ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ವಿದ್ಯಾರಣ್ಯಪುರದಿಂದ ಎಚ್. ಆನಂದರಾಮ ಶಾಸ್ತ್ರಿಯವರು ಬರೆಯುತ್ತಾರೆ- 'ಯಾರಾದರೂ ಅವರ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ವರ್ತಿಸಿದರೆಂದರೆ 'ನಾಳೆ ಸೂರ್ಯ ಪಶ್ಚಿಮದಲ್ಲಿ ಹುಟ್ತಾನೆ' ಎಂದು ತಮಾಷೆ ಮಾಡುವುದುಂಟು. ಆದರೀಗ ಸೂರ್ಯನು ಪಶ್ಚಿಮದಲ್ಲಿ ಹುಟ್ಟಿಯೇಬಿಟ್ಟಿದ್ದಾನೆ!'
'ಕಾರವಾರದ ಸಮುದ್ರ ತೀರದಲ್ಲಿ ಸೂರ್ಯೋದಯವನ್ನು ಆಸ್ವಾದಿಸುತ್ತಿರುವ 'ಅದ್ಭುತ' ಚಿತ್ರವೊಂದು ಜೂ.4ರ ಸಂಚಿಕೆಯಲ್ಲಿ ಪ್ರಕಟವಾಗಿದೆ! ವಿಶ್ವದ ಅತಿದೊಡ್ಡ ಪವಾಡವೊಂದನ್ನು ನಮಗೆಲ್ಲ ತೋರಿಸಿದ ನಿಮ್ಮ ಸಿಬ್ಬಂದಿಗೆ ನಾವು ಅ-ಪೂರ್ವ ಧನ್ಯವಾದಗಳನ್ನು ಸಮರ್ಪಿಸುತ್ತೇವೆ. ಸಂಜೆ ಹೊತ್ತು ಆ ಸಮುದ್ರ ತೀರದಲ್ಲಿ 'ಸೂರ್ಯೋದಯ'ವನ್ನು ನೋಡು ತ್ತಿರುವ, ಕ್ಷಮಿಸಿ, ಆಸ್ವಾದಿಸುತ್ತಿರುವ ಆ ಪ್ರವಾಸಿಗರಿಗೂ ಕೂಡ ಅದು ಸೂರ್ಯೋದಯವೆಂದು ಗೊತ್ತಿಲ್ಲ. ಸೂರ್ಯಾಸ್ತ ವೆಂದುಕೊಂಡಿದ್ದಾರೆ ದಡ್ಡರು!'
'ನಿಮ್ಮ ಸಿಬ್ಬಂದಿಯ ಜಾಣತನ ಪ್ರವಾಸಿಗರಿಗೆಲ್ಲಿಂದ ಬರಬೇಕು, ಬಿಡಿ. ನೀವು ಪ್ರಕಟಿಸಿರುವ ಆ ಚಿತ್ರವೂ ಬಲೇ ಬಂಬಾಟಾಗಿದೆ. ನಿಮ್ಮ ಆ ಸೂರ್ಯೋದಯದಲ್ಲಿ ಸೂರ್ಯನೇ ಕಾಣುತ್ತಿಲ್ಲ! ಮೋಡದೊಳಗೆ ಮರೆಯಾಗಿದ್ದಾನೆ! ಬಲು ಅಪ-ರೂಪ ನಿಮ್ ಸನ್ರೈಸ್!'
'ಇನ್ನು ಈ ಚಿತ್ರಕ್ಕೆ ನಿಮ್ಮವರು ನೀಡಿರುವ ಅಡಿಬರಹ, ಊಹ್ಞೂ, ಪಾರ್ಶ್ವ ಬರಹವೋ, ಅತ್ಯದ್ಭುತ! 'ಕಾರವಾರದ ರವೀಂದ್ರ ಠಾಗೂರ್ ಸಮುದ್ರ ತೀರದಲ್ಲಿ ಸೋಮವಾರ ಸುರ್ಯೋದಯವನ್ನು ಅಸ್ವಾದಿಸುತ್ತಿರುವ ಪ್ರವಾಸಿಗರು' ಎಂಬ ನಿಮ್ಮೀ ಬರಹದಲ್ಲಿ ಏನೆಲ್ಲ ಅದ್ಭುತಗಳು ಘಟಿಸಿವೆ ನೋಡಿ: ರವೀಂದ್ರನಾಥರು ನಾಥಪಂಥ ತೊರೆದಿದ್ದಾರೆ! ಸೂರ್ಯೋದಯವು ಸುರ್ಯೋದಯವಾಗಿದೆ. (ಅರ್ಥಾತ್ ಸುರಿಯುವ ದಯ ಆಗಿದೆಯ) ಪ್ರವಾಸಿಗರು ಆಸ್ವಾದಿಸುತ್ತಿಲ್ಲ, ಅಸ್ವಾದಿಸುತ್ತಿದ್ದಾರೆ. (ಅದು ಹೇಗೆಂದು ನಿಮ್ಮವರಿಗೆ ಮಾತ್ರ ಗೊತ್ತು) ಸೂಪರ್ ಪವಾಡವೊಂದರ, ಸೂಪರ್ ದೃಶ್ಯದ, ಸೂಪರ್ ಅಸ್ವಾದದ, ಸೂಪರ್ ಚಿತ್ರವನ್ನು ಸೂಪರ್ ಪಾರ್ಶ್ವಬರಹದೊಂದಿಗೆ ನೀಡಿದ ನಿಮ್ಮ ಸೂಪರ್ ಸಿಬ್ಬಂದಿಗೆ ನನ್ನ ಸೂಪರ್ ಸಲಾಂ' ಎಂದಿದ್ದಾರೆ.
ಬೆಂಗಳೂರಿನಿಂದ ರಾಜೀವ ಪಟವರ್ಧನ್ ಅವರು ಬರೆಯುತ್ತಾರೆ- 'ಜೂ.6ರಂದು 'ನಗರ ಕಾರ್ಯಕ್ರಮ'ದಲ್ಲಿ (ಪುಟ 4) 'ಪ್ರಥಮ ದರ್ಜೆ ಕಾಲೇಜು ಉದ್ಘಾಟನೆ' ಎಂದಿದೆ. ಆದರೆ ಪ್ರಥಮ ವರ್ಷದ ತರಗತಿ ಉದ್ಘಾಟನೆ ಎಂದಿರಬೇಕಿತ್ತಲ್ಲವೇ?'
'ಜೂ.9ರಂದು ಪುಟ 2ರಲ್ಲಿ 'ಸ್ಪರ್ಧಾಯುಗದಲ್ಲಿ ಗುಣಮಟ್ಟದ ಪದವಿ ಅಗತ್ಯ' ಎಂಬ ವರದಿ ಹಾಗೂ ಚಿತ್ರದಲ್ಲಿ 'ಎನ್ಎಂಕೆಆರ್ವಿ ಮಹಿಳಾ ಕಾಲೇಜಿನಲ್ಲಿ ಶನಿವಾರ 2013ರ ಸಾಲಿನಲ್ಲಿ ಪ್ರಥಮ ದರ್ಜೆ ತರಗತಿಗಳಿಗೆ' ಎಂದಿದೆ. ಇಲ್ಲಿ ಪ್ರಥಮ ದರ್ಜೆ ತರಗತಿ ಎಂದರೇನು? ಅದು ಪ್ರಥಮ ವರ್ಷದ ತರಗತಿ ಎಂದಾಗಬೇಕಿತ್ತಲ್ಲವೇ?'
'ಪುಟ 14ರಲ್ಲಿ 'ಮಂಡೇಲಾ ಸ್ಥಿತಿ ಚಿಂತಾಜನಕ' ವರದಿ ಚಿತ್ರದಲ್ಲಿ 'ಮಂಡೇಲಾ ಅವರ ಜತೆ ಇರುವುದು ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್ ಬುಷ್' ಎಂದಿದೆ. ಆದರೆ ಚಿತ್ರದಲ್ಲಿ ಮಂಡೇಲಾ ಜತೆ ಇರುವುದು ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅಲ್ಲವೇ?' ಎಂದಿದ್ದಾರೆ.
ಓದುಗರಾದ ತಿಲಕ್ ಅವರು ಕೂಡ 'ಮಂಡೇಲಾ-ಬುಷ್' ಚಿತ್ರದ ಕುರಿತು ಪ್ರಸ್ತಾಪಿಸಿದ್ದಾರೆ. ಚಿತ್ರದಲ್ಲಿ ಮಂಡೇಲಾ ಜತೆ ಇರುವುದು ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್.
- ವಿಶ್ವೇಶ್ವರ ಭಟ್