ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 8 Jul 2013, 10:33 am

ಬೆಂಗಳೂರು ಜೆ.ಪಿ. ನಗರದಿಂದ ಶಂಕರನಾರಾಯಣ ಭಟ್ ಅವರು ಬರೆಯುತ್ತಾರೆ- 'ಕೆಲವು ವಿಚಿತ್ರ ಪದ ಪ್ರಯೋಗಗಳು 'ಕನ್ನಡಪ್ರಭ'ದಲ್ಲಿ ನೋಡಸಿಗುತ್ತಿವೆ. ಜು.5ರಂದು (ಪುಟ 2) 'ಬದಲಿ ರಕ್ತ ನೀಡಿ ಪ್ರಾಣ ತೆಗೆದರು' ಶೀರ್ಷಿಕೆಯಲ್ಲಿ 'ನೇತ್ರದಾನ'ದ ಕೊನೆಯ ವಾಕ್ಯ... 'ಯಾರಾದರೂ ಕಣ್ಣಿಲ್ಲದವರಿಗೆ ದಾನ ಮಾಡುವಂತೆ ಮನವಿ ಮಾಡಿದ್ದು, ಈ ಮೂಲಕ ನಮ್ಮ ಸಹೋದರಿ ಇನ್ನೂ ಜೀವಂತವಾಗಿದ್ದಾಳೆ ಎಂದು ಭಾವಿಸುತ್ತೇವೆಎಂದು ಮಾರ್ಮಿಕವಾಗಿ ನುಡಿದರು' ಎಂದಿದೆ. ಮೃತಪಟ್ಟ ತಂಗಿಯ ಕಣ್ಣುದಾನ ಮಾಡುವ ವಿಷಯ 'ಮಾರ್ಮಿಕ' ಹೇಗಾದೀತೆಂದು ತಿಳಿಯಲಿಲ್ಲ.'
'ಪುಟ 7ರಲ್ಲಿ 'ಕುವೆಂಪು ಓದಿದ ಶಾಲೆಯಲ್ಲಿ ಮಕ್ಕಳ ಕೊರತೆ' ಶೀರ್ಷಿಕೆಯ ಸುದ್ದಿಯಲ್ಲಿ 'ಒಂದನೇ ತರಗತಿಯಲ್ಲಿರುವುದು ಕೇವಲ ಒಂದೋ-ಆರೋ ವಿದ್ಯಾರ್ಥಿಗಳು'! ಎಂದಿದೆ. ಒಂದೋ-ಎರಡೋ, ನಾಲ್ಕೋ-ಐದೋ, ಏಳೋ-ಎಂಟೋ ಎಂಬ ಪ್ರಯೋಗಗಳು ಸಾಮಾನ್ಯ. ಅದನ್ನು ಬಿಟ್ಟು ಒಂದೋ, ಆರೋ ಎಂದರೆ ಏನು? ಇನ್ನು 'ಗ್ರಾಮೀಣ ಪ್ರದೇಶದ ಶಾಲೆಗಳ ಪರಿಸ್ಥಿತಿಯಂತೂ ಮಿಕ್ಸರ್ ಗ್ರೈಂಡರ್ ರೀತಿಯಾಗಿದೆ' ಅಂದರೇನು?'
'ಪುಟ 16ರಲ್ಲಿ (ಕ್ರೀಡಾಪುಟ) 'ಜಿಂಬಾಬ್ವೆ ಸರಣಿಗೆ ಗಂಭೀರ್?' ಶೀರ್ಷಿಕೆಯ ಸುದ್ದಿಯ 4/5ನೇ ಪ್ಯಾರಾದಲ್ಲಿ 'ಹೀಗಾಗಿ ತಂಡದಿಂದ ಹೊರಗುಳಿದಿರುವ ಆರಂಭಿಕ ಆಟಗಾರ ಗೌತಮ್ ಗಂಭೀರ್ ತಂಡಕ್ಕೆ ಮರಳುವ ಸಾಧ್ಯತೆಗಳಿವೆ. ಅಲ್ಲದೆ ಧೋನಿ ಹೊರಗುಳಿದಿರುವ ಹಿನ್ನೆಲೆಯಲ್ಲಿ ತಂಡಕ್ಕೆ ಅನುಭವಿಗಳ ಅಗತ್ಯವಿದೆ. ಹೀಗಾಗಿ ಗಂಭೀರ್ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಧೋನಿ ಅನುಪಸ್ಥಿತಿಯಲ್ಲಿ ತಂಡಕ್ಕೆ ಹಿರಿಯರ ಅಗತ್ಯವಿರುವ ಹಿನ್ನೆಲೆಯಲ್ಲಿ ಗಂಭೀರ್ ಅವರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ತಂಡದಲ್ಲಿರುವ ಇನ್ನೊಬ್ಬ ಆಟಗಾರ ಮುರಳಿ ವಿಜಯ್ ವೈಫಲ್ಯ ಕಾಣುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಕೈಬಿಟ್ಟು ಗಂಭೀರ್ ಅವರನ್ನು ಪರಿಗಣಿಸುವ ಸಾಧ್ಯತೆಗಳಿವೆ' ಹೀಗೆ ಅದೆಷ್ಟು ಬಾರಿ ಗಂಭೀರ್ ವಾಪಸ್ಸಾಗುತ್ತಾರೋ ತಿಳಿಯದು.'
'ಜು.4ರಂದು (ಪುಟ 3) 'ಜೀವಮಾನದ ಅತ್ಯಂತ ನೋವಿನ ಅನುಭವ' ಶೀರ್ಷಿಕೆಯ ಸುದ್ದಿಯಲ್ಲಿ 'ಸಹೃದಿಯಾಗಿರಬೇಕು ಎಂಬ ಭಾವನ; ನಾನಾ ಕೇವಲ ಸೇವಕನಾಗಿ; ಅಲ್ಲಿರುವ ಬೆಟ್ಟಗಳ 70 ಡಿಗ್ರಿ; ಯಾತ್ರಾ ಸ್ಥಳ, ಹಳ್ಳಿಗಳ ನಾಮಾವಶೇಷ, ರಸ್ತೆ ಹಾಳಾಗಿರುವುದು ಹಾಗೂ ನನ್ನ ಕಣ್ಣಿಗೆ ಬಿದ್ದಷ್ಟು ಸ್ಥಳಗಳನ್ನು ನೋಡಿದಾಗ 10 ಸಾವಿರಕ್ಕೆ ಅಧಿಕ ಜನ ಮೃತಪಟ್ಟಿರಬಹುದು...' ಅಂದರೇನು?'
"ಸಾರಿಗೆ ಅಧಿಕಾರಿಗಳ ಕಿರುಕುಳದರ್ಶನ' ಶೀರ್ಷಿಕೆ 4ನೇ ಪ್ಯಾರಾ 'ಚಾಲನಾ ತರಬೇತಿಗೆ ಬರುವವರನ್ನು' 5ನೇ ಪ್ಯಾರಾ, 'ಬೇಜವಾಬ್ದಾರಿಯಿಂದ ವರ್ತಿಸಿದ' ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ' ಎಂದಿದೆ.'
'ಒಂದೂ ತಪ್ಪಿಲ್ಲದ ನಿಮ್ಮ ಪತ್ರಿಕೆಯನ್ನು ಒಂದು ದಿನವಾದರೂ ಓದಬೇಕೆನ್ನುವ ಹಂಬಲ ಇನ್ನೂ ಪೂರ್ತಿಯಾಗಿಲ್ಲ. ಮುಂದೆಯಾದರೂ ಆಗಬಹುದೆಂಬ ಭರವಸೆ ಇನ್ನೂ ಸತ್ತಿಲ್ಲ. ಇನ್ನು ಪ್ರತಿ ತಪ್ಪಿಗೂ ಒಂದಿಷ್ಟು ಹಣ ಕೊಡುವ ಹೊಸ ಸ್ಕೀಮನ್ನು ನೀವ್ಯಾಕೆ ಪ್ರಾರಂಭಿಸಬಾರದು? ಕಾರಣ ನನ್ನಂತಹ ಹಲವು ನಿರುದ್ಯೋಗಿಗಳಿಗೆ ಸ್ವಲ್ಪ ಆದಾಯವೂ ಬಂದಂತಾದೀತು' ಎಂದಿದ್ದಾರೆ.
ಶಂಕರನಾರಾಯಣ ಭಟ್ ಅವರ ಸಲಹೆಯೇನೋ ಚೆನ್ನಾಗಿದೆ. ಆದರೆ ಹಾಗೇನಾದರೂ ಸ್ಕೀಮು ಜಾರಿ ಮಾಡಿದರೆ ನಿರುದ್ಯೋಗಿಗಳಿಗೆ ಆದಾಯ ದೊರೆತೀತು, ಆದರೆ ಉದ್ಯೋಗಿಗಳಿಗೆ ಆದಾಯವಿಲ್ಲದಂತಾಗುವ ಅಪಾಯವೂ ಇದೆ! ಶಂಕರನಾರಾಯಣ ಭಟ್ ಅವರ ಕನಸು ಆದಷ್ಟು ಬೇಗ ನನಸಾಗಲಿ ಎಂದು ನಾನೂ ಹಾರೈಸುತ್ತೇನೆ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement