ತಪ್ಪಾಯ್ತು ತಿದ್ಕೋತೀವಿ
ರಾಮನಗರ ಬಾಳೆಕಟ್ಟೆಯಿಂದ ಮಾಗಡಿ ಶ್ರೀನಿವಾಸ್ ಅವರು ಬರೆಯುತ್ತಾರೆ- 'ಜು.29ರಂದು ನಾನು ಗುರುತಿಸಿದ ಕೆಲವು ತಪ್ಪುಗಳನ್ನು ತಮ್ಮ ಗಮನಕ್ಕೆ ಸರಲು ಇಚ್ಚಿಸುತ್ತಿದ್ದೇನೆ.'
'ಮುಖಪುಟದ 'ಜೈನ ವಿಗ್ರಹ ಕಳವು' ಶೀರ್ಷಿಕೆಯಲ್ಲಿ 'ಇನ್ನೆರಡು ದಿನದಲ್ಲಿ' (15ನೇ ಸಾಲು) ಮತ್ತು 9ನೇ ಪುಟದ 'ಕನಿಷ್ಠ 4 ವರ್ಷಗಳು ಬೇಕು' ಎಂಬ ಉಪಶೀರ್ಷಿಕೆಯ 14ನೇ ಸಾಲಿನಲ್ಲಿ '4200 ಹಳ್ಳಿಗಳು ಸಂಪರ್ಕ ಕಳೆದುಕೊಂಡಿದೆ' ಎಂಬ ಪದಗಳ ಬಳಕೆಯಾಗಿದೆ. ಇಲ್ಲಿ 'ಇನ್ನೆರಡು ದಿನಗಳಲ್ಲಿ' ಹಾಗೂ '4200 ಹಳ್ಳಿಗಳು ಸಂಪರ್ಕ ಕಳೆದುಕೊಂಡಿವೆ' ಎಂಬ ಬಹುವಚನ ರೂಪ ಸಾಧುವಲ್ಲವೇ?'
"ಕನಿಷ್ಠ 4 ವರ್ಷಗಳೇ ಬೇಕು' ಎಂಬ ಶೀರ್ಷಿಕೆಯ ಸುದ್ದಿಯಲ್ಲಿಯೇ 'ದುಸಾಧ್ಯ' ಎಂಬ ಪದಪ್ರಯೋಗವಾಗಿದೆ. 'ಅಸಾಧ್ಯ' ಎಂಬುದು ಸರಿಯಾದ ರೂಪ. (ಸಾಧ್ಯ-ಅಸಾಧ್ಯ) 'ದುಸಾಧ್ಯ' ಯಾವ ಪದ?'
'ಇನ್ನು ತಮ್ಮ ಪತ್ರಿಕೆ ಸೇರಿದಂತೆ ಎಲ್ಲಾ ಪತ್ರಿಕೆಗಳು : ಈ ಚಿಹ್ನೆಯನ್ನು ಶೀರ್ಷಿಕೆಗಳಲ್ಲಿ ಬಳಸುತ್ತಿವೆ. ಉದಾ: 'ವಾಂತಿಭೇದಿ: ಮಹಿಳೆ ಸಾವು' ಇದು ಕೇವಲ ಒಂದು ಪದದ ವಿವರಣೆ ನೀಡಲು ಅಥವಾ ಒಂದು ವಿಷಯದ ವಿವರಣೆಯ ಸಮಯದಲ್ಲಿ ಬಳಸುವುದು ಸೂಕ್ತವಲ್ಲವೇ? ಇಲ್ಲಿ ಅಲ್ಪವಿರಾಮ ಇದ್ದರೆ ಚೆಂದವಲ್ಲವೇ?' ಎಂದಿದ್ದಾರೆ.
'ಎರಡು ದಿನದಲ್ಲಿ ಬಂದುಬಿಡುತ್ತೆ', '10 ನಿಮಿಷದಲ್ಲಿ ಬಂದೆ' ಎಂಬಲ್ಲಿ ಬಹುವಚನ ಇದೆಯೇ? ಇಲ್ಲ. ಇದು ಸಾಮಾನ್ಯವಾಗಿ ನಾವು ಬಳಸುವ ಪದಗಳು. ಅದೇ ರೀತಿ 'ಎರಡು ದಿನದಲ್ಲಿ' ಎಂದು ಬಳಸಲಾಗಿದೆ. ಬಹುವಚನ ಇದ್ದರೆ ಸರಿ. ಇಲ್ಲವಾದಲ್ಲಿ ನಷ್ಟವೇನೂ ಇಲ್ಲ. ಅಪಾರ್ಥವಂತೂ ವ್ಯಕ್ತವಾಗುವುದಿಲ್ಲ.
'ಅಸಾಧ್ಯ' ಎಂಬ ಪದವಿದೆ ಎಂಬುದು ಗೊತ್ತು. ಆದರೆ ಅದು ಅಸಾಧ್ಯ ಎಂದು ಬರೆಯಲು ಹೋಗಿ ದುಸಾಧ್ಯ ಎಂದು ಬರೆದಿರುವುದಲ್ಲ. ಬದಲಾಗಿ 'ದುಸ್ಸಾಧ್ಯ' ಎಂದು ಬರೆಯಲು ಹೋಗಿ ತಪ್ಪಿದ್ದಾರೆ. ಅಸಾಧ್ಯ ಎಂದರೆ ಅದು ಸಾಧ್ಯವೇ ಇಲ್ಲ ಎಂದಾಯಿತು. ಆದರೆ ದುಸ್ಸಾಧ್ಯ ಎಂದರೆ ಕಷ್ಟ ಸಾಧ್ಯ ಎಂದರ್ಥ. ಅಂದರೆ ಸಾಧ್ಯವಿದೆ ಆದರೆ ತುಂಬಾ ಶ್ರಮಪಡಬೇಕಾಗುತ್ತದೆ ಎಂದು.
ಅವರು ಹೇಳಿರುವಂತೆ ವಿವರಣಾ ಚಿಹ್ನೆ ':' ಬಳಸುವುದರಲ್ಲಿ ತಪ್ಪೇನಿಲ್ಲ. ಶೀರ್ಷಿಕೆಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ವಿಷಯ ಮತ್ತು ಅದರಿಂದಾದ ಪರಿಣಾಮವನ್ನು ಬೇರ್ಪಡಿಸುವ ಸಂದರ್ಭಗಳಲ್ಲಿ ಈ ಚಿಹ್ನೆಯನ್ನು ಬಳಸಲಾಗುತ್ತದೆ. ಇದರಲ್ಲಿ ಯಾವ ತಪ್ಪೂ ಕಾಣುತ್ತಿಲ್ಲ.
ಓದುಗರು ತಪ್ಪುಗಳ ಬಗ್ಗೆ ಬರೆಯುವಾಗ ಓದುಗರಿಗೆ ಮತ್ತು ಪತ್ರಿಕೆಗೆ ಸಹಾಯವಾಗುವಂತಹ ತಿದ್ದುಪಡಿಗಳಿದ್ದರೆ ಉತ್ತಮ. ಅದರಿಂದ ಎಲ್ಲರಿಗೂ ಪ್ರಯೋಜನವಾಗುತ್ತದೆ.
ಮೈಸೂರಿನ ಚಾಮರಾಜಪುರಂನಿಂದ ಕೊ.ಸು. ನರಸಿಂಹಮೂರ್ತಿ ಅವರು ಬರೆಯುತ್ತಾರೆ- 'ಜು.29ರ ಮೈಸೂರು ಆವೃತ್ತಿಯಲ್ಲಿ (ಪುಟ 4) 'ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಮೃಗಾಲಯ ಲಭ್ಯ' ಎನ್ನುವ ಶೀರ್ಷಿಕೆಯಲ್ಲಿ ಇತ್ತೀಚೆಗೆ ಜನಿಸಿದ ನಾಲ್ಕೂ ಮರಿಗಳನ್ನು ಸಾರ್ವಜನಿಕರಿಗೆ ವೀಕ್ಷಿಸಲು ಅನುವುಮಾಡಿಕೊಟ್ಟ ಸುದ್ದಿ ಪ್ರಕಟವಾಗಿದೆ.'
'ಶೀರ್ಷಿಕೆ ತಪ್ಪಾಗಿದೆ ಮೃಗಾಲಯ ಎಂದೂ ಸಾರ್ವಜನಿಕ ವೀಕ್ಷಣೆಗೆ ಮುಚ್ಚಿರಲಿಲ್ಲ. ಆದರೆ ಪತ್ರಿಕೆಯ ಶೀರ್ಷಿಕೆಯಿಂದ ಮೃಗಾಲಯ ಮುಚ್ಚಿತ್ತೇನೋ ಎಂಬ ಅನುಮಾನ ಹುಟ್ಟುಹಾಕುವಂತಿದೆ' ಎಂದಿದ್ದಾರೆ.
-ವಿಶ್ವೇಶ್ವರ ಭಟ್