ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕಲ್ಲಿದ್ದಲ ಹಂಚಿಕೆ ದಾಖಲೆ ಕೇಂದ್ರಕ್ಕೆ ಕೋರ್ಟ್ ಛೀಮಾರಿ

Mainashree
Updated On : 11 Jul 2013, 10:51 am

ಹಲವು ಹತ್ತು ಸಹಸ್ರ ಕೋಟಿ ರೂಪಾಯಿಗಳನ್ನು ಮೀರಿದ್ದು ಎನ್ನಲಾಗಿರುವ ಕಲ್ಲಿದ್ದಲ ಗಣಿಗಳ ಹಕ್ಕಿನ ಹಂಚಿಕೆ ಹಗರಣದಲ್ಲಿ, ಕಲ್ಲಿದ್ದಲ ಮಂತ್ರಾಲಯ ಹಾಗೂ ಕೇಂದ್ರ ಸರ್ಕಾರದ ಇತರೆ ಇಲಾಖೆಗಳಲ್ಲಿ ಪ್ರಮುಖವಾದ ದಾಖಲೆಗಳೇ ನಾಪತ್ತೆಯಾಗಿರುವ ಅನುಮಾನ ಸುಪ್ರೀಮ್ ಕೋರ್ಟ್‌ನಲ್ಲಿ ಪ್ರಕಟವಾಗಿದೆ.
ಈ ಹಗರಣ ಕುರಿತಂತೆ ಸಿ.ಬಿ.ಐ ನ ಮೂಲಕ ತನಿಖೆ ನಡೆಯಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿ ಹಲವು ತಿಂಗಳೇ ಉರುಳಿವೆ. ಸಿಬಿಐ ತನಿಖೆಯೂ ಆರಂಭವಾಗಿದೆ. ತನಿಖೆಯ ಈಗಿನ ಸ್ಥಿತಿ ಕುರಿತು ಒಂದು ವರದಿಯನ್ನು ಸಲ್ಲಿಸಲು ನ್ಯಾಯಾಲಯ ಆದೇಶಿಸಿತ್ತು. ಆ ವರದಿಯನ್ನು ಯಾರಿಗೂ ತೋರಿಸಬೇಕಾಗಿಲ್ಲ ಎನ್ನುವ ಆದೇಶವೂ ಇತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ತನ್ನ ವರದಿಯನ್ನು ಮೊಹರಾದ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅದು ರಹಸ್ಯ ದಾಖಲೆಯಾದರೂ ನ್ಯಾಯಮೂರ್ತಿಗಳು, ವರದಿಯ ಕೆಲವು ಭಾಗಗಳನ್ನು ನ್ಯಾಯಾಲಯದಲ್ಲೇ ಬಹಿರಂಗವಾಗಿ ಓದಿ, ಇದೇನಿದು ಸರ್ಕಾರದಲ್ಲಿ ಸೂಕ್ತವಾದ ದಾಖಲೆಗಳೇ ಇದ್ದಂತಿಲ್ಲವಲ್ಲ ಎಂದು ಉದ್ಗರಿಸಿದ್ದೂ ಆಗಿದೆ.
ಸಿಬಿಐ ವರದಿಯಲ್ಲಿ (ಇದು ಇನ್ನೂ ತನಿಖೆಯ ಒಂದು ಹಂತದ ವರದಿ) ಸರ್ಕಾರ ತನಗೆ ಬೇಕಾದ ದಾಖಲೆಗಳನ್ನೇ ಒದಗಿಸಿಲ್ಲ. ಸರಿಯಾದ ಮಾಹಿತಿಯನ್ನು ನೀಡಿಲ್ಲವಾದ್ದರಿಂದ ತನಿಖೆಯ ವೇಗ ಹಾಗೂ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮವಾಗಿದೆ ಎಂದು ತಿಳಿಸಿದೆ. ವರದಿಯ ಕೆಲವು ಭಾಗಗಳನ್ನು ಓದಿರುವ ನ್ಯಾಯಮೂರ್ತಿಗಳು ಸಿಬಿಐನ ಪೇಚನ್ನು ನ್ಯಾಯಾಲಯದಲ್ಲೇ ಪ್ರಸ್ತಾಪಿಸಿದ್ದಾರೆ. ಸುಪ್ರೀಮ್ ಕೋರ್ಟ್‌ನ ಆದೇಶದಂತೆ, ನ್ಯಾಯಾಲಯದ ನೇರ ಉಸ್ತುವಾರಿಯಲ್ಲಿ ಹಂತಹಂತಕ್ಕೂ ಸಂಬಂಧಪಟ್ಟ ಸರ್ಕಾರದ ಇಲಾಖೆಯ ಅನುಮತಿಯನ್ನು ಕೇಳಬೇಕಾಗಿಲ್ಲ ಎನ್ನುವುದನ್ನು ಮತ್ತೆ ಮತ್ತೆ ನ್ಯಾಯಮೂರ್ತಿಗಳು ಸ್ಪಷ್ಟ ಪಡಿಸಿದ್ದಾರೆ.
ಕೇಂದ್ರ ಸರ್ಕಾರ ದಾಖಲೆಗಳನ್ನೇ ಕೊಟ್ಟಿಲ್ಲ ಎಂದೇನೂ ಅಲ್ಲ. ಹಲವಾರು ಕಡತಗಳ ಗಂಟುಗಳನ್ನೇ ಒದಗಿಸಿದೆ. ಆದರೆ ಸಿಬಿಐ ಕೇಳಿರುವ, ಕೋರ್ಟ್‌ನ ದೃಷ್ಟಿಯಲ್ಲೂ ತನಿಖೆಗೆ ಅಗತ್ಯವೆಂದು ಕಂಡು ಬಂದಿರುವ ದಾಖಲೆಗಳು ಈ ಗಂಟುಗಳಲ್ಲಿ ಇಲ್ಲ. ಸಮಗ್ರ ಸ್ವರೂಪದ ಮಾಹಿತಿ ಹಾಗೂ ಅದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸದೇ ಹೋದರೆ ತನಿಖೆಯೂ ವಿಳಂಬವಾಗುತ್ತದೆ. ಹಾಗೂ ವ್ಯವಹಾರದ ಸಂಬಂಧದ ಹಲವು ಪ್ರಶ್ನೆಗಳಿಗೆ ಉತ್ತರಗಳೇ ಸಿಗುವುದಿಲ್ಲವೆನ್ನುವ ಶಂಕೆ ಸಿಬಿಐದು.
ಕಲ್ಲಿದ್ದಲ ಗಣಿಗಳ ಹಂಚಿಕೆಯಲ್ಲಿ, 164 ಬ್ಲಾಕ್‌ಗಳ ಹಂಚಿಕೆಯ ವಿವರಗಳನ್ನು ಈಗ ಸಿಬಿಐ ಪರಿಶೀಲಿಸಿ ತನ್ನ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕಾಗಿದೆ. ಆ ತನಿಖೆಗೆ ಬೇಕಾದ ದಾಖಲೆಗಳನ್ನೇ ಸಿಬಿಐ ಈಗ ಕೇಳುತ್ತಿರುವುದು. ಈ ಪ್ರಕರಣದಲ್ಲಿ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಆಟಾರ್ನಿ ಜನರಲ್ ವಾಹನ್ವತಿ ಅವರು ಮುಂದಿನ ವಿಚಾರಣೆಯ ದಿನ ದಾಖಲೆಗಳ ಲಭ್ಯತೆ ಹಾಗೂ ಅದನ್ನು ಸಿಬಿಐಗೆ ಒದಗಿಸುವ ವಿಚಾರದಲ್ಲಿ ಒಂದು ಪ್ರಮಾಣ ಪತ್ರವನ್ನು ಸಲ್ಲಿಸಲು ಒಪ್ಪಿದ್ದಾರೆ.
ಇದೇ ಸಮಯದಲ್ಲಿ ಈ ಪ್ರಕರಣದಲ್ಲಿ ಸಿಬಿಐ ತನಿಖಾ ದಳವನ್ನು ಪ್ರತಿನಿಧಿಸುತ್ತಿದ್ದ ಇಬ್ಬರು ಹಿರಿಯ ವಕೀಲರು ತಮ್ಮ ಜವಾಬ್ದಾರಿಯಿಂದ ಕಾರಣಾಂತರಗಳಿಂದ ಹಿಂದಕ್ಕೆ ಸರಿದಿದ್ದಾರೆ. ಸಿಬಿಐ ಈಗ ಮತ್ತೊಬ್ಬ ಹಿರಿಯ ವಕೀಲರನ್ನು ಹುಡುಕಬೇಕಾಗಿದೆ. ಈ ಹಗರಣದ ತನಿಖೆ, ವಿಚಾರಣೆಯಲ್ಲಿ ಯಾಕೋ ಯಾವುದೂ ಸರಿಯಾಗಿ ನಡೆದಂತೆ ಕಂಡುಬರುತ್ತಿಲ್ಲ. ಸರ್ಕಾರ ಮೈಕೊಡವಿಕೊಂಡು ಏಳಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement