ಭ್ರಷ್ಟಾಚಾರ ವಿರುದ್ಧ ಸಮರ: ನಾವೆಷ್ಟು ಸಾಧಿಸಿದ್ದೇವೆ?
ಭಾರತದಲ್ಲಿ ಅತ್ಯಂತ ವ್ಯಾಪಕವಾಗಿ ಹರಡಿರುವ ಹಾಗೂ ಆಳವಾಗಿ ಬೇರು ಬಿಟ್ಟಿರುವ ಸಾಮಾಜಿಕ ಪಿಡುಗು ಎಂದರೆ ಭ್ರಷ್ಟಾಚಾರ. ಎಲ್ಲ ಕಡೆ...
ಭಾರತದಲ್ಲಿ ಅತ್ಯಂತ ವ್ಯಾಪಕವಾಗಿ ಹರಡಿರುವ ಹಾಗೂ ಆಳವಾಗಿ ಬೇರು ಬಿಟ್ಟಿರುವ ಸಾಮಾಜಿಕ ಪಿಡುಗು ಎಂದರೆ ಭ್ರಷ್ಟಾಚಾರ. ಎಲ್ಲ ಕಡೆ, ಎಲ್ಲ ಚಟುವಟಿಕೆಗಳಲ್ಲೂ ಅದು ತಲೆ ಹಾಕಿದೆ. ಆ ಪಿಡುಗನ್ನು ನಿರ್ಮೂಲ ಮಾಡಲು, ಸರ್ಕಾರ ಹಾಗೂ ಸಾರ್ವಜನಿಕ ವಲಯದ ಸಂಘಟನೆಗಳು ಹಲವು ಹತ್ತು ರೂಪಗಳ ಹೋರಾಟವನ್ನೇ ಹಮ್ಮಿಕೊಂಡಿರುವುದೂ ನಿಜ.
ಸರ್ಕಾರಗಳು, ಕಾಯಿದೆಯ ಮೂಲಕವೇ ಸೃಷ್ಟಿಸಿರುವ ಜಾಗೃತಿ ಆಯೋಗಗಳು, ಲೋಕಾಯುಕ್ತ ಸಂಸ್ಥೆಗಳ ಜತೆಯಲ್ಲೇ ಎಲ್ಲ ಇಲಾಖೆಗಳಲ್ಲೂ ಅನಧಿಕೃತವಾಗಿ ಬೇರೆ ಬೇರೆ ಹೆಸರುಗಳನ್ನು ಹೊಂದಿರುವ ದಳಗಳೂ ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿವೆ.
ಇತ್ತೀಚಿನ ದಿನಗಳಲ್ಲಿ ದೇಶದ ಪ್ರಸಿದ್ದ ನಿರಶನ ಸತ್ಯಾಗ್ರಹಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧೀ ಪ್ರಚಾರ ಆಂದೋಲನ, ಇದುವರೆಗೂ ಇಂತಹ ಚಟುವಟಿಕೆಯಿಂದ ದೂರವಿದ್ದ ಮಧ್ಯಮ ವರ್ಗವನ್ನೂ ಆಕರ್ಷಿಸಿತ್ತು. ಮೊಟ್ಟ ಮೊದಲ ಬಾರಿಗೆ, ದೇಶದ ಸಾರ್ವಭೌಮಾಧಿಕಾರ ಹೊಂದಿದ ಸರ್ಕಾರದ ಹಿರಿಯ, ಪ್ರತಿಷ್ಠಿತ ಮಂತ್ರಿಗಳು ಅಣ್ಣಾ ಹಜಾರೆ ಆರಿಸಿದ ಕೆಲವು ಪ್ರತಿನಿಧಿಗಳ ಜತೆಯಲ್ಲಿ ಉನ್ನತ ಮಟ್ಟದ ಭ್ರಷ್ಟಾಚಾರದ ತಡೆಗೆ ಲೋಕಪಾಲ ವ್ಯವಸ್ಥೆಯನ್ನು ರೂಪಿಸುವ ವಿಚಾರದಲ್ಲಿ ಚರ್ಚೆ ನಡೆಸಲು ಸಿದ್ಧವಾಗುವ ಮಟ್ಟಕ್ಕೂ ಆ ಚಳವಳಿ ಬೆಳೆದಿತ್ತು.
ಈಗ ಲೋಕಪಾಲ ವಿಧೇಯಕ (ಸರ್ಕಾರವೇ ಸಿದ್ಧಪಡಿಸಿದ್ದು) ಲೋಕಸಭೆಯಲ್ಲಿ ಅಂಗೀಕಾರವಾಗಿದ್ದರೂ ರಾಜ್ಯಸಭೆಯಲ್ಲಿ ನೆನೆಗುದಿಗೆ ಬಿದ್ದಿದೆ. ಈಚಿನ ದಿನಗಳಲ್ಲಿ ಲೋಕಪಾಲ ವಿಧೇಯಕದ ಪ್ರಸ್ತಾಪ ಮಾಡುವವರೂ ಹತಾಶರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗ ಜಾರಿಯಲ್ಲಿರುವ ಕಾಯಿದೆಗಳ ನಿಯಮದಂತೆ ನಮ್ಮ ಸರ್ಕಾರಗಳು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಎಷ್ಟರಮಟ್ಟಿಗೆ ಸಫಲವಾಗಿವೆ ಎನ್ನುವುದು ನಿಜಕ್ಕೂ ಅರ್ಥಪೂರ್ಣವಾದ ಪ್ರಶ್ನೆಯೇ.
ಕೇಂದ್ರ ಸರ್ಕಾರ ಈಚೆಗೆ ಪ್ರಕಟಿಸಿರುವ ಕೆಲವು ಅಂಕಿ-ಅಂಶಗಳನ್ನು ಸ್ಥೂಲವಾಗಿ ಪರಿಶೀಲಿಸಿದರೆ, ಸರಾಸರಿ ಲೆಕ್ಕದಲ್ಲಿ ಸರ್ಕಾರಗಳು ನ್ಯಾಯಾಲಯದಲ್ಲಿ ಹೂಡಿರುವ ಆರೋಪಗಳ ಪಟ್ಟಿಯಲ್ಲಿ ಹೆಸರಿರುವವರಲ್ಲಿ ಶೇಕಡಾ ಅರತ್ತೊಂದು ಮಂದಿ ಖುಲಾಸೆಯಾಗಿದ್ದಾರೆ. ಮೂವತ್ತೊಂಬತ್ತು ಮಂದಿಗೆ ಮಾತ್ರ ಶಿಕ್ಷೆಯಾಗಿದೆ. ಅವರಿಗೂ ಇನ್ನೂ ಅಪೀಲುಗಳ ಅವಕಾಶವಿದೆ. ಇದು 2012ನೇ ಸಾಲಿನ ಅಧಿಕೃತ ಅಂಕಿ-ಅಂಶಗಳು.
ಸರ್ಕಾರವೇ ಪ್ರಕಟಿಸಿರುವ ಅಂಕಿ-ಅಂಶಗಳನ್ನು ಗಮನಿಸಿ, ಇಷ್ಟೊಂದು ಕಳಪೆ ಸಾಧನೆಗೆ ಕಾರಣಗಳನ್ನು ಹುಡುಕುತ್ತ ಹೊರಟರೆ, ತನಿಖಾ ಸಂಸ್ಥೆಗಳಿಗೆ ಬೇಕಾದ ಬೆಂಬಲ ಕೊಡದ ಸರ್ಕಾರದ ವ್ಯವಸ್ಥೆಯೇ ಈ ಪರಿಸ್ಥಿತಿಗೆ ದೊಡ್ಡ ಕಾರಣ ಎನ್ನುವುದು ಸ್ಪಷ್ಟವಾಗುತ್ತಿದೆ.
ಜನಜನಿತ ಅನಿಸಿಕೆಯಂತೆ ದೇಶದಲ್ಲಿನ ಭ್ರಷ್ಟಾಚಾರಕ್ಕೆ ಬ್ರಹ್ಮಾಂಡ ಸ್ವರೂಪವೇ ಇದ್ದರೂ, ಕಳೆದ ವರ್ಷದಲ್ಲಿ ಎಲ್ಲ ರಾಜ್ಯಗಳೂ ಸೇರಿದರೂ ಆರೋಪಗಳ ತನಿಖೆಯ ಅನಂತರ ನ್ಯಾಯಾಲಯಗಳಲ್ಲಿ ತನಿಖಾ ತಂಡಗಳು ಸಲ್ಲಿಸಿದ ಆರೋಪ ಪಟ್ಟಿಗಳಲ್ಲಿ ಕೆಲವೇ ಸಾವಿರ ಹೆಸರುಗಳಿದ್ದವು.
ಸರ್ಕಾರಕ್ಕೆ ಬಂದ ಎಲ್ಲ ಆರೋಪಗಳನ್ನೂ ತನಿಖೆಗೆ ಒಳಪಡಿಸುವುದು ಅಸಾಧ್ಯ. ಮೇಲ್ನೋಟಕ್ಕೇ ಹುರುಳಿಲ್ಲವೆಂದು ತಿರಸ್ಕೃತವಾಗುವ ದೂರುಗಳ ಸಂಖ್ಯೆ ಬಹುದೊಡ್ಡದು. ನ್ಯಾಯಾಲಯಗಳಲ್ಲಿ ಗಟ್ಟಿಯಾಗಿ ನಿಲ್ಲುವಂತಹ ಸಾಕ್ಷ್ಯ- ಆಧಾರಗಳನ್ನು ತನಿಖಾ ಸಂಸ್ಥೆಗಳು ಬಹುತೇಕ ಸಂದರ್ಭಗಳಲ್ಲಿ ಸಂಗ್ರಹಿಸುವುದು ಅಸಾಧ್ಯವೆನ್ನುವ ಸ್ಥಿತಿ ಸರ್ಕಾರದ ವ್ಯವಸ್ಥೆಯಲ್ಲಿದೆ. ಕಳೆದ ವರ್ಷ (2012) ಭ್ರಷ್ಟಾಚಾರದ ಆರೋಪಗಳನ್ನು ಹೊತ್ತು ನ್ಯಾಯಾಲಯಗಳಲ್ಲಿ ವಿಚಾರಣೆಯಾದ ಅನಂತರ ಖುಲಾಸೆಯಾದವರ ಸಂಖ್ಯೆ 1273. ಶಿಕ್ಷೆಗೆ ಒಳಗಾದವರು 747 ಮಂದಿ. ಇದು ಅಖಿಲ ಭಾರತಕ್ಕೆ (ಕೇಂದ್ರ ಸೇವೆಗಳನ್ನು ಬಿಟ್ಟು) ಅನ್ವಯವಾಗುವ ಸಂಖ್ಯೆಗಳು.
ಕರ್ನಾಟಕದಲ್ಲಿ ನ್ಯಾಯಾಲಯದ ವಿಚಾರಣೆಯ ಹಂತವನ್ನು ತಲುಪಿದ್ದು 186 ಪ್ರಕರಣಗಳು. ಅದರಲ್ಲಿ 71 ಮಂದಿಗೆ ಶಿಕ್ಷೆಯಾಗಿದೆ. ಉಳಿದವರು ಖುಲಾಸೆಯಾಗಿದ್ದಾರೆ. ಇಷ್ಟಾದರೂ ಈ ವಿಚಾರದಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ರಾಜ್ಯ. ಮೊದಲನೆ ಸ್ಥಾನ ಮಹಾರಾಷ್ಟ್ರದ್ದು.
ಯಾಕೆ ಹೀಗೆ? ತನಿಖಾ ಸಂಸ್ಥೆಗಳಲ್ಲೇ ದೋಷವಿದೆಯೇ ಅಥವಾ ಬೇರೆ ಯಾವುದಾದರೂ ಅಂತರ್ಗತ ಕಾರಣಗಳಿವೆಯೇ? ಈ ಪ್ರಶ್ನೆಗಳನ್ನು ಹಲವು ಸಮಿತಿಗಳು ಪ್ರತ್ಯೇಕ ಪ್ರತ್ಯೇಕವಾಗಿ ಪರಿಶೀಲಿಸಿವೆ. ಎಲ್ಲ ಸಮಿತಿಗಳೂ ನೀಡಿರುವ ವರದಿಗಳಲ್ಲಿ ಸಮಾನವಾದ ಅಂಶ ಎಂದರೆ, ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವವರು ಕೊಡುವ ಮಾಹಿತಿಯನ್ನೇ ತನಿಖಾಧಿಕಾರಿಗಳು ಹೆಚ್ಚಾಗಿ ಅವಲಂಬಿಸಬೇಕಾಗಿರುವುದರಿಂದ, ಸಾಮಾನ್ಯವಾಗಿ, ಇಲಾಖೆಗಳ ಸಿಬ್ಬಂದಿ ತಮ್ಮ "ಸಂಗಾತಿಗಳನ್ನು" ರಕ್ಷಿಸುವ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿರುವುದರಿಂದ, ತನಿಖೆ ಯಶಸ್ವಿಯಾಗುತ್ತಿಲ್ಲ ಎನ್ನುವುದೇ.
ಅಳ್ಳಕವಾಗಿ ಉದ್ದೇಶ ಪೂರ್ವಕವಾಗಿ ತನಿಖಾ ವರದಿಗಳನ್ನು ತಯಾರಿಸುವ ಪ್ರಯತ್ನ ನಡೆಯುವುದು ಮಾಮೂಲು. ಈ ವ್ಯವಸ್ಥೆಯಲ್ಲಿ ತಪ್ಪಿತಸ್ಥರಿಗೆ ರಕ್ಷಣೆ ಸಿಗುವ ಅವಕಾಶವೇ ಹೆಚ್ಚು.
ಭ್ರಷ್ಟಾಚಾರದ ಆರೋಪಗಳ ತನಿಖೆ ನಡೆಸುವ ಅಧಿಕಾರಿಗಳು, ನೇರವಾಗಿ ಲೋಕಾಯುಕ್ತರಿಗೇ ವರದಿ ನೀಡಬೇಕು, ಹಿರಿಯ ಪೊಲೀಸ್ ಅಧಿಕಾರಿಗಳಿಗಲ್ಲ ಎನ್ನುವ ನಿಯಮ ಜಾರಿಗೆ ಬಂದರೆ ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು. ಬೆಕ್ಕಿಗೆ ಗಂಟೆ ಕಟ್ಟಲು ಈಗ ಯಾರಾದರೂ ಮುಂದೆ ಬರಲೇಬೇಕು. ಅದಕ್ಕಾಗಿ ಜನ ಕಾಯಲೇಬೇಕು.