ಹಾಸನದ ಮೌನ ಕ್ರಾಂತಿ
ಮುಸ್ಲಿಮ್ ಮಹಿಳೆಯರಿಗೆ, ಆ ಧರ್ಮವನ್ನು ಅನುಸರಿಸುವ ಪುರುಷರಿಗಿಂತ ಕಡಿಮೆ ಧಾರ್ಮಿಕ ಸ್ವಾತಂತ್ರ್ಯವಿದೆ ಎನ್ನುವ ಭಾವನೆ ಅನೇಕ ಜನವರ್ಗಗಳಲ್ಲಿ ಬೇರೂರಿದೆ. ಅದಕ್ಕೆ ಕೆಲವು ಕಾರಣಗಳೂ ಇರಬಹುದು. ಆದರೆ ನಮಾಜ್ (ಪ್ರಾರ್ಥನೆ) ವಿಚಾರದಲ್ಲೂ ಮಹಿಳೆಯರ ಮೇಲೆ ವಿಧಿಸಲಾಗಿರುವ ಹಲವಾರು ನಿರ್ಬಂಧಗಳು ಅರ್ಥಹೀನ ಅಷ್ಟೇ ಅಲ್ಲ ಅದು ಪ್ರವಾದಿಯ ಆದೇಶಕ್ಕೂ ವಿರುದ್ಧವಾದದ್ದು ಎನ್ನುವುದು ಈಗ ಬೆಳಕಿಗೆ ಬಂದಿದೆ.
ಈ ಅಂಶವನ್ನು ಇಸ್ಲಾಮ್ ಧಾರ್ಮಿಕ ಗ್ರಂಥಗಳಲ್ಲಿ ಅಡಗಿರುವ ಆದೇಶಗಳಿಂದಲೇ ಹಾಸನದ ಮುಸ್ಲಿಮ್ ಮಹಿಳೆಯರು, ಧಾರ್ಮಿಕ ನಾಯಕರ ಮುಂದೆ ಯಶಸ್ವಿಯಾಗಿ ಪ್ರತಿಪಾದಿಸಿ ಪ್ರಾರ್ಥನೆಯ ಅಧಿಕಾರಕ್ಕೆ ಚ್ಯುತಿ ಬಾರದೇ ಇರುವಂತಹ ಪರಿಸ್ಥಿತಿಯನ್ನು ಸದ್ದುಗದ್ದಲವಿಲ್ಲದೇ ನಿರ್ಮಿಸಿದ್ದಾರೆ.
ಇದುವರೆಗೂ ಇದ್ದ ನಂಬಿಕೆಯಂತೆ ಮುಸ್ಲಿಮ್ ಮಹಿಳೆಯರಿಗೆ ಮಸೀದಿಗಳಿಗೆ ಬಂದು ಸಾಮೂಹಿಕವಾಗಿ ನಮಾಜ್ ಮಾಡುವ ಹಕ್ಕು ಇಲ್ಲ ಎಂದೇ ಇತ್ತು. ಅದನ್ನು ಎಲ್ಲರೂ ನಂಬಿದ್ದರು ಕೂಡಾ.
ಆದರೆ ಹಾಸನದಲ್ಲಿ ಹಲವು ವಿದ್ಯಾವಂತ ಮುಸ್ಲಿಮ್ ಮಹಿಳೆಯರು ತಾವೇ ಪ್ರವಾದಿಯ ಆದೇಶಗಳನ್ನು ತಿರುವಿ ಹಾಕಿದಾಗ, ಅವರಿಗೆ ಚಿನ್ನದ ಗಣಿಯೇ ಸಿಕ್ಕಿದಂತಾಯಿತು. ಆದೇಶದ ಪ್ರಕಾರ ಮುಸ್ಲಿಮ್ ಮಹಿಳೆಯರಿಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ನಿಷೇಧವಿಲ್ಲ. ಆದರೆ ಅವರಿಗೆ ಮಸೀದಿಯಲ್ಲೇ ಪ್ರಾರ್ಥನೆ ಸಲ್ಲಿಸಬೇಕೆನ್ನುವ ಕಡ್ಡಾಯವೂ ಇಲ್ಲ.ಸಾಂಸಾರಿಕ ಜೀವನದಲ್ಲಿ ಮಹಿಳೆಯರು ನಿರ್ವಹಿಸಬೇಕಾದ ವಿಶಿಷ್ಟ ಜವಾಬ್ದಾರಿಯ ಹಿನ್ನೆಲೆಯಲ್ಲಿ ಅವರಿಗೆ ಮಸೀದಿಗೆ ಬಂದೇ ಪ್ರಾರ್ಥನೆ ಸಲ್ಲಿಸಬೇಕೆನ್ನುವ ನಿಯಮ ಕಡ್ಡಾಯವಾಗಿ ಪಾಲಿಸುವುದು ಕಷ್ಟವಾದೀತು ಎನ್ನುವ ಕಾರಣದಿಂದ ಅವರು ಎಲ್ಲಿ ಬೇಕಾದರೂ ಪ್ರಾರ್ಥನೆ ಸಲ್ಲಿಸಬಹುದೆನ್ನುವ ವಿಶೇಷ ರಿಯಾಯಿತಿಯನ್ನು ನೀಡಲಾಗಿದೆ.
ಇದನ್ನೇ ಅನೇಕ ಧಾರ್ಮಿಕ ಗುರುಗಳು ಮಸೀದಿಯಲ್ಲಿ ಸಂಜೆಯ ನಂತರ ಮಹಿಳೆಯರು ಪ್ರಾರ್ಥನೆ ಸಲ್ಲಿಸುವುದರ ವಿರುದ್ಧದ ನಿಷೇಧಾಜ್ಞೆ ಎಂದು ಭಾವಿಸಿರಬೇಕು. ಹಾಸನದಲ್ಲಿ ರಂಜಾನ್ ಸಮಯದ ಪ್ರಾರ್ಥನೆಗೆ ಮಹಿಳೆಯರ ನಿಯೋಗವೊಂದು ಧಾರ್ಮಿಕ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಸಾಧ್ಯವಿಲ್ಲ ಎಂದಿದ್ದರು.
ಆ ವಿವಾದವನ್ನು ಮಹಿಳೆಯರು ಪೊಲೀಸರ ಬಳಿ ಕೊಂಡೊಯ್ದಾಗ ಇಲ್ಲಿ ಕಾಯಿದೆ ಪಾಲನೆಯ ಪ್ರಶ್ನೆ ಇಲ್ಲ ಎನ್ನುವ ಉತ್ತರ ಸಿಕ್ಕಿತು. ಈ ವಿಶಿಷ್ಟ ಸಮಸ್ಯೆಯನ್ನು ಸಂಬಂಧಪಟ್ಟವರು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವ ಸಲಹೆ ಬಂದಾಗ ಅದನ್ನು ಅವರು ಸ್ವೀಕರಿಸಿದರು.
ಊರಿನ ಮುಸ್ಲಿಮ್ ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ, ತಮ್ಮ ಸಮಸ್ಯೆಯನ್ನು ವಿವರಿಸಿ, ಪ್ರವಾದಿಯ ಆದೇಶವನ್ನೂ ತೋರಿಸಿದಾಗ, ಮಸೀದಿಯಲ್ಲಿ ಮುಸ್ಲಿಮ್ ಮಹಿಳೆಯರು ಪ್ರಾರ್ಥನೆ ಸಲ್ಲಿಸಬಹುದು ಎನ್ನುವ ಒಪ್ಪಂದವಾಯಿತು. ಇದು ನಿಜವಾಗಲೂ ಸದ್ದುಗದ್ದಲವೇ ಇಲ್ಲದ ಮೌನಕ್ರಾಂತಿ. ಮುಸ್ಲಿಮ್ ಸಮಾಜದಲ್ಲಿನ ನಡವಳಿಕೆಯಲ್ಲಿ ಒಂದು ಸ್ವಾಗತಾರ್ಹವಾದ ನಾಗರಿಕ ಬೆಳವಣಿಗೆ.
ಈ ವ್ಯವಹಾರದಲ್ಲಿ ಮುಸ್ಲಿಮ್ ಮಹಿಳೆಯರ ಪರವಾಗಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಪ್ರಯತ್ನಿಸಲು ನಾಯಕತ್ವ ವಹಿಸಿದ್ದು ಹೆಸರಾಂತ ಕನ್ನಡ ಲೇಖಕಿ ಭಾನುಮುಸ್ತಾಕ್. ಅವರಿಗೆ ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಅನುಭವವಿದೆ. ಸಂಪರ್ಕವೂ ಇದೆ. ಅದನ್ನು ಗಟ್ಟಿಯಾಗಿ ಕೂಗುವ ಧೈರ್ಯವಿಲ್ಲದ ಮುಸ್ಲಿಮ್ ಮಹಿಳೆಯರ ಪರವಾಗಿ ಬಳಸಿದ್ದಕ್ಕೆ ಅಭಿನಂದನೆ ಸಲ್ಲಲೇಬೇಕು.
ಹಾಸನದಲ್ಲಿ ಇಂತಹ ಬೆಳವಣಿಗೆ ನಡೆದಿರುವುದು ರಾಜ್ಯದ ಇತರ ಊರುಗಳಿಗೂ ಹಬ್ಬುವುದರಲ್ಲಿ ಸಂದೇಹವೇ ಇಲ್ಲ. ಮುಸ್ಲಿಮ್ ಮಹಿಳೆಯರ ಮುನ್ನಡೆಯ ಯಾತ್ರೆಯಲ್ಲಿ ಇದೊಂದು ಪುಟ್ಟ ಕ್ರಾಂತಿ. ಅನುಮಾನ ಬೇಡ.