ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಸರ್ಕಾರಿ ಶಾಲೆಗಳು
ಮೊನ್ನೆ ಸೋಮವಾರ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸರ್ಕಾರಿ ಎನ್.ಟಿ.ಎಮ್ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಸಿಹಿ ಹಂಚುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೈಸೂರಿನ ಮಾನ್ಯ ಸಂಸದರಾದ ಅಡಗೂರು ಎಚ್. ವಿಶ್ವನಾಥ್ರವರು ಮಾತನಾಡುತ್ತಾ ಕೆಲವು ಕನ್ನಡ ಸಾಹಿತಿಗಳು, ಕನ್ನಡಪರ ಬುದ್ಧಿಜೀವಿಗಳು ತಮ್ಮ ಮಕ್ಕಳನ್ನು ಮಾತ್ರ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸಿ ಕನ್ನಡಪರ ಹೋರಾಟದ ಮಾತುಗಳನ್ನು ಆಡುತ್ತ ಜನತೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ, ಕನ್ನಡ ಶಾಲೆಗಳಿಗೆ ಸೇರಿಸಬೇಕೆಂದು ಆಗ್ರಹಿಸಿದ್ದಾರೆ ಎಂದು ಮಾರ್ಮಿಕವಾಗಿಯಾದರೂ ಸಹಜವಾದದ್ದನ್ನೇ ತಿಳಿಸಿದ್ದಾರೆ. ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ, ಕನ್ನಡ ಶಾಲೆಗಳಿಗೆ ಸೇರಿಸಿ ಸರ್ಕಾರಿ ಶಾಲೆಗಳನ್ನು ಉಳಿಸಿ ಎಂಬ ಆಂದೋಲನದಲ್ಲಿ ತೊಡಗಿಸಿಕೊಂಡಿರುವ ಎಷ್ಟು ಜನ ಸಾಹಿತಿಗಳು, ಹೋರಾಟಗಾರರು ತಮ್ಮ ಮಕ್ಕಳನ್ನೂ, ಮೊಮ್ಮಕ್ಕಳನ್ನೂ ಸರ್ಕಾರಿ ಶಾಲೆಗಳಿಗೆ, ಕನ್ನಡ ಶಾಲೆಗಳಿಗೆ ಸೇರಿಸುವ ಮೂಲಕ ಎಷ್ಟು ಸರ್ಕಾರಿ ಶಾಲೆಗಳನ್ನು, ಎಷ್ಟು ಕನ್ನಡ ಶಾಲೆಗಳನ್ನು ಉಳಿಸಿದ್ದಾರೆ. ಎಷ್ಟು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಶಾಲೆಗಳನ್ನು ಜೀರ್ಣೋದ್ಧಾರ ಮಾಡಿ ಅಭಿವೃದ್ಧಿಪಡಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಅಗ್ಗದ ಪ್ರಚಾರಕ್ಕಾಗಿ ಸ್ವಾರ್ಥ ಸಾಧನೆಗಳಿಗಾಗಿ ಬೂಟಾಟಿಕೆಯ ಹೋರಾಟ ಮಾಡುವುದನ್ನು ನಿಲ್ಲಿಸಬೇಕು. ನಗರದ ಎಲ್ಲಾ ಭಾಗದಲ್ಲಿರುವ ಕನ್ನಡಪರ ಹೋರಾಟಗಾರರು ತಮ್ಮ ತಮ್ಮ ಪ್ರದೇಶಗಳಲ್ಲಿನ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ, ಕನ್ನಡ ಶಾಲೆಗಳಿಗೆ ಸೇರಿಸುವಂತೆ ಮನ ಒಲಿಸಿದಾಗ ಮಾತ್ರ ಸರ್ಕಾರಿ ಶಾಲೆಗಳು ಉಳಿಯುತ್ತವೆ. ಅಷ್ಟೇ ಅಲ್ಲ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಪ್ರವೇಶ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳು ಉಳಿಯುತ್ತವೆ. ಅರವತ್ತರ ದಶಕದಲ್ಲಿ ಎನ್.ಟಿ.ಎಮ್ ಶಾಲೆಗೆ ಸ್ವಂತ ಕಟ್ಟಡವೇ ಇರಲಿಲ್ಲ. ಅದು ಕೃಷ್ಣವಿಲಾಸ ರಸ್ತೆಯ ಕಟ್ಟಡ ಒಂದರಲ್ಲಿ ಬಾಡಿಗೆ ಇತ್ತು. ಆ ನಂತರ ದಿವಾನ್ಸ್ ರಸ್ತೆಯ ಯಾದವ ಗೊಲ್ಲರ ಸಂಘದ ಕಟ್ಟಡದಲ್ಲಿ ನಡೆಯುತ್ತಿತ್ತು. ಎಪ್ಪತರ ದಶಕದಿಂದ ಈಚೆಗೆ ಶಿಕ್ಷಣ ಇಲಾಖೆಯು ಹಾಲಿ ಕಟ್ಟಡವನ್ನು ನಿರ್ಮಿಸಿ ಎನ್.ಟಿ.ಎಮ್ ಶಾಲೆಯನ್ನು ಅಲ್ಲಿರಿಸಿದೆ. ಈ ವಿಚಾರ ನಿಮಗೆ ತಿಳಿದಿದೆಯೇ? ಕನ್ನಡ ಕ್ರಿಯಾಸಮಿತಿಯ ಸ.ರ. ಸುದರ್ಶನ್ರವರು ಸನಿಹದಲ್ಲಿರುವ ದೇವರಾಜ ಶಾಲೆಯನ್ನು ಎನ್.ಟಿ.ಎಮ್ ಶಾಲೆಗೆ ವಿಲೀನಗೊಳಿಸಲಿ ಎಂಬ ಉಚಿತ ಸಲಹೆಯನ್ನು ನೀಡಿದ್ದಾರೆ. ಹತ್ತು ವರ್ಷಗಳಿಗೂ ಹಿಂದೆ ಶತಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಂಡ ದೇವರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಕನ್ನಡ ಜಾಗೃತಿ ಸಂಘದಿಂದ ದತ್ತು ಪಡೆದುಕೊಂಡ ನಂತರ ಪಾಳು ಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಸದರಿ ಶಾಲೆಯನ್ನು ಜೀರ್ಣೋದ್ಧಾರ ಮಾಡಿ ಅಭಿವೃದ್ಧಿಪಡಿಸಿ ಕಳೆದ ಎಂಟು ವರ್ಷಗಳ ಈಚೆಗೆ ಅದೇ ಕಟ್ಟಡದಲ್ಲಿ ಬಾಲಕಿಯರ ಪದವಿ ಪೂರ್ವ ಕಾಲೇಜನ್ನು ಸಹ ನಡೆಸುತ್ತಿದೆ. ಸದರಿ ಶಾಲೆಯನ್ನು ಉಳಿಸಿಕೊಳ್ಳುವ ಸಲುವಾಗಿ ಸುಮಾರು ಹದಿನೈದು ವರ್ಷಗಳಿಗೂ ಮೊದಲೇ (ಅಂದರೆ ಸರ್ಕಾರ ಬಿಸಿ ಊಟ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಮೊದಲೇ) ಬಿಸಿ ಊಟದ ವ್ಯವಸ್ಥೆಯನ್ನು ನಡೆಸುತ್ತಿದೆ. ಮಕ್ಕಳಿಗೆ ಉಚಿತ ಸಮವಸ್ತ್ರ, ಲೇಖನ ಸಾಮಗ್ರಿಗಳನ್ನು ಕೊಟ್ಟು ಶಾಲೆಯನ್ನು ಉಳಿಸಿಕೊಳ್ಳಲು ಹೆಣಗುತ್ತಿರುವ ಕನ್ನಡ ಜಾಗೃತಿ ಸಂಘ ಮತ್ತು ಶಾಲಾ ಅಭಿವೃದ್ಧಿ ಸಮಿತಿಗೆ ಮಾತ್ರ ಅದರ ಶ್ರಮ ಅರ್ಥವಾದೀತು. ಮಕ್ಕಳ ಹಾಜರಾತಿಯನ್ನು ಪ್ರೋತ್ಸಾಹಿಸಲು ಗ್ರಾಮಾಂತರ ಪ್ರದೇಶದಿಂದ ಬರುವ ಹೆಣ್ಣು ಮಕ್ಕಳಿಗೆ ಪ್ರಯಾಣ ವೆಚ್ಚವನ್ನು ಭರಿಸುವಂತಹ ಇನ್ನು ಅನೇಕ ಪ್ರೋತ್ಸಾಹಕರ ಕಾರ್ಯವನ್ನು ಕೈಗೊಂಡಿರುವ ಕನ್ನಡ ಜಾಗೃತಿ ಸಂಘದ ಈ ರೀತಿಯ ಕಾರ್ಯ ಸರ್ಕಾರಿಶಾಲೆ ಉಳಿಸಿ ಎನ್ನುವ ಹೋರಾಟಗಾರರಿಗೆ ಬುದ್ಧಿಜೀವಿಗಳಿಗೆ ಮಾರ್ಗದರ್ಶಿಯಾಗಲಿ.
-ಎಂ.ಬಿ. ದೊಡ್ಡೇಗೌಡ, ಹಿರಿಯ ಕನ್ನಡ ಚಳವಳಿಗಾರ,ಮೈಸೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com