ತಪ್ಪಾಯ್ತು ತಿದ್ಕೋತೀವಿ
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಜು.8ರಂದು 'ಹಿರಿಯರ ಹಾದಿ' ಅಂಕಣದಲ್ಲಿ ಭಗತ್‌ಸಿಂಗರನ್ನು 1931ರ ಮಾರ್ಚ್ 24ರಂದು ಗಲ್ಲಿಗೇರಿಸಿದ್ದಾರೆ. ಆದರೆ ವಾಸ್ತವವಾಗಿ ಮಾರ್ಚ್ 23ರಂದು ಗಲ್ಲಿಗೇರಿಸಿದ್ದೆಂದು ನನ್ನ ನೆನಪು. ಸುಂದರ್‌ರಾಜ್ ಅವರು ಅದೇಕೆ ಒಂದು ದಿನ ನಂತರ ಗಲ್ಲಿಗೇರಿಸಿದರೋ ಗೊತ್ತಿಲ್ಲ!'
'ಇಶ್ರತ್‌ಜಹಾನ್ ಎನ್ ಕೌಂಟರ್ ನಡೆದುದು ಜೂನ್ 25, 2005ರಂದು ಎಂದು ಶೇಖರ್ ಗುಪ್ತಾ ಅವರ 'ಮುಖ್ಯಪ್ರಶ್ನೆ' ಲೇಖನದಲ್ಲಿದ್ದರೆ, ಅದೇ ದಿನದ ಪುಟ 10ರಲ್ಲಿ 'ಬಡ್ತಿ ಆಸೆಯಿಂದ ಎನ್‌ಕೌಂಟರ್ ನಡೆಯಿತೇ'ಎಂಬ ಸುದ್ದಿಯ ಪ್ರಕಾರ '2004ರ ಎನ್‌ಕೌಂಟರ್ ಪ್ರಕರಣ'ವಾಗಿದೆ.'
'ಭಗತ್‌ಸಿಂಗ್ ಒಂದು ದಿನ ನಂತರ ಗಲ್ಲಿಗೇರಿದರೆ, ಇಶ್ರತ್ ಜಹಾನ್ ಪತ್ರಕರ್ತರ 'ಕರಾಮತ್ತಿ'ನಿಂದ ಒಂದು ವರ್ಷ ಮೊದಲೇ ಖತಮ್ ಆಗುತ್ತಾಳೆ!'
'ಇದೇ ಪುಟದಲ್ಲಿ 'ದುರಂತದ ಬೆಂಕಿಯಲ್ಲೂ ರಾಜಕೀಯ ಬೇಳೆ ಬೇಯಿಸಿಕೊಂಡ...' ಸುದ್ದಿಯಲ್ಲಿ 'ನಿಶ್ಯಕ್ತ' ಪ್ರದರ್ಶನವಾಗಿದೆ. ನಿಃಶಕ್ತರು' ಸೇರಿದಾಗ 'ನಿಶ್ಶಕ್ತರು' ಎಂಬುದು ಸರಿಯಾದ ರೂಪ. ವಿಸರ್ಗದ ಮುಂದೆ 'ಶ'ಕಾರ ಬಂದಾಗ ವಿಸರ್ಗವು ಶಕಾರವಾಗುತ್ತದೆ.'
'ಶನಿವಾರದಂದು 'ಬೈಟು ಕಾಫಿ'ಯಲ್ಲಿ ಪ್ರಕಟವಾಗುವ 'ನಿಶ್ಶಬ್ದ' ಅಂಕಣ ಲೇಖನ ಮೂರನೇ ಪುಟದಲ್ಲಿ ಮುಂದುವರಿಯುತ್ತದೆ. ಅಲ್ಲಿ ಅಂಕಣದ ಶೀರ್ಷಿಕೆ 'ನಿಶ್ಯಬ್ದ'ವೆಂದೇ ಮುಂದುವರಿದಿದೆ. ಬದಲಾಗೇ ಇಲ್ಲ. 'ಮುಖ್ಯಪ್ರಶ್ನೆ' (ಶೇಖರ್‌ಗುಪ್ತಾ) ಲೇಖನದಲ್ಲಿ ಕೊನೆಯ ಅನುಚ್ಛೇದದಲ್ಲಿ 'ಪುನರ್ರಚಿಸುತ್ತದೆ' ಎಂಬ ಪದಬಳಕೆ ಇದೆ. 'ಪುನಃ ರಚಿಸುತ್ತದೆ' ಸೇರಿದಾಗ 'ಪುನಾರಚಿಸುತ್ತದೆ' ಎಂಬುದು ಶುದ್ಧ ರೂಪವಾಗುತ್ತದೆ. ಭಾಷಾ ಜಿಜ್ಞಾಸುಗಳ ಅವಗಾಹನೆಗಾಗಿ, ವ್ಯಾಕರಣ ದೋಷಗಳ ಬಗೆಗೆ ಬೆಳಕು ಚೆಲ್ಲುತ್ತೇನೆಯೇ ವಿನಾ ದೋಷ ಹುಡುಕುವ ಉದ್ದೇಶವಲ್ಲ' ಎಂದಿದ್ದಾರೆ.
ವೆಂಕಟ್ರಮಣ ಭಟ್ ಅವರು ಬರೆಯುವ ಪತ್ರಗಳನ್ನು ನಾನು ಎಂದಿಗೂ ದೋಷ ಹುಡುಕುವ ಉದ್ದೇಶ ಎಂದು ಭಾವಿಸಿಯೇ ಇಲ್ಲ. ವೆಂಕಟ್ರಮಣ ಭಟ್ಟರಿಗೆ ನೀವು ಹೆಚ್ಚು ಮಹತ್ವ ನೀಡುತ್ತೀರಿ ಎಂಬ ಪತ್ರಗಳೂ ಕೆಲವು ಬಂದಿವೆ. ಭಟ್ಟರ ಪತ್ರಗಳು ಅಂಕಣದಲ್ಲಿ ಹೆಚ್ಚು ಪ್ರಕಟವಾದಾಗ ಹಾಗೆ ಅನ್ನಿಸಿರಬಹುದು. ಆದರೆ ಅವರ ಪತ್ರದಲ್ಲಿರುವ ವಿಷಯಗಳು ಅಷ್ಟು ಮುಖ್ಯವಾಗಿರುತ್ತವೆ. ಅಷ್ಟು ಪ್ರೌಢಿಮೆಯಿಂದ ಕೂಡಿರುತ್ತದೆ.
ಅವರ ಪತ್ರದಿಂದಾಗಿ ನಾವು ತಪ್ಪು ತಿದ್ದಿಕೊಳ್ಳುವುದರ ಜತೆಗೆ, ಓದುಗರಿಗೂ ಭಾಷೆ ಉತ್ತಮಪಡಿಸಿಕೊಳ್ಳಲು ಸಹಾಯವಾಗುತ್ತದೆ ಎಂಬ ಕಾರಣಕ್ಕೆ ಅದನ್ನು ಪ್ರಕಟಿಸಲಾಗುತ್ತದೆ.
ಭಗತ್‌ಸಿಂಗ್ ಅವರನ್ನು 1931ರ ಮಾರ್ಚ್ 23ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ಗಲ್ಲಿಗೇರಿಸಲಾಯಿತು. ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣ ನಡೆದಿದ್ದು 2004ರ ಜೂನ್ 25ರಂದು. ಬಹುಶಃ ಶೇಖರಗುಪ್ತಾ ಅವರ ಅಂಕಣವನ್ನು ಭಾಷಾಂತರ ಮಾಡುವ ಸಂದರ್ಭದಲ್ಲಿ ಇಸವಿ ತಪ್ಪಾಗಿರಬೇಕು.
ವಿಶ್ವೇಶ್ವರ ಭಟ್