ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

2014 ರ ಪಗಡೆ ಹಾಸು

Parashurama
Updated On : 27 Jan 2013, 11:28 am

ಸಂಕ್ರಮಣ ಕಳೆದ ಅನಂತರ ಜೈಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನ ಶಿಬಿರ ಹಾಗೂ ದೆಹಲಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಚುನಾವಣೆ ಸಂಬಂಧಿ ಚರ್ಚೆ ಮುಗಿದ ಮೇಲೆ ದೇಶದ ರಾಜಕೀಯದ ಎರಡು ಧ್ರುವಗಳಂತೆ ರಾಹುಲ ಗಾಂಧಿ, ರಾಜನಾಥ ಸಿಂಗ್ ಹೊರ ಹೊಮ್ಮಿದ್ದಾರೆ.
ರಾಹುಲಗಾಂಧಿ ಸುಮಾರು ಒಂದು ದಶಕದಿಂದಲೂ ಕಾಂಗ್ರೆಸ್ಸಿನ ಮೇಲ್ಮಟ್ಟದ ರಾಜಕೀಯದಲ್ಲಿ ಸಕ್ರಿಯವಾದ, ಹಲವು ಸನ್ನಿವೇಶಗಳಲ್ಲಿ ನಿರ್ಣಾಯಕವಾದ ಪಾತ್ರವನ್ನು ನಿರ್ವಹಿಸಿರುವುದು ನಿಜ. ಉತ್ತರ ಪ್ರದೇಶದ ರಾಜನಾಥ ಸಿಂಗ್ ದೀರ್ಘಕಾಲದಿಂದಲೂ ಬಿಜೆಪಿಯ ನಾಯಕರು. ಒಮ್ಮೆ ಪಕ್ಷದ ಅಧ್ಯಕ್ಷರೂ ಆಗಿದ್ದರು, ರಾಜ್ಯದ ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದಾರೆ.
ಈ ಬೆಳವಣಿಗೆಯನ್ನು ಗಮನಿಸಿದ ರಾಷ್ಟ್ರೀಯ ರಾಜಕೀಯ ವಿಶ್ಲೇಷಕರು, ಮುಂದಿನ ದಿನಗಳಲ್ಲಿ ರಾಜಕೀಯದ ದಿಕ್ಕು ದೆಸೆಗಳನ್ನೇ ಬದಲಾಯಿಸಬಹುದಾದ ರೀತಿಯ ಮಾರ್ಪಾಟುಗಳನ್ನೂ ನಿರೀಕ್ಷಿಸಿದ್ದಾರೆ. ರಾಹುಲ ಗಾಂಧಿ ವಿರುದ್ಧ ರಾಜನಾಥ ಸಿಂಗ್ ಎನ್ನುವ ಶೀರ್ಷಿಕೆ ಅನೇಕ ಭಾಷಾ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದೂ ನಿಜ. ಅದಕ್ಕಿಂತಲೂ ಹೆಚ್ಚಾಗಿ 2014 ರಲ್ಲಿ ನಡೆಯಬೇಕಾದ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ - ಬಿಜೆಪಿಗಳ ಕೂಟಗಳ ನಡುವಣ ಹೋರಾಟವೇ ನಡೆಯುವುದು ಎನ್ನುವ ಭವಿಷ್ಯವಾಣಿಯೂ ಕೇಳಿ ಬಂದಿದೆ.
ಯಾವ ದೃಷ್ಟಿಯಿಂದ ನೋಡಿದರೂ ಲೋಕಸಭೆ ಚುನಾವಣೆ ರಾಹುಲ್ - ರಾಜನಾಥ್ ನಡುವಣ ಜನಪ್ರಿಯತೆಯ ಸ್ಪರ್ಧೆಯಾಗಲಾರದು. ರಾಹುಲ ಗಾಂಧಿ ಕಾಂಗ್ರೆಸ್ಸಿನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಅವರ ಬೆಂಬಲಿಗರ ಯುವ ಬ್ರಿಗೇಡ್ ಎಬ್ಬಿಸಿದ "ತಹತಹದ ವಾತಾವರಣದ ಹಿನ್ನೆಲೆಯಲ್ಲಿ". ಆದರೆ ರಾಜನಾಥ ಸಿಂಗ್ ಬಿಜೆಪಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದು ನಿತಿನ್ ಗಡ್ಕರಿ ಅವರಿಗೆ ಆ ಪದವಿ ಸಿಗಬಾರದು ಎನ್ನುವ ಉದ್ದೇಶದಿಂದ. ರಾಹುಲ ಗಾಂಧಿ ಈಗ ಆಯ್ಕೆಯ ಅನಂತರ ಜೈಪುರದ ಕಾಂಗ್ರೆಸ್ ಶಿಬಿರದಲ್ಲಿ ಮುಗಿಲು ಮುಟ್ಟುವ ಉತ್ಸಾಹ, ಘೋಷಣೆಗಳು ಕಂಡುಬಂದರೆ ದೆಹಲಿಯ ಆಶೋಕ ರಸ್ತೆಯ ಬಿಜೆಪಿ ಕಾರ್ಯಾಲಯದಲ್ಲಿ ನಾಯಕರೆಲ್ಲ ನಿರಾಳವಾಗಿ ಉಸಿರಾಡಿದ ಅನುಭವದ ದೃಶ್ಯ ಕಂಡು ಬಂದಿತ್ತು.
ಈ ಘಟನೆಗಳು ನಡೆಯುವ ಮುನ್ನ ಕಾಂಗ್ರೆಸ್ - ಬಿಜೆಪಿಗಳೆರಡೂ ಹೈರಾಣವಾಗಿದ್ದವು. ಗುಜರಾತ್ ವಿಧಾನ ಸಭೆ ಚುನಾವಣೆಯಲ್ಲಿನ ಮುಖಭಂಗ, ದೆಹಲಿಯ ಮಹಿಳೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆಯ ವಿರುದ್ಧದ ಆಕ್ರೋಶದ ಪ್ರದರ್ಶನ, ಬ್ರಹ್ಮಾಂಡ ಸ್ವರೂಪದ ಭ್ರಷ್ಟಾಚಾರದ ಆರೋಪಗಳಿಂದ ಕಾಂಗ್ರೆಸ್ ತತ್ತರಿಸಿದ್ದರೆ, ಬಿಜೆಪಿ ಹಿಮಾಚಲ ಪ್ರದೇಶ, ಜಾರ್ಖಂಡ ರಾಜ್ಯಗಳ ಸರ್ಕಾರಗಳನ್ನು ಕಳೆದುಕೊಂಡಿತ್ತು. ಕರ್ನಾಟಕದಲ್ಲಿನ ಪಕ್ಷದ ಬೆಳವಣಿಗೆಗಳು, ಇಡೀ ದೇಶದಲ್ಲಿ ಬಿಜೆಪಿಯ ವಿರುದ್ಧ ಪ್ರತಿಕೂಲ ಪ್ರಚಾರಕ್ಕೆ ಸಾಧನವಾಗಿತ್ತು. ರಾಹುಲ ಗಾಂಧಿ ಈಗ ಸಂತಸದ ಸಮಯದಲ್ಲಿ ಪ್ರಬುದ್ಧತೆಯನ್ನು ಪ್ರದರ್ಶಿಸಬೇಕಾಗಿದೆ. ಕಾಂಗ್ರೆಸ್‌ನ ಎರಡು - ಮೂರನೆಯ ಹಂತಗಳ ನಾಯಕತ್ವವನ್ನು ಬದಲಾಯಿಸಬೇಕಾಗಿದೆ. ಅದಕ್ಕೆ ಬೇಕಾದ ಅಧಿಕಾರ ಅವರಿಗೆ ಈಗ ಸಿಕ್ಕಿದೆ. ಸುಮಾರು ನೂರು ವರ್ಷಗಳ ಹಿಂದೆ,  ರಾಹುಲ ಗಾಂಧಿ ಮುತ್ತಾತ ಮೋತಿಲಾಲ ನೆಹರೂ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರಿಗಿಂತ ಹೆಚ್ಚಿನ ರಾಜಕೀಯ ಶಕ್ತಿ ಈಗ ರಾಹುಲ ಗಾಂಧಿಗೆ ಲಭ್ಯ.
ರಾಜನಾಥ ಸಿಂಗ್ ಅವರಿಗೆ ಅಂತಹ ಅಧಿಕಾರವಿಲ್ಲ. ಒಂದು ಕಡೆ ಹಿರಿಯರಾದ ಆಡ್ವಾಣಿ ಅವರಿದ್ದಾರೆ. ಇನ್ನೊಂದು ಕಡೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವಿದೆ. ಬಿಜೆಪಿಯ ಆಂತರಿಕ ಆಚಾರ ಸಂಹಿತೆಯ ಚೌಕಟ್ಟೂ ಇದೆ.ಈ ವರ್ಷದಲ್ಲೇ (ಮುಂದಿನ ತಿಂಗಳಿಂದಲೇ ಆರಂಭ) ಹತ್ತು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯ ಮಾಲೆ ಆರಂಭವಾಗುತ್ತಿದೆ. ಈ ರಾಜ್ಯಗಳಲ್ಲಿ ಕೆಲವು ಕಡೆ ಬಿಜೆಪಿ ಇಲ್ಲವೇ ಇಲ್ಲ. ಎರಡು ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್ ಲೆಕ್ಕಕ್ಕೇ ಇಲ್ಲ ಎನ್ನುವ ಸ್ಥಿತಿ. ಆದರೂ ವಿಧಾನಸಭೆ ಚುನಾವಣೆಗಳ ವಿಚಾರದಲ್ಲಿ ರಾಷ್ಟ್ರೀಯ ಆಸಕ್ತಿ ಮೂಡುವಂತಹ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ. ಆದರೆ ದೆಹಲಿ ಕೇಂದ್ರಿತ, ಅತ್ಯುನ್ನತ ರಾಜಕೀಯ ವಲಯಗಳಲ್ಲಿನ ಮಾತುಕತೆ, ವಿಚಾರ ವಿನಿಮಯ ಹಾಗೂ ಹರಟೆಯ ಕೇಂದ್ರ ವಸ್ತು 2014 ರ ಲೋಕಸಭೆ ಚುನಾವಣೆಯೇ. ಅದು ದೆಹಲಿಯ ನೋಟ. ಬೇರು ಮಟ್ಟದಲ್ಲಿ ಕಂಡು ಬರುತ್ತಿರುವುದು ಅನೇಕ ರಾಜ್ಯಗಳಲ್ಲಿ ಜಾತಿ ಅಥವಾ ವಿಶಿಷ್ಟ ಪ್ರಾದೇಶಿಕ ಹಿತ ಆಧರಿತ ಪಕ್ಷಗಳು ಪ್ರಬಲವಾಗಿದ್ದು ರಾಷ್ಟ್ರೀಯ ಪಕ್ಷಗಳಿಗೆ ದೊಡ್ಡ ರೀತಿಯಲ್ಲೇ ಸವಾಲನ್ನೆಸೆಯುವ ಸ್ಥಿತಿಯನ್ನು ತಲುಪಿರುವ ಚಿತ್ರ.
ಪಶ್ಚಿಮ ಬಂಗಾಳ, ಬಹುಮಟ್ಟಿಗೆ ಬಿಹಾರ, ಒಡಿಸ್ಸಾ, ತಮಿಳುನಾಡು, ಪಂಜಾಬ್, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ತಮ್ಮ ಸಂಗಾತಿಯನ್ನು ಆರಿಸಿಕೊಳ್ಳುವ ಅವಕಾಶವನ್ನು ಪಡೆದಿಲ್ಲ. ಪ್ರಾದೇಶಿಕ ಪಕ್ಷಗಳು ಅಥವಾ ಶಕ್ತಿಗಳು ರಾಷ್ಟ್ರೀಯ ಸಂಗಾತಿಗಳ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಸ್ಥಿತಿಯನ್ನು ಮುಟ್ಟಿವೆ. ಕೆಲವು ಅತಿ ಪ್ರಬಲ ಪ್ರಾದೇಶಿಕ ಶಕ್ತಿಗಳಂತೂ ತಮ್ಮ ಸ್ವಂತ ಶಕ್ತಿಯ ಮೇಲೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ರಾಷ್ಟ್ರೀಯ ರಾಜಕೀಯಕ್ಕೆ ಹೊಸ ಸ್ವರೂಪವನ್ನು ಕೊಡಲು ಸಜ್ಜಾಗಿರುವಂತಿದೆ.
  ಈಗಿನ ಪ್ರಕಟಿತ ವಿಶ್ಲೇಷಣೆಗಳು ಹಾಗೂ ಸಮೀಕ್ಷೆ ವರದಿಗಳಲ್ಲಿ 2014ರ ಲೋಕಸಭೆ ಚುನಾವಣೆ ಕಾಂಗ್ರೆಸ್ ಕೂಟದ ವಿರುದ್ಧ ಬಿಜೆಪಿ ನೇತೃತ್ವದ ಕೂಟದ ಸೆಣಸಾಟವೆನ್ನುವ ಚಿತ್ರವನ್ನು ಮೂಡಿಸಿರಬಹುದು. ಆದರೆ ಅದು ವಾಸ್ತವವಲ್ಲ.
  ಲೋಕಸಭೆ ಚುನಾವಣೆಯ ಚಿತ್ರ ಒಂದು ರೀತಿಯಲ್ಲಿ "ಪಗಡೆಯಾಟದ ಹಾಸು" ಎನ್ನುಬಹುದು. ಕೆಲವು ರಾಜ್ಯಗಳಲ್ಲಿ ತೀವ್ರ ಸ್ವರೂಪದ ಚತುಷ್ಕೋಣದ ಸ್ಪರ್ಧೆಯನ್ನೂ ನಿರೀಕ್ಷಿಸಬಹುದು. ಈ ಹೊಸ ಸ್ವರೂಪದ, ಹೊಸ ಸಾಧನಗಳ ಮೂಲಕ ನಡೆಯುವ ಚುನಾವಣೆ ಹಾಗೂ ಅದರ ಅನಂತರ ರೂಪಗೊಳ್ಳುವ ಸಂಕೀರ್ಣ ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿಯನ್ನು ನಮ್ಮ ಹಳೆಯ ರಾಜಕೀಯ ಪಕ್ಷಗಳು ಹಾಗೂ ನಾಯಕರು ಗಳಿಸಬೇಕಾಗಿದೆ. ಆದರೆ ಅದಕ್ಕೆ ಬೇಕಾದ ಸಿದ್ಧತೆಯನ್ನು ಇನ್ನೂ ಯಾವ ಶಕ್ತಿಯೂ ಮಾಡಿಕೊಂಡಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments