ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮಂತ್ರಿ ಮಂಡಲದ ಪುನಾರಚನೆ ಕಾಂಗ್ರೆಸ್ ರಾಜಕೀಯವೇ ಉದ್ದೇಶ

Mainashree
Updated On : 18 Jun 2013, 10:04 am

ಲೋಕಸಭೆ ಚುನಾವಣೆಗೆ ಮುನ್ನ ಕಟ್ಟಕಡೆಯ ಬಾರಿಗೆ ಕೇಂದ್ರ ಮಂತ್ರಿ ಮಂಡಲದ ಪುನಾರಚನೆಯಾಗಿರುವುದರ ಸ್ವರೂಪವನ್ನು ಗಮನಿಸಿದರೆ, ಆಡಳಿತಾತ್ಮಕ ಅವಶ್ಯಕತೆಗಿಂತ ಕಾಂಗ್ರೆಸ್ ರಾಜಕೀಯ ವ್ಯವಸ್ಥೆಗೇ ಹೆಚ್ಚು ಪ್ರಾಮುಖ್ಯ ನೀಡಿರುವುದು ಕಣ್ಣು ಕುಕ್ಕುವಂತೆ ಕಾಣುತ್ತಿದೆ.
ರಾಹುಲ ಗಾಂಧಿ ನಿಜ ರಾಜಕೀಯ ವಲಯಕ್ಕೆ ಧುಮುಕಿದ ಅನಂತರ, ಯುವಕರಿಗೆ ಉತ್ತೇಜನ, ಅವರಿಗೇ ಹೆಚ್ಚು ಅವಕಾಶವೆನ್ನುವ ಘೋಷಣೆಗಳು ಮೊಳಗಿದ್ದರೂ, ಮಂತ್ರಿ ಮಂಡಲದ ವಿಸ್ತರಣೆಯಲ್ಲಿ ಮಾತ್ರ ಅದು ಕಂಡುಬಂದಿಲ್ಲ.
ಪುನಾರಚಿತ ಮಂತ್ರಿ ಮಂಡಲದಲ್ಲಿ ಕರ್ನಾಟಕಕ್ಕೆ ಪಾಲು ಸಿಕ್ಕಿರುವುದು ನಿಜ. ಆದರೆ ಈಗಾಗಲೇ ಮಂತ್ರಿಯಾಗಿರುವ ಖರ್ಗೆ ಅವರಿಗೆ ರೈಲ್ವೆಯಂತಹ ಒಂದು ಬೃಹತ್ ಖಾತೆಯ ಜವಾಬ್ದಾರಿ ಸಿಕ್ಕಿರುವುದಕ್ಕೆ ಬಹುಮಟ್ಟಿಗೆ ಕಾರಣ ಅವರ ಕೈ ತಪ್ಪಿ ಹೋದ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಬದಲಾಗಿ ಕೇಂದ್ರದ ಬಹು ದೊಡ್ಡ ಮಂತ್ರಾಲಯದ ಅಧಿಪತಿಯ ಸ್ಥಾನವನ್ನೇ ನೀಡುವ ಉದ್ದೇಶ. ಅದು ಕರ್ನಾಟಕ ಕಾಂಗ್ರೆಸ್ಸಿನಲ್ಲಿ ವ್ಯಕ್ತಿಗಳ ನಡುವಣ ಸಂಬಂಧಕ್ಕೆ ಸೇರಿದ ವಿಚಾರ.
ನಾಲ್ಕು ವರ್ಷಗಳ ಅನಂತರ ಆಸ್ಕರ್ ಫರ್ನಾಂಡಿಸ್ ಮಂತ್ರಿಯಾಗಿರುವುದರ ಹಿನ್ನೆಲೆಯಲ್ಲಿ ಇರುವುದೂ ಅವರ ವ್ಯಕ್ತಿತ್ವವೇ. ನಿಷ್ಠೆಯೇ ಅವರ ಆಸ್ತಿ.
ಯುವಕರಿಗೆ ಸಿಗಬೇಕಾಗಿದ್ದ ಪಾಲು ಸಿಗದೇ ಇರುವುದಕ್ಕೆ ಮೂಲ ಕಾರಣ ರಾಜಸ್ಥಾನದಲ್ಲಿ ಈ ವರ್ಷದಲ್ಲೇ ನಡೆಯಲಿರುವ ವಿಧಾನಸಭೆ ಚುನಾವಣೆ ಸಮಯದಲ್ಲಿನ ಜಾತಿಯ ಲೆಕ್ಕಚಾರ. 86 ವರ್ಷದ ವಯೋವೃದ್ಧ ಸಿಸರಾಮ ಓಲಾ ಅಲ್ಲಿನ ಜಾಟ್ ಸಮುದಾಯದಲ್ಲಿ ಗೌರವಾನ್ವಿತ ನಾಯಕರು. ಈಗ ಕಾಂಗ್ರೆಸ್ಸಿಗೆ ಜಾಟ್ ಸಮುದಾಯದ ಮತಗಳು ತೀರ ಅಗತ್ಯ. ಅದೇ ರೀತಿ 67 ವಯಸ್ಸಿನ ಗಿರಿಜಾ ವ್ಯಾಸ್ ಅವರ ನೇಮಕ. ಅವರನ್ನು ನೇಮಿಸಿರುವುದು ಬ್ರಾಹ್ಮಣರ ಮತಗಳನ್ನು ಸೆಳೆಯಲು. ಗಿರಿಜಾ ವ್ಯಾಸ್ ಮಂತ್ರಿ ಮಂಡಲದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಸಾರುವುದಿಲ್ಲ. ಅವರ ಪ್ರಭಾವ ಕೆಲಸಕ್ಕೆ ಬರುವ ಕ್ಷೇತ್ರ ಬ್ರಾಹ್ಮಣರದ್ದು. ಕರ್ನಾಟಕದ ಆಸ್ಕರ್ ಫರ್ನಾಂಡಿಸ್ ನಿತ್ಯನೂತನ ಚಿರಯೌವನದ ವ್ಯಕ್ತಿ ಎನ್ನಬಹುದಾದರೂ ವಯಸ್ಸು 72.
ಹೀಗಾಗಿ, ಕೇಂದ್ರ ಸಚಿವ ಸಂಪುಟದ ಪುನಾರಚನೆಯಲ್ಲಿ ಪ್ರತಿಭೆ, ಪಕ್ಷ ನಿಷ್ಠೆ, ವಯಸ್ಸು, ಸಾಮರ್ಥ್ಯಗಳಿಗಿಂತ ನೂತನ ಸಚಿವರ ಆಯ್ಕೆಯಲ್ಲಿ ಅವರಿಂದ ಕಾಂಗ್ರೆಸ್ಸಿನ ರಾಜಕೀಯಕ್ಕೆ ಆಗುವ ಲಾಭವೇ ಮುಖ್ಯವಾಯಿತು. ಅದು ರಾಜಕೀಯ.
ಪುನಾರಚನೆಗೆ ಮುನ್ನ ಆಳುವ ಕೂಟದ ಸಂಗಾತಿ ಪಕ್ಷಗಳ ಪ್ರತಿನಿಧಿಗಳ ಕೈಯಲ್ಲಿದ್ದ ಎಲ್ಲ ಪ್ರಮುಖ ಖಾತೆಗಳೂ, ಶರದ್ ಪವಾರ್ ಅವರ ನೇತೃತ್ವದ ರಾಷ್ಟ್ರೀಯತಾ ಕಾಂಗ್ರೆಸ್ಸನ್ನು ಬಿಟ್ಟು, ಈಗ ಕಾಂಗ್ರೆಸ್ಸಿಗರ ವಶದಲ್ಲೇ ಇದ್ದಂತೆ ಆಯಿತು. ಚುನಾವಣೆಯ ವರ್ಷದಲ್ಲಿ ಕಾಂಗ್ರೆಸ್ಸಿಗೆ ಇದು ಒಂದು ದೊಡ್ಡ ಅನುಕೂಲವೇ. ಆದರೆ ಆಡಳಿತದ ಗುಣಮಟ್ಚಕ್ಕೆ ದೇಶದ ಜನರಿಗೆ ಈಗಿನ ಪುನಾರಚನೆಯಿಂದ ಸಲ್ಲುವ ಲಾಭವಾದರೂ ಏನು? ಅದನ್ನು ಹುಡುಕುವುದು ಕಷ್ಟ.
ಈಗಾಗಲೇ ಚಿದಂಬರಮ್ ಅವರು ಮಂಡಿಸಿರುವ ಬಜೆಟ್ ಸಂಸತ್ತಿನಲ್ಲಿ ಅಂಗೀಕಾರವಾಗಿ, ಬಜೆಟ್‌ನಲ್ಲಿ ಅಳವಡಿಸಲಾಗಿರುವ ಕಾರ್ಯಕ್ರಮಗಳಲ್ಲಿ ಅನೇಕ ಕಾರ್ಯಕ್ರಮಗಳು ಜಾರಿಗೆ ಬಂದಿವೆ. ಅಲ್ಲಿ ಆಯಾ ಖಾತೆಗಳನ್ನು ಹೊಸದಾಗಿ ವಹಿಸಿಕೊಂಡಿರುವ ಮಂತ್ರಿಗಳು ಈಗ ಹೊಸದಾಗಿ ಮಾಡಲಿಕ್ಕೆ ಇರುವ ಕೆಲಸವಾದರೂ ಏನು? ಸರ್ಕಾರದ ಕೆಲಸ ನಡೆಯುವ ವಿಧಾನ ಹಾಗೂ ಅದಕ್ಕೆ ಸಂಬಂಧಪಟ್ಟ ವಿಷಯಗಳನ್ನು ತಿಳಿದವರು ಯಾರೂ ಇಂತಹ ಪ್ರಶ್ನೆಯನ್ನು ಕೇಳುವುದಕ್ಕೆ ಹೋಗಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement