ಕಜಪದ ಆಂತರಿಕ ಜಗಳ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈಗಿರುವ ಸಮಸ್ಯೆಗಳು ಸಾಲದೆನ್ನುವಂತೆ, ಕರ್ನಾಟಕ ಜನತಾ ಪಾರ್ಟಿಯ ಸಂಸ್ಥಾಪಕ ಅಧ್ಯಕ್ಷ ಪ್ರಸನ್ನಕುಮಾರ ಮತ್ತೊಂದು ಸಮಸ್ಯೆಯನ್ನು ಸೇರಿಸಿದ್ದಾರೆ.
ಚುನಾವಣೆ ಆಯೋಗಕ್ಕೆ ಪ್ರಸನ್ನಕುಮಾರ (ದಿವಂಗತ ಹೊಟ್ಟೆ ಪಕ್ಷದ ರಂಗಸ್ವಾಮಿ ಅವರ ಹತ್ತಿರದ ಸಂಬಂಧಿ) ಬರೆದಿರುವ ಪತ್ರದಲ್ಲಿ ಯಡಿಯೂರಪ್ಪ ಅವರು ಪಕ್ಷದ ಅಂಗರಚನೆಯ ವಿಧಿ ನಿಯಮಗಳನ್ನ ಉಲ್ಲಂಘಿಸುತ್ತಿರುವುದರಿಂದ, ಅವರನ್ನು ಪಕ್ಷದ ಸದಸ್ಯತ್ವದಿಂದಲೇ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಕಜಪದ ಈಗಿನ ವಕ್ತಾರರ ಹೇಳಿಕೆಯಂತೆ, ಪ್ರಸನ್ನಕುಮಾರ್ ಅವರನ್ನೇ ಪಕ್ಷದಿಂದ ಹೊರಗೆ ಹಾಕಲಾಗಿದೆ. ನಿಜ. ಇದೊಂದು ಚಿಲ್ಲರೆ ವಿಷಯ. ಆದರೆ ಚುನಾವಣೆ ಸಮಯದಲ್ಲಿ ಸಾಕಷ್ಟು ಕಿರಿಕಿರಿ ಉಂಟು ಮಾಡಬಲ್ಲ ವಿಷಯ. ದೇಶದಲ್ಲಿ ಹೊಸ ಪಕ್ಷವನ್ನು ಸ್ಥಾಪಿಸಲು ಹೊರಡುವವರಿಗೆ ಅದೇನೋ ಕಾಂಗ್ರೆಸ್ ಅಥವಾ ಜನತಾ ಪದಗಳ ಬಳಕೆಯ ಮೋಹ. ದೇಶದಲ್ಲಿ ಹಲವಾರು ಕಾಂಗ್ರೆಸ್ ಪಕ್ಷಗಳಿವೆ. ಅದೇ ರೀತಿ ಮಾಜಿ ಜನತಾ ಪರಿವಾರದ ಮುಖಂಡರಿಗೆ ಜನತಾ ಪದದ ಮೇಲಿನ ಮೋಹ ಇನ್ನೂ ಹೋಗಿಲ್ಲ. ಹಲವು ಜನತಾದಳಗಳಿವೆ.
ಜನತಾ ಪಕ್ಷದ ನಾಯಕರಾಗಿದ್ದ ದೇವೇಗೌಡರು ಹಿಂದೆ (ಅವರು ಪ್ರಧಾನಿಯಾಗುವುದಕ್ಕೆ ಮುಂಚೆ) ಮಾಜಿ ಪ್ರಧಾನಿ ಚಂದ್ರಶೇಖರ್ ಸ್ಥಾಪಿಸಿದ್ದ ಸಮಾಜವಾದಿ ಜನತಾ ಪಕ್ಷದಲ್ಲಿ ತಮ್ಮ ಜನತಾ ಪಕ್ಷವನ್ನು ಹೊಳೇನರಸೀಪುರದಲ್ಲಿ ನಡೆದ ಒಂದು ಮೇಳದಲ್ಲಿ ವಿಲೀನಗೊಳಿಸಿದ್ದರು. ಆಗ ಜನತಾ ಪಕ್ಷ ಅಥವಾ ಪಾರ್ಟಿಯ ಟ್ರೇಡ್ ಮಾರ್ಕ್ ಸ್ವಾಮ್ಯ ಅನಾಯಾಸವಾಗಿ ಡಾ॥ ಸುಬ್ರಹ್ಮಣ್ಯನ್ ಸ್ವಾಮಿಯವರ ಪಾಲಾಯಿತು. ಆ ಕಾಲದಲ್ಲಿ ಈ ಬೆಳವಣಿಗೆ ದೇವೇಗೌಡರ ನೆಮ್ಮದಿಯನ್ನು ಕೆಡಿಸಿದ್ದು ನಿಜ. ಅನಂತರ ದೇವೇಗೌಡರು ಮತ್ತೆ ಜನತಾದಳವನ್ನು ಪ್ರವೇಶಿಸಿ, ಮುಖ್ಯಮಂತ್ರಿ, ಪ್ರಧಾನಿ ಆಗಿದ್ದು ಬೇರೆ ಮಾತು. ಈಗ ಯಡಿಯೂರಪ್ಪ ತಮ್ಮ ಪಕ್ಷದ ಹೆಸರನ್ನು ಬದಲಾಯಿಸ್ತಾರಾ ?
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.