ಕೆ.ಪಿ.ಎಸ್.ಸಿ. ತನಿಖೆ
ರಾಜ್ಯ ಲೋಕ ಸೇವಾ ಆಯೋಗದ ಅತ್ಯುನ್ನತ ಮಟ್ಟದಲ್ಲೇ, ಕೆಲವು ವರ್ಷಗಳ ಹಿಂದೆ ಅಸಿಸ್ಟೆಂಟ್ ಕಮಿಷನರ್‌ಗಳ ನೇಮಕದ ಸಂಬಂಧದಲ್ಲಿ ನಡೆದಿರಬಹುದಾದ ಭ್ರಷ್ಟಾಚಾರದ ಪ್ರಕಟಿತ ವರದಿಗಳನ್ನು ಗಮನಿಸಿದರೆ ರಾಜ್ಯದಲ್ಲಿ ಕಾಯಿದೆ, ಸಂವಿಧಾನ ಬದ್ಧ ಆಡಳಿತ ವ್ಯವಸ್ಥೆಯೇ ಕುಸಿದು ಬಿದ್ದಿರುವಂತಿದೆ ಎನ್ನುವ ಅನಿಸಿಕೆ ಮೂಡುವುದು ಸಹಜ.
ದೇಶದಲ್ಲಿನ ಲೋಕ ಸೇವಾ ಆಯೋಗಗಳಲ್ಲಿ ಭ್ರಷ್ಟಾಚಾರದ ಆರೋಪವಿರುವುದು ಕರ್ನಾಟಕದಲ್ಲಿ ಅಷ್ಟೇ ಅಲ್ಲ. ಇತರ ರಾಜ್ಯಗಳಲ್ಲೂ ಅನೇಕ ಕಡೆಗಳಲ್ಲಿ ಇದೇ ಪರಿಸ್ಥಿತಿ ಇರುವಂತೆ ಭಾಸವಾಗುತ್ತಿದೆ. ಮಂಗಳವಾರದ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಪಂಜಾಬ್ ಲೋಕ ಸೇವಾ ಆಯೋಗದ ನಿವೃತ್ತ ಅಧ್ಯಕ್ಷ ರವೀಂದ್ರ ಪಾಲ್ ಸಿದ್ದು ಮೇಲಿನ ಭ್ರಷ್ಟಾಚಾರದ ಆರೋಪಗಳು ಋಜುವಾತಾಗಿ ರೋಪಾರ್ ನ್ಯಾಯಾಲಯ ಆ ಪ್ರಕರಣದಲ್ಲಿ ಅಪರಾಧಿಗೆ ಆರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಯಾವ ದೃಷ್ಟಿಯಿಂದ ನೋಡಿದರೂ ಇದೊಂದು ಮಹತ್ವದ ಸುದ್ದಿಯೇ.
ಕಾಯಿದೆಯ ದೃಷ್ಟಿಯಲ್ಲಿ ಎಲ್ಲ ಅಪರಾಧಿಗಳೂ ಒಂದೇ. ಋಜುವಾತಾದರೆ ಶಿಕ್ಷೆ ಖಚಿತ ಎನ್ನುವ ಸ್ಥಿತಿ ಸಂಪೂರ್ಣವಾಗಿ ಮರೆಯಾಗಿಲ್ಲ ಎನ್ನುವ ಭರವಸೆ ಸಿಕ್ಕಿದೆ. ಅದು ಸಮಾಧಾನಕರವಾದ ವಿಚಾರ. ರವೀಂದ್ರ ಪಾಲ ಸಿದ್ದು ವಿರುದ್ಧ ಆರೋಪಗಳು ಮಂಡನೆಯಾಗಿದ್ದು 2002ರಲ್ಲಿ. ಅವರನ್ನು ಪೊಲೀಸರು ಬಂಧಿಸಿದ್ದೂ ಆಗಲೇ. ಹನ್ನೊಂದು ವರ್ಷಗಳು ಕಳೆದ ಮೇಲೆ ಶಿಕ್ಷೆಯಾಗಿದೆ. ಇನ್ನು ಮುಂದೆ ಅಪೀಲು ಕಾದಿದೆ.
ಮಂಗಳವಾರವೇ ಪ್ರಕಟವಾಗಿರುವ ವರದಿಗಳಂತೆ, ಕರ್ನಾಟಕ ಲೋಕ ಸೇವಾ ಆಯೋಗದ ಭ್ರಷ್ಟಾಚಾರದ ಹಗರಣದಲ್ಲಿ ಪೊಲೀಸರು ಆರೋಪಿಗಳೆಂದು ಗುರ್ತಿಸಿರುವ "ಪ್ರತಿಷ್ಠರು" ವಿಚಾರಣೆಗೆ ಲಭ್ಯವಾಗಲಿಲ್ಲ. ಅವರ ಮನೆಗೇ ಹೋಗಿ ವಿಚಾರಿಸಿದಾಗ ಸಿಕ್ಕ ಉತ್ತರ "ಯಾತ್ರೆಗೆ ಹೋಗಿದ್ದಾರೆ". ನಿಜ. ಅವರನ್ನು ತಲೆತಪ್ಪಿಸಿಕೊಂಡಿರುವ ಆರೋಪಿಗಳು ಎಂದೂ ಬಣ್ಣಿಸುವಂತಿಲ್ಲ. ಇಂತಹ ಚೋದ್ಯ ನಡೆಯುವುದು ಪ್ರತಿಷ್ಠಿತರ ಪ್ರಕರಣಗಳಲ್ಲಿ ಮಾತ್ರ. ಆರೋಪಿಗಳು ದಿಕ್ಕು-ದೆಸೆ ಇಲ್ಲದ ಬಡವರಾಗಿದ್ದರೆ ಅವರನ್ನು ಹುಡುಕಲು ಪೊಲೀಸರು ಬೇರೆ ಯಾವುದಾದರೂ ಮಾರ್ಗವನ್ನು ಹುಡುಕುತ್ತಿದ್ದರೇನೋ, ಗೊತ್ತಿಲ್ಲ.
ಈ ಹಗರಣದಲ್ಲಿ ಸಾರ್ವಜನಿಕರಲ್ಲಿ ಆಸಕ್ತಿ ಕೆರಳಿದಂತೆಯೇ ಸಂಬಂಧಪಟ್ಟ ಇಲಾಖೆಗಳಲ್ಲಿ, ಭ್ರಷ್ಟಾಚಾರದ ಫಲವಾಗಿ ಸರ್ಕಾರದಲ್ಲಿ ಪೊಗದಸ್ತಾದ ಅಧಿಕಾರಸ್ಥ ಸ್ಥಾನಗಳನ್ನು ಪಡೆದಿರಬಹುದಾದ ಅಧಿಕಾರಿಗಳನ್ನು ಯಾರೂ ಮಾತನಾಡಿಸಿದಂತೆ ಕಂಡು ಬಂದಿಲ್ಲ. ಸಾರ್ವಜನಿಕ ಆಸಕ್ತಿಯನ್ನು ತಣಿಸುವಂತಹ ಯಾವ ಕ್ರಮವನ್ನೂ ಪೊಲೀಸರು ಕೈಗೊಳ್ಳಬೇಕಾಗಿಲ್ಲ. ಅದು ಸಂವಿಧಾನಾತ್ಮಕವಾದ ಪ್ರತಿಕ್ರಿಯೆ ಅಲ್ಲ. ಆದರೆ ತನಿಖೆಯ ಗಾಂಭೀರ್ಯವನ್ನು ಉಳಿಸುವುದಕ್ಕಾದರೂ ಪೊಲೀಸ್ ಅಧಿಕಾರಿಗಳು ಮುಂದಾಗಬೇಕು.
ಕಾಲಕ್ರಮದಲ್ಲಿ ಈ ಹಗರಣ ತನ್ನ ಪರಿಹಾರವನ್ನು ತಾವೇ ಹುಡುಕಿಕೊಳ್ಳಬಹುದು. ಪೊಲೀಸ್ ಅಧಿಕಾರಿಗಳು ವರ್ಗವಾಗಬಹುದು. ಸಾಕ್ಷ್ಯ-ಆಧಾರಗಳು ಸಡಿಲವಾಗಬಹುದು. ಭ್ರಷ್ಟಾಚಾರದ ಮೂಲಕ ಸರ್ಕಾರಿ ನೌಕರಿಯನ್ನು ಪಡೆದವರು ಉನ್ನತ ಶ್ರೇಣಿಗಳನ್ನು ಏರುತ್ತಲೇ ಹೋಗಿ ಮುಂದೆ ರಾಜ್ಯದ ಆಡಳಿತ ವ್ಯವಸ್ಥೆಯ ಆಧಾರಸ್ಥಂಭಗಳಾಗಿ ನಿಲ್ಲಲೂ ಬಹುದು. ಸಂವಿಧಾನದತ್ತ ಜನತಾಂತ್ರಿಕ ವ್ಯವಸ್ಥೆಯ ಪಾವಿತ್ರ್ಯವನ್ನು ಕಾಪಾಡಲು ಈಗ ಸರ್ಕಾರಗಳು ಮುಂದಾಗಬೇಕು. ಸರ್ಕಾರಿ ನೌಕರಿಯ ಸೇರ್ಪಡೆ ನೇಮಕ ಹಾಗೂ ನೌಕರರ ಸೇವಾ ನಿಯಮಗಳಲ್ಲಿ ಕ್ರಾಂತಿಕಾರಿ ಸುಧಾರಣೆಗೆ ಇದು ಸಕಾಲ.