ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕಟ್ಟಡ ಕಾರ್ಮಿಕರ ಮಂಡಳಿಯ ಕಾರ್ಯ ವೈಖರಿ

Vishwanath S
Updated On : 24 Jul 2013, 10:43 am

ರಾಜ್ಯದ ಅಸಂಘಟಿತ ಬಡ ಕಟ್ಟಡ ಕಾರ್ಮಿಕರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುವ ಮಹತ್ತರ ಉದ್ದೇಶದಿಂದ 2006-07ರಲ್ಲಿ ರಾಜ್ಯ ಸರ್ಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದೆ. ಇದಕ್ಕಾಗಿ ದೊಡ್ಡ ದೊಡ್ಡ ಹೊಸ ಕಟ್ಟಡಗಳ ಮಾಲೀಕರಿಂದ ಸೆಸ್ ಮೂಲಕ ಹಣ ಸಂಗ್ರಹಿಸುತ್ತಿದ್ದು ಈಗಾಗಲೇ ಸುಮಾರು 1800 ಕೋಟಿಗೂ ಅಧಿಕ ಹಣ ಮಂಡಳಿಯಲ್ಲಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಕಟ್ಟಡ ಕಾರ್ಮಿಕರಿದ್ದು ಈಗ ಮಂಡಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ನೊಂದಾಯಿಸಿರುವ ಸಂಖ್ಯೆ ಕೇವಲ 1 ಲಕ್ಷವಾಗಿದೆ. ಮಂಡಳಿಯಲ್ಲಿ ಕಾರ್ಮಿಕರಾಗಿ ನೊಂದಾಯಿಸಿಕೊಂಡ ಕಾರ್ಮಿಕರಿಗೆ ಮಾತ್ರ ಸೌಲಭ್ಯ ದೊರೆಯಲಿರುವುದರಿಂದ ಸರ್ಕಾರ ಉಳಿದ ಕಟ್ಟಡ ಕಾರ್ಮಿಕರನ್ನು ನೋಂದಾಯಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದು ಕಾರ್ಮಿಕ ಅಧಿಕಾರಿ ಹಾಗೂ ನಿರೀಕ್ಷಕರಿಗೆ ಪ್ರತಿ ತಿಂಗಳೂ ಗುರಿಯನ್ನು ನೀಡಿದೆಯೆಂದು ತಿಳಿದು ಬಂದಿದೆ. ಆದರೆ ನೋಂದಾಯಿತ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವ ಭರದಲ್ಲಿ ಸಾಕಷ್ಟು ಸಂಖ್ಯೆಯ ನಕಲಿ ಕಾರ್ಮಿಕರೂ ನೋಂದಾಯಿಸಿಕೊಳ್ಳುತ್ತಿದ್ದು ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಂಡು ನಕಲಿ ಕಾರ್ಮಿಕರನ್ನು ಪತ್ತೆ ಹಚ್ಚಬೇಕಾಗಿದೆ. ಇಲ್ಲವಾದಲ್ಲಿ ಈ ಯೋಜನೆಯ ಬಹುಪಾಲು ಸೌಲಭ್ಯಗಳು ದುರುಪಯೋಗವಾಗಿ ನಿಜವಾದ ಕಾರ್ಮಿಕರು ಸೌಲಭ್ಯ ವಂಚಿತರಾಗಲಿದ್ದಾರೆ. ಮಂಡಳಿಗೆ ಕಾರ್ಮಿಕರನ್ನು ನೋಂದಾಯಿಸಲು ಕೇವಲ ಪ್ರಚಾರ ಮಾತ್ರ ಸಾಲದು. ಈಗಾಗಲೇ ಸದಸ್ಯರಾಗಿರುವ ಕಾರ್ಮಿಕರಿಗೆ ಶೀಘ್ರವಾಗಿ ಸೌಲಭ್ಯಗಳನ್ನು ವಿತರಿಸಬೇಕು. ಏಕೆಂದರೆ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳಲ್ಲಿ ತುಂಬಾ ವಿಳಂಬವಾಗುತ್ತಿದ್ದು ಕಾರ್ಮಿಕರು ತಮ್ಮ ಸವಲತ್ತುಗಳಿಗೆ ಚಾತಕ ಪಕ್ಷಿಯಂತೆ ಕಾಯಬೇಕಾಗಿದೆ. ಈಗಾಗಲೇ ಹಲವಾರು ತಿಂಗಳುಗಳ ಹಿಂದೆ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸಿರುವ ಅರ್ಜಿಗಳು ಇನ್ನೂ ಇತ್ಯರ್ಥವಾಗದಿರುವ ಕಾರಣ ತಿಳಿದಿಲ್ಲ. ಕಳೆದ ವರ್ಷ ಆಯುಕ್ತರು ನಿವೃತ್ತಿ ಹೊಂದಿದ ಕಾರಣ ಹಲವಾರು ತಿಂಗಳುಗಳು ಇದೇ ಸಮಸ್ಯೆ ಎದುರಾಗಿತ್ತು. ನಂತರ ಚುನಾವಣೆಯ ಕಾರಣದಿಂದ ಪುನಃ ಸಾಕಷ್ಟು ತಡವಾಗಿತ್ತು. ಈಗ ಚುನಾವಣೆಯೂ ಮುಗಿದಿದೆ. ಹೊಸ ಅಧಿಕಾರಿಯೂ ಬಂದಿದ್ದಾರೆ. ಆದರೂ ಇನ್ನೂ ಹಲವಾರು ಅರ್ಜಿಗಳು ಹಾಗೂ ಅವರ ಅವಲಂಬಿತರ ಹೆಸರಿನಲ್ಲಿ ಸಣ್ಣ ಪುಟ್ಟ ತಪ್ಪುಗಳು ನುಸುಳಿವೆ. ಬಹುಪಾಲು ಅನಕ್ಷರಸ್ಥರಾಗಿರುವ ಕಟ್ಟಡ ಕಾರ್ಮಿಕರಿಗೆ ಈ ಬಗ್ಗೆ ಅರಿವಿರುವುದಿಲ್ಲ. ಆದರೇ ಇದೇ ಕಾರಣದಿಂದ ಹಲವು ಕಾರ್ಮಿಕರಿಗೆ ಸವಲತ್ತುಗಳು ದೊರೆಯದ ಪರಿಸ್ಥಿತಿ ಇದೆ. ಈ  ಸಣ್ಣ ಪುಟ್ಟ ಕೈ ತಪ್ಪಿನ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಸೌಲಭ್ಯಗಳನ್ನು ಶೀಘ್ರವಾಗಿ ವಿತರಿಸಲಿ.
-ಎಸ್. ಎನ್. ವಾಸುದೇವ ಶ್ರೀರಂಗಪಟ್ಟಣ

ಶುಚಿತ್ವ ಕಾಪಾಡಲಿ
ಮಕ್ಕಳಿಗೆ ಶುಚಿತ್ವ ಕಲಿಸುವ ಶಾಲೆಗಳಲ್ಲಿಯೇ ಶುಚಿತ್ವಕ್ಕೆ ಮಹತ್ವ ನೀಡುತ್ತಿಲ್ಲ. ಇದು ಬೇಸರದ ಸಂಗತಿ. ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಬಿಸಿಯೂಟದ ವಿಚಾರದಲ್ಲಿ  ಶುಚಿತ್ವದ ಕಡೆಗೆ ಗಮನ ಹರಿಸದೆ ಮಕ್ಕಳ ಸಾವಿಗೆ ಕಾರಣರಾಗುತ್ತಿದ್ದಾರೆ. ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ದೇವರಿಗೆ ನೀಡುವ ನೈವೇದ್ಯದಂತೆ ಮಕ್ಕಳಿಗೆ ಬಿಸಿಯೂಟ ತಯಾರಿಸುವಾಗ ಏಕೆ ಎಚ್ಚರಿಕೆಯಿಂದ ಕೆಲಸ ಮಾಡುತ್ತಿಲ್ಲ. ಶಾಲೆಗಳಲ್ಲಿ ಬಳಸುವ ಕಳಪೆ ಗುಣಮಟ್ಟದ ಆಹಾರಗಳು ಕೆಲವೊಂದು ಬಾರಿ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಬಗ್ಗೆ ಸರ್ಕಾರ ಕ್ರಮಕೈಗೊಂಡು ಶುಚಿತ್ವದ ಕಡೆಗೆ ಗಮನ ಹರಿಸುವಂತೆ ಒತ್ತಡ ಹೇರಬೇಕು.
-ರಮ್ಯ ಎಂ., ಪುತ್ತೂರು (ದ.ಕ.)


-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement