ ವೇಗದಲ್ಲಿ ಮೆಟ್ಟಿಲಿಳಿಯುತ್ತಿದ್ದೆ. ಆಗ ಇದ್ದಕ್ಕಿದ್ದಂತೆ ಕಾಲು ಜಾರಿತು. ಉರುಳಿ ಬಿದ್ದೆ. ಸ್ವಯಂ ನಿಯಂತ್ರಣ ಕಳೆದುಕೊಂಡು ಉರುಳುತ್ತಲೇ ಇದ್ದೆ. ಕೆಳಗಿರುವ ಮೆಟ್ಟಿಲಿನ ಚೂಪಾದ ತುದಿಗೆ ನನ್ನ ತಲೆ ಬಡಿಯುತ್ತದೆ ಎಂಬುದು ಆಗಲೇ ಅರ್ಥವಾಯಿತು. ಹೆದರಿಕೆಯಿಂದ ಕಣ್ಮುಚ್ಚಿಕೊಂಡೆ. ಆಗಲೇ, ವೀಲ್‌ಚೇರ್‌ನಲ್ಲಿ ಕುಳಿತಿದ್ದ ಯುವಕನೊಬ್ಬ ಅದೆಲ್ಲಿಂದಲೋ ಧಾವಿಸಿ ಬಂದು, ನನ್ನ ತಲೆ ಮೆಟ್ಟಿಲಿಗೆ ಬಡಿಯದಂತೆ ತಡೆದುಬಿಟ್ಟ. ಇದೆಲ್ಲಾ ಕ್ಷಣಾರ್ಧದಲ್ಲಿ ನಡೆದು ಹೋಯಿತು. ನಾನು ಮಾತು ಹೊರಡದೆ ನಿಂತಿದ್ದಾಗಲೇ ಆತ ಹೇಳಿದ: ಮೂರು ವರ್ಷದ ಹಿಂದೆ ನಾನೂ ನಿಮ್ಮ ಥರಾನೇ ಗಡಿಬಿಡೀಲಿ ಓಡಾಡುವಾಗ ಆಯತಪ್ಪಿ ಬಿದ್ದು, ಬೆನ್ನು ಮೂಳೆ ಮುರಿದುಕೊಂಡೆ...
- ನೋಡಿದ ತಕ್ಷಣವೇ ಗೊತ್ತಾಗುತ್ತಿತ್ತು: ಅವರಿಬ್ಬರೂ ಸಲಿಂಗಿಗಳು. ಅವರು, ಥೇಟ್ ಗಂಡ- ಹೆಂಡತಿಯ ಥರವೇ ಕೈ ಕೈ ಹಿಡಿದುಕೊಂಡು ಹೋಟೆಲಿನೊಳಕ್ಕೆ ಬಂದರು. ಅವರನ್ನು ಸೂಕ್ಷ್ಮವಾಗಿ ಗಮನಿಸಿದ ಹನ್ನೊಂದು ವರ್ಷದ ಮಗುವೊಂದು ತಾಯಿಯನ್ನು ಕೇಳಿತು: 'ಅಮ್ಮಾ, ಅವರಿಬ್ರೂ ಗಂಡಸರೇ ತಾನೆ? ಹಾಗಿದ್ರೂ ಯಾಕೆ ಹಾಗೆ ಕೈ ಕೈ ಹಿಡಿದು ಅಂಟಿಕೊಂಡವರಂತೆ ಕೂತಿದ್ದಾರೆ?'
ಆಗ ಅಮ್ಮ ಹೇಳಿದಳು: 'ಮಗೂ, ಅವರಿಬ್ರೂ ಪರಸ್ಪರರನ್ನು ತುಂಬಾ ಇಷ್ಟಪಡ್ತಾರೆ, ಅದಕ್ಕೆ...'
- ಪತಿಯನ್ನು ಬೀಳ್ಕೊಟ್ಟು, ಏರ್‌ಪೋರ್ಟ್‌ನಿಂದ ಹೊರಬಂದ ಆಕೆ ಜೋರಾಗಿ ಅಳತೊಡಗಿದ್ದಳು- ಅತ್ತೂ ಅತ್ತೂ ಆಕೆಯ ಕಣ್ಣು ಕೆಂಪಾಗಿ ಹೋದವು. ಸೈನಿಕನ ಹೆಂಡತಿಯರ ಸಂಕಟ ಎಂಥದಿರುತ್ತದೆ ಎಂಬುದು ನನಗೆ ಅರ್ಥವಾದದ್ದೇ ಆಗ.
- ಅಮ್ಮ  ಬದುಕುವುದಿಲ್ಲ ಎಂಬುದು ಗ್ಯಾರಂಟಿಯಾಗಿತ್ತು. ಡಾಕ್ಟರು, ಕುಟುಂಬದವರನ್ನೆಲ್ಲಾ ಕರೆಸಿಬಿಡಿ ಎಂದು ಸ್ಪಷ್ಟವಾಗಿ ಹೇಳಿದ್ದರು. ಅದರಂತೆ ಅಪ್ಪನ ಮೂವರು ತಮ್ಮಂದಿರು, ಇಬ್ಬರು ತಂಗಿಯರು, ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳೆಲ್ಲ ಬಂದರು. ಎಲ್ಲರೂ ಅಮ್ಮನ ಹಾಸಿಗೆಯ ಸುತ್ತಾ ನಿಂತರು. 'ನಂಗೆ ಈಗ ನಿಜವಾಗ್ಲೂ ತುಂಬಾ ಖುಷಿಯಾಗಿದೆ. ನಿಮ್ಮನ್ನೆಲ್ಲಾ ನೋಡಿ ಎಷ್ಟೊಂದು ದಿನವಾಗಿತ್ತು ಅಲ್ವಾ' ಎಂದಳು. ನಂತರ ಮಾತು ಮುಂದುವರಿಸುವ ಆಸೆಯಿಂದ ಎದ್ದು ಕೂರಲು ಹೋದವಳು, ಹಾಗೇ ಹಿಂದಕ್ಕೆ ವಾಲಿಕೊಂಡು ಕಣ್ಣು ಮುಚ್ಚಿಬಿಟ್ಟಳು.
- ನಗರಕ್ಕೆ ಇನ್ನೂ 30 ಕಿ.ಮೀ. ದೂರವಿದೆ ಎನ್ನುವಾಗಲೇ ಪೆಟ್ರೋಲ್ ಮುಗಿದು ಹೋಯಿತು. ಅದು ಜನ ಹಾಗೂ ವಾಹನ ಸಂಚಾರ ತೀರಾ ಕಡಿಮೆ ಇದ್ದ ಪ್ರದೇಶ. ಕಾಡು ಪ್ರಾಣಿಗಳು ಹಾಗೂ ಕಳ್ಳಕಾಕರ ಉಪಟಳವೂ ಇದೆ ಎಂಬ ಸುದ್ದಿ ಹಬ್ಬಿತ್ತು. ಕಾರನ್ನು ಬಿಟ್ಟು ಹೋಗಲು ಧೈರ್ಯವಿರಲಿಲ್ಲ. ಶಕ್ತಿಯೂ ಇರಲಿಲ್ಲ. ಸಂಜೆಯವರೆಗೂ ದಿಕ್ಕು ತೋಚದೆ ಕೂತುಬಿಟ್ಟೆ. ಆಗಲೇ ಡಕಾಯಿತನಂತಿದ್ದ ವ್ಯಕ್ತಿಯೊಬ್ಬ ಬಂದ. ಓಹ್, ಇವನು ನನ್ನನ್ನು ದೋಚುತ್ತಾನೆ ಎಂದುಕೊಂಡೆ. ಆತ ಕಾರ್ ನಿಲ್ಲಿಸಿ ಏನಾಗಿದೆ ಎಂದು ಕೇಳಿದ. ಎಲ್ಲವನ್ನೂ ವಿವರಿಸಿದೆ. ತಕ್ಷಣವೇ ತನ್ನ ಕಾರ್‌ನ ಡಿಕ್ಕಿಯಿಂದ ಪೆಟ್ರೋಲ್ ಕ್ಯಾನ್ ತೆಗೆದುಕೊಟ್ಟ. ನಾನು ಬೆರಗಾಗಿ ನಿಂತಿದ್ದಾಗ ಆತ ಹೇಳಿದ: 'ಐದು ವರ್ಷದ ಹಿಂದೆ ಗೊಂಡಾರಣ್ಯದ ಮಧ್ಯೆ ನನಗೂ ಇಂಥದೇ ಸಮಸ್ಯೆ ಎದುರಾಗಿತ್ತು. ಆಗ ದೇವರಂತೆ ಬಂದ ಪುಣ್ಯಾತ್ಮರೊಬ್ಬರು ನನ್ನನ್ನು ಕಾಪಾಡಿದ್ದರು...'
- ಅಪ್ಪ, ನನ್ನ ಕಣ್ಮುಂದೆಯೇ ಸತ್ತು ಹೋದರು. ಅವರು ಆಸ್ಪತ್ರೆಗೆ ದಾಖಲಾದದ್ದು ವಾರದ ಹಿಂದೆ. ಅಂದಿನಿಂದ ಅಪ್ಪನೊಂದಿಗೆ ಇದ್ದವನು ನಾನೇ, ನಾನೊಬ್ಬನೇ. ಅಪ್ಪ ಸತ್ತು ಹೋದಾಗ ಮನಸ್ಸು ಭಾರವಾಯಿತು. ಒಮ್ಮೆ ಬಾಗಿ, ಅಪ್ಪನ ಹಣೆಯನ್ನು ಚುಂಬಿಸಿದೆ. ಐದಾರು ನಿಮಿಷಗಳ ನಂತರ ಅನ್ನಿಸಿತು: 40 ವರ್ಷಗಳ ಸುದೀರ್ಘ ಅವಧಿಯಲ್ಲಿ ನಾನು ಒಮ್ಮೆ ಕೂಡಾ ಅಪ್ಪನನ್ನು ಹಾಗೆ ಚುಂಬಿಸಿರಲಿಲ್ಲ...
- ಡ್ರೈವ್ ಮಾಡುತ್ತಿದ್ದವನು ನಾನೇ. ಪಕ್ಕದಲ್ಲಿ ಮಗನಿದ್ದ. ಒಂದು ತಿರುವಿನಲ್ಲಿ ಸಾಗುವಾಗ, ಏನಾಯಿತು ಎಂದು ತಿಳಿಯುವುದರೊಳಗೆ ಕಾರು ಉರುಳಿ ಬಿತ್ತು. ನನಗೆ ಸಣ್ಣ ಪುಟ್ಟ ಗಾಯಗಳಾದವು. ಮಗ ಕೋಮಾ ಸ್ಥಿತಿಗೆ ಹೋಗಿ ಬಿಟ್ಟಿದ್ದ. ಮಗುವಿಗೆ ಪ್ರಜ್ಞೆ ಬರಲು 15 ದಿನಗಳಾದರೂ ಆಗಬಹುದು ಎಂದು ಡಾಕ್ಟರ್ ಹೇಳಿದರು. ಅವರು, ವಾರ್ಡ್‌ನಿಂದ ಆಚೆ ಹೋಗುವ ಮೊದಲೇ ನನ್ನ ಮಗ ಮಗ್ಗಲು ಬದಲಿಸಿ ತುಂಬ ಸ್ಪಷ್ಟವಾಗಿ ಹೀಗೆಂದ: ಅಮ್ಮ, ಅಮ್ಮಾ...
- ಅವನು ನಿರಾಶ್ರಿತರ ಶಿಬಿರದಿಂದ ದಾರಿ ತಪ್ಪಿ ಹೋಗಿದ್ದ ವ್ಯಕ್ತಿ. ಶಿಬಿರದ ವಿಳಾಸ ಗೊತ್ತಾಗುತ್ತಿಲ್ಲವೆಂದೂ, ಮೂರು ದಿನದಿಂದ ಏನನ್ನೂ ತಿಂದಿಲ್ಲವೆಂದು ಹೇಳಿಕೊಂಡ. ಅವನ ಸ್ಥಿತಿಗೆ ಕನಿಕರಗೊಂಡ ನನ್ನ ಗೆಳೆಯ, ಲಂಚ್ ಬಾಕ್ಸ್ ತೆಗೆದು ಅವನ ಮುಂದಿಟ್ಟ. ಆಗ ಊಟದ ಸಮಯವಾಗಿತ್ತು. ಅದನ್ನು ಗಮನಿಸಿ ಮೂರು ದಿನಗಳಿಂದ ಏನನ್ನೂ ತಿನ್ನದಿದ್ದ ಆ ನಿರಾಶ್ರಿತರ ಶಿಬಿರದ ವ್ಯಕ್ತಿ ಹೇಳಿದ: 'ಸರ್, ಈ ಊಟವನ್ನು ಎಲ್ಲರೂ ಹಂಚಿಕೊಂಡು ತಿನ್ನೋಣ. ಬನ್ನಿ...'
-ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 12 ವರ್ಷದ ಬಾಲಕನೊಬ್ಬ ಮೃತಪಟ್ಟ. ಸಾಯುವ ಮೊದಲು ಆತ, ಮನೆಯೊಳಗಿದ್ದ ತನ್ನ ತಾಯಿಯನ್ನು ಹೊರಕ್ಕೆ ಎಳೆದು ತಂದಿದ್ದ. ನಂತರ, ತೊಟ್ಟಿಲಲ್ಲಿದ್ದ ಆರು ತಿಂಗಳ ಪಾಪುವನ್ನು ಹೊತ್ತು ತರಲು ಮತ್ತೆ ಮನೆಯೊಳಗೆ ನುಗ್ಗಿದಾಗ...
- ಆಗಷ್ಟೇ ಅರಳಿ ತಾಜಾ ತಾಜಾ ಆಗಿದ್ದ ಡಜನ್ ಗುಲಾಬಿ ಹೂಗಳ ಗೊಂಚಲೊಂದಿಗೇ ಆತ ಬ್ಯಾಂಕ್‌ಗೆ ಬಂದ. ಕೌಂಟರ್‌ನಲ್ಲಿದ್ದ ಕ್ಯಾಶಿಯರ್ ಮುಖ ಕಳೆಗುಂದಿತ್ತು. ಆಕೆ, ಯಾವುದೋ ಯೋಚನೆಯಲ್ಲಿದ್ದಳು. ಈತ ಆಕೆಯ ಮುಂದೆ ನಿಂತು ತುಂಬ ಆಪ್ತ ಭಾವದಲ್ಲಿ ಹೇಳಿದ: ಸಿಸ್ಟರ್, ಇವತ್ತು ನಮ್ಮ ಮದುವೆಯ ಹನ್ನೊಂದನೇ ವಾರ್ಷಿಕೋತ್ಸವ. ಆ ನೆನಪಿಗೆ, ಹೆಂಡತಿಗೆ ಹನ್ನೊಂದು ಗುಲಾಬಿ ಕೊಡಲು ನಿರ್ಧರಿಸಿದ್ದೆ. ಅಂಗಡಿಯವನ ತಪ್ಪಿಂದಾಗಿ ಇಲ್ಲಿ 12 ಗುಲಾಬಿಗಳಿವೆ. ಒಂದು ಹೂವನ್ನು ನಿಮಗೆ ಕೊಡ್ತೀನಿ ಸಿಸ್ಟರ್. ಮುಡಿಗೇರಿಸಿಕೊಳ್ಳಿ...
ಈ ಮಾತು ಕೇಳುತ್ತಿದ್ದಂತೆ, ಮನಸ್ಸಿಗೆ ಅಂಟಿಕೊಂಡಿದ್ದ ಸಂಕಟವನ್ನು ಆಕೆ ಮರೆತುಬಿಟ್ಟಳು. ಬೆಳದಿಂಗಳಂತೆ ನಕ್ಕು, ಹೂ ಪಡೆದುಕೊಂಡಳು.
- ಆ ದಂಪತಿಗೆ 70 ದಾಟಿತ್ತು. ಈ ಇಳಿ ವಯಸ್ಸಿನಲ್ಲಿ ಅವರಿಬ್ಬರೂ ಪರಸ್ಪರ ತಮಾಷೆ ಮಾಡುತ್ತಾ, ಒಬ್ಬರನ್ನೊಬ್ಬರು ಹೊಗಳುತ್ತಾ, ಯಾವುದೇ ತಕರಾರುಗಳಿಲ್ಲದೆ ಬದುಕುತ್ತಿದ್ದರು. ಅದನ್ನು ಕಂಡು ನನ್ನ ಒಳಮನಸ್ಸು ಪಿಸುಗುಟ್ಟಿತು: ನಿಜವಾದ ಪ್ರೇಮವೆಂದರೆ -ಇದೇ. ಇದೇ.
- ತಾನು ಮದುವೆಯಾಗಲಿರುವ ಹುಡುಗಿ ಎಷ್ಟೊಂದು ಸುಂದರವಾಗಿದ್ದಾಳೆ ಎಂದು ಅವನು ಗೆಳೆಯರಿಗೆ ಭರ್ತಿ ಎರಡು ಗಂಟೆ ವಿವರಿಸಿದಾಗ, ಅವರೆಲ್ಲ ದಂಗಾಗಿ ಹೋಗಿದ್ದರು. ಕಾರಣ, ಅವಳ ಸೌಂದರ್ಯ ವರ್ಣಿಸಿದ ಮದುಮಗ ಹುಟ್ಟು ಕುರುಡನಾಗಿದ್ದ!
- ಅಮ್ಮನ ಶವ ಸಂಸ್ಕಾರ ಮುಗಿದು ನಾಲ್ಕು ತಾಸು ಕಳೆದಿತ್ತು. ಆಗಲೇ ವಿದೇಶದಲ್ಲಿರುವ ಗೆಳೆಯ ಫೋನ್ ಮಾಡಿ ಕೇಳಿದ: 'ಈಗ ಇದ್ದಕ್ಕಿದ್ದಂತೆ ಇಲ್ಲಿಂದ ಹಾರಿ ಬಂದು ನಿನ್ನೆದುರು ನಿಂತರೆ ಏನು ಮಾಡ್ತೀಯ?' ಅವನು ಬರುವುದಿಲ್ಲ ಎಂಬ ಗ್ಯಾರಂಟಿ ಇದ್ದುದರಿಂದ ತಕ್ಷಣವೇ ಹೇಳಿದೆ: 'ನೀನು ಎದುರು ನಿಂತಾಕ್ಷಣ ಗಹಗಹಿಸಿ ನಗುತ್ತೇನೆ...'
ಮರುಕ್ಷಣವೇ ಕರೆಗಂಟೆಯ ಸದ್ದಾಯಿತು. ಬಾಗಿಲು ತೆರೆದೆ- ಎದುರಿಗೆ, ಫೋನ್ ಮಾಡಿದ ಗೆಳೆಯನಿದ್ದ!
- ಹ್ಯಾಪು ಮೋರೆಯೊಂದಿಗೆ ಮನೆಗೆ ಬಂದ ತಂದೆ ಹೇಳಿದರು: ಪಿತ್ರಾರ್ಜಿತವಾಗಿ ಬಂದಿದ್ದ ಈ ಮನೆಯೂ ನಮ್ಮ ಕೈ ತಪ್ಪಿ ಹೋಯಿತು. ಅಪ್ಪನ ಮಾತು ಮುಗಿಯುತ್ತಿದ್ದಂತೆಯೇ ನಾನು ಆವೇಶದಿಂದ ಕೂಗಾಡಿದೆ. ನಮ್ಮಿಂದ ಮನೆ ಕಿತ್ತುಕೊಂಡವರನ್ನು ಕೊಂದು ಬಿಡುವುದಾಗಿ ಅಬ್ಬರಿಸಿದೆ. ಆಗ ಪಕ್ಕದಲ್ಲೇ ನಿಂತಿದ್ದ ತಂಗಿ ಹೇಳಿದಳು: ಹೋಗ್ಲಿ ಬಿಡೋ. ಕೈ ತಪ್ಪಿದ್ದು ಒಂದು ಮನೆ, ಅಷ್ಟೆ. ಅಂಥ ಹತ್ತು ಮನೆಗಳನ್ನು ಖರೀದಿಸುವ ತಾಕತ್ತು ನಮ್ಮಿಬ್ಬರ ಮನಸ್ಸಿಗೂ ಇದೆ! ಅವರು ಮನೆಯನ್ನು ಒಡೆದರು ಅಷ್ಟೆ, ಮನಸ್ಸುಗಳನ್ನು ಒಡೆಯಲು ಆಗಿಲ್ಲವಲ್ಲ...
- ಆತ ಎರಡು ಮಹಾಯುದ್ಧಗಳನ್ನು ಗೆದ್ದಿದ್ದ ದಂಡನಾಯಕ. ದೇಶದ ಅತ್ಯುನ್ನತ ಪ್ರಶಸ್ತಿಗಳೆಲ್ಲ ಅವನಿಗೆ ದಕ್ಕಿದ್ದವು. ಅವನು ಸಾಯುವ ಸಂದರ್ಭದಲ್ಲಿ ಸಂದರ್ಶಕನೊಬ್ಬ ಕೇಳಿದ; ಸರ್, ನಿಮ್ಮ ಬದುಕಿನ ಮಹೋನ್ನತ ಕ್ಷಣ ಯಾವುದು?'
ಆ ಸೇನಾನಿ, - ತನ್ನ ಹಾಸಿಗೆಯ ಪಕ್ಕದಲ್ಲಿ ಕೂತಿದ್ದ ಹೆಂಡತಿಯ ಕಡೆ ಕೈ ತೋರಿಸುತ್ತಾ ಹೇಳಿದ; ಇವಳೊಂದಿಗೆ ಕಳೆದ ಆರು ತಿಂಗಳುಗಳು...

-ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!