ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಉದ್ಯೋಗ ಸೃಷ್ಟಿಸದ ಯೋಜನೆ ಕೋಟಿ ನಿರುದ್ಯೋಗಿಗಳ ದೇಶ

Mainashree
Updated On : 21 Jun 2013, 9:59 am

ಸರ್ಕಾರದ ವಕ್ತಾರರು ಹಾಗೂ ಪ್ರಕಟಣೆಗಳು ದೇಶದ ಪ್ರಗತಿಯನ್ನು ಕುರಿತು ಪ್ರಕಟಿಸುವ ಅಂಕಿ-ಅಂಶಗಳು ಹೇಗಾದರೂ ಇರಲಿ, ಕಳೆದ ಐದು ವರ್ಷಗಳಲ್ಲಿ ಹೊಸದಾಗಿ ಸೃಷ್ಟಿಯಾದ ಉದ್ಯೋಗಗಳೂ ಹಿಂದಿಗಿಂತ ಕಡಿಮೆ. ನಿರುದ್ಯೋಗಿಗಳ ಸಂಖ್ಯೆಯೂ ಹೆಚ್ಚಿದೆ.ಇದು ಕೇಂದ್ರ ಸರ್ಕಾರದ ಆದೇಶದಂತೆ ಯೋಜನೆಗಳು, ಅಭಿವೃದ್ಧಿ ಹಾಗೂ ಉದ್ಯೋಗಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಘಟನೆ ನಡೆಸಿದ ವಿಶೇಷ ಸಮೀಕ್ಷೆಯ ವರದಿ. ಈಗಷ್ಟೇ ಪ್ರಕಟವಾದ ಈ ವರದಿಯಂತೆ 2011-12ನೇ ಸಾಲಿನಲ್ಲಿ ಉದ್ಯೋಗಗಳ ಸೃಷ್ಟಿಯ ವೇಗ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ. ಅದಕ್ಕಿಂತ ಹೆಚ್ಚಾಗಿ ಈಗ ನಿರುದ್ಯೋಗಿಗಳ ಸಂಖ್ಯೆ ಹಿಂದಿಗಿಂತ ಹೆಚ್ಚಾಗಿದೆ. ದುಡಿಯುವ ಶಕ್ತಿ ಹಾಗೂ ಇಚ್ಛೆ ಇರುವ ಒಂದು ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇದೇನೂ ಸರ್ಕಾರಕ್ಕೆ ತೃಪ್ತಿಯನ್ನು ತಂದುಕೊಡುವಂತಹ ಸುದ್ದಿ ಅಲ್ಲ. ಉದ್ಯೋಗಿಗಳ ಸಂಖ್ಯೆಯನ್ನು ಲೆಕ್ಕ ಮಾಡುವಾಗ ಸರ್ಕಾರವೇ ಒದಗಿಸುತ್ತಿರುವ ವಿಶೇಷ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗಗಳೂ ಸೇರಿಕೊಂಡಿವೆ. ಸಮೀಕ್ಷೆಯ ವರದಿಯಲ್ಲಿ ಪ್ರಕಟವಾಗಿರುವ ವಿಫುಲವಾದ ಅಂಕಿ-ಅಂಶಗಳನ್ನು ಬದಿಗಿಟ್ಟು ವರದಿಯ ಸ್ಥೂಲ ಸಾರಾಂಶವನ್ನಷ್ಟೇ ಗಮನಿಸಿದರೂ ನಿರುದ್ಯೋಗ ನಿವಾರಣೆ ಸಂಬಂಧದಲ್ಲಿ ನಮ್ಮ ಯೋಜನೆಗಳು ನೀಡಿರುವ ಫಲ ನಿರೀಕ್ಷೆ ಹಾಗೂ ಅಗತ್ಯಕ್ಕಿಂತ ಕಡಿಮೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಿಗಳ ಸಂಖ್ಯೆ, ಅದರಲ್ಲೂ ಕೃಷಿ ವಲಯದಲ್ಲಿ ದುಡಿಯುವವರ ಸಂಖ್ಯೆ, ಕಡಿಮೆಯಾಗಿದೆ. ಮೊಟ್ಟ ಮೊದಲ ಬಾರಿಗೆ, ದೇಶದಲ್ಲಿನ ದುಡಿಮೆಗಾರರಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಜನ ಈಗ ಕೃಷಿ ವಲಯದಲ್ಲಿ ದುಡಿಯುತ್ತಾರೆ. ಅದರಲ್ಲೂ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ.
ಇದಕ್ಕೆ ಕಾರಣ, ಗ್ರಾಮೀಣ ಯುವಕರು, ಪೇಟೆ-ಪಟ್ಟಣಗಳಲ್ಲಿ ದುಡಿಯಲು ಹೋಗುತ್ತಿರುವುದು ಹಾಗೂ ಮಹಿಳೆಯರಲ್ಲಿ ಸ್ವಂತ ಉದ್ಯೋಗ ಮಾಡುವವರು ಹೆಚ್ಚಾಗಿರುವುದು. ಆದರೆ ಅವರು ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಈಚಿನ ಆರ್ಥಿಕ ಹಿಂಜರಿತದ ಪರಿಣಾಮವಾಗಿ ನಿರುದ್ಯೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ, ಅಷ್ಟೇ ಅಲ್ಲ ಅನೇಕರು ಹಿಂದೆ ಇದ್ದ ನೌಕರಿಗಳನ್ನು ಕಳೆದುಕೊಂಡಿದ್ದಾರೆ, ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಬಹುಮಟ್ಟಿಗೆ ಹೊಸ ಉದ್ಯೋಗಗಳು ಸೃಷ್ಟಿಯಾಗಿರುವುದು ಬಿಡಿ ಉದ್ಯೋಗದ ವಲಯದಲ್ಲಿ - ಅಂದರೆ ಸಿಕ್ಕಿದರೆ ಸಿಕ್ಕಿತು ಇಲ್ಲದಿದ್ದರೆ ಇಲ್ಲ. ಸುಭದ್ರ ಉದ್ಯೋಗಗಳ ಸಂಖ್ಯೆ ಹೆಚ್ಚಿದ್ದರೂ, ಅದರ ಪ್ರಮಾಣ ಕಡಿಮೆ. ಯುವಕರಿಗೆ ನೌಕರಿ ಸಿಗುತ್ತಿಲ್ಲ. ಜಗತ್ತಿನಲ್ಲಿ ಭಾರತವನ್ನು ಜವ್ವನಿಗರ ದೇಶ ಎನ್ನುತ್ತಾರೆ. ಒಟ್ಟು ಜನಸಂಖ್ಯೆಯಲ್ಲಿ ಯುವಕರ ಪಾಲು ಹೆಚ್ಚು. ಅವರ ದುಡಿಮೆಯ ಶಕ್ತಿಯನ್ನು ಬಳಸಿಕೊಳ್ಳುವ ರೀತಿಯಲ್ಲಿ ನಮ್ಮ ಯೋಜನೆಗಳು ರೂಪಗೊಂಡರೆ ಹೆಚ್ಚು ಹೆಚ್ಚು ಸಂಪತ್ತಿನ ಸೃಷ್ಟಿ ಸಾಧ್ಯ. ಅದಕ್ಕೆ ಯುವಕರಲ್ಲಿ ಕೌಶಲ ಬೇಕು. ಅದನ್ನು ಕಲಿಸುವ ಆಂದೋಲನವೇ ನಡೆಯಬೇಕಾಗಿದೆ.
  ಔದ್ಯಮಿಕ ಪ್ರಗತಿಯ ದಿಕ್ಕು-ದೆಸೆ ಬದಲಾಗಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement