ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ನ್ಯಾಯಾಧೀಶರಾಗಲೊಲ್ಲದ ವಕೀಲರು

Vishwanath S
Updated On : 24 Jul 2013, 10:41 am

ಸರ್ ಸಿ.ಪಿ.ರಾಮಸ್ವಾಮಿ ಅಯ್ಯರ್ ಅವರದ್ದು ಆಧುನಿಕ ಭಾರತ ನಿರ್ಮಾಪಕರಾದ ತಿಲಕ್, ಗೋಖಲೆ, ಗಾಂಧೀಜಿ, ನೆಹರೂ ಅವರ ಸಾಲಿನಲ್ಲಿ ನಿಲ್ಲಬಲ್ಲಂತಹ ವ್ಯಕ್ತಿತ್ವ. ಅಪ್ರತಿಮ ದೇಶಪ್ರೇಮಿಗಳೂ, ಒಳ್ಳೆಯ ಆಡಳಿತಗಾರರೂ ಆಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಸಿದ್ಧ ವಕೀಲರಾಗಿ, ಉತ್ತಮ ವಾಗ್ಮಿಗಳಾಗಿ ಹೆಸರು ಗಳಿಸಿದ್ದರು. ತಿರವಾಂಕೂರು ಸಂಸ್ಥಾನದ ದಿವಾನರಾಗಿದ್ದಾಗ ದಲಿತರಿಗೆ ದೇವಾಲಯ ಪ್ರವೇಶವನ್ನು ಕಲ್ಪಿಸಿಕೊಟ್ಟದ್ದು, ಜಲವಿದ್ಯುತ್ ತಯಾರಿಕೆಗೆ ಕಾರಣರಾಗಿದ್ದು, ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಸಿದ್ಧಪಡಿಸಿದ್ದು, ಕೇರಳ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ್ದು, ನೀರಾವರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದು ಇವರ ಅನೇಕ ಸಾಧನೆಗಳಲ್ಲಿ ಕೆಲವು ಮಾತ್ರ. ಮೊದಲಿನಿಂದಲೂ ಸಾಮಾಜಿಕ ಕಳಕಳಿ ಹೊಂದಿ ಕಾರ್ಯಪ್ರವೃತ್ತರಾಗಿದ್ದನ್ನು ಗಮನಿಸಿದ ಗಾಂಧೀಜಿ ಸಿ.ಪಿ.ಯವರನ್ನು ಹೊಸ ದೃಷ್ಟಿಕೋನಕ್ಕಾಗಿ ಶ್ಲಾಘಿಸುತ್ತಿದ್ದರು. ಬನಾರಸ್ ಹಿಂದು ವಿಶ್ವವಿದ್ಯಾಲಯ ಮತ್ತು ಅಣ್ಣಾಮಲೈ ವಿಶ್ವವಿದ್ಯಾಲಯಗಳ ಕುಲಪತಿಯಾಗಿ ಏಕ ಕಾಲದಲ್ಲಿ ಸೇವೆಸಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಬ್ರಿಟಿಷರ ಆಡಳಿತ ಕಾಲದಲ್ಲಿ ನೀಡಿದ್ದ ಸರ್ ಪದವಿ ಮತ್ತು ಇತರ ಪದವಿಗಳನ್ನು ಸ್ವಾತಂತ್ರ್ಯ ಗಳಿಸಿದ ಮೇಲೆ ಬ್ರಿಟಿಷರಿಗೇ ಹಿಂದಿರುಗಿಸಿದರು. ಲೀಗ್ ಆಫ್ ನೇಷನ್ಸ್‌ನಲ್ಲಿ ಭಾರತದ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿದ ರಾಮಸ್ವಾಮಿ ಅಯ್ಯರ್ ಅಪ್ರತಿಮ ವಾಗ್ಮಿಗಳಾಗಿ ಎಲ್ಲರ ಗಮನ ಸೆಳೆದಿದ್ದರು.
ಇವರು ಕೆಲಕಾಲ ವೈಸ್‌ರಾಯ್ ಅವರ ಕೌನ್ಸಿಲ್‌ನ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಪ್ರತಿಭಾವಂತರಾಗಿದ್ದ ಸಿ.ಪಿ. ಇಂಗ್ಲಿಷ್, ಸಂಸ್ಕೃತ, ತಮಿಳು, ಫ್ರೆಂಚ್ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದರು. ತಾವು ತೆಗೆದುಕೊಂಡ ಬಹುತೇಕ ಎಲ್ಲ ಮೊಕದ್ದಮೆಗಳನ್ನೂ ಗೆಲ್ಲುತ್ತಿದ್ದ ಸಿ.ಪಿ ಆಗಿನ ಕಾಲಕ್ಕೆ ಅತಿ ಹೆಚ್ಚು ಗಳಿಕೆ ಇರುವ ವಕೀಲರಾಗಿದ್ದರು. ಇಂತಹ ರಾಮಸ್ವಾಮಿ ಅಯ್ಯರ್‌ಗೆ ಹೈಕೋರ್ಟ್‌ನ ನ್ಯಾಯಾಧೀಶರಾಗಲು ಆಹ್ವಾನ ಬಂದಿತು. ಆಗ ಅವರು ತಮಾಷೆಗೆ ಹೇಳಿದ ಮಾತುಗಳೂ ಸಹ ಅವರ ಸ್ವತಂತ್ರ ಮನೋಭಾವವನ್ನು ಸೂಚಿಸುತ್ತದೆ. ಅವರು ಹೇಳಿದರು- 'ನಾನು ಕೆಲವು ಗಂಟೆಗಳ ಕಾಲ ಅಸಂಬದ್ಧವಾಗಿ ನ್ಯಾಯಾಲಯದಲ್ಲಿ ಮಾತನಾಡಲು ಇಚ್ಛಿಸುತ್ತೇನೆಯೇ ಹೊರತು, ದಿನವೆಲ್ಲಾ ನ್ಯಾಯಾಧೀಶರ ಸ್ಥಾನದಲ್ಲಿ ಕೂತು ಅಸಂಬದ್ಧ ನುಡಿಗಳನ್ನು ಕೇಳುವ ಸಾಹಸಕ್ಕೆ ಇಳಿಯುವುದಿಲ್ಲ!


-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments