ವಿಶ್ವವಿದ್ಯಾಲಯಗಳ ದುರಂತ
ರಾಜ್ಯದಲ್ಲಿನ ಬಹುತೇಕ ವಿಶ್ವವಿದ್ಯಾಲಯಗಳು ಒಂದಲ್ಲ ಒಂದು ರೀತಿಯಲ್ಲಿ ಅವ್ಯವಹಾರದ ಆರೋಪಗಳ ಆಗರವಾಗಿರುವುದು ...
ರಾಜ್ಯದಲ್ಲಿನ ಬಹುತೇಕ ವಿಶ್ವವಿದ್ಯಾಲಯಗಳು ಒಂದಲ್ಲ ಒಂದು ರೀತಿಯಲ್ಲಿ ಅವ್ಯವಹಾರದ ಆರೋಪಗಳ ಆಗರವಾಗಿರುವುದು ನಿಜಕ್ಕೂ ದುರಂತವೇ. ಈಗ ಪ್ರತಿನಿತ್ಯ ಪತ್ರಿಕೆಗಳಲ್ಲಿ ಒಂದಲ್ಲ ಒಂದು ವಿಶ್ವವಿದ್ಯಾಲಯ ಕುರಿತಂತೆ ಅಪಸ್ವರದ ವರದಿಗಳು ಪ್ರಕಟವಾಗುತ್ತಲೇ ಇವೆ.
ವಿಶ್ವವಿದ್ಯಾಲಯಗಳಲ್ಲಿನ ಆಗುಹೋಗುಗಳನ್ನು ಹದ್ದಿನ ಕಣ್ಣಿನಿಂದ ನೋಡುವವರ ಪ್ರಕಾರ ಮಾಮೂಲಿ ಸರಿಯಾಗಿ ಪಾವತಿಯಾದರೆ ಸುದ್ದಿ ಹೊರಗೆ ಬರುವುದಿಲ್ಲ, ಇಲ್ಲದಿದ್ದರೆ ಹಗರಣವಾಗುತ್ತದೆ. ಆ ಮಾತಿನಲ್ಲಿ ಉತ್ಪ್ರೇಕ್ಷೆ ಇರಬಹುದು. ಆದರೆ ಅದು ಸುಳ್ಳಲ್ಲ. ರಾಜ್ಯಪಾಲರು ಎಲ್ಲ ವಿಶ್ವವಿದ್ಯಾಲಯಗಳ ಛಾನ್ಸೆಲರ್ ಆಗಿ, ಎಲ್ಲ ವ್ಯವಹಾರಗಳ ಮೇಲೂ ಉಸ್ತುವಾರಿಯ ಅಧಿಕಾರವನ್ನು ಹೊಂದಿರುತ್ತಾರೆ. ಅವರ ಜತೆಯಲ್ಲೇ ಸರ್ಕಾರಕ್ಕೂ ವಿಶ್ವವಿದ್ಯಾಲಯಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕೂ ಅವಕಾಶವಿದೆ.
ವಿಶ್ವವಿದ್ಯಾಲಯಗಳ ಸೆನೆಟ್, ಅಕೆಡೆಮಿಕ್ ಕೌನ್ಸಿಲ್ಗಳಲ್ಲಿ ಚುನಾಯಿತ ಸದಸ್ಯರು, ಸರ್ಕಾರದಿಂದ ನಾಮಕರಣವಾಗಿರುವ ಸದಸ್ಯರೂ ಇರುವುದರಿಂದ ರಾಜಕಾರಣ ಹೇರಳವಾಗಿ ನಡೆಯುತ್ತಿದೆ. ರಾಜಕಾರಣದ ಜತೆಯಲ್ಲೇ ಭ್ರಷ್ಟಾಚಾರ - ಅವ್ಯವಹಾರ. ಸಾಮಾನ್ಯವಾಗಿ ರಾಜ್ಯಪಾಲರಿಗೆ ಸಂಬಂಧಿಸಿದ ವಿಷಯಗಳನ್ನು ವಿಧಾನಮಂಡಲದ ಸದನಗಳಲ್ಲಿ ಯಾವ ಪೂರ್ವ ಸೂಚನೆಯನ್ನೂ ಕೊಡದೇ ಚರ್ಚಿಸುವುದಿಲ್ಲ. ಅದು ರಾಜ್ಯಪಾಲರಿಗೆ ನೀಡುವ ಗೌರವ. ಆದರೆ ಬುಧವಾರ ರಾಜ್ಯ ವಿಧಾನ ಪರಿಷತ್ತಿನಲ್ಲಿ ಕೆಲವು ಸದಸ್ಯರು ರಾಜ್ಯಪಾಲರ ಮೇಲೆ, ರಾಜಭವನದ ಏಜೆಂಟರುಗಳನ್ನು ನೇಮಿಸಿರುವವರ ವಿರುದ್ಧ ದಿಢೀರನೆ ತೀವ್ರ ಸ್ವರೂಪದ ಆರೋಪಗಳನ್ನೇ ಹೊರಿಸಿದ್ದರು. ಅದಕ್ಕೆ ಉತ್ತರ ಕೊಡಬೇಕಾದವರು ಯಾರೂ ಇರಲಿಲ್ಲ.
ಅದಕ್ಕೆ ಪ್ರತಿಯಾಗಿ ಗುರುವಾರ ರಾಜ್ಯಪಾಲ ಹಂಸರಾಜ ಬಾರಧ್ವಾಜ್ ಅವರು ಪತ್ರಕರ್ತರೊಡನೆ ಮಾತನಾಡುತ್ತಾ, ತಮ್ಮ ಜತೆ ನೇರವಾಗಿ ಚರ್ಚಿಸಲು ಮುಂದೆ ಬಂದರೆ (ವಿಶ್ವವಿದ್ಯಾಲಯಗಳ ಸಂಬಂಧದಲ್ಲಿ) ತಾವು ಸಿದ್ಧರೆಂದು ಹೇಳಿ ಈಗ ತಮ್ಮ ವಿರುದ್ಧ ಮಾತನಾಡುತ್ತಿರುವವರ ವಿಚಾರವೆಲ್ಲ ತಮಗೆ ಗೊತ್ತು ಎಂದೂ ತಿಳಿಸಿದರು. ಒಂದು ರೀತಿಯಲ್ಲಿ ಇದು ವಾಗ್ವಾದವೇ. ಈ ವಾಗ್ಯುದ್ಧದ ತಿರುಳು ಏನೆಂದರೆ ವಿವಾದಕ್ಕೆ ಒಳಗಾಗಿದ್ದ ಕುಲಪತಿ ಮಹೇಶಪ್ಪ ಅವರನ್ನೇ ರಾಜ್ಯಪಾಲ ಬಾರಧ್ವಾಜ್ ಮತ್ತೊಂದು ವರ್ಷದ ಅವಧಿಗೆ ಮುಂದುವರಿಸಿರುವುದರ ಹಿನ್ನೆಲೆ.
ಮಹೇಶಪ್ಪ ಅವರ ವಿರುದ್ಧ ಹಲವು ಆರೋಪಗಳಿವೆ. ಅಲ್ಲಿನ ಕೆಲವು ಪ್ರಕರಣ - ಹಗರಣಗಳ ತನಿಖೆಗೂ ವ್ಯವಸ್ಥೆಯಾಗಿದೆ. ಆದರೂ ಹೊಸ ವೈಸ್ಛಾನ್ಸೆಲರ್ರ ಆಯ್ಕೆಗೆ ಸೂಕ್ತ ವ್ಯಕ್ತಿಗಳನ್ನು ಹುಡುಕಲು ಸಮಿತಿಯನ್ನು ಸರ್ಕಾರ ಸಕಾಲದಲ್ಲಿ ರಚಿಸಲಿಲ್ಲ. ಈ ಸನ್ನಿವೇಶದಲ್ಲಿ ರಾಜ್ಯಪಾಲರು ತಮ್ಮ ವಿಶೇಷ ಅಧಿಕಾರವನ್ನು ಬಳಸಿ ಮಹೇಶಪ್ಪ ಅವರನ್ನೇ ಒಂದು ವರ್ಷ ಮುಂದುವರಿಸಿದ್ದಾರೆ.
ಈ ಪ್ರಕರಣ ಒಂದು ನೆಪ ಅಷ್ಟೇ. ಕೆಲವು ಶಾಸಕರು ರಾಜ್ಯಪಾಲರ ವಿರುದ್ಧ ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಹೊರಗೆ ಹಾಕಲು ಈ ಅವಕಾಶವನ್ನು ಬಳಸಿದ್ದಾರೆ. ಅವರು ಹೇಳುವ ಅನೇಕ ವಿಷಯಗಳು ಸತ್ಯವಾಗಿರಬಹುದು. ಆ ವಿಚಾರ ಬೇರೆ.
ಹಿಂದೆ ಯಾವುದೋ ಕಾಲದಲ್ಲಿ ರೂಪಿಸಿದ್ದ ವಿಶ್ವವಿದ್ಯಾಲಯದ ಆಡಳಿತ, ನಿರ್ವಹಣೆಗೆ ಸಂಬಂಧಿಸಿದ ನಿಯಮಗಳು ಈಗಿನ ಬದಲಾದ ಸನ್ನಿವೇಶದಲ್ಲಿ ತಮ್ಮ ಮೌಲ್ಯಗಳನ್ನು ಕಳೆದುಕೊಂಡು ನಿರುಪಯುಕ್ತವಾಗಿರುವುದು ನಿಜ. ಇದು ಹಲವು ವರ್ಷಗಳ ಸಡಿಲ ಆಡಳಿತದ ಪರಿಣಾಮ. ಈ ಪದ್ಧತಿಯೇ ಬದಲಾಗಬೇಕು. ಈಗ ಬೆಳಗಾವಿಯ ವಿಟಿಯು, ವೈಸ್ ಛಾನ್ಸೆಲರ್ ನೇಮಕದ ವ್ಯವಹಾರದ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು.