ತಪ್ಪಾಯ್ತು ತಿದ್ಕೋತೀವಿ
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಜೂ.18 ಪತ್ರಪ್ರಭದಲ್ಲಿ 'ಗಾಂಧೀಜಿ ಕುತ್ತಿಗೆ ಹಿಚುಕಿದ್ದು...' ಕುರಿತಾಗಿ ಡಾ. ಎಂ. ಚಿದಾನಂದಮೂರ್ತಿ ಅವರ ಪತ್ರ ಪ್ರಕಟವಾಗಿದೆಯಷ್ಟೆ! ಈ ಪತ್ರದ 8ನೇ ಸಾಲಿನಲ್ಲಿ 30.1.1949ರಂದು ನಾಥೂರಾಮ್ ಗೋಡ್ಸೆ ಗಾಂಧೀಜಿಯವರನ್ನು ಪ್ರಾರ್ಥನಾ ಸಭೆಯಲ್ಲಿ ಗುಂಡಿಟ್ಟು ಕೊಂದನೆಂದು ಪ್ರಕಟವಾಗಿದೆ. ಪ್ರಾಯಶಃ ಡಾ. ಚಿದಾನಂದಮೂರ್ತಿಗಳು 1949 ಎಂದು ಬರೆದಿರಲಾರರೆಂದು ಭಾವಿಸುತ್ತೇನೆ. ಗಾಂಧೀಜಿಯ ಹತ್ಯೆ ನಡೆದುದು 1948ರ ಜನವರಿ 30 ಎಂಬುದು ನನ್ನ ತಿಳಿವಳಿಕೆ. ತಿದ್ದಿಕೊಂಡು ಓದೋಣ ಅಲ್ಲವೇ!?' ಎಂದಿದ್ದಾರೆ.
ಮೈಸೂರಿನಿಂದ ಸಿ. ದಿನಮಣಿ ರಾವ್ ಅವರು ಬರೆಯುತ್ತಾರೆ- 'ಪತ್ರಿಕೆಯ ಜೂನ್ 7ರ ಶುಕ್ರವಾರದ ಪುಟ 4, (ಮೈಸೂರು) ಇದರಲ್ಲಿ 'ಗಣ್ಯರ ಕೆಂಪು ದೀಪಕ್ಕೆ ರೆಡ್ ಸಿಗ್ನಲ್' ವರದಿಗೆ ಪೂರಕವಾಗಿ ಸರ್ಕಾರದ ಸುತ್ತೋಲೆಯ ಪ್ರತಿಯನ್ನು -ಓದುಗರ ಮಾಹಿತಿಗಾಗಿ ಪ್ರಕಟಿಸಿದ್ದೀರಿ. (ಓದಲಾಗದ ಮಾಹಿತಿ)'
'ಈ ಸುತ್ತೋಲೆಯನ್ನು ನನ್ನ 2.75 ಪವರ್‌ನ ಕನ್ನಡಕದಿಂದ ಓದಲಾಗಲಿಲ್ಲ. ಇನ್ನು ಮಾಮೂಲಿ ಕಣ್ಣಿನಲ್ಲಿ ಓದುವುದು ಸಾಧ್ಯವೆ? ಎನಿಸಿತು. ಈ ರೀತಿಯ ಸೂಕ್ಷ್ಮಾತಿಸೂಕ್ಷ್ಮ ಮುದ್ರಣದ ಸುತ್ತೋಲೆಗಳನ್ನು (ಈ ಹಿಂದೆ ಈ ರೀತಿಯವು ಅನೇಕ ವೇಳೆ-ಬಂದಿದ್ದುಂಟು) ಯಾವ ಪುರುಷಾರ್ಥಕ್ಕಾಗಿ ಮುದ್ರಿಸುತ್ತೀರಿ. ಒಂದೊಂದು ಅಕ್ಷರಕ್ಕೂ ಚೌಕಾಶಿ ಮಾಡಿ ತಾವು ಇಂತಹ ವರದಿಯನ್ನು ಪ್ರಕಟಿಸಿ ಸ್ಥಳವನ್ನು ವ್ಯರ್ಥ ಮಾಡುವುದೇಕೆ?' ಎಂದು ಪ್ರಶ್ನಿಸಿದ್ದಾರೆ.
ನಮಗೂ ಗೊತ್ತು ಈ ರೀತಿ ಪ್ರಕಟಿಸುವ ವರದಿ, ಆದೇಶದ ಪ್ರತಿಗಳನ್ನು ಓದುಗರಿಗೆ ಓದಲು ಸಾಧ್ಯವಿಲ್ಲ ಅಂತ. ವರದಿ, ಆದೇಶದಲ್ಲಿರುವ ಮಾಹಿತಿಯನ್ನೇ ಸುದ್ದಿಯಲ್ಲಿ ಪ್ರಕಟಿಸಿರುತ್ತೇವೆ. ಇಲ್ಲವಾದಲ್ಲಿ ಆದೇಶ ಪ್ರತಿಯನ್ನೇ ದೊಡ್ಡದಾಗಿ ಪ್ರಕಟಿಸಿದರೆ ಸಾಕು. ಸುದ್ದಿಯ ಅಗತ್ಯವೇ ಇಲ್ಲ. ಆದೇಶದ ಪ್ರತಿ ಪತ್ರಿಕೆಗೆ ಲಭ್ಯವಾಗಿದೆ ಎಂಬುದನ್ನು ಸೂಚ್ಯವಾಗಿ ಹೇಳುವ ಉದ್ದೇಶದಿಂದ ಅದರ ಪ್ರತಿಯನ್ನು ಪ್ರಾತಿನಿಧಿಕವಾಗಿ ಪ್ರಕಟಿಸಲಾಗುತ್ತದೆ.
ಬೆಂಗಳೂರಿನಿಂದ ವಿ. ಹೇಮಂತಕುಮಾರ ಅವರು ಬರೆಯುತ್ತಾರೆ- 'ಜೂ.20ರ ಸಂಚಿಕೆಯ ಪುಟ 7ರಲ್ಲಿ 'ಶಂಕಿತ ಡೆಂಘೀಗೆ ಮೊಮ್ಮಗಳು, ಅಜ್ಜಿ ಬಲಿ' ಶೀರ್ಷಿಕೆಯ ಸುದ್ದಿಯಲ್ಲಿ ವಿದ್ಯಾರ್ಥಿನಿ ತನುಜಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ 'ದಾವಣಗೆ' ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಎಂದಿದೆ. ದಾವಣಗೆರೆ ಎಂದಿರಬೇಕಿತ್ತು. ಪುಟ 8ರಲ್ಲಿ ಸಂಪಾದಕೀಯದಲ್ಲಿ 'ಕಳ್ಳ ಗಣಿ: ಯಾರನ್ನೂ ಬಿಡಲ್ಲ!' ಮುಖ್ಯಮಂತ್ರಿ ಭರವಸೆ ಶೀರ್ಷಿಕೆಯ ಸುದ್ದಿಯಲ್ಲಿ ಮಾಜಿ ಲೋಕಾಯುಕ್ತ 'ನಿವೃತ್ತ ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಎಂದಿದೆ. ಇದು ಎಷ್ಟು ಸಮಂಜಸ? 'ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ' ಸಂತೋಷ ಹೆಗ್ಡೆ ಎಂಬುದೇ ಸೂಕ್ತವಲ್ಲವೇ?' ಎಂದಿದ್ದಾರೆ.
ವಿಶ್ವೇಶ್ವರ ಭಟ್