ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಿದ್ದರಾಮಯ್ಯ ನಿರಾಳ

Vishwanath S
Updated On : 31 Jul 2013, 10:29 am

ರಾಜ್ಯ ವಿಧಾನ ಮಂಡಲದ ಉಭಯ ಸದನಗಳೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ರಾಜ್ಯದ ವಿಮರ್ಶಿತ ಬಜೆಟ್‌ಗೆ ತಮ್ಮ ಅಂಗೀಕಾರ ಮುದ್ರೆಯನ್ನು ಒಪ್ಪಿದ ಅನಂತರ ನೂತನ ಸರ್ಕಾರಕ್ಕೆ ಅಬ್ಯುದಯ ಕೆಲಸಗಳಿಗೆ ಹಣ ಮಂಜೂರು ಮಾಡುವುದು ನಿರಾಳವಾಗಿದೆ. ನಿಜ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಂಡಿಸಿದ್ದ ಬಜೆಟ್ಟನ್ನು ಸಿದ್ದರಾಮಯ್ಯ ಅವರು ಸಾರಾಸಗಟಾಗಿ ಒಪ್ಪಿಲ್ಲ. ಆದರೆ ಇಡೀ ಬಜೆಟ್ಟನ್ನು ತಿರಸ್ಕರಿಸುವ ಸಾಹಸಕ್ಕೂ ಕೈ ಹಾಕಿಲ್ಲ, ಅದು ಜನತಾಂತ್ರಿಕ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ಹಿಂದೆ, ಈಗ ಅವಧಿ ಪೂರೈಸಿರುವ ವಿಧಾನಮಂಡಲ ಅಂಗೀಕರಿಸಿದ್ದ ಬಜೆಟ್‌ಗಿಂತ, ಸಿದ್ದರಾಮಯ್ಯ ಅವರ ಬಜೆಟ್ ಗಾತ್ರದಲ್ಲಿ ಸ್ವಲ್ಪ ದೊಡ್ಡದೇ. ಆದರೆ ಅದು ಸರ್ಕಾರದ ಉದ್ದೇಶವನ್ನಷ್ಟೇ ಪ್ರತಿಬಿಂಬಿಸುವುದು. ಬಜೆಟ್‌ನಲ್ಲಿರುವ ಎಲ್ಲ ಕೆಲಸಗಳನ್ನೂ ಒಂದೇ ವರ್ಷದಲ್ಲಿ ಮುಗಿಸುವುದು ಅಸಾಧ್ಯ. ಆದರೆ ನಿಧಾನವಾಗಿಯಾದರೂ ಈಗ ಮಂಜೂರಾಗಿರುವ ಕೆಲಸ ಮುಗಿಯುತ್ತದೆ ಎನ್ನುವ ಭರವಸೆಯನ್ನು ಇಟ್ಟುಕೊಳ್ಳಬಹುದು. ಮಂಗಳವಾರ ವಿಧಾನ ಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿದ್ದರಾಮಯ್ಯ ಸರ್ಕಾರದ ಅರ್ಧಕ್ಕಿಂತ ಹೆಚ್ಚು ಭಾರವನ್ನು ತಮ್ಮ ಹೆಗಲ ಮೇಲೇ ಹೊತ್ತುಕೊಂಡಿರುವುದರ ಪರಿಣಾಮದ ಒತ್ತಡದಿಂದ ಅಭಿವೃದ್ಧಿ, ನೂತನ ಕಾರ್ಯಕ್ರಮಗಳು ಹಾಗೂ ರಾಜ್ಯಕ್ಕೆ ಐದು ವರ್ಷಗಳ ಭವಿಷ್ಯದ ಕನಸನ್ನು ಕಟ್ಟುವ ಕೆಲಸವನ್ನೂ ಮಾಡಲಿಲ್ಲ. ಇದು ಅವರ ಚೊಚ್ಚಲ ಬಜೆಟ್.
ಈಗಾಗಲೇ ವಿತ್ತೀಯ ವರ್ಷದ ಮೂರರಲ್ಲಿ ಒಂದು ಭಾಗ ಕಳೆದುಹೋಗಿದೆ. ಚುನಾವಣೆ ಹಾಗೂ ಇತರ ಕಾರಣಗಳಿಂದ ಆರಂಭದಲ್ಲಿ ಕೆಲಸ ನಿಧಾನವಾಗಿದೆ. ಇನ್ನುಳಿದಿರುವ ದಿನಗಳಲ್ಲಿ ಸರ್ಕಾರದ ಕೆಲಸವನ್ನು ಚುರುಕುಗೊಳಿಸಿದರೆ ಮಾತ್ರ ಬಜೆಟ್ ಸಾರ್ಥಕ ಎನಿಸಿಕೊಂಡೀತು. ಅದಕ್ಕೆ ಅರ್ಹವಾಗುವಂತೆ ಸಿದ್ದರಾಮಯ್ಯ ಈಗ ಕೆಲಸ ಮಾಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement