ತಪ್ಪಾಯ್ತು ತಿದ್ಕೋತೀವಿ
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಜು.14ರಂದು ಮಂಡ್ಯ ಸುದ್ದಿಯ ಪುಟ 3ರಲ್ಲಿ 'ಸಲಾಂ ಜಯರಾಮ್' ಹುತಾತ್ಮ ಯೋಧನ ಕುರಿತಾದ ಸಚಿತ್ರ ಶ್ರದ್ಧಾಂಜಲಿ ವರದಿ ಚೆನ್ನಾಗಿ ಮೂಡಿಬಂದಿದೆ. ಮಂಡ್ಯ ವರದಿಗಾರರನ್ನು ಅಭಿನಂದಿಸಬೇಕು. ಆದರೆ 'ಪಾರ್ಥಿವ'ಶರೀರ ಪದ 17 ಸಲ 'ಪಾರ್ಥೀವ'ಶರೀರವೆಂದು ತಪ್ಪಾಗಿ ಮುದ್ರಣಗೊಂಡಿದೆ.'
'ಅಂದರೆ ಸಂಬಂಧಿಸಿದ ಡಿಟಿಪಿ ಆಪರೇಟರ್ಗೆ ಈ ಪದದ ಸರಿಯಾದ ಪರಿಚಯವಿಲ್ಲ ಎಂದಾಯಿತು. ಆದರೆ, ಮೂರ್ನಾಲ್ಕು ಸಲ 'ಪಾರ್ಥಿವ' ಎಂಬ ಸರಿಯಾದ ರೂಪವೂ ಬಳಕೆಯಾಗಿದೆ. ಉಪಶೀರ್ಷಿಕೆಯಾಗಿ 'ರಾರಾಜಿಸಿದ ಆಳೆತ್ತರದ ಫ್ಲೆಕ್ಸ್ಗಳು' ಎಂಬಲ್ಲಿ ರಾರಾಜಿಸಿದ ಪದಬಳಕೆ ಹಿಡಿಸಲಿಲ್ಲ. ಸಂತೋಷದಾಯಕ ಸುದ್ದಿ ಇದ್ದಲ್ಲಿ 'ರಾರಾಜಿಸಿದ' ಪದ ಸಮಂಜಸವಾದೀತು. 'ಶೋಕಿಸಿದ ಫ್ಲೆಕ್ಸ್ಗಳು' ಎಂದು ಬಳಸಿದ್ದರೆ ಗಂಭೀರ ಗೌರವ ನಮನವೆನಿಸುತ್ತಿತ್ತು.'
'ಡಾ. ಕಿಞ್ಞಣ್ಣ ರೈ ಜನ್ಮಶತಮಾನೋತ್ಸವ ಸುದ್ದಿಯನ್ನು (ಜು.15 ಪುಟ 9) ಕಂಡು ಒಂದು ಮುಖ್ಯ ವಿಷಯವನ್ನು ಪ್ರಸ್ತಾಪಿಸಲೇ ಬೇಕಾಗಿದೆ. ಕಿಞ್ಞಣ್ಣ ಪದವು ಮಲಯಾಳ ಮೂಲದಿಂದ ಮಾಡಿದ ನಾಮಪದ. ಕಿಞ್ಞಅಣ್ಣಕಿಞ್ಞಣ್ಣ. ಕರಾವಳಿ ಕನ್ನಡಿಗರಲ್ಲಿ ಉಡುಪಿ, ದಕ್ಷಿಣಕನ್ನಡ ಮತ್ತು ಕಾಸರಗೋಡು ಪ್ರದೇಶದ ಜನರನ್ನು ಬೇರೆಯವರಿಗೆ ಮಲಯಾಳ ಮೂಲದ ಕಿಞ್ಞಣ್ಣ ಪದವನ್ನು ಬರೆಯುವುದರಲ್ಲಿ ಮತ್ತು ಉಚ್ಚರಿಸುವುದರಲ್ಲಿ ಬಹಳ ಪ್ರಯಾಸಪಟ್ಟರೂ ಸೋಲುತ್ತಾರೆ.'
"ಞ' ಅಕ್ಷರವು ತಾಲವ್ಯವರ್ಣ. ಅಞ್ಜನ, ಹಞ್ಚು, ಅಞ್ಜಕೆ ಈ ಪದಗಳ ಉಚ್ಚಾರದಂತೆ 'ಞ'ಕಾರವನ್ನು ಉಚ್ಚರಿಸಬೇಕು. ಮಲಯಾಳದಲ್ಲಿ 'ಕುಞ್ಞ' ಎಂದರೆ ಪುಟಾಣಿ ಎಂಬರ್ಥವಿದೆ. ಕುಞ್ಞಮೋನು, ಕುಞ್ಞಮೋಳು, ಕುಞ್ಞಮ್ಮದೆ, ಕುಞ್ಞಮಣಿ ಮೊದಲಾದ ಹೆಸರುಗಳನ್ನಿಡುತ್ತಾರೆ. ಕಯ್ಯಾರ ಕಿಞ್ಞಣ್ಣ ರೈ ಅವರನ್ನು ಕಿಯ್ಯಣ್ಣ ರೈ, ಕಿನ್ನಣ್ಣ ರೈ, ಕಿಯಂಣ ರೈ, ಕಿಯಣ್ಣ ರೈ ಎಂದೆಲ್ಲ ಉಚ್ಚರಿಸಲು ಬಾರದೆ ಜನರು ಪ್ರಯಾಸಪಡುವುದನ್ನು ಕಂಡು ಅಯ್ಯೋ ಅನಿಸುತ್ತದೆ.'
'ಅವರ ಹೆಸರನ್ನು 'ಕಿಞ್ಞಣ್ಣ' ಎಂದು ಬರೆಯಬೇಕು. 'ಕಿಞಣ್ಣ' ಎಂದು ಬರೆಯುವುದು ಸರಿಯಲ್ಲವೆಂಬುದು ನನ್ನ ಮತ' ಎಂದಿದ್ದಾರೆ.
ಇತ್ತೀಚೆಗಷ್ಟೇ ಈ ಬಗ್ಗೆ ನಮ್ಮಲ್ಲಿ ಚರ್ಚೆಯಾಗಿತ್ತು. ನಮ್ಮ ಕಚೇರಿಯಲ್ಲೇ ಒಬ್ಬರು 'ಞ' ಅಗತ್ಯವಿಲ್ಲ ಎಂದು ಹೇಳಿದ್ದರು. ಆಗ ನಾನು ಅವರಿಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಿರುವ ತನಕ ಆ ಅಕ್ಷರ ತೆಗೆಯಲು ಸಾಧ್ಯವಿಲ್ಲ ಎಂದು ಹಾಸ್ಯರೂಪದಲ್ಲಿ ಹೇಳಿದ್ದೆ.
ಆದರೆ ಕೆಲವು ತಾಂತ್ರಿಕ ತೊಂದರೆಗಳಿವೆ. ನಮ್ಮಲ್ಲಿ ಬಳಸುವ ಕನ್ನಡ ಸಾಫ್ಟ್ವೇರ್ನಲ್ಲಿ ನೇರವಾಗಿ 'ಞ' ಒತ್ತು ಬರುವುದಿಲ್ಲ. ಈಗ ವೆಂಕಟ್ರಮಣ ಭಟ್ಟರು ಬರೆದಿರುವ ಪತ್ರದಲ್ಲಿರುವ ಎಲ್ಲ ಹೆಸರುಗಳನ್ನು ಅವರು ಬರೆದಂತೆ ಬರೆಯಲು ಸಾಧ್ಯವಾಗಿಲ್ಲ. ಇವೆಲ್ಲ ತಾಂತ್ರಿಕ ಅಡಚಣೆಗಳು. ಎಷ್ಟು ಸಾಧ್ಯವೋ ಅಷ್ಟನ್ನು ಖಂಡಿತ ಪಾಲಿಸೋಣ.
-ವಿಶ್ವೇಶ್ವರ ಭಟ್