ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಜನರೂ ಯೋಚಿಸಬೇಕು

Mainashree
Updated On : 12 Jul 2013, 11:32 am

ಜುಲೈ 11ರ ಪತ್ರಿಕೆಯ ನೂರೆಂಟು ನೋಟದ 'ಪ್ರವಾಸೋದ್ಯಮವನ್ನು ಪ್ರಯಾಸದಲ್ಲೇ ಇಟ್ಟವರು ನಾವು' ಅಂಕಣ ವಿಷಯಾಧಾರಿತ ಮತ್ತು ಚರ್ಚೆಗೆ ಗ್ರಾಸವಾದ ವಿಷಯವಾಗಿದೆ. ಇಂದಿನ ಪ್ರವಾಸಿ ತಾಣದ ಸ್ಥಿತಿಗತಿಗಳಿಗೆ ರಾಜಕಾರಣದ ಜತೆಗೆ ಜನರೂ ಕಾರಣರೆಂದು ನನ್ನ ಅನಿಸಿಕೆ.
ಪ್ರವಾಸೋದ್ಯಮವನ್ನು ಬದಿಗಿಟ್ಟು ದಿನನಿತ್ಯದ ಭೇಟಿಯ ಸ್ಥಳಗಳತ್ತ ನೋಡಿದರೆ ಈ ವಿಷಯ ಮನದಟ್ಟಾಗುತ್ತದೆ. ಜನವಸತಿ ಹಾಗೂ ಜನನಿಬಿಡ ಸ್ಥಳ ಬೆಂಗಳೂರಿನ ಬಿಎಂಟಿಸಿ ಬಸ್ ನಿಲ್ದಾಣಕ್ಕೆ (ಹೋಟೆಲ್ ಅಮರ ಎದುರು ಬಿಎಂಟಿಸಿ ಆವರಣ ಹಾಗೂ ಸಿಟಿ ರೈಲ್ವೆ ನಿಲ್ದಾಣದಿಂದ ಬಂದರೆ ಬಿಎಂಟಿಸಿ ಬಸ್ ನಿಲ್ದಾಣದ ಆವರಣದ ಕಡೆ) ಹೋದರೆ ಶೌಚಾಲಯದ ಮಹತ್ವ ತಿಳಿಯುತ್ತದೆ.
ಇನ್ನು ಒಂದು ತಮಾಷೆಯೆಂದರೆ ವಿಶಿಷ್ಟ ರೀತಿಯ ಚಳವಳಿಗೆ ಹೆಸರಾದ ಮಾಜಿ ಶಾಸಕ ವಾಟಾಳ್ ನಾಗರಾಜ್ರವರು ಇಂತಹದ್ದೇ "ಶೌಚಾಲಯ ಬೇಕು" ಎಂದು ಕಮೋಡ್ ಹಿಡಿದು ಶೌಚಾಲಯದ ಮಹತ್ವದ ಚಳುವಳಿಯನ್ನು ನಗರದ ಬಿಎಂಟಿಸಿ ನಿಲ್ದಾಣದ ಎದುರು ಈ ಹಿಂದೆ ಮಾಡಿದ್ದರು. ಆದರೆ ಅಂದು ಅವರ ಚಳವಳಿಯನ್ನು ಅಪಹಾಸ್ಯದ ರೀತಿಯಲ್ಲಿ ನಾವು ಅರ್ಥೈಸಿದ್ದೆವು. ಈಗ ನಮಗೆ ಅದರ ಮಹತ್ವ ಗೊತ್ತಾಗುತ್ತಿದೆ. ಅಂಕಣದಲ್ಲಿ ತಾವು ಪ್ರಸ್ತಾಪಿಸಿದಂತೆ ಹಳೆಯ ವಿಮಾನ ನಿಲ್ದಾಣದ ಕಿಡ್ಸ್ ಕೆಂಪ್ನಿಂದ ಹೊಸ ವಿಮಾನ ನಿಲ್ದಾಣದ ವರೆಗಿನ (ಅಂತಾರಾಷ್ಟ್ರೀಯ ವ್ಯಕ್ತಿಗಳು ಓಡಾಡುವ ಮಾರ್ಗದಲ್ಲಿ) ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ನಮಗೆ ನಾಚಿಕೆಗೇಡಿನ ಸಂಗತಿ. ಈ ಸಂಬಂಧ ನಾನೂ ಸೇರಿದಂತೆ (ಜನಸಾಮಾನ್ಯರೆಲ್ಲರೂ ಸಹ) ನಗರದ ವಿವಿಧ ಸ್ಥಳಗಳಲ್ಲಿ ನಿಸರ್ಗಕ್ರಿಯೆಗೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಬಹಳಷ್ಟು ಹಿಂಸೆ ಪಟ್ಟಿದ್ದೇವೆ.
ಈ ಹಿಂದೆ ಬೆಂಗಳೂರಿನ ಕಸದ ಬಗ್ಗೆ ಸುವರ್ಣ ನ್ಯೂಸ್ನಲ್ಲಿ ಕೈಗೊಂಡ ಒಂದು ದಿನದ ಅಭಿಯಾನದ ರೀತಿ, ಶೌಚಾಲಯದ ಮಹತ್ವ ಸಾರುವ ಅಭಿಯಾನದ ಬಗ್ಗೆ ಬೆಳಕು ಏಕೆ ಚೆಲ್ಲಬಾರದು? ಇದರಲ್ಲಿ ಮಾಜಿ ಶಾಸಕ ವಾಟಾಳ್ ನಾಗರಾಜ್ರನ್ನು ಸೇರಿಸಿಕೊಂಡರೆ ಹೆಚ್ಚು ತೂಕ ಬಂದೀತು. ಒಮ್ಮೆ ಯೋಚಿಸಿ.
ಟಿ ರಾಜೀವ ಪಟವರ್ಧನ್, ಬೆಂಗಳೂರು
ಕಲ್ಲಿನ ದೌರ್ಭಾಗ್ಯ ಆಗದಿರಲಿ
ಜುಲೈ 10ರಂದು ಸರ್ಕಾರವು 'ಅನ್ನಭಾಗ್ಯ' ಯೋಜನೆ ಅಡಿ ರಾಜ್ಯದ ಬಿಪಿಎಲ್ ಕುಟುಂಬಗಳಿಗೆ ರುಪಾಯಿಗೆ ಒಂದು ಕೆ.ಜಿಯಂತೆ ಅಕ್ಕಿ ನೀಡುವ ಯೋಜನೆಯನ್ನೇನೋ ಜಾರಿಗೆ ತಂದಿದೆ. ಆದರೆ ಈ ಹಿಂದೆ ನೀಡುತ್ತಿದ್ದ ಪಡಿತರ ಧಾನ್ಯಗಳಲ್ಲಿ ಸಣ್ಣ ಕಲ್ಲು, ಮಣ್ಣುಹೆಂಟೆ ಇನ್ನಿತರ ಕಸಗಳು ಸೇರಿಕೊಂಡಿರುತ್ತಿದ್ದವು ಎಂಬ ಬಗ್ಗೆ ಸಾಕಷ್ಟು ದೂರುಗಳಿವೆ. ಆದ್ದರಿಂದ ಸರ್ಕಾರವು ಈಗ ಬಡವರಿಗೆ ನೀಡಲು ಹೊರಟಿರುವ ಅಕ್ಕಿಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದರತ್ತಲೂ ಗಮನ ಹರಿಸಬೇಕು. ಕಲಬೆರಕೆ ರಹಿತವಾದ ಧವಸ ಧಾನ್ಯಗಳನ್ನು ಸಕಾಲದಲ್ಲಿ ವಿತರಿಸುವಂತಾಗಲಿ ಎಂಬುದೇ ಆಶಯ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಈ ದಂಧೆಯತ್ತ ಗಮನ ಹರಿಸಿ
ಐಐಟಿ ಪರೀಕ್ಷೆ ಈಗ ಹಣ ಮಾಡುವ ದಂಧೆಯಾಗಿದೆ. ಹೆಚ್ಚಿನ ಕಾಲೇಜುಗಳಲ್ಲಿ ಕೆಲ ಬೋಧಕರು ಮತ್ತು ಪ್ರಾಂಶುಪಾಲರು ಮಕ್ಕಳಿಂದ ಸಾವಿರಾರು ರುಪಾಯಿಗಳ ಹಣ ಪಡೆದು ಪರೀಕ್ಷೆಗೆ ಮುಂಚಿತವಾಗಿ ಎಲ್ಲ ವಿಷಯಗಳ ಪ್ರಶ್ನೆ ಪತ್ರಿಕೆಯನ್ನು ಹಂಚುತ್ತಾರೆ. ಪ್ರಾಯೋಗಿಕ ಪರೀಕ್ಷೆಗಳಲ್ಲೂ ಸಾವಿರಾರು ರುಪಾಯಿ ವಸೂಲು ಮಾಡುವ ಅವ್ಯವಹಾರ ಸಾಗಿಕೊಂಡಿದೆ. ಸಂಬಂಧಿಸಿದ ಇಲಾಖೆಯವರು ಇಂಥ ಐಐಟಿ ಕಾಲೇಜುಗಳನ್ನು ಗುರುತಿಸಿ ಮೊದಲು ಈ ಧಂದೆಗೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ. ಇಲ್ಲದಿದ್ದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಡುವ ಮೋಸವಾಗುತ್ತದೆ.
- ಸರಳ, ಶಿವಮೊಗ್ಗ


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement