ಕರ್ನಾಟಕ ಅಸ್ಮಿತೆಯ ಮರುಸ್ಥಾಪನೆ: ನೂತನ ಸರ್ಕಾರದ ಪ್ರತಿಜ್ಞೆ
ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶ ಪ್ರಕಟವಾಗಿ ಜನರಿಂದ ಸ್ಪಷ್ಟವಾದ ಆದೇಶವನ್ನು ಪಡೆದು ಸರ್ಕಾರದ ಸೂತ್ರಗಳನ್ನು ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆದ್ಯತೆಗಳ ಪಟ್ಟಿಯಲ್ಲಿ ಮೊದಲ ಎರಡು ವಿಷಯಗಳು ಯಾವುವು?
ಆ ಪ್ರಶ್ನೆಗೆ ಸೂಕ್ತ ಉತ್ತರ ಹುಡುಕಲು ಹೊಸ ಸರ್ಕಾರದ ಮೊಟ್ಟ ಮೊದಲ ಅಧಿಕೃತ ದಾಖಲೆ ಎಂದರೆ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ.
ಸಾಮಾನ್ಯವಾಗಿ ರಾಜ್ಯಪಾಲರ ಭಾಷಣದಲ್ಲಿ, ಹಿಂದಿನ ವರ್ಷದ ಆಗು- ಹೋಗುಗಳು, ಮುಂದಿರುವ ವರ್ಷದ ಗೊತ್ತುಗುರಿಗಳ ಪ್ರಸ್ತಾಪವಾಗುವುದುಂಟು. ಆದರೆ ಈಗಿನ ಸರ್ಕಾರಕ್ಕೆ ಕಳೆದುಹೋದ ವರ್ಷದ ಚಿಂತೆ, ಅದನ್ನು ಕುರಿತ ಚಿಂತನೆ ಇಲ್ಲ. ಮುಂದಿನ ವರ್ಷದ ಕಾರ್ಯಸೂಚಿಯ ನಿಖರ ಸ್ವರೂಪದ ಪ್ರಕಟಣೆಗೆ ಜುಲೈನಲ್ಲಿ ಪ್ರಕಟವಾಗಲಿರುವ ಹೊಸ ಬಜೆಟ್ಗೆ ಕಾಯಬೇಕು. ಹೀಗಾಗಿ ರಾಜ್ಯಪಾಲರ ಭಾಷಣದಲ್ಲಿ ಹೊಸದಾಗಿ ಹೇಳಬಹುದಾದರೂ ಏನು? ಸರ್ಕಾರದ ಉದ್ದೇಶ ಹಾಗೂ ಪ್ರತಿಜ್ಞೆಗಳ ಮಾಲೆಗಳನ್ನೇ ಮತ್ತೆ ಮತ್ತೆ ಪ್ರದರ್ಶಿಸಬೇಕು. ಅದು ಅನಿವಾರ್ಯ.
ಆ ಕಾರಣದಿಂದಲೇ ವಿರೋಧ ಪಕ್ಷಗಳ ನಾಯಕರು ರಾಜ್ಯಪಾಲರ ಭಾಷಣದಲ್ಲಿ ಹೊಸದೇನೂ ಇರಲಿಲ್ಲವೆಂದು ಟೀಕಿಸಿ ತೃಪ್ತಿಪಟ್ಟುಕೊಳ್ಳಬಹುದು. ರಾಜ್ಯಪಾಲರ ಭಾಷಣದ ಆರಂಭದಲ್ಲೇ ಜನರ ಸ್ಪಷ್ಟ ಆದೇಶದ ಪ್ರಸ್ತಾಪವಿದೆ. ಈಗಿನ ವಿಧಾನಸಭೆ ಎಲ್ಲ ಜನರ ಪ್ರಾತಿನಿಧಿಕ ಸಭೆ ಎನ್ನುವ ವರ್ಣನೆ ಇದೆ. ಇಂತಹ ಭಾಷೆ ನಿಜವಾಗಿಯೂ ಬಳಸಿ, ಬಳಸಿ ಹಳೆಯದಾಗಿರುವ ಪದಗಳ ಜೋಡಣೆ ಅಷ್ಟೇ. ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.
ಕರ್ನಾಟಕ ಅಸ್ಮಿತೆಯ ಮರುಸ್ಥಾಪನೆ, ಸೌಹಾರ್ದಯುತ ಬಾಳ್ವೆಯ ಸಹಜ ಜೀವನ ಕ್ರಮದಲ್ಲಿ ಆ ಲಕ್ಷಣವನ್ನೇ ಕಳೆದುಕೊಳ್ಳುತ್ತಿರುವ ಅಳುಕಿನ ಪ್ರಸ್ತಾಪವೂ ಇದೆ. ಸ್ಪಷ್ಟವಾಗಿ ಇದು ನೈತಿಕ ಪೊಲೀಸ್ ಪಡೆಗಳ ಮನೋಧರ್ಮವನ್ನು ಸಹಿಸುವುದಿಲ್ಲ ಎನ್ನುವ ಎಚ್ಚರಿಕೆ. ಈ ಎಚ್ಚರಿಕೆಯ ಜತೆಯಲ್ಲೇ ಭಾಷಣದಲ್ಲಿ ಪ್ರಸ್ತಾಪವಾದ ಇನ್ನೊಂದು ವಿಷಯವೆಂದರೆ ಕಳೆದ ಕೆಲವು ವರ್ಷಗಳಲ್ಲಿ ಬಯಲಿಗೆ ಬಂದ ಭ್ರಷ್ಟಾಚಾರದ ಹಗರಣಗಳ ಹಿನ್ನಲೆಯಲ್ಲಿ ರಾಜ್ಯ ತಲೆ ತಗ್ಗಿಸಬೇಕಾಗಿದೆ ಎನ್ನುವ ನೋವು ಕಂಡುಬಂದಿರುವುದು. ಇದರಿಂದ ಜನ ರಾಜಕೀಯ ಪಕ್ಷಗಳ ಮೇಲೆ ವಿಶ್ವಾಸವನ್ನು ಇಡದೇ ತಿರಸ್ಕಾರ ಭಾವನೆಯನ್ನು ಪ್ರಕಟಿಸಿರುವುದು ಜನತಂತ್ರಕ್ಕೆ ಮಾರಕ ಎನ್ನುವ ಮಾತೂ ಇದೆ.
ಸ್ವಚ್ಛ ವಚನ, ಜನತೆಗೆ ಹೊಣೆಗಾರಿಕೆಯ ಪ್ರದರ್ಶನ, ದಕ್ಷತೆ- ಪಾರದರ್ಶಕತೆಯ ಪ್ರಸ್ತಾಪ. ಇವೆಲ್ಲವನ್ನೂ ಇತ್ತೀಚಿನ ಚುನಾವಣೆಯಲ್ಲಿ ವಿಜಯಗಳಿಸಿದ ಪಕ್ಷದಿಂದ ನಿರೀಕ್ಷಿಸಬಹುದಾದ ಮಾತುಗಳೇ... ಆದರೆ ಅಂತಹ ವಾತಾವರಣ ಮೂಡುವುದಕ್ಕೆ ನೂತನ ಸರ್ಕಾರ ರೂಪಿಸಲಿರುವ ಸಾಂಸ್ಥಿಕ, ಕಾಯಿದೆ ಬದ್ಧ ವ್ಯವಸ್ಥೆಯ ಸ್ವರೂಪದ ಇಣುಕು ನೋಟವೂ ಮುಂದಿನ ಪುಟಗಳಲ್ಲಿ ಕಾಣುವುದು ಕಡಿಮೆ.
ಸಾಮಾಜಿಕ ನ್ಯಾಯ ವಿತರಣೆಯ ನೀತಿಗೆ ಬದ್ಧವಾದ, ಎಲ್ಲ ಜನವರ್ಗಗಳಿಗೂ ಎಲ್ಲ ಕ್ಷೇತ್ರಗಳಲ್ಲೂ ಅವರವರ ಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ ನೀಡಿಕೆಯ ಸಿದ್ಧಾಂತವನ್ನೇ ರಾಜಕೀಯ- ಸಾಮಾಜಿಕ ನ್ಯಾಯವೆಂದು ಕರೆದು ಅಂತಹ ನ್ಯಾಯ ನೀಡಿಕೆಯಲ್ಲಿ ಯಾವುದೇ ರೀತಿಯ ರಾಜಿ ಇಲ್ಲ ಎನ್ನುವ ಪ್ರತಿಜ್ಞೆ. ಉಳಿದಂತೆ ರಾಜ್ಯಪಾಲರ ಭಾಷಣದಲ್ಲಿ ನೂತನ ಸರ್ಕಾರದ ಉದ್ದೇಶಗಳ, ಸಾಮಾಜಿಕ ನ್ಯಾಯ ವಿತರಣೆಗೆ ಸ್ಪಷ್ಟವಾದ ಚೌಕಟ್ಟನ್ನು ರೂಪಿಸುವ ಪ್ರತಿಜ್ಞೆಗಳ ಉಲ್ಲೇಖವಿದೆ.
ಹೊಸ ಜವಳಿ ನೀತಿ, ಜಾಗತಿಕ ಬಂಡವಾಳ ಹೂಡಿಕೆಯ ಮೇಳ, ಸರ್ಕಾರಿ- ಖಾಸಗಿ ಸಹಭಾಗಿತ್ವದ ವಲಯಗಳಲ್ಲಿ ಉದ್ಯಮಗಳ, ಸೌಲಭ್ಯಗಳನ್ನು ಒದಗಿಸುವ ನೀತಿ, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಹಿಸದೇ ಇರುವುದು, ಧಾರ್ಮಿಕ- ಮತೀಯ ಅಲ್ಪ ಸಂಖ್ಯಾತರಿಗೆ ರಂಗನಾಥ ಮಿಶ್ರ, ನ್ಯಾಯಮೂರ್ತಿ ಸಾಚಾರ್ ಅವರ ಶಿಫಾರ್ಸುಗಳಲ್ಲಿ ಸಾಧ್ಯವಿರುವಷ್ಟನ್ನೂ ಜಾರಿಗೆ ತರುವುದು, ಮಹಿಳಾ ಅಭಿವೃದ್ಧಿ ಯೋಜನೆಗಳ ಪ್ರಸ್ತಾಪ ಎಲ್ಲವೂ ಹೇರಳವಾಗಿವೆ.
ಬಡವರು, ಕಾರ್ಮಿಕರು, ಹಿರಿಯ ನಾಗರಿಕರಿಗೆ ವಿಶೇಷ ರಕ್ಷಣೆ ಹಾಗೂ ಸೌಲಭ್ಯಗಳ ನೀಡಿಕೆಯ ಭರವಸೆಯ ಜತೆಯಲ್ಲೇ, ಗುಡಿಸಲು ಮುಕ್ತ, ಕೊಳಗೇರಿ ಮುಕ್ತ ರಾಜ್ಯ ನಿರ್ಮಾಣದ ಉದ್ದೇಶವೂ ಪ್ರಕಟವಾಗಿದೆ. ಕೃಷಿ ಉತ್ಪನ್ನಗಳ ಬೆಲೆ ಆಯೋಗದ ಹಳೆಯ ಪ್ರಸ್ತಾಪ ಮತ್ತೆ ಕಾಣಿಸಿಕೊಂಡಿದೆ. ಪಂಚಾಯಿತಿ ರಾಜ್ಯ ಸಂಸ್ಥೆಗಳನ್ನು ಬಲಪಡಿಸುವ ಕ್ರಮಗಳಲ್ಲಿ, ಕರ್ತವ್ಯ ಲೋಪ ಹಾಗೂ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರನ್ನು ಅನರ್ಹರನ್ನಾಗಿ ಮಾಡುವುದಕ್ಕೆ ಒಂದು ವಿಶೇಷ ಕಾಯಿದೆಯ ರಚನೆಯ ಮಾತೂ ಇದೆ.
ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ, ವಿದ್ಯುತ್, ನೀರಾವರಿ ಯೋಜನೆಗಳಿಂದ ಹಿಡಿದು ವೈಯಕ್ತಿಕ ಶೌಚಾಲಯಗಳ ನಿರ್ಮಾಣದವರೆಗೂ ಹೆಚ್ಚು ಕಡಿಮೆ ಎಲ್ಲ ವಿಷಯಗಳಲ್ಲೂ ಒಂದಲ್ಲ ಒಂದು ರೀತಿಯ ಪ್ರಸ್ತಾಪ ಇದೆ.
ಸ್ವಚ್ಛ, ಸ್ಥಿರ, ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತದ ಭರವಸೆಯನ್ನೇನೋ ರಾಜ್ಯಪಾಲರು ಸರ್ಕಾರದ ಪರವಾಗಿ ವಿಧಾನ ಮಂಡಲದ ಮೂಲಕ ಜನತೆಗೆ ನೀಡಿದ್ದಾರೆ. ಆದರೆ ಅಂತಹ ವ್ಯವಸ್ಥೆಯನ್ನು ಜಾರಿಗೆ ತರಲು ಮಾಯಾದಂಡ ಯಾರಲ್ಲೂ ಇಲ್ಲ. ಆ ವ್ಯವಸ್ಥೆಯ ನಿಜ ಸ್ವರೂಪ ಜನತೆಯ ಕಣ್ಣಿಗೆ ಕಾಣುವಂತಿರಬೇಕು. ಅದಕ್ಕೆ ಮೇಲಿನ ಹಂತದಲ್ಲಿ ಉನ್ನತಾಧಿಕಾರವನ್ನು ಚಲಾಯಿಸುವವರು ಮಾದರಿಯನ್ನು ತೋರಿಸುವ ರೂಪದಲ್ಲಿ ವರ್ತಿಸಬೇಕು. ನಿಯಮಗಳಿಂದ ಅದು ಸಾಧ್ಯವಿಲ್ಲ. ಅದಕ್ಕೆ ಬೇರೆ ಸೂತ್ರವೇ ಬೇಕು.