ಈಗಲೇ ಎಚ್ಚೆತ್ತುಕೊಳ್ಳಬೇಕು
ದೇವಕನ್ಯೆ ಗಂಗೆ ಸೊಕ್ಕಿ ಉಕ್ಕೇರಿ ಹರಿದಿದ್ದಾಳೆ. ಜೀವ ಜಲವಾಗಬೇಕಾದ ನೀರು ಅದೆಷ್ಟೋ ಜನರ ಜೀವ, ಬದುಕು ಎರಡನ್ನೂ ಹೊತ್ತೊಯ್ದಿದೆ. ಗಂಗೆಯ ಆಕ್ರೋಶಕ್ಕೆ ಕಾರಣವೇನಿರಬಹುದು? ತನ್ನೊಡಲಲ್ಲಿ ಸದಾ ತೇಲುವ ಅರೆಬೆಂದ ಹೆಣಗಳು, ಕಾರ್ಖಾನೆಗಳ ತ್ಯಾಜ್ಯ, ಮನುಷ್ಟ ಎಷ್ಟು ಸಾಧ್ಯವೋ ಅಷ್ಟನ್ನೂ ಮಲಿನಗೊಳಿಸಿದ ತನ್ನನ್ನು ಸ್ವಚ್ಛ ಮಾಡುವ ಪವಿತ್ರತೆಯ ಅರ್ಥವನ್ನು ನಿಜವಾಗಿಸುವ ಕೈಗಳಿಗಾಗಿ (ಶಿವನನ್ನು ಒಳಗೊಂಡಂತೆ) ಕಾದು ಸೋತಿರಬಹುದೆ? ಸೋಲಿನ ಅಸಹಾಯಕತೆ ಆಕ್ರೋಶವಾಗಿ ಮಾರ್ಪಟ್ಟು ತನ್ನನ್ನು ತಾನು ಸ್ವಚ್ಛಗೊಳಿಸಿಕೊಳ್ಳಲು, ಮಲಿನವೆಲ್ಲವೂ ಕೊಚ್ಚಿ ಹರಿದು ಹೋಗುವಂತೆ ಉಕ್ಕಿ ಹರಿದಿರಬಹುದೇ?
ಒಂದಂತೂ ಸತ್ಯ. ತಾನೇನೋ ಸಾಧಿಸಿ ಬಿಡಬಲ್ಲೇ ಎಂಬ ಮನುಕುಲದ ಹಮ್ಮಿಗೆ ಮುನಿಸಿಕೊಂಡ ಪ್ರಕೃತಿ ನೀಡಿದ ಏಟು ಮುಟ್ಟಿನೋಡಿಕೊಳ್ಳುವಂತಿದೆ. ನಿಸರ್ಗದ ಸಮತೋಲನವನ್ನು ತಪ್ಪಿಸಿ ಹಾಳುಗೆಡವುತ್ತಿರುವ ನಾವು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಇಂತಹ ಅನರ್ಥಗಳು ದಿನವೂ ಕಾಡಬಹುದು.
-ಶೀಲಾ ಸತ್ಯೇಂದ್ರಸ್ವಾಮಿ, ಹರವೆ ಮಠ, ಚಾಮರಾಜನಗರ
ನಕ್ಸಲರ ಕರಾಳಮುಖ
ದಿ. 12.6.13ರ ಸಂಚಿಕೆಯ ಸೈಪುಲ್‌ಹಕ್‌ರವರ 'ಮಾವೋವಾದಿಗಳಿಗೆ ಮಹಿಳೆಯರೆಂದರೆ ಮೋಜು' ನಿಜಕ್ಕೂ ನಕ್ಸಲ್‌ವಾದಿಗಳ ಇನ್ನೊಂದು ಕ್ರೂರ ಮುಖದ ಪರಿಚಯ ಮಾಡಿಸಿತು. ನಕ್ಸಲರೆಂದರೆ ಶೋಷಣೆ ವಿರುದ್ಧ, ಅಸಮಾನತೆ, ಹಿಂದುಳಿದವರ ಪರವಾಗಿ ನಡೆಸುವ ಒಂದು ಹೋರಾಟ ಎಂದು ತಿಳಿದಿದ್ದ ನನಗೆ ಭ್ರಮನಿರಸನವಾಯಿತು. ಅದನ್ನು ಪುಷ್ಟೀಕರಿಸುವ ಮಾಧ್ಯಮ ಮತ್ತು ಬುದ್ಧಿಜೀವಿಗಳಿಗೆ ಸಹ ಒಂದು ನೀತಿ ಪಾಠದಂತಿದೆ. ಸಮಾನತೆಗಾಗಿ ಹೋರಾಡುವುದು ಎಂದು ಬಿಂಬಿಸಿಕೊಳ್ಳುವವರಿಗೆ ಸ್ತ್ರೀ ಸಮಾನತೆ ಕಾಣಿಸದಿದ್ದುದು ಆಶ್ಚರ್ಯ. ಹಾದರ, ಅತ್ಯಾಚಾರ, ಹೆಂಡತಿ ಬದಲಾವಣೆ ಎಲ್ಲ ನಡೆಯುತ್ತಿದೆ ಎಂದರೆ ಅದನ್ನು ಎಲ್ಲರೂ ಸಹ ಖಂಡಿಸಲೇಬೇಕು. ಸ್ತ್ರೀ ಸಂಘಗಳು ಈ ಬಗ್ಗೆ ಯಾಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ತಿಳಿದು ಬಂದಿಲ್ಲ. ಏನೋ ಸಾಧಿಸಲು ಹುಮ್ಮಸ್ಸಿನಿಂದ ನಕ್ಸಲ್‌ವಾದಕ್ಕೆ ಬೀಳುವ ಅದರಲ್ಲೂ ಸ್ತ್ರೀಯರಿಗೆ ಒಂದು ಎಚ್ಚರದ ಘಂಟೆ.
-ಕಡಸೂರು ಶಂಕರನಾರಾಯಣ, ಮೈಸೂರು.
ಸರಿಯಾದ ನಡೆ
ರಾಜ್ಯದಲ್ಲಿ ಮತ್ತಷ್ಟು ಮದ್ಯ ಅಂಗಡಿ ತೆರೆಯಲು ಪರವಾನಿಗೆ ನೀಡಲು ಮುಂದಾಗಿರುವ ಸರ್ಕಾರದ ಕ್ರಮ ಸರಿ. ಯಾಕೆಂದರೆ ಪ್ರತಿ ಹಳ್ಳಿ-ಹಳ್ಳಿಗಳಲ್ಲೂ ಮನೆ-ಮನೆಯಲ್ಲೂ ಮದ್ಯಪಾನಿಗಳಿದ್ದಾರೆ. ಇವರಿಗೆ ಉತ್ಕೃಷ್ಟವಾದ ಮದ್ಯ ಸಿಗದೆ ಅಗ್ಗದ ಸ್ಪಿರಿಟ್ ಜಾಸ್ತಿ ಇರುವ ಅಥವಾ ಕಳ್ಳಭಟ್ಟಿ ಕುಡಿದು ಹಾಳಾಗುವುದಲ್ಲದೆ ಕೆಲ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರಿದ್ದಾರೆ. ಕಾರಣ ಸರ್ಕಾರ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವುದರ ಜೊತೆಗೆ ಎಂ.ಎಸ್.ಐ.ಎಲ್. ಮದ್ಯ ಮಾರಾಟ ಕೇಂದ್ರ ಆರಂಭಿಸಿ ಅವುಗಳಲ್ಲಿ ಅಶಕ್ತರು ಮತ್ತು ಅಂಗವಿಕಲರಿಗೆ ಉದ್ಯೋಗಾವಕಾಶ ಮಾಡಿ ಕೊಡಲಿ ಎಂದು ಸಿ.ಎಂ.ರವರಲ್ಲಿ ಮನವಿ.
-ಈ.ಜಿ. ರೆಡ್ಡಿ, ಚರಕುಂಟೆ, ಬಳ್ಳಾರಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com