ಶಿಕ್ಷಕರೆಲ್ಲ ಗುರುಗಳಾಗಬೇಕು
ಮಾನ್ಯ ಶಿಕ್ಷಣ ಸಚಿವರೇ, ವಿಶ್ವೇಶ್ವರ ಹೆಗಡೆ ಕಾಗೇರಿಯವರಂಥ ಕೆಲವರನ್ನು ಬಿಟ್ಟರೆ ಉಳಿದ ಹೆಚ್ಚಿನ ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೇರಿಸಿರುವುದು ಹಾಗೂ ಸೇರಿಸುವುದು ಖಾಸಗಿ ಶಾಲಾ-ಕಾಲೇಜುಗಳಿಗೆ. ಮ.ಪ್ರ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಎಐಸಿಸಿ ಕಾರ್ಯದರ್ಶಿ ರಾಹುಲ್ಗಾಂಧಿಯಂಥವರ ವಿದ್ಯಾಭ್ಯಾಸ ವಿದೇಶದಲ್ಲೇ ನಡೆಯಿತು. ಇದರರ್ಥ ಇಷ್ಟೇ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಗುಣಮಟ್ಟ ಕಮ್ಮಿಯಾಗಿದೆ. ತಿಳಿದವರು ಮಾತ್ರ ಇತರರಿಗೆ ತಿಳಿಸಲು ಸಾಧ್ಯ. ಅರ್ಹತೆಯ ಆಧಾರದ ಮೇಲೆ ನೇಮಕಾತಿಯಾಗುವಂತಿದ್ದರೆ ಶಿಕ್ಷಣದ ಗುಣಮಟ್ಟ ವೃದ್ಧಿಯಾಗುತ್ತದೆ. ಹಾಗಾಗಿ ಶಿಕ್ಷಕರ ನೇಮಕಾತಿಯಲ್ಲಿ ಜಾತಿ, ಅಲ್ಪಸಂಖ್ಯಾತರ ಮೀಸಲಾತಿ ಕೈಬಿಟ್ಟು, ಅರ್ಹತೆಯ ಆಧಾರದ ಮೇಲೆ ತೆಗೆದುಕೊಳ್ಳಬೇಕೆಂದು ಬಹು ಸಮಯದಿಂದ ಹಲವರು ಅಪೇಕ್ಷಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. 'ನಾನು ಸರ್ಕಾರಿ ಶಾಲೆಯಲ್ಲಿ ಓದಿದವನು, ಸರ್ಕಾರಿ ಶಾಲೆಗಳ ಗುಣಮಟ್ಟ ಚೆನ್ನಾಗಿಯೇ ಇದೆ' ಎಂದು ಕೆಲವರು ಮೊಂಡು ವಾದ ಮಾಡುತ್ತಿರುತ್ತಾರೆ. ಆದರೆ ಅವರಿಗೆ ಪಾಠ ಮಾಡಿದ ಶಿಕ್ಷಕರಿಗೆ ನಿವೃತ್ತಿಯಾಗಿ ಹೊಸ ಶಿಕ್ಷಕರ ವಲಯ ಸೃಷ್ಟಿಯಾಗಿದೆ ಎಂಬ ಅರಿವು ಇದ್ದಂತಿಲ್ಲ.
ಮೀಸಲಾತಿಯ ಜೊತೆಗೆ ಶಿಕ್ಷಣ ವ್ಯವಸ್ಥೆಯ ಗುಣಮಟ್ಟಕ್ಕೆ ಬಹು ತೊಡಕಾಗಿರುವ ಇನ್ನೂ ಕೆಲವು ಬಹು ಮುಖ್ಯ ಸಂಗತಿಗಳಿವೆ. ಇದರಿಂದ ತೊಂದರೆಗೆ ಒಳಗಾಗುತ್ತಿರುವವರು ಹಳ್ಳಿ ಶಾಲೆಗಳ ಮಕ್ಕಳು. ಪ್ರತಿ ವರ್ಷದಂತೆ ಈ ವರ್ಷವೂ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಿದೆ. ವರ್ಗಾವಣೆಗೊಂಡ ಶಿಕ್ಷಕರು ತಾವು ಆರಿಸಿದ ಸ್ಥಳಗಳಿಗೆ ಹೋಗುವುದು ಸಹಜ ಪ್ರಕ್ರಿಯೆ. ಇಲ್ಲಿ ನಷ್ಟಕ್ಕೆ ಒಳಗಾಗುವವರು ವಿದ್ಯಾರ್ಥಿಗಳು. ಶಿಕ್ಷಕರು ವರ್ಗಾವಣೆ ಹೊಂದಿದ ನಂತರ ಖಾಲಿ ಜಾಗ ಭರ್ತಿ ಮಾಡುವುದು ಯಾವಾಗ? ಹಲವಾರು ಶಾಲೆಗಳಲ್ಲಿ ಎಷ್ಟೋ ವರ್ಷಗಳಿಂದ ಭರ್ತಿಯಾಗದ ಹುದ್ದೆಗಳಿವೆಯಾದರೂ, ಮತ್ತೆ ಮತ್ತೆ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಾ ಬಂದಿದೆ. ಮಕ್ಕಳ ಪಾಡಂತೂ ದೇವರಿಗೇ ಪ್ರೀತಿ. ಈ ಪ್ರಕ್ರಿಯೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕರ ಜಾಗಕ್ಕೆ ಬದಲಿ ವ್ಯವಸ್ಥೆ ಆಗುವ ತನಕ ಅಥವಾ ವರ್ಷಾಂತ್ಯವಾದರೂ ಸರಿ, ಸದರಿ ಶಿಕ್ಷಕರನ್ನು ರಿಲೀವ್ ಮಾಡಬಾರದು. ಹೀಗೆಂದು ವರ್ಗಾವಣಾ ಆದೇಶದಲ್ಲಿ ನಮೂದಿಸುವುದರ ಜೊತೆಗೆ, ಅದನ್ನು ಪಾಲಿಸಲು ಶಾಲಾ ಎಸ್ಡಿಎಂಸಿಗೂ ಅವಕಾಶ ನೀಡಬೇಕು. ಅಥವಾ ಒಂದು ವೇಳೆ ಶಿಕ್ಷಕ ಮ್ಯೂಚುಯಲ್ ವರ್ಗಾವಣೆ ಬಯಸಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ. ನೌಕರಿಗೆ ಆಯ್ಕೆಯಾದ ಶಿಕ್ಷಕ ಕನಿಷ್ಠ ಐದು ವರ್ಷಕ್ಕಾದರೂ ಹಳ್ಳಿಗಳಲ್ಲಿ ಸೇವೆ ಸಲ್ಲಿಸಬೇಕೆಂಬ ಹೊಸ ನಿಯಮವನ್ನು ನೇಮಕಾತಿ ಪ್ರಕ್ರಿಯೆಯಲ್ಲಿ ತರಬೇಕಾಗುತ್ತದೆ.
ಇನ್ನು ಇತ್ತೀಚಿನ ವರ್ಷಗಳಲ್ಲಿ ಶಿಕ್ಷಕ ವೃತ್ತಿಗೆ ನೇಮಕಗೊಳ್ಳುತ್ತಿರುವವರಲ್ಲಿ ಹೆಚ್ಚಿನವರು ಡಿಇಡಿ ಮಾಡಿ ಸರ್ಕಾರಿ ನೌಕರಿ ಪಡೆಯುತ್ತಾರೆ. ನಂತರ ಶೈಕ್ಷಣಿಕ ವರ್ಷದ ಅರ್ಧ ಭಾಗವನ್ನು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ , ಪರೀಕ್ಷೆ ಬರೆಯಲಿಕ್ಕಾಗಿ ವ್ಯಯ ಮಾಡುತ್ತಾರೆ. ಈಗ ವರ್ಷದ ಪ್ರಾರಂಭ. ಎಂಎ ಪರೀಕ್ಷೆ ಬರೆಯುವ ಉತ್ಸಾಹ. ಏಕೋಪಾಧ್ಯಾಯ ಶಾಲೆಯ ಶಿಕ್ಷರು ಪರೀಕ್ಷೆಗಳಿಗೆ ಕೂತರೆ ಮುಗಿದೇ ಹೋಯಿತು. ಆಗ ಪಕ್ಕದ ಶಾಲೆಯಿಂದ ಶಿಕ್ಷಕರನ್ನು ಕಳಿಸಬೇಕು. ಇಂಥದ್ದಕ್ಕೆಲ್ಲ ಸರ್ಕಾರವೇ ನಿಯಂತ್ರಣ ಹೇರಬೇಕು. ಸೇವೆಗೆ ಸೇರಿದ 5 ವರ್ಷ ಯಾರೂ-ಯಾವ ಪರೀಕ್ಷೆಯನ್ನೂ ಕಟ್ಟಬಾರದೆಂಬ ಕಾನೂನು ಜಾರಿಯಾದರೆ ಶಿಕ್ಷಣದ ಗುಣಮಟ್ಟ ಇನ್ನೂ ಏರಬಹುದು. ಶಿಕ್ಷಕರೆಲ್ಲ ಗುರುಗಳಲ್ಲ ಎಂಬ ಮಾತು ಸುಳ್ಳಾದರೆ ಅದೆಷ್ಟು ಚೆನ್ನವಲ್ಲವೇ?
- ಕೌಸಲ್ಯಾದೇವಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com