ತಪ್ಪಾಯ್ತು ತಿದ್ಕೋತೀವಿ
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಮೇ 28ರ 'ಬೈಟು ಕಾಫಿ'ಯಲ್ಲಿ ನೊಣಬಿದ್ದಂತೆ ಭಾಸವಾಯಿತು...
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಮೇ 28ರ 'ಬೈಟು ಕಾಫಿ'ಯಲ್ಲಿ ನೊಣಬಿದ್ದಂತೆ ಭಾಸವಾಯಿತು. (ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನವಲ್ಲ) ಹೆಗಡೆ ಸ್ಪೆಷಲ್ ಲೇಖನದಲ್ಲಿರುವ ಹೆಗಡೆಯವರು ತಮ್ಮ ಹೆಸರನ್ನು 'ಶರಶ್ಚಂದ್ರ' ಎಂದು ಬರೆದುಕೊಳ್ಳುತ್ತಾರೋ ಗೊತ್ತಿಲ್ಲ. ಹೀಗೆ ಬರೆಯುವುದು ತಪ್ಪು. ಪದರಚನೆಯ ಮೂಲದ ಪರಿಚಯವಿಲ್ಲದೆ ಈ ತಪ್ಪು ಪ್ರಯೋಗ ರೂಢಿಗತವಾಗಿದೆ.'
'ಶರತ್ಚಂದ್ರಶರಚ್ಚಂದ್ರ ಎಂದಾಗಬೇಕು. ಸಂಸ್ಕೃತದ ಶ್ಚುತ್ವ ಸಂಧಿ ನಿಯಮದ ಪ್ರಕಾರ 'ತ' ಕಾರದ ಮುಂದೆ 'ಚ'ಕಾರ ಬಂದಾಗ 'ತ'ಕಾರವು 'ಚ'ಕಾರವಾಗಿ ಪರಿಣಾಮ ಹೊಂದುತ್ತದೆ. ಹಿಂದೊಮ್ಮೆ 'ಸುಭಾಶ್ಚಂದ್ರ' ಪದವನ್ನು 'ಸುಭಾಷ್ಚಂದ್ರ' ಎಂದು ತಪ್ಪಾಗಿ ಬರೆವ ಕುರಿತು ಶುದ್ಧರೂಪ 'ಸುಭಾಶ್ಚಂದ್ರ' ಎಂದು ಸಕಾರಣವಾಗಿ ಪ್ರಸ್ತಾಪಿಸಿದ್ದೆ. ಈಗ 'ಕನ್ನಡಪ್ರಭ' ಪತ್ರಿಕೆಯಲ್ಲಿ ಸುಭಾಶ್ಚಂದ್ರ ಸರಿಯಾಗಿ ಬರುತ್ತಿದ್ದಾರೆ. 'ಶರಃಚಂದ್ರ' ಎಂಬ ಭ್ರಮೆಯಿಂದ 'ಶರಶ್ಚಂದ್ರ' ಎಂದು ಭ್ರಮಿಸಿ ಈ ರೀತಿ ತಪ್ಪು ನುಸುಳುವ ಸಾಧ್ಯತೆಯಿದೆ.'
'ಆದರೆ ಇಲ್ಲಿರುವುದು 'ಶರ' ಅಲ್ಲ. ಶರತ್ (ಶರತ್ಕಾಲ) ಶರತ್ಕಾಲದ ತುಂಬು ಬೆಳಕನ್ನು ನೀಡುವ ಚಂದಿರ ಎಂಬರ್ಥದಲ್ಲಿ 'ಶರಶ್ಚಂದ್ರ' ಎಂಬ ಪದ ಬಳಕೆಯಲ್ಲಿದೆ. ಕಸಾಪ ಸಂಕ್ಷಿಪ್ತ ಕನ್ನಡ-ಕನ್ನಡ ನಿಘಂಟಿನಲ್ಲಿ ಶರಶ್ಚಂದ್ರ ಪದವನ್ನು ಕಾಣಬಹುದು.'
'ಇದೇ ದಿನದ ಪತ್ರಿಕೆಯ 'ವಿಚಾರ ತೋರಣ' ಪುಟದ 'ಆಗೀಗ' ಲೇಖನದಲ್ಲಿ ಲೇಖಕರು ಮೊದಲ ವಾಕ್ಯದಲ್ಲಿ 'ಸದಾವಕಾಶ' ಎಂಬ ಪದಬಳಕೆ ಮಾಡಿದ್ದಾರೆ. ಇದು 'ಸದವಕಾಶ' ಎಂದಾಗಬೇಕು. ಸತ್ಅವಕಾಶ ಸದವಕಾಶ. ಒಳ್ಳೆಯ ಅವಕಾಶ ಎಂದರ್ಥ' ಎಂದಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರದಿಂದ ಪುಟ್ಟಸೋಮನಹಳ್ಳಿ ಗಾನಾ ಸುಮಾ ಅವರು ಬರೆಯುತ್ತಾರೆ- 'ಮೇ 24ರಂದು ಪತ್ರಿಕೆ ಸಿದ್ಧಪಡಿಸಿದವರು ದಯವಿಟ್ಟು ಪತ್ರಿಕೆಯನ್ನು ಮತ್ತೊಮ್ಮೆ ಓದಿದರೆ ಉತ್ತಮ. ತಪ್ಪುಗಳ ಸರಮಾಲೆಯನ್ನೇ ಹೊತ್ತುತಂದ ಅಂದಿನ ಪತ್ರಿಕೆ ನೋಡಿ ಪತ್ರ ಬರೆಯದೇ ವಿಧಿಯಿರಲಿಲ್ಲ.'
'ಮಂಡ್ಯ ಜಿಲ್ಲೆ ವರದಿ ಪುಟದಲ್ಲಿ 'ಗುರುಪ್ರಸಾದ್ರಿಂದ ಸ್ವಾರ್ಥ ರಾಜಕಾರಣ' ಎಂಬ ತದ್ರೂಪ ವರದಿ 8ನೇ ಪುಟದಲ್ಲಿ ಪ್ರಕಟ. 4ನೇ ಪುಟದಲ್ಲಿ 'ಖಾತಿ ಸಮಗ್ರ ತನಿಖೆಗೆ ಚಿಂತನೆ: ಎಚ್ಕೆ' ಎಂದಿದೆ. ಉದ್ಯೋಗ ಖಾತ್ರಿ ಎಂಬುದನ್ನು 'ಖಾತಿ' ಮಾಡಿದ್ದೀರಿ. ಪುಟ 8ರಲ್ಲಿ ಮಂಡ್ಯ ಜಿಲ್ಲೆ ಪುಟದಲ್ಲಿ ಅಂಬರೀಶ್ ಅವರ ಬಗ್ಗೆ ಬರೆಯುತ್ತ, ತಲೆಬರಹದಲ್ಲೇ 'ಮಂತ್ರಿ' ಎನ್ನುವ ಬದಲು 'ಮಂತಿ' ಎಂದು ಪ್ರಕಟವಾಗಿದೆ.'
'ಪುಟ 12ರ ಕ್ರೀಡಾ ವರದಿಯಲ್ಲಿ ಒಂದೇ ಪುಟದಲ್ಲಿ ಎರಡೂ ಕಡೆ 'ನಟರ ವಿಚಾರಣೆ ಸದ್ಯಕ್ಕಿಲ್ಲ' ಎಂಬ ತಲೆಬರಹದ ಸುದ್ದಿ ಪ್ರಕಟಗೊಂಡಿರುವುದು ಪತ್ರಿಕೆ ವಿನ್ಯಾಸಗೊಳಿಸುವವರ ಆಜಾಗರೂಕತೆಗೆ ಹಿಡಿದ ಕನ್ನಡಿ ಎಂದರೆ ತಪ್ಪಾಗಲಿಕ್ಕಿಲ್ಲ.'
'ಬಹುತೇಕ ಪತ್ರಿಕೆಗಳು ರಾತ್ರಿ ನಡೆಯುವ ಕ್ರೀಡೆಗಳ ಸ್ಕೋರ್ ವಿವರವನ್ನು ಗ್ರಾಮೀಣ ಓದುಗರಿಗೆ ಅಪೂರ್ಣವಾಗಿಯೇ ಪ್ರಕಟಿಸುತ್ತವೆ. ನಗರ ಓದುಗರಿಗೆ ಸಂಪೂರ್ಣ ವಿವರ ಪ್ರಕಟಿಸಿ ಇಬ್ಬಗೆ ನೀತಿ ಅನುಸರಿಸುವುದು ಅಕ್ಷಮ್ಯ. ಇದಕ್ಕೆ ಮುದ್ರಣ ತಡವಾಗಿ ಪತ್ರಿಕೆ ವಿತರಣೆಗೆ ತಡವಾಗಬಹುದು ಎಂಬ ಸಮಜಾಯಿಷಿ ನೀಡಿದರೂ ನಗರವಾಸಿಗಳಿಗಿಂತ ಗ್ರಾಮೀಣರಿಗೆ ಕ್ರೀಡೆಯ ಸಂಪೂರ್ಣ ವರದಿಯ ನಿರೀಕ್ಷೆ ಇರುತ್ತದೆ. ವಿದ್ಯುತ್ ಅಭಾವದಿಂದ ಪಂದ್ಯ ವೀಕ್ಷಣೆ ಅಸಾಧ್ಯವಾಗುತ್ತದೆ. ಕೆಲವು ಪತ್ರಿಕೆಗಳು ಸಂಪೂರ್ಣ ವರದಿ ಪ್ರಕಟಿಸಿ, ವಿವರಣೆ ಸಾಧ್ಯವಾಗಿರುವಾಗ ನಮ್ಮ ಪತ್ರಿಕೆ ಏಕೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಬಳಿಯುತ್ತಿದೆ?' ಎಂದು ಪ್ರಶ್ನಿಸಿದ್ದಾರೆ.
-ವಿಶ್ವೇಶ್ವರ ಭಟ್