ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

ಬಳ್ಳಾರಿಯ ಹಗರಿಬೊಮ್ಮನಹಳ್ಳಿಯಿಂದ ತೃತೀಯ ಬಿ.ಎ. ವಿದ್ಯಾರ್ಥಿನಿ ಕೃತಿ ಹಿರೇಮಠ್ ಅವರು ಬಹಳ ಆಪ್ತವಾಗುವಂತಹ ಪತ್ರ ಬರೆದಿದ್ದಾರೆ...

Rashmi Kasaragodu
Updated On : 21 Jul 2013, 11:07 am

ಬಳ್ಳಾರಿಯ ಹಗರಿಬೊಮ್ಮನಹಳ್ಳಿಯಿಂದ ತೃತೀಯ ಬಿ.ಎ. ವಿದ್ಯಾರ್ಥಿನಿ ಕೃತಿ ಹಿರೇಮಠ್ ಅವರು ಬಹಳ ಆಪ್ತವಾಗುವಂತಹ ಪತ್ರ ಬರೆದಿದ್ದಾರೆ. ಅವರು ಪತ್ರದ ಪೀಠಿಕೆಯಲ್ಲಿ ಪತ್ರಿಕೆಯಲ್ಲಿ ಬರುವ ಬಹುತೇಕ ಅಂಕಣಗಳನ್ನು ಪ್ರಸ್ತಾಪಿಸಿದ್ದಾರೆ. ಅವರು ಪತ್ರಿಕೆಯನ್ನು ಎಷ್ಟು ಆಸಕ್ತಿಯಿಂದ ಓದುತ್ತಾರೆ ಎಂಬುದಕ್ಕೆ ಅದು ಪುರಾವೆ. ಅವರು ಪ್ರಸ್ತಾಪಿಸಿರುವ ತಪ್ಪುಗಳು ಚಿಕ್ಕದಾದರೂ ಕೂಡ ಅವರ ಪ್ರಯತ್ನಕ್ಕೆ ಬೆಲೆಕೊಟ್ಟು ಇಲ್ಲಿ ಪ್ರಕಟಿಸುತ್ತಿದ್ದೇನೆ. ಅವರು ಬರೆಯುತ್ತಾರೆ-
'ಜು.14ರಂದು ಪತ್ರಿಕೆಯಲ್ಲಿ (ಪುಟ 6) 'ಸಂಪಾದಕರ ಸರದಿ' ಅಂಕಣದಲ್ಲಿ 'ಶ್ರೇಷ್ಠ ಸಾಹಿತ್ಯ ಕೃತಿಗಳು ಮತ್ತು ಸೂಫಿ ಸಂತರ ಸಾಮಾಜಿಕ ಚಳವಳಿಗಳು 14 ಮತ್ತು 15ನೇ ಶತಮಾನದಲ್ಲಿ 'ಓಹುಮನ' ರಾಜಧಾನಿಯಾಗಿ ಗುಲ್ಬರ್ಗಾ ಗರಿಗೆದರಿತ್ತು' ಎಂದಿದೆ. ಇಲ್ಲಿ 'ಬಹುಮನಿ' ಸಾಮ್ರಾಜ್ಯ ಎಂದಾಗಬೇಕಿತ್ತು.'
'ಜು.15ರ ಪತ್ರಿಕೆಯಲ್ಲಿ 'ಜಿಲ್ಲೆಯೊಂದರಲ್ಲೇ ಹಾವು ಕಚ್ಚಿ 213 ಜನ ಸಾವು' ಎಂಬ ವರದಿಯಲ್ಲಿ ಅನೇಕ ತಪ್ಪುಗಳಿವೆ. ಅಪಘಾತ, ಪ್ರಕೃತಿ ವಿಕೋಪದಿಂದ 'ಜರು' ಸಾವನಪ್ಪುತ್ತಾರೆ ಎಂದಿದೆ. ಇಲ್ಲಿ ಜನರು ಎಂದಾಗಬೇಕಿತ್ತು. ವಿಷಪೂರಿತ ಹಾವುಗಳಿಂದ ಅದರಲ್ಲೂ 'ಹುತೇಕ' ರೈತರೇ ಮೃತರಾಗಿದ್ದಾರೆ ಎಂಬಲ್ಲಿ 'ಬಹುತೇಕ' ಎಂದಾಗಬೇಕಿತ್ತು. ಹಾವು ಕಚ್ಚಿದಾಗ ಆರೋಗ್ಯ ಕೇಂದ್ರಕ್ಕೆ ಹೋಗಿ ಆಂಟಿ ಸ್ನೇಕ್ವೇನಮ್ ಹಾಕಿಸಿಕೊಂಡರೆ 'ಪ್ರಾಣಾಯದಿಂದ' ಪಾರಾಗಬಹುದು ಎಂದಿದೆ. ಇಲ್ಲಿ 'ಪ್ರಾಣಾಪಾಯದಿಂದ' ಎಂದಾಗಬೇಕಿತ್ತು' ಎಂದಿದ್ದಾರೆ.
ಕೃತಿ ಅವರು 'ಬಹುಮನಿ' ಎಂದಿದ್ದಾರೆ. ನಾವು ಪತ್ರಿಕೆಯಲ್ಲಿ 'ಓಹುಮನ' ಎಂದು ಪ್ರಕಟಿಸಿದ್ದೇವೆ. ಅವೆರಡೂ ತಪ್ಪು. ಅದು 'ಬಹಮನಿ' ಸುಲ್ತಾನರ ಎಂದಾಗಬೇಕಿತ್ತು.
ಕೃತಿ ಅವರು ಪ್ರಸ್ತಾಪಿಸಿದ 'ಜಿಲ್ಲೆಯೊಂದರಲ್ಲೇ ಹಾವು ಕಚ್ಚಿ 213 ಜನ ಸಾವು' ಎಂಬ ಸುದ್ದಿಯಲ್ಲಿ ಅವರು ತೋರಿಸಿಕೊಟ್ಟ ತಪ್ಪಿಗಿಂತ ಹೆಚ್ಚಿನ ತಪ್ಪುಗಳಿವೆ ಎನಿಸುತ್ತಿದೆ. ಮೊದಲನೆಯದಾಗಿ ನನ್ನ ತಕರಾರು 'ಸಾವನಪ್ಪುತ್ತಾರೆ' ಎಂಬ ಶಬ್ದ ಬಗ್ಗೆ. ಆತ್ಮಹತ್ಯೆ ಮಾಡಿಕೊಂಡವರನ್ನು ಬಿಟ್ಟು ಬೇರೆ ಯಾರೂ ಸಾವನ್ನು ತಾವಾಗಿಯೇ ಹೋಗಿ ಅಪ್ಪಿ(ತಬ್ಬಿ)ಕೊಳ್ಳುವುದಿಲ್ಲ. ಯಾರೂ ಸಾವನ್ನು ಅಪ್ಪಿಕೊಳ್ಳಲು ಬಯಸುವುದಿಲ್ಲ. ಆದ್ದರಿಂದ 'ಸಾವನಪ್ಪಿದರು' ಎಂದು ಬರೆಯುವುದು ನನ್ನ ದೃಷ್ಟಿಯಲ್ಲಿ ತಪ್ಪು.
ಇನ್ನೊಂದು ಶಬ್ದ 'ಆಂಟಿ ಸ್ನೇಕ್ವೇನಮ್' ಎಂಬುದರ ಬಗ್ಗೆ. ನಮ್ಮಲ್ಲಿ ಈಗ ಈ 'ಆಂಟಿ' ಕಾಟ ಕೊಂಚ ಹೆಚ್ಚಾಗಿದೆ. ಆಂಟಿ ನಕ್ಸಲ್ ಸ್ಕ್ವಾಡ್, ಆಂಟಿ ರೌಡಿ ಸ್ಕ್ವಾಡ್, ಆಂಟಿ ಟೆರರಿಸ್ಟ್ ಸ್ಕ್ವಾಡ್, ಆಂಟಿ ಕರಪ್ಶನ್ ಸ್ಕ್ವಾಡ್ ಹೀಗೆ ಸಾಕಷ್ಟು ಉದಾಹರಣೆಗಳಿವೆ. ಏನು ಆಂಟಿಯರು ಇಷ್ಟೆಲ್ಲ ಜೋರಾಗಿಬಿಟ್ಟರೇ ಎಂದು ಗಾಬರಿಯಾಗಬೇಡಿ.
ಸರಿಯಾದ ಶಬ್ದ 'ಆ್ಯಂಟಿ' ಎಂದು. ಆದರೆ ಸಾಕಷ್ಟು ಮಂದಿ ಅದನ್ನು 'ಆಂಟಿ' ಎಂದು ಬರೆಯುತ್ತಾರೆ. 'ಆ್ಯಂಟಿ' ಅಂದರೆ ವಿರುದ್ಧ ಎಂದರ್ಥ.


 -ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement