ಸ್ವಾಗತಾರ್ಹ ತೀರ್ಪು
ಶಿಕ್ಷಕರ ನೇಮಕಾತಿಯಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆದು ಹರಿಯಾಣದ ಮಾಜಿ ಮುಖ್ಯಮಂತ್ರಿಗೆ ಶಿಕ್ಷೆಯಾಗಿರುವುದು ಸ್ವಾಗತಾರ್ಹ... ಎಷ್ಟೋ ಸಲ ರಾಜಕಾರಣಿಗೆ ಶಿಕ್ಷೆ ಎಂದರೆ 'ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬ ನೀತಿಯಾಗಿರುತ್ತದೆ. ಇಲ್ಲಿಯ ಹಗರಣದಲ್ಲಿ ಕೇವಲ ಮಾಜಿ ಮುಖ್ಯಮಂತ್ರಿಗೆ ಮಾತ್ರವಲ್ಲ ಹಿರಿಯ ಕಿರಿಯ ಅಧಿಕಾರಿಗಳೂ ಸೇರಿ ನಲವತ್ತಕ್ಕೂ ಹೆಚ್ಚು ಅಧಿಕಾರಿಗಳಿಗೆ ಶಿಕ್ಷೆಯಾಗಿರುವುದು ಅತ್ಯಂತ ಗಮನಾರ್ಹ. ಇಡೀ ಭ್ರಷ್ಟತೆಯ ಉಗಮವೇ ನೌಕರಶಾಹಿ... (ಹಿರಿಯ ಅಧಿಕಾರಿಯಿಂದ ಗುಮಾಸ್ತನವರೆಗೂ).
ರಾಜಕಾರಣಿಗಳನ್ನು ಓಲೈಸುವುದಕ್ಕಾಗಿ ನೀತಿ ನಿಯಮಗಳನ್ನು ಗಾಳಿಗೆ ತೂರಿ ಎಲ್ಲ ಸರಿಯಾಗಿದೆ ಎಂದು ಷರಾ ಬರೆದು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿದು, ಇಡೀ ವ್ಯವಸ್ಥೆಯನ್ನೇ ಈ ಅಧಿಕಾರಶಾಹಿ ವಿಕೃತ ಮಾಡಿ ಕೃತಾರ್ಥರಾಗಿ ಬಿಡುತ್ತಾರೆ. (ಇಲ್ಲದಿದ್ದರೆ ಕೆಲವು ಅಧಿಕಾರಿಗಳ ಗಳಿಕೆ ಕೋಟಿ ಕೋಟಿ ಮೀರಲು ಸಾಧ್ಯವಿತ್ತೇ?)
ಈಗ ಐಎಎಸ್ ಅಧಿಕಾರಿಗಳೂ ಸೇರಿದಂತೆ ನೌಕರರನ್ನೂ ಈ ಹಗರಣದಲ್ಲಿ ಭಾಗಿ ಮಾಡಿ ಶಿಕ್ಷಿಸಿರುವುದರಿಂದ ಗುಮಾಸ್ತರಿಂದ ಹಿಡಿದು ಐಎಎಸ್ ಅಧಿಕಾರಿಗಳವರೆಗೂ ಕಂಪನ ಸೃಷ್ಟಿಸುವ ಸ್ಪಷ್ಟ ಎಚ್ಚರಿಕೆಯ ಸಂದೇಶ ಇದೆ. ಇಲ್ಲಿ ಹಗರಣವನ್ನು ಬಹಿರಂಗ ಮಾಡಿದ ಅಧಿಕಾರಿಯನ್ನೂ ಶಿಕ್ಷೆಗೆ ಗುರಿಪಡಿಸಿರುವುದು ವಿಶೇಷ... ಅಧಿಕಾರದಲ್ಲಿರುವಾಗ ಮಾಡುವುದನ್ನೆಲ್ಲ ಮಾಡಿ ತದನಂತರ ರಾಜಕೀಯ ಲಾಭಕ್ಕಾಗಿ ಅದನ್ನು ಬಹಿರಂಗಪಡಿಸಿ ಮಹಾಸಾಧನೆ ಮಾಡುವ ಅಧಿಕಾರಿಗಳಿಗೆ ಇದೊಂದು ಕಾದ ಕಬ್ಬಿಣದ ಬರೆ.
ನೇಮಕಾತಿ, ಖರೀದಿ ಇತ್ಯಾದಿ ಪ್ರಕ್ರಿಯೆಗಳು ಕನಿಷ್ಟ ಹತ್ತಾರು ಅಧಿಕಾರಿಗಳ ಪರಿಶೀಲನೆಯ ನಂತರ ಅವರ ಸಹಕಾರದಿಂದ ಮಾತ್ರ ಅಕ್ರಮವಾಗಿ ಮಂಜೂರಾತಿ ಹಂತ ತಲುಪಲು ಸಾಧ್ಯ. ಆದುದರಿಂದ ತನಿಖೆ ಆಮೂಲಾಗ್ರವಾಗಿ ನಡೆದಾಗ ಪ್ರತಿಯೊಬ್ಬರ ಪಾತ್ರ ಪತ್ತೆ ಆಗಿ ಅವರಿಗೆ ಶಿಕ್ಷೆ ಆದರೆ ಭ್ರಷ್ಟತೆಯನ್ನು ಬುಡಸಹಿತ ಕಿತ್ತು ಹಾಕಲು ಸಾಧ್ಯ... ಇದು ಆ ದಿಕ್ಕಿನಲ್ಲಿ ಮೊದಲ ಹೆಜ್ಜೆ.
ಲೋಕಾಯುಕ್ತಕ್ಕೆ ನನ್ನದೊಂದು ಸಣ್ಣ ಭಿನ್ನಹ. ಸರ್, ಇನ್ನು ಮುಂದೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ಅಕ್ರಮ ಗಳಿಕೆಯನ್ನು ಪತ್ತೆ ಹಚ್ಚುವ ಶ್ರಮ ಬೇಡ... ಅವರು ಮಂಜೂರು ಮಾಡಿರುವ ಫೈಲುಗಳನ್ನು ಪರೀಕ್ಷಿಸಿ ಅಕ್ರಮವಾಗಿ ಮಂಜೂರಾತಿ ನೀಡಿರುವುದನ್ನು ಪತ್ತೆ ಹಚ್ಚಿದರೆ ಸಾಕು. ಭ್ರಷ್ಟತೆಯನ್ನು ಬುಕ್ ಮಾಡಬಹುದು. ದಾಖಲೆ ಸಹಿತ ಷಾಮೀಲಾದವರೆಲ್ಲ ಸಿಗುತ್ತಾರೆ.
-ಸತ್ಯಬೋಧ, ಬೆಂಗಳೂರು
ಪುನರೂರು ನುಡಿದುದು ಖಂಡಿತಾ ಸರಿ
ಮಂಗಳೂರು ವಿಶ್ವವಿದ್ಯಾಲಯಕ್ಕೆ ಡಾ. ಶಿವರಾಮ ಕಾರಂತರ ಹೆಸರು ಇಡಬೇಕೆಂಬ ಹರಿಕೃಷ್ಣ ಪುನರೂರು ಅವರ ಆಗ್ರಹವು ನ್ಯಾಯಯುತವಾಗಿಯೇ ಇದೆ. ಸಕಾಲಿಕವೂ ಹೌದು. ಜ್ಞಾನಪೀಠ ಗೌರವಾನ್ವಿತ ಶಿವರಾಮ ಕಾರಂತರಿಗೆ ಹಾಗೂ ಕನ್ನಡ ಸಾರಸ್ವತ ಲೋಕಕ್ಕೇ ಸಲ್ಲುವ ಶ್ರೇಷ್ಠ ಗೌರವ ಇದಾಗಿದೆ. ಆದರೆ ಈ ಹೆಸರಿಡುವ ಪ್ರಕ್ರಿಯೆಯಲ್ಲಿ ಯಾವುದೇ ದ್ವಂದ್ವ ಸೃಷ್ಟಿ ಬೇಡ. ವಿವಾದಿತ ಟಿಪ್ಪೂ ವಿ.ವಿ. ಸ್ಥಾಪನೆಗೂ, ಮಂಗಳೂರು ವಿ.ವಿ. ಪುನರ್ನಾಮಕರಣಕ್ಕೂ ಯಾವುದೇ ತಾತ್ವಿಕ ಸಂಬಂಧ ಕಲ್ಪಿಸುವಂತಿಲ್ಲ. ಕನ್ನಡನಾಡಿನ ಎಲ್ಲಾ ಸಹೃದಯಿಗಳೂ ಒಕ್ಕೊರಲಿನಿಂದ ಶಿವರಾಮಕಾರಂತ ವಿಶ್ವವಿದ್ಯಾಲಯ (ಪುನರ್ನಾಮಕರಣ) ಬಗ್ಗೆ ಆಗ್ರಹಿಸತಕ್ಕದ್ದು.
-ಎನ್.ಡಿ. ಕಾರಂತ, ಮೈಸೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.