ತಪ್ಪಾಯ್ತು ತಿದ್ಕೋತೀವಿ
ಯಾರು ಹೇಳದಿದ್ದರೂ ನಾವು ಕ್ಷಮೆ ಯಾಚಿಸಲೇ ಬೇಕಿದೆ. ಓದುಗರಿಗೆ ಈ ತಪ್ಪು ಗೊತ್ತಾಗದೇ ಇರಬಹುದು. ಆದರೆ ಇಂತಹ ಅಪಚಾರ ಎಸಗಿ ಸುಮ್ಮನಿರುವುದು ನಮಗೆ ಶೋಭೆಯಲ್ಲ.
ಜೂ.28ರ ಪತ್ರಿಕೆಯ 12ನೇ ಪುಟದಲ್ಲಿ ಮಣಿಪಾಲ ಅತ್ಯಾಚಾರ ಪ್ರಕರಣ ಸುದ್ದಿ ಪ್ರಕಟವಾಗಿದೆ. ಅದರಲ್ಲಿ ಆರೋಪಿಯೊಬ್ಬನ ಫೋಟೊ ಪ್ರಕಟಿಸುವ ಬದಲು ಸುದ್ದಿಗೆ ಸಂಬಂಧಿಸದೇ ಇರುವ ವ್ಯಕ್ತಿಯೊಬ್ಬರ ಚಿತ್ರ ಪ್ರಕಟಿಸಲಾಗಿದೆ. ಉಡುಪಿ ಆವೃತ್ತಿಗೆ ಹೋಗಿಲ್ಲ. ಆದರೆ ಬೇರೆ ಆವೃತ್ತಿಗಳಲ್ಲಿ ಪ್ರಕಟವಾಗಿದೆ. ಇದ್ದುದರಲ್ಲಿ ಮುಖಕ್ಕೆ ಅಡ್ಡಪಟ್ಟಿ ಹಾಕಿದ್ದರಿಂದ ಆ ವ್ಯಕ್ತಿಗೆ ಸ್ವಲ್ಪಮಟ್ಟಿನ ಹಾನಿ ಕಡಿಮೆಯಾಗಿರಬಹುದು.
ಆದರೆ ಇದು ನಮ್ಮ ಕಡೆಯಿಂದಾದ ಅತ್ಯಂತ ಗಂಭೀರವಾದ ತಪ್ಪು ಎಂಬುದರಲ್ಲಿ ಅನುಮಾನವಿಲ್ಲ. ಇದಕ್ಕೆ ನಾವು ಭಾವಚಿತ್ರದಲ್ಲಿರುವ ವ್ಯಕ್ತಿಯ ಕ್ಷಮೆಯಾಚಿಸುತ್ತೇವೆ. ಫೋಟೊ ಫೈಲ್‌ನೇಮ್‌ನಲ್ಲಾದ ವ್ಯತ್ಯಾಸದಿಂದ ಈ ತಪ್ಪಾಗಿದೆ. ಹೇಗೆ ಆಗಿದ್ದರೂ ತಪ್ಪು ತಪ್ಪೇ. ಅಪರಾಧ ಸುದ್ದಿಗಳಲ್ಲಿ ಭಾವಚಿತ್ರ ಪ್ರಕಟಿಸುವಾಗ ಎಷ್ಟು ಎಚ್ಚರ ವಹಿಸಿದರೂ ಸಾಲದು. ಅಪರಾಧ ಸುದ್ದಿಪುಟದಲ್ಲಿ ಭಾವಚಿತ್ರ ಪ್ರಕಟವಾದರೆ ಖುಷಿಪಡುವವರು ಬಹುಶಃ ಪೊಲೀಸರು ಮಾತ್ರ.
ಬೆಂಗಳೂರಿನಿಂದ ರಾಜೀವ ಪಟವರ್ಧನ್ ಅವರು ಬರೆಯುತ್ತಾರೆ- 'ಜೂ.19ರಂದು (ಪುಟ 5) 'ಜಿ.ಎಸ್.ಎಸ್. ತಾರತಮ್ಯ ಇಲ್ಲದ ಪ್ರಗತಿಪರ ವ್ಯಕ್ತಿತ್ವ ಉಳ್ಳವರು' ಎಂಬ ಚಿತ್ರ ವರದಿ ಪ್ರಕಟಿಸಿದ್ದೀರಿ. ಆದರೆ ಪ್ರಕಟಿಸಿದ ಚಿತ್ರಕ್ಕೂ ವರದಿಗೂ ಸಂಬಂಧವೇ ಇಲ್ಲ. ಚಿತ್ರದಲ್ಲಿ ಡಾ. ಸಿ.ಎನ್. ರಾಮಚಂದ್ರನ್, ಡಾ. ಆಶಾದೇವಿ, ಡಾ. ಬಿ.ಯು. ಸುಮ ಎಂದಿದೆ. ಆದರೆ ವರದಿಯಲ್ಲಿ ಡಾ. ಸಿದ್ದಲಿಂಗಯ್ಯ ಹೇಳಿದರು ಎಂದಿದೆ.'
'ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಸಿ.ಬಿ. ಹೊನ್ನುಸಿದ್ದಾರ್ಥ್, ಡಾ. ಎಸ್. ವಿದ್ಯಾಶಂಕರ, ಶೂದ್ರ ಶ್ರೀನಿವಾಸ ಭಾಗವಹಿಸಿದ್ದರು. ಆದರೆ ಪ್ರಕಟಿಸಿದ ಚಿತ್ರದಲ್ಲಿ ಅವರು ಯಾರೂ ಇಲ್ಲ.'
ಜೂ.23ರಂದು (ಪುಟ 14) '60 ಲಕ್ಷ ಫೇಸ್‌ಬುಕ್ ಬಳಕೆದಾರರ ಮಾಹಿತಿ ಸೋರಿಕೆ' ಎಂಬ ಸುದ್ದಿಯಿದೆ. ಅದು '60 ಮಿಲಿಯನ್ ಫೇಸ್‌ಬುಕ್ ಬಳಕೆದಾರರ ಮಾಹಿತಿ ಸೋರಿಕೆ' ಎಂದಾಗಬೇಕಿತ್ತು' ಎಂದಿದ್ದಾರೆ.
ಬೆಂಗಳೂರಿನ ಜಯನಗರದಿಂದ ವಿ. ಲಕ್ಷ್ಮೀನಾರಾಯಣ ರಾವ್ ಅವರು ಬರೆಯುತ್ತಾರೆ- 'ಜೂ.23ರ ಪತ್ರಿಕೆಯಲ್ಲಿ (2ನೇ ಪುಟ, ಬೆಂಗಳೂರು ಆವೃತ್ತಿ) 'ಶ್ರೀಕಾಂತ್‌ಗೆ ಪಿಎಚ್‌ಡಿ' ಎಂಬ ಪ್ರಕಟಣೆಯಲ್ಲಿ 'ನಿವೃತ್ತ ವಿಜ್ಞಾನಿ' ಎಂದು ಪ್ರಕಟವಾಗಿದೆ. ಆದರೆ ಈಗ ಅವರು ರಾಷ್ಟ್ರೀಯ ವೈಮಾಂತರಿಕ ಪ್ರಯೋಗ ಶಾಲೆಯಲ್ಲಿ (NAL) ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ 'ನಿವೃತ್ತ' ಎಂಬ ಪದವನ್ನು ತೆಗೆಯಬೇಕಾಗಿ ವಿನಂತಿ' ಎಂದಿದ್ದಾರೆ.
ಒಮ್ಮೆ ಪ್ರಕಟವಾಗಿದ್ದನ್ನು 'ತೆಗೆಯಲು' ಸಾಧ್ಯವಿಲ್ಲ. ಅದಕ್ಕೆ ತಿದ್ದುಪಡಿ ಪ್ರಕಟಿಸಲು ಮಾತ್ರ ಸಾಧ್ಯ. ಈ ಮೂಲಕ ಅದನ್ನು ಮಾಡಿದ್ದೇನೆ.
-ವಿಶ್ವೇಶ್ವರ ಭಟ್