ಕೆ.ಆರ್.ಎಸ್. ಹೂಳು ತೆಗೆಸಲಿ
ಬೆಂಗಳೂರು ನಗರ ಸೇರಿದಂತೆ ಹಲವು ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುವ ಮೂಲ, ಕೆಆರ್ಎಸ್ನ ಆಳ 124 ಅಡಿ ಎಂದಿದ್ದರೂ, ವಾಸ್ತವವಾಗಿ ಅದರಲ್ಲಿ ಹೂಳು ಸಾಕಷ್ಟು ಪ್ರಮಾಣದಲ್ಲಿರುವುದು ಸರ್ವವೇದ್ಯ. ಈಗ ಕೆಆರ್ಎಸ್ನ ನೀರಿನ ಪ್ರಮಾಣ ತೀವ್ರವಾಗಿ ಕಡಿಮೆಯಾಗಿ ಸಹಜವಾಗಿಯೇ ಆತಂಕ ಸೃಷ್ಟಿಸಿದೆ. ಮಳೆ ನೀರು ಪೋಲಾಗದಂತೆ, ಇದರಲ್ಲಿ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹವಾಗುವಂತೆ ಹೂಳು ತೆಗೆಯುವುದು ಅವಶ್ಯಕ.
ಬಹುಷಃ ಈ ಮಣ್ಣು , (ಅಗತ್ಯವಾದಲ್ಲಿ ಇತರ ನಿರ್ದಿಷ್ಟ ಪದಾರ್ಥಗಳನ್ನು ಮಿಶ್ರಣ ಮಾಡಿದ್ದಲ್ಲಿ) ಉತ್ತಮ ಗೊಬ್ಬರವಾಗಬಹುದೇನೋ? ಗೊಬ್ಬರವಾಗುವುದರಲ್ಲಿ ರೈತ ಬಾಂಧವರಿಗೆ ಉತ್ತಮ ಗುಣಮಟ್ಟದ ಗೊಬ್ಬರ ದೊರೆತಂತಾದೀತು. ಇಲ್ಲವಾದಲ್ಲಿ, ಇದನ್ನು ಸುಮಾರು 2 ಅಡಿ ಉದ್ದ, 2 ಅಡಿ ಅಗಲ, 2 ಅಡಿ ಎತ್ತರದ, ನೀರಿನಲ್ಲಿ ಕರಗದಂತಹ ಪದಾರ್ಥದಿಂದ ಮಾಡಿದ ಕಂಟೇನರ್ಗಳಲ್ಲಿ ತುಂಬಿ, ಇವುಗಳನ್ನು ಅತ್ಯವಶ್ಯಕವಾಗಿ ಬೇಕಾಗಿರುವ (ಸಮುದ್ರ ತೀರದಲ್ಲಿ ಅಥವಾ ದೊಡ್ಡ ಮೋರಿಗಳಿಗೆ) ತಡೆ ಗೋಡೆಗಳನ್ನಾಗಿ ಉಪಯೋಗಿಸಬಹುದೇನೋ? ಇದರಿಂದ ವೆಚ್ಚಗಳನ್ನು ತಗ್ಗಿಸಬಹುದು.
ಈ ಯೋಜನೆ ಸಾಧ್ಯವಾಗುವುದಾದಲ್ಲಿ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇರುವ ಸಾಕಷ್ಟು ಮಂದಿಗೆ, ಸಾಕಷ್ಟು ಉದ್ಯೋಗ ದೊರೆತಂತಾಗುವುದಿಲ್ಲವೇ? ಈ ಯೋಜನೆಗೆ ಸಾಕಷ್ಟು ಹಣ ವೆಚ್ಚವಾಗುವುದಾದರೂ, ಇಂತಹ ಆದರ್ಶಪ್ರಾಯ ಯೋಜನೆಗೆ ಸಾರ್ವಜನಿಕರು ಮನಃಪೂರ್ವಕವಾಗಿ ಸಹಕರಿಸುವರೆಂಬುದು ನನ್ನ ಬಲವಾದ ನಂಬಿಕೆ. ಒಟ್ಟಾರೆ ಈ ಹೂಳು ನಿರುಪಯುಕವೆಂದು ಅನಿಸದು. ಅದರ ಸದ್ಬಳಕೆ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಕ್ರಮಕೈಗೊಳ್ಳಬಹುದು. ಈ ಕಾರ್ಯಕ್ರಮ ಅನುಷ್ಠಾನನಾರ್ಹವೆನಿಸಿದಲ್ಲಿ, ಈಗಿನಿಂದಲೇ ಈ ಬಗ್ಗೆ ಕಾರ್ಯಪ್ರವೃತ್ತರಾದಲ್ಲಿ, ಮುಂದಿನ ವರ್ಷದ ಮುಂಗಾರಿನ ವೇಳೆಗಾದರೂ ಕೆಆರ್ಎಸ್ನಲ್ಲಿ ಗರಿಷ್ಠ ಪ್ರಮಾಣದ ನೀರಿನ ಸಂಗ್ರಹಣೆ ಸಾಧ್ಯವಾಗಬಹುದು.
- ಕಣ್ಣನ್, ಬನಶಂಕರಿ 3ನೇ ಹಂತ, ಬೆಂಗಳೂರು
ಡಾ. ಮ.ನ. ಜವರಯ್ಯನವರ ಶೈಲಿ!
'ಜವರಯ್ಯನವರ ಅರೆಬೆಂದ ವಿಚಾರಗಳು' ಎಂಬ ಶೀರ್ಷಿಕೆಯಲ್ಲಿ ದೊಡ್ಡಬಳ್ಳಾಪುರದ ಮು.ಅ. ಶ್ರೀರಂಗ ಅವರು 4.6.2013ರಂದು ಕ.ಪ್ರ.ದಲ್ಲಿ ಬರೆದ ಪತ್ರ ಮಾರ್ಮಿಕವಾಗಿದೆ. ಡಾ. ಮ.ನ. ಜವರಯ್ಯನವರು ಪುನರ್ಜನ್ಮದ ನಂಬಿಕೆಯನ್ನು ವೈದಿಕ ಧರ್ಮದ ಪುರೋಹಿತಶಾಹಿಯು ತನ್ನ ಜಾತಿ ಪದ್ಧತಿಯನ್ನು ಮುಂದುವರಿಸಲು ಕಂಡುಕೊಂಡಿರುವ ಸಮಾಜ ವಿರೋಧಿ ಧೋರಣೆ ಎಂದು ಆಪಾದಿಸಿರುವುದನ್ನು ಶ್ರೀರಂಗ ಅವರು ಆಕ್ಷೇಪಿಸಿದ್ದಾರೆ.
ಮು.ಅ. ಶ್ರೀರಂಗರವರು ತಲೆಕೆಡೆಸಿಕೊಳ್ಳಬೇಕಾಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. 'ವೈದಿಕ ಧರ್ಮ, ಪುರೋಹಿತಶಾಹಿ ಹಾಗೂ ಬ್ರಾಹ್ಮಣ' ... ಈ ಪದಗಳನ್ನು ಕಂಡರೆ ಮ.ನ. ಜವರಯ್ಯನವರಿಗೆ ಬಲು ಪ್ರೀತಿ! ಯಾವುದೇ ವಿಚಾರವಾಗಿ ತಾವು ಬರೆದ ಬರಹಗಳ ನಡುವೆ "ವೈದಿಕ ಧರ್ಮ... ಪುರೋಹಿತಶಾಹಿ...ಬ್ರಾಹ್ಮಣ..." ಎಂಬ ಪದಪುಂಜಗಳನ್ನು ಸೇರಿಸಿಬಿಡುತ್ತಾರೆ. ಇದು ಮ.ನ. ಜವರಯ್ಯನವರ ಬರಹದ ಶೈಲಿ! ಅಡುಗೆಗೆ ಕರಿಬೇವಿನ ಸೊಪ್ಪು ಹಾಕುವುದಿಲ್ಲವೇ? ಹಾಗೆ! ಊಟ ಮಾಡುವಾಗ ಕರಿಬೇವಿನ ಸೊಪ್ಪನ್ನು ತೆಗೆದು ಕೆಳಗಿಟ್ಟು ಊಟ ಮಾಡುವ ಹಾಗೆ ಮ.ನ. ಜವರಯ್ಯನವರ ಅಭಿಪ್ರಾಯವನ್ನು ಆಸ್ವಾದಿಸುವುದೊಳಿತು!
- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com