ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕಷ್ಟ ಕಾಲ ಕಾದಿದೆ

Vishwanath S
Updated On : 31 Jul 2013, 10:29 am

ರಿಸರ್ವ್ ಬ್ಯಾಂಕ್‌ನ ಗವರ್ನರ್ ದುವ್ವೂರಿ ಸುಬ್ಬರಾವ್ ಮಂಗಳವಾರ ತಮ್ಮ ಕಟ್ಟಕಡೆಯ ತ್ರೈಮಾಸಿಕ ಹಣ ನೀತಿಯನ್ನು ಪ್ರಕಟಿಸಲು ಸಜ್ಜಾದಾಗ ಅವರ ಮುಂದೆ ಇದ್ದ ದ್ವಂದ್ವ ಎಂದರೆ ಪ್ರಧಾನಿ ಹಾಗೂ ವಿತ್ತಮಂತ್ರಿಗಳು ಪರೋಕ್ಷವಾಗಿ ಸೂಚಿಸಿದ್ದ ಅಭ್ಯುದಯಕ್ಕೆ ನೆರವಾಗುವಂತೆ, ಬ್ಯಾಂಕ್ ಬಡ್ಡಿ ದರವನ್ನು ಇಳಿಸುವುದೇ ಅಥವಾ ಡಾಲರ್ ವಿರುದ್ಧ ರುಪಾಯಿಯ ಮೌಲ್ಯವನ್ನು ಸಾಧ್ಯವಿರುವಷ್ಟೂ ಹೆಚ್ಚಿನ ಮಟ್ಟದಲ್ಲೇ ಉಳಿಸಿಕೊಳ್ಳಲು ಈಗಿನ ಕಠಿಣ ಬಡ್ಡಿ ನೀತಿಯನ್ನೇ ಮುಂದುವರಿಸಬೇಕೆ ಎನ್ನುವುದೇ.
ಸದ್ಯದಲ್ಲೇ ನಿವೃತ್ತರಾಗಲಿರುವ ಸುಬ್ಬರಾವ್ ಅವರ ಮೇಲೆ, ಈಗಿನ ಕಠಿಣ ನೀತಿಯನ್ನು ಸ್ವಲ್ಪವಾದರೂ ಸಡಿಲಪಡಿಸಲು ಇದ್ದ ಒತ್ತಡ ವಿಪರೀತವಾಗಿದ್ದರೂ, ಅವರು ಹಣದ ಅತಿಪ್ರಸರಣದ ವೇಗದ ನಿಯಂತ್ರಣ ಹಾಗೂ ರುಪಾಯಿ ಬೆಲೆಯ ಸ್ಥಿರತೆಗೇ ಪ್ರಾಮುಖ್ಯ ನೀಡಿರುವುದು, ಸದ್ಯದ ಭವಿಷ್ಯದಲ್ಲಿ ತೀವ್ರ ಸ್ವರೂಪದ ವಾದ-ವಿವಾದಕ್ಕೆ ತುತ್ತಾಗಬಹುದು. ರಿಸರ್ವ್ ಬ್ಯಾಂಕಿನ ಪ್ರಕಾರ ದೇಶದ ಅಭಿವೃದ್ಧಿಯ ವೇಗ, ಒಟ್ಟು ಉತ್ಪಾದನೆ ಹಾಗೂ ಸೇವೆಗಳ ಮೌಲ್ಯದ (ಜಿಡಿಪಿ) ವಾರ್ಷಿಕ ಹೆಚ್ಚಳದ ಲೆಕ್ಕದಲ್ಲಿ ಶೇಕಡಾ 5.7 ರಷ್ಟಿರಬಹುದೆನ್ನುವ ಅಂದಾಜು ಕಡಿಮೆಯಾಗಿ ಅದು 5.5ಕ್ಕೆ ಇಳಿಯುವ ಸಂಭವವಿದೆ. ಪ್ರಗತಿಯ ವೇಗ ಕುಂಟುವುದಕ್ಕೆ ಮೂಲ ಕಾರಣ ಔದ್ಯಮಿಕ ವಲಯದಲ್ಲಿನ ಚಟುವಟಿಕೆ ಹಾಗೂ ಹೊಸ ಯೋಜನೆಗಳ ಜಾರಿಯ ಮಂದಗತಿ. ಆಮದು - ರಫ್ತಿನ ನಡುವಣ ಅಂತರವೂ ಚಾಲ್ತಿ ಲೆಕ್ಕದಲ್ಲಿ ರುಪಾಯಿಯ ಮೌಲ್ಯದ ಮೇಲೆ ಒತ್ತಡ ಹೇರುವುದೂ ಅನಿವಾರ್ಯ. ಇದನ್ನು ರಿಸರ್ವ್ ಬ್ಯಾಂಕಿನ ಹಣ ನೀತಿಯಿಂದ ಸುಧಾರಿಸುವುದು ಸಾಧ್ಯವಿಲ್ಲ, ಅದಕ್ಕೆ ಅಗತ್ಯವಾಗಿದ್ದು ಸರ್ಕಾರ ದಿಟ್ಟತನದಿಂದ ಸುಧಾರಣೆಯ ಎರಡನೇ ಮಜಲಿನ ಕ್ರಮಗಳನ್ನು ಜಾರಿಗೆ ತರುವುದು. ಅಂದರೆ ಈಗ ಸರ್ಕಾರ ಪ್ರಕಟಿಸುತ್ತಿರುವ ಉಡುಗೊರೆ, ಕೊಡುಗೆಗಳ ನೀತಿಯನ್ನು ತಾತ್ಕಾಲಿಕವಾಗಿಯಾದರೂ ಸ್ಥಗಿತಗೊಳಿಸಿ, ಉತ್ಪಾದನೆ ಹಾಗೂ ಸೇವಾ ಸೌಲಭ್ಯಗಳ ವ್ಯಾಪ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮಕ್ಕೆ ಅಧಿಕ ಬಂಡವಾಳವನ್ನು ಹೂಡಬೇಕಾದೀತು. ಇಂತಹ ಕ್ರಮಗಳಿಗೆ, ಚುನಾವಣೆಯ ಮುನ್ನಾ ವರ್ಷದಲ್ಲಿ ಸರ್ಕಾರ ಸಿದ್ಧವಾಗಿರುವುದಿಲ್ಲ. ಇದೆಲ್ಲವೂ ಗೊತ್ತಿದ್ದರೂ, ರಿಸರ್ವ್ ಬ್ಯಾಂಕ್ ತನ್ನ ತ್ರೈಮಾಸಿಕ ಹಣ ನೀತಿಯಲ್ಲಿ ಬಡ್ಡಿ ದರಗಳನ್ನು ಇಳಿಸುವ ಸಾಹಸಕ್ಕೆ ಕೈ ಹಾಕಿಲ್ಲ. ಇದರಿಂದ ಅಭಿವೃದ್ಧಿ ಯೋಜನೆಗಳ ಮೇಲಿನ ವೆಚ್ಚ ನಿಜವಾದ ಅರ್ಥದಲ್ಲಿ ಕಡಿಮೆಯಾಗುವುದೂ ಖಚಿತ.
ನಿಜ. ರುಪಾಯಿಯ ಮೌಲ್ಯದ ಮೇಲೆ ಒತ್ತಡ ಬೀಳುತ್ತಿರುವುದು ಜಾಗತಿಕ ಔದ್ಯಮಿಕ ವಲಯದಲ್ಲಿನ ಏರು ಪೇರಿನಿಂದಾಗಿ. ಅದನ್ನು ಸರಿದೂಗಿಸುವ ಮಟ್ಟದಲ್ಲಿ ಆಂತರಿಕವಾಗಿ ಹೊಸ ಬಂಡವಾಳದ ಹೂಡಿಕೆಯಾಗಬೇಕಾಗಿತ್ತು, ಆಗಿಲ್ಲ. ಉತ್ಪಾದನೆ ಶಕ್ತಿ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವುದಕ್ಕೂ ಪ್ರಯತ್ನ ನಡೆದಿಲ್ಲ.
ವೇತನದ ಏರಿಕೆಗೆ ಒತ್ತಾಯವಿದೆ. ಸರ್ಕಾರವೇ ನಿಗದಿಪಡಿಸುವ ಬೆಲೆಗಳೂ ಹೆಚ್ಚಲೇಬೇಕಾಗಬಹುದು. ಈ ಒತ್ತಡಗಳಿಂದಾಗಿ ಹಣದ ಅತಿಪ್ರಸರಣದ ಹೆಚ್ಚಳದ ವೇಗವನ್ನು ಈಗಿನ ಮಟ್ಟದಲ್ಲೇ ಉಳಿಸಿಕೊಳ್ಳುವುದು ಕಷ್ಟ. ರುಪಾಯಿಯ ಮೌಲ್ಯದ ಸವೆತದಿಂದಾಗಿ ತೈಲದ ಬೆಲೆಯೂ ಹೆಚ್ಚಿದರೆ, ಜನ ಸಾಮಾನ್ಯ ವರ್ಗಗಳ ಪಾಲಿಗೆ ಕಷ್ಟದ ಕಾಲವನ್ನು ಎದುರಿಸುವುದು ವಿಪರೀತ ತ್ರಾಸದ ವಿಷಯವಾಗಬಹುದು.
ನಿಜ. ರಿಸರ್ವ್ ಬ್ಯಾಂಕಿನ ಮಂಗಳವಾರದ ಹಣ ನೀತಿಯಿಂದ ವಾಣಿಜ್ಯೋದ್ಯಮ ವಲಯದಲ್ಲಿ ಮಂಕು ಕವಿಯುವುದನ್ನು ಧಾರಾಳವಾಗಿ ಊಹಿಸಬಹುದು. ಅದರ ಪರಿಣಾಮ ಆರ್ಥಿಕ ವ್ಯವಸ್ಥೆಯ ಎಲ್ಲ ವಿಭಾಗಗಳ ಮೇಲೂ ಆಗುತ್ತದೆ. ಸರ್ಕಾರದ ದೃಷ್ಟಿಯಲ್ಲಿ ರಿಸರ್ವ್ ಬ್ಯಾಂಕಿನ ನೀತಿ ಸರಿ ಇಲ್ಲ ಎನಿಸಿದ್ದರೂ, ಸರ್ಕಾರ ಈಗ ಕೈ ಕಟ್ಟಿ ಕೂಡುವಂತಿಲ್ಲ. ಏನಾದರೂ ಮಾಡಲೇ ಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement