ಚುನಾವಣೆಗೆ ಕಾಂಗ್ರೆಸ್ ಯೋಜನೆ
1971ರ ಗರೀಬಿ ಹಟಾವೋ ಘೋಷಣೆಯಿಂದ ಹಿಡಿದು 2009ರ ಸಾಲ ಮನ್ನ ಹಾಗೂ ಮಾಹಿತಿ ಸ್ವಾತಂತ್ರ್ಯದ ಹಕ್ಕಿನವರೆಗೂ, ಘೋಷಣೆಗಳ ಮೂಲಕವೇ ಸಾರ್ವತ್ರಿಕ ಚುನಾವಣೆಗಳನ್ನು ಗೆಲ್ಲುತ್ತಿರುವ ಕಾಂಗ್ರೆಸ್ 2014ರ ಚುನಾವಣೆಗೆ, (ಅಂದರೆ ಮುಂದಿನ ವರ್ಷದ ಚುನಾವಣೆಯೇ) ಆರಿಸಿಕೊಂಡಿರುವುದು ಲೋಕಪಾಲ ವ್ಯವಸ್ಥೆ ಹಾಗೂ ಸರ್ವರಿಗೂ ಆಹಾರದ ಭದ್ರತೆಯ ಕಾರ್ಯಕ್ರಮವನ್ನು.
ಈ ಎರಡೂ ವಿಚಾರಗಳಿಗೆ ಸಂಬಂಧಿಸಿದಂತೆ ಸಂಸತ್ತಿನ ಬಜೆಟ್ ಅಧಿವೇಶನದಲ್ಲೇ ವಿಧೇಯಕಗಳನ್ನು ಮಂಡಿಸುವ ತೀರ್ಮಾನ (ಪಕ್ಷದ್ದು - ಸರ್ಕಾರದ್ದಲ್ಲ) ಜೈಪುರದ ಚಿಂತನ ಶಿಬಿರದಲ್ಲೇ ಆಗಿದೆ, ಈ ಎರಡೂ ವಿಧೇಯಕಗಳಿಗೆ ಆದ್ಯತೆ ನೀಡಲು ಸಂಸದೀಯ ಪಕ್ಷಕ್ಕೆ ಸೋನಿಯಾ ಗಾಂಧಿ ಅವರ ಆದೇಶವೂ ಹೋಗಲೂ ಬಹುದು.
ಲೋಕಪಾಲ ವಿಧೇಯಕ ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು ರಾಜ್ಯಸಭೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅದನ್ನು ಸಂಸದೀಯ ಸಮಿತಿಯ ಪರಿಶೀಲನೆಗೆ ಕಳಿಸಿದಾಗ, ಅಲ್ಲಿ ವಿಪರೀತ ಬದಲಾವಣೆಗಳಾಗಿರುವುದರಿಂದ ಪರಿಷ್ಕೃತ ವಿಧೇಯಕ, ಸಚಿವ ಸಂಪುಟದಲ್ಲಿ ಅಂಗೀಕಾರವಾದ ಅನಂತರವೇ ಮತ್ತೆ ಲೋಕಸಭೆ ರಾಜ್ಯಸಭೆಗಳಲ್ಲಿ ಪರಿಶೀಲನೆ ಸಾಧ್ಯ. ಈ ಸಂಬಂಧದಲ್ಲಿ, ಸೋನಿಯಾ ಗಾಂಧಿ ಅವರೇ ಸಶಕ್ತ, ಪರಿಣಾಮಕಾರಿ ಲೋಕಪಾಲ ವ್ಯವಸ್ಥೆಗೆ ಹೋರಾಟವನ್ನೇ ರೂಪಿಸಿದ್ದ ಪ್ರಖ್ಯಾತ ನಿರಶನ ಸತ್ಯಾಗ್ರಹಿ ಅಣ್ಣಾ ಹಜಾರೆ ಅವರಿಗೆ ಪತ್ರ ಬರೆದಿರುವುದೇ ಕಾಂಗ್ರೆಸ್ಸಿನಲ್ಲಿ ಮೂಡಿರುವ ಆಸಕ್ತಿಗೆ ಸಾಕ್ಷಿ. ಲೋಕಪಾಲ - ಲೋಕಾಯುಕ್ತ ವಿಧೇಯಕ ಕುರಿತಂತೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಅಣ್ಣಾ ತಂಡ ಹಾಗೂ ಕೇಂದ್ರ ಸಚಿವ ಸಂಪುಟದ ಪ್ರತಿನಿಧಿಗಳ ಸಮಿತಿಯೊಂದರಲ್ಲಿ ವಿಪುಲವಾದ ಚರ್ಚೆ ನಡೆದಿದೆ.
ಆದರೂ ಕೆಲವು ರಾಜಕೀಯ ಶಕ್ತಿಗಳ ವಿರೋಧದಿಂದಾಗಿ ನೆನೆಗುದಿಗೆ ಬಿದ್ದಿತ್ತು, ಈಗಲಾದರೂ ವಿಧೇಯಕವನ್ನು ಕಾಯಿದೆಗೆ ಪರಿವರ್ತಿಸಿ, ಅದರ ಕೀರ್ತಿಯನ್ನು ಪಡೆದುಕೊಳ್ಳುವುದು ಕಾಂಗ್ರೆಸ್ಸಿನ ಹವಣಿಕೆ. ಅದು ಈಡೇರಬೇಕಾದರೆ ಸಂಸತ್ತಿನ ಉಭಯ ಸದನಗಳಲ್ಲೂ ಬಿಜೆಪಿಯ ಬೆಂಬಲ ಬೇಕು. ಗೃಹಮಂತ್ರಿ ಸುಶೀಲ ಕುಮಾರ ಶಿಂಧೆ ಅವರು ಆರೆಸ್ಸೆಸ್ - ಬಿಜೆಪಿ ಸಂಘಟನೆಗಳು, ಹಿಂದೂ ಉಗ್ರವಾದಿಗಳಿಗಾಗಿ ತರಪೇತಿ ಶಿಬಿರಗಳನ್ನು ನಡೆಸುತ್ತಿವೆ, ಅಥವಾ ಈ ಸಂಘಟನೆಗಳ ಶಿಬಿರಗಳಲ್ಲಿ ಹಿಂದೂ ಉಗ್ರವಾದಿಗಳು ಪಾಲುಗೊಳ್ಳುತ್ತಿದ್ದಾರೆ ಎನ್ನುವ ಅರ್ಥ ಬರುವ ಹೇಳಿಕೆಯನ್ನು ನೀಡಿದ ಅನಂತರ ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್ ಗೃಹಸಚಿವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಸರ್ಕಾರ ಸಂಸತ್ತಿನ ಅಧಿವೇಶನವನ್ನು ಸುಗಮವಾಗಿ ನಡೆಸುವ ಆಸೆಯನ್ನೇ ಕೈ ಬಿಡಬೇಕೆನ್ನುವ ಎಚ್ಚರಿಕೆಯನ್ನು ನೀಡಿದ್ದೂ ಆಗಿದೆ.
ಬಜೆಟ್ ಅಧಿವೇಶನದಲ್ಲಿನ ಕಾರ್ಯಕ್ರಮದ ಪಟ್ಟಿ ದೊಡ್ಡದೇ ಇದೆ. ವಿತ್ತಮಂತ್ರಿ ಪಿ. ಚಿದಂಬರಮ್ ಒಂದು ಮಹತ್ವದ ದಾಖಲೆಯನ್ನೇ ಸಂಸತ್ತಿನ ಮುಂದೆ ಇಡುವ ಸಂಭವವೂ ಇದೆ. ಚುನಾವಣೆಯ ಮುನ್ನಾ ವರ್ಷವಾಗಿರುವುದರಿಂದ, ಎಲ್ಲ ರಾಜಕೀಯ ಪಕ್ಷಗಳಿಗೂ ಸಂಸತ್ತಿನ ಅಧಿವೇಶನದ ಕಾಲದಲ್ಲೇ ತಮ್ಮ ಪ್ರಣಾಳಿಕೆಗಳನ್ನು ಪರೋಕ್ಷವಾಗಿ ಪ್ರಕಟಿಸುವ ಉದ್ದೇಶವಂತೂ ಇದ್ದೇ ಇರುತ್ತದೆ. ಹೀಗಾಗಿ ಕಾಂಗ್ರೆಸ್ಸಿನ ಮಹತ್ವಾಕಾಂಕ್ಷೆಯ ವಿಧೇಯಕಗಳ ಅಂಗೀಕಾರಕ್ಕೆ ಭಗೀರಥ ಪ್ರಯತ್ನವೇ ಬೇಕಾದೀತು.
ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ತನ್ನ ಬತ್ತಳಿಕೆಯಲ್ಲಿ ಸೇರಿಸಿಕೊಂಡಿರುವ ಬ್ರಹ್ಮಾಸ್ತ್ರ ಸರ್ವರಿಗೂ ಆಹಾರ ಭದ್ರತೆಯ ಮಹಾನ್ ಕಾರ್ಯಕ್ರಮ.
ಬಡವರಿಗೆ ಅತಿ ಅಗ್ಗದ ದರದಲ್ಲಿ ಧಾನ್ಯ ಒದಗಿಸುವ ಕಾರ್ಯಕ್ರಮವನ್ನು ಸೋನಿಯಾ ಗಾಂಧಿ ಅಧ್ಯಕ್ಷರಾಗಿರುವ ರಾಷ್ಟ್ರೀಯ ಸಲಹಾ ಸಮಿತಿ ರೂಪಿಸಿದೆ. ಅದು ವಿಧೇಯಕದ ಸ್ವರೂಪವನ್ನು ಪಡೆಯಲು ಇನ್ನು ಬಹುದಿನಗಳೇನೂ ಬೇಕಾಗಿಲ್ಲ.
ಈ ಬೃಹತ್ ಪ್ರಮಾಣದ ಯೋಜನೆಯ ಜಾರಿಗೆ ಸರ್ಕಾರ ಬದ್ದವಾದರೆ ಇಂದಿನ ಲೆಕ್ಕದಲ್ಲಿ ಸರ್ಕಾರದ ಮೇಲಿನ ವಾರ್ಷಿಕ ಸಬ್ಸಿಡಿಯ ಹೊರೆ, ಸುಮಾರು 1.5 ಲಕ್ಷ ಕೋಟಿ ರುಪಾಯಿಗಳಷ್ಟಾಗಬಹುದಂತೆ. ಆ ಹಣವನ್ನು ಎಲ್ಲಿಂದ ತರುವುದು? ಅದು ಸಲಹಾ ಸಮಿತಿಯ ಕಾರ್ಯವ್ಯಾಪ್ತಿಯನ್ನು ಮೀರಿದ್ದು. ಸರ್ಕಾರವೇ ದಾರಿ ಹುಡುಕ ಬೇಕು. ಸಾಧ್ಯವೇ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.