ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅನ್ನದ ತಟ್ಟೆಯ ವಿಷ ದಾರುಣ ದುರಂತ

Mainashree
Updated On : 18 Jul 2013, 10:23 am

ಬಿಹಾರದ ಸರನ್ ಜಿಲ್ಲೆಯ ಛಪ್ರಾ ಬಳಿಯ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಪೂರೈಕೆಯ ಸಮಯದಲ್ಲಿ ಅನ್ನದ ತಟ್ಟೆಯಲ್ಲಿದ್ದ ವಿಷಕ್ಕೆ 25 ಮಕ್ಕಳು ಬಲಿಯಾದ ದಾರುಣ ದುರಂತ ಕಲಿಸ ಬೇಕಾದ ಅನೇಕ ಪಾಠಗಳು ಈಗ ಬೆಳಕಿಗೆ ಬರುತ್ತಿವೆ. ಅದೊಂದು ಹೊಸ ಶಾಲೆ. ಕಟ್ಟಡವೂ ಹೊಸದಾಗಿ ಕಟ್ಟಿದ್ದು. ಆದರೆ ವಿನ್ಯಾಸ ಮಾತ್ರ ಓಬಿರಾಯನ ಕಾಲದ್ದೇ. ದೇಶದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆಲ್ಲ ಮಧ್ಯಾಹ್ನ ಉಚಿತ ಊಟವನ್ನು ಒದಗಿಸುವ ವ್ಯವಸ್ಥೆ ಜಾರಿಗೆ ಬಂದು ವರ್ಷಗಳೇ ಉರುಳಿವೆ. ಆ ಯೋಜನೆಯನ್ನು ಈಗ ಯಾವ ಸರ್ಕಾರವೂ ಹಿಂದಕ್ಕೆ ಪಡೆಯುವಂತಿಲ್ಲ.
ಆದ್ದರಿಂದ ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸುವಾಗ ಅಡುಗೆ ಮಾಡಲಿಕ್ಕೊಂದು ಮನೆ ಮಕ್ಕಳಿಗೆ ಕೈ ತೊಳೆಯಲು ನೀರಿನ ವ್ಯವಸ್ಥೆಯನ್ನು ಮಾಡಬೇಕೆನ್ನುವ ಚಿಂತನೆಯೇ ಯಾರಲ್ಲೂ ಮೂಡಿದಂತೆ ಕಂಡುಬಂದಿಲ್ಲ.
ದೇಶದಲ್ಲಿ ಸುಮಾರು ಹತ್ತು ಕೋಟಿ ಮಕ್ಕಳಿಗೆ ಇಂತಹ ಮಧ್ಯಾಹ್ನದ ಊಟವನ್ನು ಶಾಲೆ ಇರುವ ದಿನಗಳಲ್ಲೆಲ್ಲಾ (ವರ್ಷದಲ್ಲಿ ಕನಿಷ್ಠ 180 ದಿನಗಳು ಎಂದು ಅಂದಾಜು) ವ್ಯವಸ್ಥೆ ಮಾಡುವುದೆಂದರೆ, ಅದು ಸಾಮಾನ್ಯವಾದ ಕೆಲಸವಲ್ಲ. ಅಡುಗೆಗೆ ಬೇಕಾದ ಸಾಮಾನು ಸರಂಜಾಮುಗಳನ್ನು ತರಬೇಕು. ಅದನ್ನು ಶುದ್ಧಗೊಳಿಸಲು ವ್ಯವಸ್ಥೆ ಬೇಕು. ಪಾತ್ರೆಗಳನ್ನಂತೂ ಚೆನ್ನಾಗಿಯೇ ಇಟ್ಟಿರಬೇಕು. ಊಟ ಎಂದರೆ ಸುಮ್ಮನೆ ಬೇಯಿಸಿ ಹಾಕುವುದು ಎಂದೇನೂ ಅಲ್ಲವಲ್ಲ. ಹತ್ತು ಕೋಟಿ ಮಕ್ಕಳಿಗೆ ಅನ್ನದ ವ್ಯವಸ್ಥೆ ಮಾಡಿರುವುದು ಸರಕಾರಗಳಿಗೆ ಒಳ್ಳೆಯ ಹೆಸರನ್ನು ತರುವುದು ಖಚಿತ. ಆದರೆ ಆ ಯೋಜನೆಗೆ ಅಗತ್ಯವಾದ ಪರಿಕರಗಳನ್ನು ಒದಗಿಸುವ, ಪರಿಚಾರಕರು (ಅವರು ಯಾರೇ ಆಗಿರಬಹುದು) ಅನುಸರಿಸಲೇ ಬೇಕಾದ ಸುರಕ್ಷಾ ಕಾರ್ಯಕ್ರಮ, ನಿಯಮಗಳ ಪಾಲನೆಯನ್ನು ರೂಪಿಸುವುದರಲ್ಲಿ ಹಿಂದೆ ಬಿದ್ದಿರುವುದು ಕೆಟ್ಟ ಹೆಸರನ್ನು ತರುತ್ತದೆ.
ನಿಜವಾಗಲೂ ಛಪ್ರಾದ ಮಕ್ಕಳ ಸಾವಿನ ದುರಂತದ ಚಿತ್ರಗಳನ್ನು ಕಂಡಾಗ ಹೊಟ್ಟೆಯಲ್ಲಿರುವ ಕರುಳು ಬಾಯಿಗೆ ಬರುವಂತೆ ಆಗುತ್ತದೆ. ಇಂತಹ ಪರಿಸ್ಥಿತಿಗೆ ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡಲೇಬೇಕಲ್ಲಾ ! ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಛಪ್ರಾಗೆ ಹೋಗಿ, ದುರಂತವನ್ನು ಕಣ್ಣಾರೆ ಕಂಡು ನೋವನ್ನು ಅನುಭವಿಸಿದ ಅನಂತರ ಸತ್ತ ಮಕ್ಕಳ ಮನೆಯವರಿಗೆ ಎರಡು ಲಕ್ಷ ರುಪಾಯಿ ಪರಿಹಾರವನ್ನು ಪ್ರಕಟಿಸಿ, ಪ್ರಕರಣದ ತನಿಖೆಗೆ ಆದೇಶವನ್ನು ನೀಡುವುದಾಗಿ ಪ್ರಕಟಿಸಿದ್ದಾರೆ.
ಇಂದಿನ ಸ್ಥಿತಿಯಲ್ಲಿ ಅವರು ಇನ್ನೇನು ತಾನೇ ಮಾಡಲಿಕ್ಕೆ ಸಾಧ್ಯ ? ಆದರೆ ಬದಲಾದ ಬಿಹಾರದ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅಲ್ಲಿ ಈಗಲೂ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಸೌಮ್ಯ ಸ್ವರೂಪದ ಪ್ರತಿಕ್ರಿಯೆ ನೀಡಿರುವುದು, ಬಿಜೆಪಿ, ಲಾಲೂ ಪ್ರಸಾದ್ ಯಾದವ್, ರಾಮ್‌ವಿಲಾಸ್ ಪಾಸ್ವಾನ್ ಅವರೆಲ್ಲ ಉಗ್ರಸ್ವರೂಪದ ಪ್ರತಿಕ್ರಿಯೆಯನ್ನು ನೀಡಿರುವುದು ಈ ದುರಂತದ ಸಮಯದಲ್ಲಿ ಬೇಡವಾಗಿತ್ತು. ಮುಖ್ಯಮಂತ್ರಿಯನ್ನು ಹಳಿಯಲು ಇಂತಹ ಸಂದರ್ಭ ಬಳಸಿದ್ದು ನಾಗರಿಕ ಲಕ್ಷಣವಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement