ಯಾರು ಗಮನಿಸುವರು?
ಸರ್ಕಾರವು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಿಂದ ರಾಜ್ಯದ ಶೇ. 90ರಷ್ಟು ಜನ ಪ್ರಯೋಜನ ಹೊಂದುತ್ತಾರೆಂದು ಹೇಳಲಾಗುತ್ತಿದೆ. ಒಂದು ಘಳಿಗೆ ಈ ಕುರಿತು ಯೋಚಿಸಿದರೆ ಶೇ. 93ರಷ್ಟು 'ಅನ್ನಭಾಗ್ಯ'ಕ್ಕೆ ಭಾಜನರಾಗುತ್ತಾರೆನ್ನುವುದು, ಪಾಪ! ಸ್ವಾತಂತ್ರ್ಯಾನಂತರದ ವರ್ಷಗಳಿಂದಲೂ ತಾವು ಬಡವರ ಉದ್ಧಾರಕ್ಕೆಂದೇ ತಮ್ಮ ರಾಜಕೀಯ ಜೀವನವನ್ನು ಮುಡಿಪಾಗಿಟ್ಟೆವೆಂದು ಹೇಳಿಕೊಳ್ಳುವ ಸರ್ಕಾರಗಳಿಗೆ, ಅದನ್ನು ನಡೆಸಿದವರಿಗೆ ಅವಹೇಳನ ಮಾಡಿದಂತಾಗುತ್ತದಲ್ಲವೇ! 66 ವರ್ಷಗಳು ಕಳೆದರೂ ಇನ್ನೂ ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿ ಕೊಟ್ಟರೆ ಬಡತನದ ರೇಖೆಯ ಕೆಳಗಿರುವವರ ಬದುಕು ಸಹ್ಯವಾಗದು ಎನ್ನುವ ಸ್ಥಿತಿಯಲ್ಲೇ ದೇಶ ಇದೆಯೆಂದರೆ! ಶೇ. 93 ಅಲ್ಲ; ಇದು ಶೇ. 73ರಷ್ಟು ಎಂದು ಕಾಣುತ್ತದೆ. 2011ರ ಜನಗಣತಿಯಾಧಾರದ ಮೇಲೆ ಮತ್ತು ಒಂದು ಕುಟುಂಬದಲ್ಲಿ ಐವರು ಇರುತ್ತಾರೆಂದು (ಸರಾಸರಿ) ಭಾವಿಸಿದರೆ ಅನ್ನಭಾಗ್ಯ ಯೋಜನೆಯ ವ್ಯಾಪ್ತಿಯಲ್ಲಿ ಬರುವವರ ಸಂಖ್ಯೆ ಶೇ. 73 ಆಗುತ್ತದೆ. ಶೇ. 73 ಆಗಲಿ, ಶೇ 93 ಆಗಲಿ ಈ ವರ್ಗದವರು ಕೇವಲ ಅನ್ನವನ್ನು ಮಾತ್ರ ಊಟ ಮಾಡುತ್ತಾ ದಿನವನ್ನು ಕಳೆಯಲುಸಾಧ್ಯ. ಮಿಕ್ಕ ಜಿನಸಿ ಸಾಮಗ್ರಿಗಳಿಗೆ, ಬಟ್ಟೆಬರೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ರೋಗರುಜಿನಗಳ ನಿವಾರಣೆಗೆ, ತಲೆಯ ಮೇಲೊಂದು ಸೂರಿಗೆ ಶೇ. 99ರಷ್ಟು ಈ ವರ್ಗದವರು ದುಡಿಯಬೇಕು. ಅಕ್ಕಿ ಕೊಟ್ಟು ಎಲ್ಲ ಸಾಧನೆಯಾಯಿತೆಂದು ಸರ್ಕಾರ ಕೈಕಟ್ಟಿ ಸುಮ್ಮನಿರುವಂತಿಲ್ಲ. ಇಂತಹ ಕೊಡುಗೆ ಜನರನ್ನು ಅಲಸಿಗರನ್ನಾಗಿ ಮಾಡದೇ, ಇವರಿಗೆಂದೇ 2,78,428 ಮೆಟ್ರಿಕ್ ಟನ್ ಅಕ್ಕಿ ಮೀಸಲಾಗುತ್ತದೆ ಒಟ್ಟು ಒದಗಣೆಯಲ್ಲಿ. ಮಿಕ್ಕವರಿಗೆ ಅಕ್ಕಿಯ ಏರುಬೆಲೆ ಹೊರೆಯಾಗದೇ?
- ಸಾಮಗ ದತ್ತಾತ್ರಿ, ಬೆಂಗಳೂರು
ಕಬಿನಿ ನೀರನ್ನು ಕೆರೆಕಟ್ಟೆಗಳಿಗೆ ತುಂಬಿಸಿ
ಮುಂಗಾರು ಮಳೆಯ ಅಬ್ಬರದಿಂದ ಕಪಿಲಾನದಿ ಮೈದುಂಬಿ ಹರಿಯುತ್ತಿದೆ. ಕಬಿನಿ ಜಲಾಶಯ ಭರ್ತಿಯಾಗಿದೆ. ಆದರೆ ಕಪಿಲಾನದಿಗೆ 15-20 ಕಿ.ಮಿ. ದೂರದಲ್ಲಿರುವ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಹೋಬಳಿ ಹಾಗೂ ಚಾಮರಾಜನಗರ ತಾಲ್ಲೂಕಿನ ಹರವೆ, ಕಸಬಾ ಹೋಬಳಿಗಳು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಸಾವಿರ ಅಡಿಗಳ ಕೆಳಗೆ ಉಳಿದಿದೆ. ಈ ಒಣಪ್ರದೇಶದಲ್ಲಿ ಬೇಸಿಗೆಯಲ್ಲಿ ಮಾತ್ರವಲ್ಲ, ವರ್ಷಪೂರ್ತಿ ಕುಡಿಯುವ ನೀರಿಗೆ ತತ್ವಾರ, ನೀರಿನ ಬವಣೆ ನಿರಂತರ. ಕಳೆದ 4-5 ವರ್ಷಗಳಿಂದ ಮಳೆ ಕಡಿಮೆಯಾಗಿರುವುದರಿಂದ ವ್ಯವಸಾಯ ಕಾರ್ಯಗಳು ಸ್ಥಗಿತಗೊಂಡಿವೆ. ಈ ಪ್ರದೇಶದ ರೈತಾಪಿ ಜನರಿಗೆ ಚಾಮರಾಜನಗರ- ಮೈಸೂರು ರೈಲು ಜೀವನಾಧಾರವಾಗಿದೆ. ಯಾಕೆಂದರೆ ಈ ಪ್ರದೇಶದ ಹತ್ತಾರು ಹಳ್ಳಿಗಳ ಜನರು ಈ ರೈಲಿನಲ್ಲಿ ಪ್ರತಿ ದಿನ ಕೂಲಿಗಾಗಿ ಮೈಸೂರಿಗೆ ಸಂಚರಿಸುತ್ತಿದ್ದಾರೆ. ಈ ರೈಲಿನಲ್ಲಿನ ನೂಕುನುಗ್ಗಲು ಹೇಳತೀರದು. ನೋಡಿಯೇ ಅನುಭವಿಸಬೇಕು. ಈ ಪ್ರದೇಶದ ಗ್ರಾಮೀಣ ಬದುಕನ್ನು ಹಸನಾಗಿಸುವ ಏಕೈಕ ಮಾರ್ಗವೆಂದರೆ ತುಂಬಿ ಹರಿಯುತ್ತಿರುವ ಕಬಿನಿ ನೀರನ್ನು ಈ ಪ್ರದೇಶದ ಕೆರೆಕಟ್ಟೆಗಳಿಗೆ ತುಂಬಿಸಿ ಅಂತರ್ಜಲ ಹೆಚ್ಚಿಸುವುದು. ಚಾಮರಾಜನಗರ, ಗುಂಡ್ಲುಪೇಟೆ, ನಂಜನಗೂಡು ಹಾಗೂ ಹಂಚಿ ಹೋಗಿರುವ ಈ ಒಣಪ್ರದೇಶದ ಘಟಾನುಘಟಿ ಜನಪ್ರತಿನಿಧಿಗಳು ಇತ್ತ ಗಮನ ಹರಿಸುವರೇ?
- ಕೆ.ಎಂ. ಲಿಂಗರಾಜು, ನಂಜನಗೂಡು
ಪ್ರಶಂಸನೀಯ ತೀರ್ಪು
ಜೈಲುವಾಸಿಗಳು ಚುನಾವಣೆಗೆ ಅನರ್ಹರು ಎಂದು ಸುಪ್ರಿಂಕೋರ್ಟ್ ನೀಡಿರುವ ತೀರ್ಪು ಪ್ರಶಂಸನೀಯ. ಖೈದಿಗಳಿಗೆ ರಾಜಕೀಯದಲ್ಲಿ ಅವಕಾಶವನ್ನು ನೀಡಿದಲ್ಲಿ ಭ್ರಷ್ಟ ರಾಜಕಾರಣಕ್ಕೆ ಮತ್ತಷ್ಟು ಎಡೆಮಾಡಿಕೊಟ್ಟಂತಾಗುತ್ತದೆ. ಜನರಿಗೆ ರಾಜಕೀಯದ ಬಗೆಗಿರುವ ಸ್ವಲ್ಪ ಗೌರವವು ಇದರಿಂದಾಗಿ ಕಳೆದುಕೊಳ್ಳುವಂತಾಗಬಹುದು. ಜನರ ಹಾಗೂ ದೇಶದ ಹಿತದೃಷ್ಟಿಯಿಂದ ಸುಪ್ರಿಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ.
- ವಿದ್ಯಾಶ್ರೀ ಬಿ, ಪುತ್ತೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com