ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Vishwanath S
Updated On : 3 Jul 2013, 10:36 am

ವಾಷಿಂಗ್ಟನ್ ಡಿಸಿಯಿಂದ ಶ್ರೀವತ್ಸ ಜೋಶಿ ಅವರು 'ಸಾಹಿತ್ಯಕ' ಚರ್ಚೆಗೆ ಪ್ರತಿಕ್ರಿಯಿಸಿದ್ದಾರೆ. ಅವರು ಬರೆಯುತ್ತಾರೆ- 'ತಪ್ಪಾಯ್ತು ತಿದ್ಕೋತೀವಿ ಅಂಕಣದಲ್ಲಿ ಪ್ರಕಟವಾಗುವ ಕೊಕ್ಕಡ ವೆಂಕಟರಮಣ ಭಟ್ ಅವರ ಪತ್ರಗಳನ್ನು ನಾನು ವಿಶೇಷವಾಗಿ ಗಮನಿಸುತ್ತೇನೆ. ಅವುಗಳಲ್ಲಿ ಅವರು ಭಾಷೆ-ಬಳಕೆಯ ಕುರಿತಂತೆ ವಿವರಿಸುವ ವಿದ್ವತ್ಪೂರ್ಣ ಅಂಶಗಳನ್ನು ಬಹಳವಾಗಿ ಮೆಚ್ಚುತ್ತೇನೆ. ನನ್ನ ತಿಳಿವಳಿಕೆಯಲ್ಲಿರುವ ವಿಚಾರಗಳನ್ನು ಅನುಮೋದಿಸುತ್ತೇನೆ. ನನಗೆ ಗೊತ್ತಿಲ್ಲದ ಹೊಸ ವಿಚಾರಗಳನ್ನು ಕಲಿತುಕೊಳ್ಳುತ್ತೇನೆ.'
'ಆದರೆ ಜುಲೈ 3 ಸಂಚಿಕೆಯಲ್ಲಿ ಪ್ರಕಟವಾಗಿರುವ ಪತ್ರದಲ್ಲಿ ವೆಂಕಟರಮಣ ಭಟ್ ಅವರು ಮಂಡಿಸಿರುವ 'ಸಾಹಿತ್ಯಿಕ ಎಂಬ ಪದದ ಬದಲಾಗಿ ಸಾಹಿತ್ಯಕ ಎಂಬ ಪದಬಳಕೆ ಸರ್ವಾದರಣೀಯವಾಗಬಲ್ಲದು' ಎಂಬ ಜಿಜ್ಞಾಸೆಯನ್ನು ಓದಿದಾಗ ಮಾತ್ರ 'ಇದೇಕೋ ಅತಿಯಾಯ್ತು' ಅಂತನಿಸಿತು!'
"ಸಾಹಿತ್ಯಿಕ' ಪದದ ಬಗ್ಗೆ ಅವರು ಎತ್ತಿರುವ ಆಕ್ಷೇಪವಂತೂ ಹಾಸ್ಯಾಸ್ಪದ ಮತ್ತು ಬಾಲಿಶ ಅನಿಸಿತು. ಯಕಾರ ಒತ್ತು ಇರುವಾಗ ಸಾಹಿತ್ಯಿಕ ಎಂಬ ಪದವು 'ತಿಕ' ಎಂಬ ಪದದಂತೆ ಅದು ಹೇಗೆ ಕೇಳಿಬರುತ್ತದೋ ನನಗೆ ಗೊತ್ತಿಲ್ಲ. ಯಕಾರ ಒತ್ತು ಇರುವ ಸಾಹಿತ್ಯಿಕ ಪದವೇ ಅವರಿಗೆ ತಿಕದಂತೆ ಕೇಳಿಬರುತ್ತದಾದರೆ 'ಜಾಗತಿಕ', 'ಭೌತಿಕ', 'ನೈಮಿತ್ತಿಕ' ಮುಂತಾದ ಪದಗಳ ಗತಿ ಏನು? ಅವುಗಳನ್ನೂ ಅನುಕ್ರಮವಾಗಿ 'ಜಾಗತಕ', 'ಭೌತಕ', 'ನೈಮಿತ್ತಕ' ಎಂದು ಬದಲಾಯಿಸಬೇಕೇ?'
'ಅಷ್ಟಾಗಿ 'ತಿಕ' ಒಂದು ಅಶ್ಲೀಲ ಪದ ಅನಿಸುವುದೇಕೆ? ದೇಹದ ಒಂದು ಪ್ರಮುಖ ಅಂಗ ಅದು. ಮುಷ್ಕರ ಹೂಡಿದರೆ ಕತೆ ಮುಗಿದಂತೆಯೇ. ಅದರ ಬಗ್ಗೆ ಮಡಿವಂತಿಕೆ ಏಕೆ? 'ತಿಕ'ದ ಬದಲಿಗೆ 'ಗುದ' ಎಂಬ ಶುದ ್ಧಸಂಸ್ಕೃತ ಪದ ಮತ್ತು ಅದರ ಉಚ್ಚಾರವನ್ನು ಹೋಲುವ ಇತರ ಪದಗಳು ವೆಂಕಟರಮಣ ಭಟ್ ಅವರಿಗೆ ಅಶ್ಲೀಲ ಅನಿಸುವುದಿಲ್ಲವೇ?'
'ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಾತ್ರ ಗ್ರಾಮ್ಯ ಭಾಷೆಯಲ್ಲಿ 'ತಿಕ' ಎನ್ನುತ್ತಾರೆ. ಕರಾವಳಿಯಲ್ಲಿ ಹುಟ್ಟಿ ಬೆಳೆದ ನನಗೆ ದಾವಣಗೆರೆಯಲ್ಲಿ ಎಂಜಿನಿಯರಿಂಗ್‌ಗಾಗಿ ವಿದ್ಯಾಭ್ಯಾಸಕ್ಕೆ ಸೇರುವವರೆಗೂ ಆ ಪದದ ಪರಿಚಯವೇ ಇರಲಿಲ್ಲ. ಆದರೂ ನಾನು 'ತಿಕ' ಎಂದರೆ ಅಶ್ಲೀಲಪದ, ಅದನ್ನು ಉಚ್ಚಾರದಲ್ಲಿ ಹೋಲುವ ಪದಗಳೂ ಅಶ್ಲೀಲ ಎಂದು ನಂಬಿ, 'ಸಾಹಿತ್ಯಿಕ'ದಂಥ ಸರಿಯಾದ, (ಸಂಬಂಧಿಸಿದ ಎಂಬ ಅರ್ಥದಲ್ಲಿ 'ಇಕ' ಪ್ರತ್ಯಯ ಸೇರಿ ಆದ) ನಿಯಮಬದ್ಧ ಸುಂದರ ಪದರಚನೆಯನ್ನು ವಿನಾಕಾರಣ ಬಹಿಷ್ಕರಿಸಬೇಕೇ?'
'ನಾನು ಹೇಳುವುದಾದರೆ ಬರಹದಲ್ಲಿ 'ತಿಕ' ಪದದ ಉಲ್ಲೇಖ ಖಂಡಿತ ಅಶ್ಲೀಲವಲ್ಲ. ಆ ಪದದ ಉಚ್ಚಾರವನ್ನು ಅಲ್ಪಸ್ವಲ್ಪ ಹೋಲುವ 'ಸಾಹಿತ್ಯಿಕ', 'ಭೌತಿಕ' ಮುಂತಾದ ಪದಗಳು ಸಹ ಅಶ್ಲೀಲವೆನಿಸುತ್ತವೆ ಎಂಬುದಂತೂ ವಿತಂಡವಾದವೇ ಸೈ. ಇದಕ್ಕೆ ನಾನು ವೆಂಕಟರಮಣ ಭಟ್ ಅವರಿಂದ ಸೂಕ್ತ ಉತ್ತರವನ್ನು ಅಪೇಕ್ಷಿಸುತ್ತೇನೆ' ಎಂದಿದ್ದಾರೆ.
'ತಿಕ'ವಷ್ಟೇ ಅಲ್ಲ ದೇಹದಲ್ಲಿ ಪ್ರತಿಯೊಂದು ಅಂಗವೂ ಪ್ರಮುಖವೇ. ಒಂದು ಅಂಗ ಮುಷ್ಕರ ಹೂಡಿದರೂ ಕಷ್ಟ ಎಂಬುದು ಅವು ಮುಷ್ಕರ ಹೂಡಿದಾಗ ಮಾತ್ರ ಅರಿವಿಗೆ ಬರುತ್ತದೆ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement