ಅಂಕದಿಂದ ಅಳೆಯೋದು ಸರಿಯೇ?
ಪ್ರತಿಷ್ಠಿತ ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗಷ್ಟೇ ಆದ್ಯತೆಯಿದೆ. ಕೆಲ ಕಾಲೇಜುಗಳಲ್ಲಂತು ಹೊರ ಊರಿನವರಿಗೆ ಸೀಟು ದೊರೆಯಬೇಕಾದರೆ ಇಂತಿಷ್ಟು ಅಂಕವಿರಬೇಕೆಂಬ ನಿಯಮಗಳಿರುತ್ತವೆ. ಹೀಗೇಕೆ? ಪುಸ್ತಕದ ಬದನೆಕಾಯಿಯಷ್ಟೇ ತಲೆಯೊಳಗಿದ್ದರೆ ಸಾಲದು ಎನ್ನುವ ಶಾಲೆ- ಕಾಲೇಜುಗಳೇ ಅದೇ ಪುಸ್ತಕದ ಬದನೇ ಕಾಯಿಗಷ್ಟೇ ಮಹಾಗೌರವ ನೀಡುತ್ತಿವೆ. ಶೇಕಡಾ 50-60 ಅಂಕ ಗಳಿಸಿದ ವಿದ್ಯಾರ್ಥಿಯೊಳಗೂ ಒಬ್ಬ ಅದ್ಭುತ ಚಿತ್ರ ಕಲಾವಿದ ಇರಬಲ್ಲ, ಅಪ್ರತಿಮ ರಂಗಕಲಾವಿದ ಇರಬಲ್ಲ, ಅಸಾಧಾರಣ ಕ್ರೀಡಾಪಟು ಇರಬಲ್ಲ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ವಿಶೇಷ ಪ್ರತಿಭೆ ಹೊಂದಿರುವ ವಿಭಿನ್ನ ವಿದ್ಯಾರ್ಥಿ ಇರಬಲ್ಲ. ಒಲಿಂಪಿಕ್ಸ್‌ನಂತ ಕ್ರೀಡೆಗಳಲ್ಲಿ ಕಡಿಮೆ ಪದಕಗಳು ಬಂತು ಎಂದು ಗೊಣಗಿಕೊಳ್ಳುವ ನಮಗೆ ಮಾತ್ರ ದಾಖಲಾತಿ ಸಂದರ್ಭದಲ್ಲಿ ಅಂಕವೇ ದೊಡ್ಡಣ್ಣ. ಇದ್ಯಾವ ನ್ಯಾಯ? ಎಲ್ಲರೊಳಗೂ ಒಂದೇ ರೀತಿಯ ಬುದ್ಧಿವಂತಿಕೆ (ಐ.ಕ್ಯೂ. ಲೆವೆಲ್) ಇರುವುದಿಲ್ಲವೆಂದು ತಿಳಿದೂ ಉನ್ನತ ಶ್ರೇಣಿಯಲ್ಲಿ ಪಾಸಾದವರಿಗಷ್ಟೇ ಸೀಟು ಮೀಸಲಿಡುವ ದೊಡ್ಡ ಕಾಲೇಜಿನವರ ಸಣ್ಣತನಕ್ಕೆ ಏನೆನ್ನಬೇಕೋ? ಶಿಕ್ಷಣವನ್ನು ಕಡೆಗಣಿಸುವಂತಿಲ್ಲ ನಿಜ. ಆದರೆ ಹೆತ್ತವರೊಳಗೆ ಅಂಕವೇ ಮುಖ್ಯವೆಂಬ ವಿಚಾರ ಗಟ್ಟಿಯಾಗುವುದಕ್ಕೆ ವಿದ್ಯಾರ್ಥಿಗಳು ಒತ್ತಡವನ್ನು ಅನುಭವಿಸುವುದಕ್ಕೆ ಪ್ರತಿಷ್ಠಿತ ಕಾಲೇಜುಗಳು ಕಾರಣವಾಗಬಾರದು. ಅಂಕ ಮಾನದಂಡವಾಗಬಾರದು. ಓದಿನಲ್ಲಿ ಸಾಧಾರಣ ಅಂಕ ಗಳಿಸಿದ್ದರೂ ಅದ್ಭುತ ಪ್ರತಿಭೆಯಿರುವ ವಿದ್ಯಾರ್ಥಿಗಳಿಗೂ ಒಳ್ಳೆಯ ಕಾಲೇಜುಗಳಲ್ಲಿ ಸೀಟು ದೊರೆಯಲಿ. ಈ ಮೂಲಕ ಸೀಟು ಸಿಗಲಿಲ್ಲ, ಅಂತ ಕಣ್ಣೀರಿಡುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲಿ.
-ಸದಾಶಿವ ಎಸ್., ಅರಸುನಗರ, ಸಕಲೇಶಪುರ
ಈ ತಾರತಮ್ಯವೇಕೆ
ಹಿಂದಿನ ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಗೆ ಜೆಒಸಿ, ಐಟಿಐ, ಸರ್ವೆಯಿಂಗ್ ತರಬೇತಿ ಪಡೆದ ಅಭ್ಯರ್ಥಿಗಳು ಬಲಿಯಾಗಿದ್ದಾರೆ. ಹಿಂದೆ ಇದ್ದಂತಹ ಭೂಮಾಪಕರ ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿ ಭೂಮಾಪನ ವಿಷಯಕ್ಕೆ ಸಂಬಂಧಿಸಿದ ವಿಷಯವನ್ನೇ ಅಭ್ಯಾಸ ಮಾಡಿರುವ ಅಭ್ಯರ್ಥಿಗಳಿಗೆ 2 ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವ ಪತ್ರವನ್ನು ಹೊಂದಿರಬೇಕು ಎಂಬ ಷರತ್ತನ್ನು ವಿಧಿಸಿರುವುದೇ ನಮಗೆ ಮಾಡಿದ ಅನ್ಯಾಯ. ಅನುಭವ ಪತ್ರ ನೀಡಿದ್ದರೂ ಕಂಪನಿ ರಿಜಿಸ್ಟರ್ಡ್ ಆಗಿಲ್ಲವೆಂಬ ಕಾರಣ ನೀಡಿ ನಮ್ಮನ್ನು ಅಂತಿಮ ಆಯ್ಕೆ ಪಟ್ಟಿಯಿಂದ ಕೈಬಿಟ್ಟಿರುವುದು ನಮಗೆ ಬರೆದಿರುವ ಮರಣ ಶಾಸನವಾಗಿದೆ. ನಾವೂ ಸಹ ಪಿ.ಯು.ಸಿ. ಡಿಪ್ಲ್ಲೊಮಾ ಮತ್ತು ಬಿ.ಇ. ಅಭ್ಯರ್ಥಿಗಳಿಗೆ ಸಮವಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಯ್ಕೆಯಾಗಿದ್ದೇವೆ. ಅವರಿಗಿಲ್ಲದ ಅನುಭವ ಪತ್ರ ನಮಗೆ ಏಕೆ ಬೇಕು? ಇದು ಅಧಿಕಾರಿಗಳ ಬೇಜವಾಬ್ದಾರಿಯಲ್ಲವೇ? ಆದ್ದರಿಂದ ಅನ್ಯಾಯವಾಗಿರುವ ಎಲ್ಲಾ ಅಭ್ಯರ್ಥಿಗಳು ಜೂನ್ 15ರಂದು ಮಾನ್ಯ ಕಂದಾಯ ಸಚಿವರು ಕರೆದಿರುವ ಸಭೆಯಲ್ಲಿ ಭಾಗವಹಿಸಿ ನಮಗೆ ನ್ಯಾಯ ಸಿಗದೇ ಇದ್ದಲ್ಲಿ ಮುಂದಿನ ಹೋರಾಟಕ್ಕೆ ಎಲ್ಲರೂ ಸಿದ್ದರಾಗುತ್ತೇವೆ.
-ಶಂಕರ್, ಹಾಸನ
ಕೈಗೆಟುಕದ ದ್ರಾಕ್ಷಿ ಹುಳಿ ಎಂದಂತೆ
ಡಿ.ಕೆ.ಶಿ. ಯವರು ತಾವು ಶಾಸಕರಾಗಿ ಪ್ರಮಾಣ ವಚನವನ್ನು ಸ್ವೀಕರಿಸದೇ ಇರುವುದಕ್ಕೆ ನೀಡಿದ ಕಾರಣಗಳು (ಕ.ಪ್ರ. ಜೂನ್ 9ರ ಮುಖಪುಟ ವರದಿ) ನಿಜವಾಗಿಯೂ ಅರ್ಥಹೀನವಾಗಿವೆ. 'ಕಾಯಕವೇ ಕೈಲಾಸ' ಎಂಬ ಬಸವಣ್ಣನವರ ವಾಣಿಯಂತೆ ಅವರ ಆದ್ಯ ಕರ್ತವ್ಯ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿ ನಂತರ ತೀರ್ಥಯಾತ್ರೆ ಹೋಗಬಹುದಿತ್ತು. ದ್ರಾಕ್ಷಿ ಬಾಯಿಗೆ ಎಟುಕದೇ ಹೋದಾಗ, ದ್ರಾಕ್ಷಿಯನ್ನು ಹುಳಿ ಎಂದಂತಾಗಿದೆ ಡಿಕೆಶಿಯವರ ಮಾತು. ಒಂದು ವೇಳೆ ಅವರನ್ನು ಮಂತ್ರಿಯಾಗಿ ನೇಮಿಸಿದ್ದಿದ್ದೇ ಆದರೆ ಅವರು ಮೊದಲು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮುಂದಾಗುತ್ತಿದ್ದರೇ ಹೊರತು ಈಗ ಮಾಡಿದ ಹಾಗೆ ಹರಕೆ ಯಾತ್ರೆಗಳನ್ನು ಮುಗಿಸಿ ಬಂದು, ನಂತರ ಪ್ರಮಾಣ ವಚನವನ್ನು ಸ್ವೀಕರಿಸುತ್ತಿರಲಿಲ್ಲ. ದೇವರ ಸನ್ನಿಧಿಯಲ್ಲಿ ನಿಂತು ಇಂತಹ ಆತ್ಮ ವಂಚನೆ ಏಕೆ?
-ಸಿ. ದಿನಮಣಿರಾವ್, ಮೈಸೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com