ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹೊಸ ನೀರಿನ ಪ್ರಭಾವ

Mainashree
Updated On : 14 Jun 2013, 10:12 am

ಜುಲೈ ಹದಿನೈದರಿಂದ ಟೆಲಿಗ್ರಾಂ ಸೇವೆಯನ್ನು ದೂರಸಂಪರ್ಕ ಇಲಾಖೆಯು ಹಿಂದಕ್ಕೆ ಪಡೆಯಲಿದೆ. ಒಂದು ಕಾಲದಲ್ಲಿ ಅತ್ಯಂತ ತುರ್ತು ಸಂದೇಶವನ್ನು ಕಳುಹಿಸುವುದಕ್ಕೆ ಈ ತಂತಿ ಸೇವೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಈಗಾಗಲೇ ಹತ್ತು ವರ್ಷಗಳಿಗೂ ಮೇಲ್ಪಟ್ಟು ಇದು ಹೆಚ್ಚು ಬಳಕೆಯಲ್ಲಿ ಇರಲಿಲ್ಲ. ಇತ್ತೀಚೆಗಂತೂ ಇದರ ಬಳಕೆ ಇಲ್ಲವೇ ಇಲ್ಲ ಅನ್ನುವಂತೆ ಆಗಿತ್ತು.
 ಸರ್ಕಾರದ ಈ ನಿರ್ಧಾರದಿಂದ ಯಾರಿಗೂ ಆಶ್ಚರ್ಯವಾಗಲಿ, ಆಘಾತವಾಗಲಿ ಆಗಿಲ್ಲ. ಅಂಚೆ ಸೇವೆ ಕೂಡ ಮೊದಲಿನಷ್ಟು ಅನಿವಾರ್ಯ ಎನಿಸುತ್ತಿಲ್ಲ. ಕಾರಣ ಇಷ್ಟೇ, ಸಂವಹನಕ್ಕೆ ಇಂದು ಹಲವಾರು ಅತ್ಯಾಧುನಿಕ ಸಾಧನ ಸಲಕರಣೆಗಳು ಬಂದಿವೆ. ಇಂದು ಬಹುತೇಕ ಎಲ್ಲ ಹಳ್ಳಿಗಳಿಗೂ ದೂರವಾಣಿ ತಲುಪಿದ್ದರೆ ಪ್ರತಿ ಮನೆಯಲ್ಲೂ ಮೊಬೈಲ್ ಫೋನ್‌ಗಳು ಇವೆ ಎಂದು ಹೇಳುವಂಥ ಸ್ಥಿತಿ ಇದೆ.
 ಟೆಲಿಗ್ರಾಂ ಇಂದು ಸರ್ಕಾರಿ ನೌಕರರು ರಜೆ ಬೇಡಿಕೆಯನ್ನು ಸಲ್ಲಿಸಲು, ಶುಭಾಶಯ ಪತ್ರ ಕಳುಹಿಸುವುದಕ್ಕೆ ಮಾತ್ರ ಸೀಮಿತವಾಗಿತ್ತು. ಕೈಯಲ್ಲಿಯೇ ಇರುವ ಮೊಬೈಲ್ ಫೋನ್‌ನಿಂದ ಇ-ಮೇಲ್ ಕಳುಹಿಸುವುದು ಸಾಧ್ಯವಾಗುತ್ತಿರುವಾಗ ಟೆಲಿಗ್ರಾಂ ತನ್ನ ಮಹತ್ವವನ್ನು ಕಳೆದುಕೊಂಡಿತ್ತು.
 ಜನರು ಬಳಸದೇ ಇರುವ ಸೇವೆಗೆ ಒಂದು ಇಲಾಖೆ, ಸಿಬ್ಬಂದಿ ಇವೆಲ್ಲ ವ್ಯರ್ಥ. ಸಿಬ್ಬಂದಿಯನ್ನು ಇಲಾಖೆಯ ಬೇರೆ ವಿಭಾಗದಲ್ಲಿ ನಿಯುಕ್ತಿಗೊಳಿಸಬಹುದು. ಹೊಸದು ಬಂದಾಗ ಹಳೆಯದು ಅದಕ್ಕೆ  ದಾರಿಯನ್ನು ಬಿಟ್ಟುಕೊಟ್ಟ ಹಲವು ಉದಾಹರಣೆಗಳು ಇವೆ. ಹಿಂದೆ ಪೇಜರ್ ಎಂಬ ಸಾಧನ ಬಂದಿತ್ತು. ಅದು ಮೊಬೈಲ್ ಬರುವುದಕ್ಕಿಂತ ಮೊದಲಿನ ಸಾಧನವಾಗಿತ್ತು. ಮೊಬೈಲ್ ಬರುತ್ತಿದ್ದಂತೆ ಅದು ತೆರೆಗೆ ಸರಿಯಿತು. ಕ್ಯಾಸೆಟ್ಟುಗಳು ಹೋಗಿ ಪೆನ್‌ಡ್ರೈವ್‌ಗಳು ಈಗ ಬಂದಿವೆ. ಹಾಡು ಕೇಳಲು ಹಿಂದೆ ಇದ್ದ ಫೋನೋಗ್ರಾಂ ಮ್ಯೂಸಿಯಂ ಸೇರಿದೆ. ಟೇಪ್‌ರೆಕಾರ್ಡರ್ ಹೊರೆ ಎನ್ನುವ ಸ್ಥಿತಿ ಇದೆ. ಸಂಪರ್ಕಕ್ರಾಂತಿಯಲ್ಲಿ 160 ವರ್ಷಗಳಿಂದ ಇದ್ದ ಟೆಲಿಗ್ರಾಂ ಸೇವೆಯನ್ನು ಮರೆಯುವಂತಿಲ್ಲ. ಹ್ಯಾಪಿ ಅಲ್ವಿದಾ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement