ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಗ್ರಾಮಸಭೆ ಗುಣಮಟ್ಟ ವೃದ್ಧಿಸಲಿ

Vishwanath S
Updated On : 30 Jul 2013, 10:54 am

ಪಂಚಾಯತಿ ರಾಜ್ಯ ವ್ಯವಸ್ಥೆಯಲ್ಲಿ ಗ್ರಾಮ ಸಭೆಗಳ ಬಗೆಗಿನ ಚರ್ಚೆ ಕೆಲ ದಿನಗಳಿಂದ ನಡೆಯುತ್ತಲೇ ಇದೆ. ಪ್ರತಿ ಆರು ತಿಂಗಳಿಗೊಮ್ಮೆ ಗ್ರಾಮ ಸಭೆ ಕರೆಯುವುದು ಕಡ್ಡಾಯವಾದ್ದರಿಂದ ಇದನ್ನು ತಪ್ಪಿದ ಗ್ರಾಮ ಪಂಚಾಯತಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ವಜಾ ಮಾಡುವವರೆಗಿನ ಮಾತೂ ವಿಧಾನಸಭೆಯ ಚರ್ಚೆಯಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕನ್ನಡಪ್ರಭದ ಜುಲೈ 20ರ ಸಂಪಾದಕೀಯದಲ್ಲಿ 'ಗ್ರಾಮ ಸಭೆ ಮರ್ಯಾದೆ ಕಾಪಾಡಿ' ಲೇಖನ ಪ್ರಕಟವಾಗಿದೆ. ಕೇವಲ ಸಭೆ ನಡೆಸುವುದಷ್ಟೇ ಅಲ್ಲ; ಅಂದಿನ ಕಾರ್ಯಕಲಾಪಗಳನ್ನು ವಿಡಿಯೋ ಮೂಲಕ ಸಾರ್ವಜನಿಕರಿಗೆ ತಿಳಿ ಹೇಳುವ ಕೆಲಸದ ಉಲ್ಲೇಖವೂ ಇದೆ. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಗ್ರಾಮ ಸಭೆ ಎನ್ನುವುದು ವಿಧಾನಸಭೆ ಇದ್ದ ಹಾಗೆ, ಪ್ರತಿ 2 ತಿಂಗಳಿಗೊಮ್ಮೆ ನಡೆಯಬೇಕು. ಇಂತಹ ಗ್ರಾಮಸಭೆಯನ್ನು ನಿಲ್ಲಿಸಬೇಕು ಎನ್ನುವುದು ಬುದ್ಧಿ ಇಲ್ಲದವರ ಮಾತು ಎಂತಲೂ ಹೇಳಿದ್ದಾರೆ.
ವಾಸ್ತವಿಕತೆಯ ಅರಿವಿದ್ದವರಿಗೆ ಗ್ರಾಮ ಸಭೆ ಹಾಗೂ ವಾರ್ಡ್‌ಸಭೆಗಳ ನಿಜವಾದ ಚಿತ್ರಣ ಸಿಗದೆ ಇರದು. ಇಂತಹ ಸಭೆಗಳು ಕೇವಲ ಔಪಚಾರಿಕವಾಗಿಯೇ ಕಾಣುತ್ತವೆ. ವಾರ್ಡ್ ಸಭೆಗಳಲ್ಲಂತೂ ಬೆರಳೆಣಿಕೆಯ ಹಾಜರಾತಿ ಇದ್ದು, ಈ ಹಿಂದೆ ಹೇಳಿದ ಮಾತುಗಳನ್ನೇ ಹೇಳುತ್ತ, ಹಳ್ಳಿಗರ ಸಮಸ್ಯೆಗಳನ್ನು ನೋಂದಣಿ ಮಾಡಿಕೊಂಡು, ಆಗದಿದ್ದ ಕೆಲಸಗಳಿಗೆ ಭರವಸೆಕೊಟ್ಟು, ಬಂದವರ ಸಹಿ ಪಡೆದು, ಅರ್ಧ -ಮುಕ್ಕಾಲು ಗಂಟೆಯೊಳಗೆ ಸಭೆ ಮುಕ್ತಾಯವಾಯಿತೆಂದು ಘೋಷಿಸುವುದನ್ನು ಬಿಟ್ಟರೆ ಇನ್ನಾವ ಕ್ರಿಯಾತ್ಮಕ ಚಟುವಟಿಕೆಗಳೂ ನಡೆಯುವುದಿಲ್ಲ.
ಇನ್ನು, ಗ್ರಾಮ ಸಭೆಯ ವಿಚಾರಕ್ಕೆ ಬಂದರೆ, ಅಂದು ಹಾಜರಿರಬೇಕಾದ ವಿವಿಧ ಇಲಾಖೆಗಳ ಪ್ರತಿನಿಧಿಗಳು ಬಂದೇ ಬರುತ್ತಾರೆಂಬ ಖಾತ್ರಿ ಇರುವುದಿಲ್ಲ. ಆರೋಗ್ಯ, ಕೃಷಿ, ಸಣ್ಣ ನೀರಾವರಿ, ರಸ್ತೆ, ಸಾರಿಗೆ, ಪಡಿತರ ಇತ್ಯಾದಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿರಬೇಕೆಂಬ ಕಡ್ಡಾಯವಿದ್ದರೂ, ಒಂದಲ್ಲಾ ಒಂದು ಸಬೂಬು ಹೇಳಿ ಗೈರು ಹಾಜರ್ ಆಗುವವರೇ ಹೆಚ್ಚು. ವಿವಿಧ ಕ್ಷೇತ್ರಗಳಲ್ಲಿಯ ಫಲಾನುಭವಿಗಳ ಹೆಸರನ್ನು ಓದಿ ಹೇಳಿ (ಅವುಗಳಲ್ಲಿ ಹೆಚ್ಚಿನವು ಹಿಂದೆ ಇದ್ದವರೇ) ಅನುದಾನದ ಹೆಚ್ಚಿನ ಮೊತ್ತ ಖರ್ಚಾಗಿರುವುದನ್ನು ಒತ್ತಿ ಹೇಳಿ, ಆಗಬೇಕಾದ ಕೆಲಸ- ಕಾರ್ಯಗಳಿಗೆ ಹೆಚ್ಚು ಮಹತ್ವ ನೀಡದೆ, ನಿರಾಶ್ರಿತರಿಗೆ ಕೆಲವು ಮನೆಗಳನ್ನು ನೀಡಿರುವಂತೆ ಬಿಂಬಿಸಿ, ನಾಲ್ಕಾರು ಪುಟಗಳ ವರದಿ ಓದಿ ಹೇಳಿ, ಆಗದ ಕೆಲಸಗಳಿಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡಕಾಡುವ ದೃಶ್ಯ ಸಾಮಾನ್ಯ. ಯಾವೊಬ್ಬ ಅಧಿಕಾರಿಯೂ ತಯಾರಾಗಿ ಬರದೆ ನುಣುಚಿಕೊಳ್ಳುವ ಸಾಹಸ ಪ್ರತಿ ಗ್ರಾಮ ಸಭೆಯ ವಿಶೇಷ. ಇಲ್ಲಿ ಯೋಚಿಸಬೇಕಾದ್ದು ಕೇವಲ ಸಭೆ ನಡೆಸುವುದಲ್ಲ; ನಡೆದ ಸಭೆಗಳಲ್ಲಿ ಏನೆಲ್ಲ ವಿಷಯಗಳ ಚರ್ಚೆ ನಡೆದು ನಿರ್ಣಯಿಸಲಾಯಿತೆಂಬುದು. ಹೀಗಾಗಿ ವರ್ಷಕ್ಕೆಷ್ಟು ಸಭೆ ಕರೆಯಬೇಕೆನ್ನುವುದು ಅಷ್ಟು ಪ್ರಾಮುಖ್ಯವಲ್ಲ. ಗ್ರಾಮದ ಅಭಿವೃದ್ಧಿಯನ್ನು ನೋಡಿಕೊಳ್ಳುವುದು ಗ್ರಾಮದ ಜನರ ಜವಾಬ್ದಾರಿ ಎಂಬುದನ್ನು ಒಪ್ಪಿಕೊಂಡರೂ ಅವು ನಡೆಯಬೇಕಾದದ್ದು ಜನಪ್ರತಿನಿಧಿಗಳಾದ ಗ್ರಾಮ ಪಂಚಾಯತಿಯ ಪದಾಧಿಕಾರಿಗಳಿಂದ ಎಂಬುದನ್ನು ಅಲ್ಲಗಳೆಯುವಂತಿಲ್ಲ.
- ಶಂಕರನಾರಾಯಣ ಭಟ್, ಹೊನ್ನಾವರ

ವರ್ಗಾವಣೆಯಲ್ಲಿ ಪಾರದರ್ಶಕತೆ ಬೇಕು
ರಾಜ್ಯ ಸರ್ಕಾರವು ವರ್ಗಾವಣೆಯನ್ನು ದಂಧೆಯಾಗದಂತೆ ತಡೆಯಲು ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ. ಒಂದು ಸ್ಥಳದಲ್ಲಿ ಕನಿಷ್ಠ ಇಷ್ಟು ವರ್ಷ ಸೇವೆ ಸಲ್ಲಿಸಬೇಕೆಂಬ ಹಾಗೂ ಶೇಕಡಾವಾರು ಮಿತಿಯನ್ನು ನಿಗದಿಪಡಿಸಿದ್ದು, ವೈದ್ಯಕೀಯ ಹಿನ್ನೆಲೆ ಮತ್ತು ಪತಿ ಪತ್ನಿ ಪ್ರಕರಣದವರಿಗೆ ಪ್ರಾಶಸ್ತ್ರ್ಯ ನೀಡಬೇಕೆಂಬ ನಿಯಮವಿದ್ದು, ಇಲಾಖೆಯ ಹಂತದಲ್ಲಿ ಇಂತಹ ಅರ್ಹ ನೌಕರರಿಂದ ವರ್ಗಾವಣೆಗಾಗಿ ಮನವಿಯನ್ನು ಸ್ವೀಕರಿಸಲಾಗಿದೆ. ಆದರೆ ಸಮಾಜ ಕಲ್ಯಾಣ ಮತ್ತು ತೋಟಗಾರಿಕೆ ಇಲಾಖೆಯ ಬಿ.ಸಿ. ಮತ್ತು ಡಿ ವೃಂದದ ವರ್ಗಾವಣೆಯಲ್ಲಿ ಖಾಲಿ ಹುದ್ದೆ ಇದ್ದಾಗ್ಯೂ ಪತಿ ಪತ್ನಿ ಪ್ರಕರಣ ಮತ್ತು ವೈದ್ಯಕೀಯ ಹಿನ್ನೆಲೆಯವರಿಗೆ ಪ್ರಾಶಸ್ತ್ಯ ನೀಡದೆ, ಅವಧಿಪೂರ್ವದ ನೌಕರರನ್ನು ವಿವಿಧ ಆಮಿಷ, ಒತ್ತಡ, ಹಣಕ್ಕೆ ಬಲಿಯಾಗಿ ಆಡಳಿತಾತ್ಮಕ ಕಾರಣ ಎಂಬ ಕುಂಟು ನೆಪ ನೀಡಿ ವರ್ಗಾವಣೆ ಮಾಡಿರುತ್ತಾರೆ. ಈ ಜುಲೈ ಮಾಸಾಂತ್ಯದ 2ನೇ ಹಂತದ ವರ್ಗಾವಣೆಯಲ್ಲಾದರೂ ವಿಶೇಷ ಪ್ರಕರಣಗಳಿಗೆ ಪ್ರಾಶಸ್ತ್ಯ ನೀಡಿ ಆವಶ್ಯಕತೆಯಿರುವ ನೌಕರರನ್ನು ಅವರ ಕೋರಿಕೆಯಂತೆ ವರ್ಗಾವಣೆ ಮಾಡುವರೆ?
- ಡಾ. ಬಾಬುರಾವ್ ಚೆಮ್ಮನೂರ, ಹುಬ್ಬಳ್ಳಿ


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement