ಮುರಿದುಬಿದ್ದ ಮೈತ್ರಿ
ಬಿಹಾರದಲ್ಲಿ ಕೊನೆಗೂ ಜೆಡಿ(ಯು) ಮತ್ತು ಬಿಜೆಪಿಯ ಮೈತ್ರಿ ಮುರಿದುಬಿದ್ದಿದೆ. ಹದಿನೇಳು ವರ್ಷಗಳಿಂದ ಎರಡೂ ಪಕ್ಷಗಳು ಬಿಹಾರದಲ್ಲಿ ಜೊತೆಯಾಗಿದ್ದವು. ವಿಧಾನಸಭೆಯ ಚುನಾವಣೆಗಳಲ್ಲಿ ಒಂದಾಗಿ ಹೋರಾಟ ಮಾಡಿದ್ದವು. ರಾಷ್ಟ್ರೀಯ ಜನತಾಂತ್ರಿಕ ಮೈತ್ರಿಕೂಟದಲ್ಲಿ ಇವೆರಡೂ ಪಕ್ಷಗಳು ಇದ್ದವು. ತಮ್ಮ ಸರ್ಕಾರದಲ್ಲಿರುವ ಬಿಜೆಪಿಯ 11 ಸಚಿವರು ತಮ್ಮ ಕಚೇರಿಗೆ ಬರುವುದನ್ನು ನಿಲ್ಲಿಸಿದ್ದಾರೆ ಹಾಗೂ ತಮ್ಮ ಅಧಿಕೃತ ವಾಹನಗಳನ್ನು ಹಿಂತಿರುಗಿಸಿದ್ದಾರೆ. ತಾವು ತಮ್ಮ ಬಹುಮತ ಸಾಬೀತುಪಡಿಸಲು ಇದೇ ತಿಂಗಳ 19ರಂದು ವಿಧಾನ ಸಭೆಯ ಅಧಿವೇಶನ ಕರೆಯುವುದಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರು ರಾಜ್ಯಪಾಲರಿಗೆ ತಿಳಿಸಿದ್ದಾರೆ.
ನಿತೀಶ್ ಕುಮಾರ್ ಅವರಿಗೆ ಗುಜರಾತದ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಕಂಡರೆ ಮೊದಲಿನಿಂದಲೂ ಸ್ವಲ್ಪ ಅಲರ್ಜಿಯೇ. ಬಿಹಾರದಲ್ಲಿ ಚುನಾವಣೆ ಪ್ರಚಾರಕ್ಕೂ ಅವರನ್ನು ಕರೆದಿರಲಿಲ್ಲ. ಮೋದಿಯವರ ಉಗ್ರ ಹಿಂದೂತ್ವವಾದಕ್ಕೆ ನಿತೀಶ್ ಕುಮಾರ್ ಅವರ ವಿರೋಧವಿದೆ. 2002ರಲ್ಲಿ ಗುಜರಾತಿನಲ್ಲಿ ನಡೆದ ಕೋಮುಹಿಂಸಾಚಾರಕ್ಕೆ ಮೋದಿಯವರನ್ನು ನಿತೀಶ್ ಹೊಣೆ ಮಾಡಿದ್ದಾರೆ. ಇಂಥ ಉಗ್ರ ಹಿಂದೂತ್ವವಾದಿಯ ಮೈತ್ರಿಯಿಂದ ರಾಜ್ಯದಲ್ಲಿ ತಮ್ಮ ಪಕ್ಷಕ್ಕೆ ಮುಸ್ಲಿಮರ ಮತಗಳು ತಪ್ಪಿಹೋಗುತ್ತವೆ ಎಂಬ ರಾಜಕೀಯ ಲೆಕ್ಕಾಚಾರ ನಿತೀಶ್ ಕುಮಾರ್ ಅವರದ್ದು.
ಮೋದಿಯವರನ್ನು ಬಿಜೆಪಿಯು ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಬಿಂಬಿಸಲು ಹೊರಟಿದ್ದು, ಅದರ ಮೊದಲ ಹೆಜ್ಜೆಯಾಗಿ ಅವರನ್ನು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಿದ್ದು ನಿತೀಶ್ ಕುಮಾರ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದಕ್ಕೆ ಅವರು ತಮ್ಮ ವಿರೋಧವನ್ನು ಮೊದಲಿನಿಂದಲೂ ವ್ಯಕ್ತಪಡಿಸುತ್ತ ಬಂದಿದ್ದರು. ಆದರೆ ಬಿಜೆಪಿಯು, ಇದು ತಮ್ಮ ಪಕ್ಷದ ಆಂತರಿಕ ವಿಚಾರ. ಅನ್ಯರು ಇದರಲ್ಲಿ ಮೂಗು ತೂರಿಸುವುದು ಬೇಡ ಎಂದು ಹೇಳಿತ್ತು. ಬಿಜೆಪಿಯೊಂದಿಗೆ ಮೈತ್ರಿಯನ್ನು ಹರಿದುಕೊಂಡಿದ್ದರಿಂದ ನಿತೀಶ್ ಕುಮಾರ್ ಸರ್ಕಾರಕ್ಕೆ ಅಪಾಯವೇನೂ ಇಲ್ಲ. ಸರಳ ಬಹುಮತಕ್ಕೆ ಕೇವಲ ನಾಲ್ವರು ಶಾಸಕರ ಕೊರತೆ ಇದೆ. ಅದನ್ನು ಪಕ್ಷೇತರರ ಮೂಲಕ ಅದು ತುಂಬಿಕೊಳ್ಳಬಹುದು. ಜೊತೆಗೆ ಕಾಂಗ್ರೆಸ್ ಪಕ್ಷವು ನಿತೀಶ್ ಮೈತ್ರಿಗೆ ತುದಿಗಾಲಿನಲ್ಲಿ ನಿಂತಿದೆ. ಇಲ್ಲಿ ಅವರಿಗೆ ಬೆಂಬಲ ನೀಡಿ ಕೇಂದ್ರದಲ್ಲಿ ಜೆಡಿಯು ಬೆಂಬಲವನ್ನು ಪಡೆದುಕೊಳ್ಳುವುದು ಆ ಪಕ್ಷದ ಲೆಕ್ಕಾಚಾರ.
ನಿತೀಶ್ ಕುಮಾರ್ ಅವರ ಪ್ರಮುಖ ಕಾಳಜಿ ಇರುವುದು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ. ಒಂದು ವೇಳೆ ಚುನಾವಣೆಗೆ ಮೊದಲೇ ತೃತೀಯರಂಗದ ರಚನೆಯಾದರೆ ನಿತೀಶ್ಕುಮಾರ್ ಅದರ ದೊಡ್ಡ ಶಕ್ತಿಯಾಗುತ್ತಾರೆ. ಕಾಂಗ್ರೆಸ್ ಜೊತೆಗೆ ಹೋದರೂ ಯುಪಿಎಗೆ ದೊಡ್ಡ ಬಲವಾಗುತ್ತಾರೆ. ಇದಕ್ಕೆಲ್ಲ ತಮ್ಮ ಬೇರನ್ನು ಗಟ್ಟಿಗೊಳಿಸಿಕೊಳ್ಳಬೇಕಾದದ್ದು ನಿತೀಶ್ಕುಮಾರ್ ಅವರ ಜವಾಬ್ದಾರಿ. ತಮ್ಮ ಪಕ್ಷದ ಬೆಂಬಲಕ್ಕಿದ್ದ ಮುಸ್ಲಿಮರು, ದಲಿತರು, ಹಿಂದುಳಿದವರ ಮತಗಳು ಲಾಲೂಪ್ರಸಾದ್ ಯಾದವರ ಪಕ್ಷಕ್ಕೆ ಹೋಗದಂತೆ ಮಾಡುವ ರಾಜಕೀಯ ತಂತ್ರಗಾರಿಕೆಯ ಒಂದು ಭಾಗ ಬಿಹಾರದ ಈ ಬೆಳವಣಿಗೆ. ಇದರಿಂದ ಬಿಜೆಪಿಗೆ ಹಾಗೂ ಎನ್ಡಿಎಗೆ ಹೊಡೆತ ಬಿದ್ದಿದ್ದಂತೂ ನಿಜ.