ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಉತ್ತರಾಖಂಡದ ಭವಿಷ್ಯ

Mainashree
Updated On : 24 Jun 2013, 11:47 am

ಉತ್ತರಾ ಖಂಡದಲ್ಲಿನ ಪ್ರಕೃತಿಯ ಪ್ರಕೋಪಕ್ಕೆ ಸಿಕ್ಕಿ ಬಿದ್ದ ಪ್ರವಾಸಿಗರು, ಯಾತ್ರಿಕರು ಇನ್ನು ಕೆಲವೇ ದಿನಗಳಲ್ಲಿ ತಮ್ಮ ತಮ್ಮ ಊರುಗಳನ್ನು ಸೇರಿಕೊಳ್ಳುತ್ತಾರೆ. ಅಲ್ಲೇ ಪ್ರಾಣ ಕಳೆದುಕೊಂಡವರ ಬಂಧು-ಮಿತ್ರರು ತಮ್ಮ ಮಾಮೂಲಿ ಜೀವನದಲ್ಲಿ ತೊಡಗುತ್ತಾರೆ. ಜೀವನ ವಾಹಿನಿ ನಿರಂತರವಾಗಿ ಹರಿಯುತ್ತಲೇ ಇರುತ್ತದೆ.
ಆದರೆ ನಿಸರ್ಗದ ಮುನಿಸಿನ ಪರಿಣಾಮದ ಜತೆಯಲ್ಲೇ ಅಲ್ಲಿನ ನಿವಾಸಿಗಳು ಬದುಕಿ ಬಾಳಬೇಕು. ಆ ಪ್ರದೇಶಗಳ ಜನರಲ್ಲಿ ಈಗ ಒಂದು ದೊಡ್ಡ ಸಮುದಾಯ "ನಿರಾಶ್ರಿತರ" ಹಂತವನ್ನು ತಲುಪಿದ್ದಾರೆ. ಪ್ರವಾಸೋದ್ಯಮವೇ ಅಲ್ಲಿನ ಜನ ಜೀವನದ ಒಂದು ದೊಡ್ಡ ಭಾಗ. ಈಗ ಅದಕ್ಕೆ ಭಾರಿ ಪೆಟ್ಟು ಬಿದ್ದಿದೆ. ಒಂದು ಪ್ರಕಟಿತ ವರದಿಯ ಅಂದಾಜಿನಂತೆ ಮೂರು ಜಿಲ್ಲೆಗಳಲ್ಲಿ ಸುಮಾರು ಹದಿಮೂರು ಸಹಸ್ರ ಸಣ್ಣ-ಪುಟ್ಟ ಉದ್ಯಮಿಗಳು, ವ್ಯಾಪಾರಿ ಮಳಿಗೆಗಳು ಕೊಚ್ಚಿ ಹೋಗಿವೆ. ಕೆಲವು ವಿದ್ಯುತ್ ಸ್ಥಾವರಗಳು ನಿರುಪಯೋಗಿ ಎನ್ನುವ ಹಂತವನ್ನು ತಲುಪಿವೆ. ಈಗಿನ ವಿಪತ್ತಿನ ಪರಿಸ್ಥಿತಿಯನ್ನು ಕುರಿತು ಜನರಲ್ಲಿ ಸಾಕಷ್ಟು ತಿಳಿವಳಿಕೆ ಮೂಡಿದೆ ಎನ್ನುವುದು ನಿಜ. ಆದರೆ ಆ ಪರ್ವತ ರಾಜ್ಯದ ಮೂರು ಜಿಲ್ಲೆಗಳಲ್ಲಿ, ಸದ್ಯದಲ್ಲಿ ಜನರನ್ನು "ಬದುಕಿಸಿ" ಮುಂದೆ ಅವರ ಜನಜೀವನಕ್ಕೆ ಅಗತ್ಯವಾದ ಅನುಕೂಲಗಳನ್ನು ಕಲ್ಪಿಸಿಕೊಡುವ ಪುನರ್ನಿರ್ಮಾಣ ಕೆಲಸ ಅಲ್ಪ ಕಾಲದಲ್ಲೇ ಆಗುವಂತಹದ್ದಲ್ಲ. ರಾಷ್ಟ್ರೀಯ ವಿಪತ್ತು ಪರಿಹಾರ ಹಾಗೂ ನಿರ್ವಹಣೆಯ ಕಾಯಿದೆ ಜಾರಿಯಲ್ಲಿದ್ದರೂ, ಅದರ ಉಪಯುಕ್ತತೆ ಈಗಿನ ವಿಪತ್ತಿನ ಸಮಯದಲ್ಲಿ ಕಂಡು ಬರಲಿಲ್ಲ. ಜನರ ಸಂಕಷ್ಟದ ನಿವಾರಣೆಗೆ ಒಂದು ಕೇಂದ್ರೀಕೃತ ನಿರ್ದೇಶನದ ವ್ಯವಸ್ಥೆಯೇ ಇರಲಿಲ್ಲ. ನೆರೆ, ಬೆಟ್ಟಗಳ ಕುಸಿತ, ಗಾಳಿಯ ಹಾವಳಿಯ ಸಂತ್ರಸ್ತರ ರಕ್ಷಣೆಯ ಸಂಬಂಧದಲ್ಲಿ ಪ್ರಾಯಶಃ ಅಂತಹ ಕೇಂದ್ರೀಕೃತ ನಿರ್ದೇಶನದ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡದೇ ಇರಬಹುದು. ಆದರೆ ಸಾವಿರಾರು ಕುಟುಂಬಗಳ ಜೀವನವನ್ನು ಅಕ್ಷರಶಃ ಮತ್ತೆ ಆರಂಭಿಸಲು ಸೂಕ್ತ ನೆರವು ನೀಡಿಕೆಯ ಕಾರ್ಯಕ್ರಮದಲ್ಲಿ, ಈಗ ವಿಪತ್ತಿನ ನಿರ್ವಹಣೆಯಲ್ಲಿ ತಲೆ ಹಾಕಿರುವ ರಾಜಕೀಯ ತಲೆ ಹಾಕದಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯ. ಉತ್ತರಾಖಂಡದ ಮೂರು ಜಿಲ್ಲೆಗಳಲ್ಲಿ ಈಗ ಮಾಡಬೇಕಾಗಿರುವ ಕೆಲಸದ ಪ್ರಮಾಣ ಅಗಾಧವಾದದ್ದು. ಅದನ್ನು ಒಂದು ಮಾದರಿಯ ಕಾರ್ಯಕ್ರಮವಾಗಿ ರೂಪಿಸುವ ಅವಕಾಶ ಈಗ ಕೇಂದ್ರ ಹಾಗೂ ಉತ್ತರಾಖಂಡದ ರಾಜ್ಯ ಸರ್ಕಾರಗಳ ಮೇಲಿದೆ. ಆ ಪ್ರದೇಶದ ವಿಶೇಷ ಸ್ಥಾನ-ಮಾನದ ವಿಚಾರದ ಗೊಂದಲವನ್ನು ಒತ್ತಟ್ಟಿಗಿಟ್ಟು, ಬದುಕಿನಲ್ಲಿ ಎಲ್ಲವನ್ನು ಕಳೆದುಕೊಂಡು ಹತಾಶವಾಗಿರುವ ಸ್ವದೇಶಿ ನಿರಾಶ್ರಿತ ಸಮುದಾಯವನ್ನು ನಾಗರಿಕ ಸಮಾಜದಲ್ಲೇ ಉಳಿಸಿಕೊಳ್ಳಬೇಕಾಗಿದೆ. ಇಲ್ಲಿ ಕೆಟ್ಟ ರಾಜಕೀಯ ಸಲ್ಲದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement