ತಪ್ಪಾಯ್ತು ತಿದ್ಕೋತೀವಿ
ಬಿಜಾಪುರ ಜಿಲ್ಲೆ ಮುದ್ದೇಬಿಹಾಳದಿಂದ ವೀರೇಶ ಶ. ಸಿಂದಗಿ ಅವರು ಬರೆಯುತ್ತಾರೆ- 'ಜು.4ರ ಪುಟ2ರಲ್ಲಿ 'ಆಸ್ಪತ್ರೆಯಲ್ಲಿ ವೈದ್ಯರಿದ್ದರೂ ರೋಗಿಗಳ ಬರ' ಎಂಬ ವರದಿಯಲ್ಲಿ 'ಆಯುರ್ವೇದ 'ಆಸ್ಪತ್ರೆದೆ' ಮಸಾಜಿಸ್ಟ್, ಕುಕ್ ಇಲ್ಲದೇ ರೋಗಿಗಳು ದಾಖಲಾಗಲು ಹಿಂದೇಟು ಹಾಕುತ್ತಿದ್ದಾರೆ' ಎಂದಿದೆ. ಇಲ್ಲಿ 'ಆಸ್ಪತ್ರೆದೆ' ಎಂಬುದು 'ಆಸ್ಪತ್ರೆಯಲ್ಲಿ' ಎಂದಾಗಬೇಕಿತ್ತು.'
'ಇದೇ ಪುಟದಲ್ಲಿ 'ಫ್ರಾಂಚೈಸಿಗಳ ಗುದ್ದಾಟ: ಜನರ ಪರದಾಟ' ವರದಿಯಲ್ಲಿ 'ಇದಕ್ಕೆ ಸಂಬಂಧಿಸಿದ ಪಿಡಿಒಗಳ ಮಾನವೀಯ ಸಹಕಾರವೂ ಇದೆ. ಹೀಗಾಗಿ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವವರು ಮತ್ತು ನವೀಕರಣ ಮಾಡಿಸಿಕೊಳ್ಳುವವರು ಸಂಖ್ಯೆ ಹೆಚ್ಚಾಗಿದೆ' ಎಂದಿದೆ. ಇಲ್ಲಿ 'ಅರ್ಜಿ ಸಲ್ಲಿಸುವವರು','ನವೀಕರಣ ಮಾಡಿಸಿಕೊಳ್ಳುವವರು' ಎಂಬುದು 'ಅರ್ಜಿ ಸಲ್ಲಿಸುವವ', 'ನವೀಕರಣ ಮಾಡಿಸಿಕೊಳ್ಳುವವರ' ಎಂದಾಗಬೇಕಿತ್ತು.'
'ಪುಟ 4ರಲ್ಲಿ 'ಬದರಿ ಯಾತ್ರೆಯ ಕರಾಳ ನೆನಪು, ದುಸ್ವಪ್ನ ಪದೇ ಪದೇ ಕಾಡುತ್ತಿದೆ' ಎಂಬ ವರದಿಯಲ್ಲಿ, 'ಕೊನೆಗೆ ಪೇಜಾವರ ಶ್ರೀಗಳು, ಸತ್ಯಾತ್ಮತೀರ್ಥ ಶ್ರೀಗಳನ್ನು 'ಸಂಪರ್ಕಿಶಿ' ಬದರಿನಾಥ ಬಳಿಯೇ ಇರುವ ಅನಂತ ಮಠದಲ್ಲಿ ತಂಗಲು ವ್ಯವಸ್ಥೆ ಮಾಡಿಕೊಂಡೆವು!' ಎಂದಿದೆ. ಇಲ್ಲಿ 'ಸಂಪರ್ಕಿಶಿ' ಎಂಬುದು 'ಸಂಪರ್ಕಿಸಿ' ಎಂದಾಗಬೇಕಿತ್ತು.'
'ಅದೇ ಸುದ್ದಿಯಲ್ಲಿ ಮುಂದೆ '28 ದಿನದ ಪ್ರವಾಸ, ಹೈದರಾಬಾದ್‌ನ ರಾಘವೇಂದ್ರ ಟೂರ್ ಮತ್ತು ಟ್ರಾವೆಲ್ಸ್ ಮೂಲಕ ಬಿಜಾಪುರ, ಬೈದರ, ಕೊಪ್ಪಳ 'ಸೇರಿದಂತೆಸ' ವಿವಿಧ ಪ್ರದೇಶದ 220 ಯಾತ್ರಿಗಳು ಜೂ.1ರಂದು 28 ದಿನಗಳ ಪ್ರವಾಸಕ್ಕೆ ತೆರಳಿದ್ದರು' ಎಂದಿದೆ. ಇಲ್ಲಿ 'ಸೇರಿದಂತೆಸ' ಎಂಬುದು 'ಸೇರಿದಂತೆ' ಎಂದಾಗಬೇಕು.'
'ಪುಟ 5ರಲ್ಲಿ 'ರಾಜ್ಯದಲ್ಲಿರುವುದು ಸಮ್ಮಿಶ್ರ ಸರ್ಕಾರ:ಎಚ್‌ಡಿಕೆ' ಎಂಬ ವರದಿಯಲ್ಲಿ 'ಜನತಾ ಪರಿವಾರದ ಎ ಟೀಮ್ ಹಾಗೂ ಮೂಲ 'ಕಾಂಗ್ರೆಸ್ಸಿರು' ಅದರಲ್ಲಿ ಮಂತ್ರಿಗಳಾಗಿದ್ದಾರೆ' ಎಂದಿದೆ. ಇಲ್ಲಿ 'ಕಾಂಗ್ರೆಸ್ಸಿಗರು' ಎಂದಾಗಬೇಕಿತ್ತು. ಅಲ್ಲೇ ಮುಂದೆ 'ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ವಾಪರ 'ಆಯೋಚಿಸಿದೆ' ದುಡುಕಿನ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ' ಎಂದಿದೆ. ಇಲ್ಲಿ 'ಆಲೋಚಿಸದೇ' ಎಂದಾಗಬೇಕಿತ್ತು.'
'ಪುಟ 12ರಲ್ಲಿ 'ವಿಶ್ವಚಾಂಪಿಯನ್‌ಶಿಪ್‌ಗೆ ಪರುಪಳ್ಳಿ ಕಶ್ಯಪ್ ಸಿದ್ಧತೆ'ವರದಿಯಲ್ಲಿ 'ಹಾಗಂತಾ ಅವರು ಕೈಕೊಟ್ಟಿ ಕುಳಿತಿಲ್ಲ' ಎಂದಿದೆ. ಇಲ್ಲಿ 'ಕೈಕಟ್ಟಿ' ಎಂದಾಗಬೇಕಿತ್ತು' ಎಂದಿದ್ದಾರೆ.
ವೀರೇಶ್ ಅವರು ಬರೆದಿರುವ ಪತ್ರದಲ್ಲಿರುವುದೆಲ್ಲ ಸಣ್ಣ ತಪ್ಪುಗಳೇ. ಅವು ಪ್ರಕಟಿಸುವಷ್ಟು ಗಂಭೀರವಾಗೇನೂ ಇರಲಿಲ್ಲ. ಆದರೆ ಇಂತಹ ಸಣ್ಣ ತಪ್ಪುಗಳು ಕೇವಲ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಆಗುತ್ತವೆ.ಅವುಗಳನ್ನು ತಪ್ಪಿಸಲು ಖಂಡಿತ ಸಾಧ್ಯವಿದೆ. ಒಂದೊಂದು ಸುದ್ದಿಯಲ್ಲಿ ಎರಡು-ಮೂರು ಇಂತಹ ತಪ್ಪುಗಳಿದ್ದರೆ ಓದುಗರಿಗೆ ಕಿರಿಕಿರಿಯಾಗುವುದು ಸಹಜ ಎಂಬುದನ್ನು ಪತ್ರಿಕೆ ರೂಪಿಸುವಾಗ ನೆನಪಿನಲ್ಲಿಡಬೇಕು.
ವಿಶ್ವೇಶ್ವರ ಭಟ್