ಸಿ.ಐ.ಡಿ. ತನಿಖೆ ಫಲಪ್ರದವಾಗಲಿ
ಕೆ.ಪಿ.ಎಸ್.ಸಿ.ಯ ಮಾಜಿ ಅಧ್ಯಕ್ಷರು ಮತ್ತು ಸದಸ್ಯರುಗಳ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇನ್ನಿತರೇ ಅಧಿಕಾರಿಗಳ ಮನೆ ಹಾಗೂ ಉದ್ಯೋಗಸೌಧದ ಮೇಲೆ ಸಿ.ಐ.ಡಿ. ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ತನಿಖೆಗೊಳಪಡಿಸಿರುವುದು ನೊಂದ ಅಭ್ಯರ್ಥಿಗಳಲ್ಲಿ ಭರವಸೆ ಮೂಡಿಸಿರುವುದು ಸತ್ಯ. ಅನ್ಯಾಯಕ್ಕೊಳಗಾದ ಸಾಕಷ್ಟು ಅಭ್ಯರ್ಥಿಗಳು ಕೌಟುಂಬಿಕ ಕಾರಣಗಳಿಂದಾಗಿಯೋ? ಅನಾರೋಗ್ಯದ ಕಾರಣಗಳಿಂದಾಗಿಯೋ? ಮಾನಸಿಕ ಖಿನ್ನತೆಯಿಂದಾಗಿಯೋ, ಹೀಗೆ ಹಲವಾರು ಕಾರಣಗಳಿಂದ ದೂರು ಸಲ್ಲಿಸದೇ ಇರಬಹುದು. ಆದ್ದರಿಂದ ತನಿಖಾಧಿಕಾರಿಗಳು ಕೇವಲ ದೂರು ನೀಡಿದವರ ಪ್ರಕರಣವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ತನಿಖೆಯನ್ನು ದೂರುದಾರರ ಅರ್ಜಿಗಷ್ಟೇ ಸೀಮಿತಗೊಳಿಸದೇ ಒಟ್ಟಾರೆ ಈ ಹಿಂದೆ ನಡೆದ ಕೆ.ಎ.ಎಸ್., ಪಿ.ಡಿ.ಓ., ಪ್ರೌಢಶಾಲಾ ಮುಖ್ಯ ಶಿಕ್ಷಕರ ನೇರ ನೇಮಕಾತಿ, ಪದವಿ ಕಾಲೇಜು ಉಪನ್ಯಾಸಕರ ಹಾಗೂ ಇನ್ನಿತರ ಎಲ್ಲ ನೇಮಕಾತಿಯ ಉತ್ತರ ಪತ್ರಿಕೆಗಳು ಹಾಗೂ ಸಂದರ್ಶನದ ಕಾರ್ಯವೈಖರಿಯ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಬೇಕು. ತನಿಖೆ ಪೂರ್ಣಗೊಂಡ ನಂತರ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಾಗಿರುವುದು ನ್ಯಾಯ. ಆದರೆ ಕೇವಲ ಶಿಕ್ಷೆಗಷ್ಟೇ ಸೀಮಿತವಾಗದೇ ಹುದ್ದೆಯಿಂದ ವಂಚಿತರಾದವರಿಗೆಲ್ಲರಿಗೂ ಪುನಃ ಹುದ್ದೆಗಳು ಸಿಗುವಂತಾಗಬೇಕು. ಒಟ್ಟಾರೆ ನೇಮಕಾತಿಯಲ್ಲಿನ ಮಲಿನತೆಯನ್ನು ತೊಳೆದು ಎಲ್ಲಾ ನೇಮಕಾತಿಗಳನ್ನು ಪುನರ್ ಪರಿಶೀಲಿಸಬೇಕೆಂದು ವಿನಂತಿ.
- ಎಸ್.ಎಲ್. ತಲ್ಲೂರ, ಬೆಳಗಾವಿ
ಸಾರ್ವತ್ರಿಕ ಪರೀಕ್ಷೆ ಬೇಕು
ಸುಮಾರು ವರ್ಷಗಳಿಂದ ಸರ್ಕಾರ ಹಿಂದೆ ಇದ್ದಂತಹ ಪರೀಕ್ಷಾ ಪದ್ಧತಿ ತೆಗೆದು ಹಾಕಿ, ತನ್ನದೇ ಆದ ಹೊಸ ಪದ್ಧತಿ ತಂದಿದೆ. ಆದರೆ ಇದರಿಂದ ವಿದ್ಯಾರ್ಥಿಗಳಿಗೆ ಓದು-ಬರಹದ ಶಕ್ತಿ ಕುಂದುತ್ತಿದೆ. ಏಕೆಂದರೆ 7ನೇ ತರಗತಿಗೆ ಸಾರ್ವತ್ರಿಕ ಪರೀಕ್ಷೆ ಇಲ್ಲ. 10ನೇ ತರಗತಿಗೂ ಇನ್ನು ಮುಂದೆ ಸಾ.ಪ. ಇರುವುದಿಲ್ಲ ಎಂಬ ಸುದ್ದಿ ಕೇಳಿ ಬರುತ್ತಿದೆ. ಪ್ರಥಮ ಪಿಯುಸಿಗೂ ಸಾ.ಪ. ಇಲ್ಲ. ಆದ್ದರಿಂದ ಹೇಗೋ ಪಾಸಾಗುತ್ತೇವೆ ಎಂಬ ರೀತಿ-ನೀತಿಗೆಟ್ಟ ನಡತೆ ಈಗಿನ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ. ತರಗತಿಗೆ ಎಂದೂ ಬಾರದವರು, ತೀರ ಕಡಿಮೆ ಅಂಕ ಪಡೆದವರು ಮುಂದಿನ ತರಗತಿಗೆ ನಿರಾಯಾಸವಾಗಿ ಹೋಗುತ್ತಿದ್ದಾರೆ. ಇಂತಹ ಪದ್ಧತಿಯಿಂದ ಸತ್ವಶೀಲ, ಪ್ರಾಮಾಣಿಕ, ದಕ್ಷ ವಿದ್ಯಾವಂತರನ್ನು -ಅಧಿಕಾರಿಗಳನ್ನು ಇನ್ನು ಮುಂದೆ ಕಾಣಲು ಸಾಧ್ಯವೆ? ಆದ್ದರಿಂದ ಹಿಂದೆ ಇದ್ದಂತೆ 7, 10 ಹಾಗೂ ಪ್ರಥಮ ಪಿಯುಸಿ ತರಗತಿಗಳಿಗೆ ಕಟ್ಟುನಿಟ್ಟಾದ -ಪರಿಶುದ್ಧವಾದ ಸಾ.ಪ.ಗಳು ನಡೆಯಬೇಕು.
-ಚಿಕ್ಕಣ್ಣ, ಕೊರಟಗೆರೆ
ಸಮಾನತೆಗೆ ಆದ್ಯತೆ
ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ. 50ಕ್ಕೆ ಹೆಚ್ಚಿಸುವುದಾಗಿ ಕಾಂಗ್ರೆಸ್ ಹೇಳಿದೆ. ಇದೊಂದು ಉತ್ತಮ ಬೆಳವಣಿಗೆ. ಮಹಿಳಾ ದೌರ್ಜನ್ಯದ ಈ ಸಮಯದಲ್ಲಿ ಮಹಿಳೆಯ ಅಭಿವೃದ್ಧಿಗೆ ಸ್ಥಾನ ಸಿಗುತ್ತಿರುವುದು ಸಂತೋಷದ ವಿಚಾರ. ಈವರೆಗೆ ಅಂಬಿಕಾ ಸೋನಿ ಮಾತ್ರ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2014ರ ಚುನಾವಣೆ ಬಳಿಕ ಮಹಿಳಾ ಪ್ರಾತಿನಿಧ್ಯ ಜಾರಿಗೆ ಬರಲಿದೆ. ಸಮಾನತೆಯನ್ನು ಸಂವಿಧಾನದಲ್ಲಿ ಮಾತ್ರ ಬರೆದರೆ ಸಾಲದು, ಜಾರಿಗೆ ತರುವಲ್ಲೂ ಪ್ರಯತ್ನಿಸಬೇಕು ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ.
-ಕವಿತಾ. ಪಿ., ಪುತ್ತೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com