ತಪ್ಪಾಯ್ತು ತಿದ್ಕೋತೀವಿ
ಶಾಸಕರ ಹೆಸರು ಮತ್ತು ಚಿತ್ರ ಆಗಾಗ ಅದಲು-ಬದಲಾಗುತ್ತಿದೆ. ಎನ್.ಸಂಪಂಗಿ ಮತ್ತು ವೈ. ಸಂಪಂಗಿ ಇಬ್ಬರೂ ಶಾಸಕರಾಗಿದ್ದಾಗ ಈ ರೀತಿ ಆಗುತ್ತಿತ್ತು. ಅದರಲ್ಲಿ ಒಬ್ಬರು ಸೋತರು. ಇನ್ನೊಬ್ಬರು ಚುನಾವಣೆಗೇ ನಿಲ್ಲಲಿಲ್ಲ. ಆದರೂ ಮತ್ತೆ ಅದೇ ರೀತಿಯ ತಪ್ಪಾಗಿದೆ.
ಜೂ. 7ರಂದು 3ನೇ ಪುಟದಲ್ಲಿ ಬೆಂಗಳೂರಿನ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಹೇಳಿಕೆ ಪ್ರಕಟವಾಗಿತ್ತು. ಆದರೆ ಅವರ ಚಿತ್ರದ ಬದಲು ಮಾಜಿ ಶಾಸಕ ಎಂ. ಶ್ರೀನಿವಾಸ ಅವರ ಚಿತ್ರ ಪ್ರಕಟಿಸಲಾಗಿದೆ. ಇಬ್ಬರದ್ದೂ ಬೇರೆ ಬೇರೆ ಪಕ್ಷ. ಬೇರೆ ಹೆಸರು. ಎಂ. ಶ್ರೀನಿವಾಸ ಅವರು ಮಾಜಿ ಶಾಸಕರು ಬೇರೆ. ಹೀಗಿದ್ದೂ ಚಿತ್ರ ಅದಲು-ಬದಲಾಗಿದ್ದು ವಿಚಿತ್ರ.
ಹಾಸನ ವಿದ್ಯಾನಗರದ ಜಗದೀಶ್.ಸಿ. ಅವರು ಬರೆಯುತ್ತಾರೆ- 'ತಪ್ಪುಗಳಾಗಿಯೇ ಓದಲು ಕುಳಿತರೆ 'ಕನ್ನಡಪ್ರಭ' ದಲ್ಲಿ ಸರಕಿಗೇನೂ ಕೊರತೆಯಿಲ್ಲ. ಆದರೆ ಹೀಗೆ ಸುಮ್ಮನೆ ಓದುವಾಗ ತಪ್ಪು ಕಂಡರೆ ಸುಮ್ಮನಿರುವುದಿಲ್ಲ. ಪತ್ರ ಗೀಚಿದಾಗಲಷ್ಟೇ ಸಮಾಧಾನ. ತಲೆಯಿಂದ ಹೇನು ಹೆಕ್ಕಿ ಸುಮ್ಮನೆ ಕೂಡುತ್ತೇವಾ? ಉಗುರಿನಿಂದ ಕುಟುಕುವುದಿಲ್ವಾ?
'ಕನ್ನಡಪ್ರಭ'ದಲ್ಲಿ ಹಿಡಿದ ಹೇನುಗಳಿವು. ಇದೋ ತಗೊಳ್ಳಿ...
'ಮೇ 30ರ ಪತ್ರಿಕೆಯ ಪುಟ 10ರ 'ಮಾಹಿತಿ ಪ್ರಭ' ಅಂಕಣದಲ್ಲಿ 'ಆಲಸ್ಯ ಹೊಡೆದೋಡಿಸುವುದು ಹೇಗೆ?' ಶೀರ್ಷಿಕೆಯಲ್ಲಿ 'ತಡ ರಾತ್ರಿಯವರೆಗೂ ಎಚ್ಚರಿಕೆಯಿಂದಿರುವುದು ಒಳ್ಳೆಯದಲ್ಲ, ಬೇಗ ಎದ್ದು ಬೇಗ ಏಳುವ ಅಭ್ಯಾಸ ಇಟ್ಟುಕೊಳ್ಳಿ...' ಎಂದಾಗಿದೆ. ವಾಕ್ಯ ತಮಾಷೆಯಾಗಿದೆ!'
'ಅದೇ ಪುಟದಲ್ಲಿ 'ಸುದ್ದಿ ಸಂಕ್ಷೇಪ' ಅಡಿ ಬರಹ ಕೈಗೆ 'ವಾಲ್ಮಾರ್ಟ್ಗೆ ದಂಡ' ಶೀರ್ಷಿಕೆಯಲ್ಲಿ '... ಅಮೆರಿಕದ ರಿಟೇಲ್ ದಿಗ್ಗಜ ವಾಲ್ ಮಾರ್ಟ್... ಇದೂ ಅಷ್ಟೇ. ಈ ಪದ ಕಂಡಾಗ ಹಿಂದೊಮ್ಮೆ ಓದಿದ್ದ 'ದಿಗದಗ' ಪದ ನೆನಪಾಯ್ತು.' 'ಇನ್ನು ಪಕ್ಕದ ಪುಟದಲ್ಲಿ ಗದಗದ್ದೇ ಸುದ್ದಿ. 'ಬಾಣಂತಿ ಸಾವು; ಶವವಿಟ್ಟು ಪ್ರತಿಭಟನೆ' ಎಂಬ ಸುದ್ದಿಯಲ್ಲಿ '... ಆಗ ವೈದ್ಯರು ಮತ್ತು ದಾದಿಯರು ಬಾಣಂತಿಯ ಆರೋಗ್ಯ ಸಾಕಷ್ಟು ಬಿಗಡಾಯಿಸಿದೆ. ಕೂಡಲೇ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ...' ಎಂಬ ವಾಕ್ಯದಲ್ಲಿ, 'ಬಿಗಡಾಯಿಸಿದೆ' ಪದದ ನಂತರ ಪೂರ್ಣ ವಿರಾಮ. ಫುಲ್ಸ್ಟಾಪ್ -ಅಲ್ಪವಿರಾಮ ಎಲ್ಲಿ ಇಡಬೇಕೋ ಅಲ್ಲಿ ಇಟ್ಟರೆ ವಾಕ್ಯಗಳಿಗೆ ಅರ್ಥ. ಅಲ್ಪಸ್ವಲ್ಪ ಬದಲಾದರೂ ಅನರ್ಥ. ಓದಿಗೂ ತೊಡಕು.' 'ಮುಂದ... ಪುಟ8 'ಯುವಕನ ಪ್ರೀತಿ ಪುಂಡಾಟಕ್ಕೆ ಬೇಸತ್ತ 15 ವರ್ಷದ ಬಾಲೆ ಆತ್ಮಹತ್ಯೆ' ಯ ಸುದ್ದಿ. 'ಈಕೆ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಭಾಗದಲ್ಲಿ (ಯಾವ ವಿಭಾಗ?) 9ನೇ ತರಗತಿ ವ್ಯಾಸಂಗ ಮುಗಿಸಿದ್ದೇ...' ಮುಂದುವರಿದು 'ಆಕೆ ಮನೆಯಿಂದ ಕಾಲೇಜಿಗೆ ಬರುವ ಮತ್ತು ಹೋಗುವ ವೇಳೆ...' ಹೀಗೆ ಬರೆಯಲಾಗಿದೆ. 9ರ ನಂತರ ಹೋಗುವುದು ಶಾಲೆಗೋ, ಕಾಲೇಜಿಗೋ? ಮುದ್ರಣ ದೋಷದಿಂದ ಹಾಗಾಗಿರಲು ಸಾಧ್ಯವಿಲ್ಲ. ವರದಿ ಸಿದ್ಧಪಡಿಸುವಾಗ ಅದರ ಬಗ್ಗೆ ಆಸಕ್ತಿ ಇಲ್ಲದಿದ್ದರೆ ಹೀಗೇ ಆಗೋದು.'
'ಹೇನುಗಳನ್ನು ಹೆಕ್ಕಿ ಕೊಟ್ಟದ್ದಾಯಿತು. ಕುಕ್ಕುವ ಕೆಲಸ ನಿಮ್ಮದು!'
ಹೇನುಗಳನ್ನು ಹೆಕ್ಕಿದವರೇ ಕುಕ್ಕಿಯೂ ಕೊಟ್ಟಿರುವುದರಿಂದ ನನ್ನದು ಕೇವಲ ನೋಡುವ ಕೆಲಸ.
-ವಿಶ್ವೇಶ್ವರ ಭಟ್