ಕೊನೆಗೂ ಕಾಲ ಕೂಡಿ ಬಂತು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪವಾದ ಕೂಡಲೇ, ಅಹಿಂದ (ಅಲ್ಪ ಸಂಖ್ಯಾತ - ಹಿಂದುಳಿದ- ದಲಿತ) ಸಮುದಾಯಗಳ ಕ್ಷೇಮಾಭಿವೃದ್ಧಿ ಯೋಜನೆಗಳ ಪ್ರಸ್ತಾಪವೂ ಆಗಲೇಬೇಕು. ಅದು ಈಗಿನ ಅನಿವಾರ್ಯತೆ.
ಶನಿವಾರ ಬೆಂಗಳೂರಿನಲ್ಲಿ ಅವರು ನೇಕಾರರ ಸಂಘದ ಸಮಾರಂಭದಲ್ಲಿ ಪಾಲುಗೊಂಡಾಗ, ಅವರ ಜತೆಯಲ್ಲೇ ಸಚಿವ ಆಂಜನೇಯ ಅವರೂ ಇದ್ದಿದ್ದು ಸಹಜವೇ. ಆ ಸಭೆಯಲ್ಲೇ ಸಿದ್ದರಾಮಯ್ಯ ಅವರು ಬಹಿರಂಗವಾಗಿ, ತಮ್ಮ ಸರ್ಕಾರದ ಅವಧಿ ಮುಗಿಯುವುದರೊಳಗೆ ಹಿಂದುಳಿದ ಜಾತಿ-ಪಂಗಡಗಳ ಜನಸಂಖ್ಯೆ, ಜೀವನದ ಸ್ಥಿತಿಗತಿಗಳ ವಿವರಗಳನ್ನು ಒಳಗೊಂಡ ಜನಗಣತಿ ಪೂರ್ಣವಾಗಿ ವರದಿಯೂ ಸಿದ್ಧವಾಗಬೇಕೆಂದು ಹೇಳಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಅವರಿಗೆ ಆ ಕೆಲಸದ ಪ್ರಾಮುಖ್ಯವೂ ಗೊತ್ತು. ಅದನ್ನು ಮುಗಿಸಲೇಬೇಕಾದ ಅವಶ್ಯಕತೆಯೂ ಗೊತ್ತು.
ನಮ್ಮ-ನಿಮ್ಮೆಲ್ಲರ ಸಾಮಾಜಿಕ ಜೀವನದ ನಿಯಂತ್ರಣದ ಸೂತ್ರ ಇರುವುದೇ ಜಾತಿಯಲ್ಲಿ. ಯಾರಾದರೂ ಒಪ್ಪಲಿ ಬಿಡಲಿ ಸಾಮಾಜಿಕ ನ್ಯಾಯದ ಸಿದ್ಧಾಂತದ ಜಾರಿಗೆ, ಅಗತ್ಯವಾದ ಅಂಕಿ-ಅಂಶಗಳ ಸಂಗ್ರಹದ ಕೆಲಸ ಆಗಲೇಬೇಕು.
ಇದೇನೂ ಹೊಸ ಮಾತಲ್ಲ. 2004ರಲ್ಲೇ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿ ವಿತ್ತ ಮಂತ್ರಾಲಯದ ಸೂತ್ರಗಳನ್ನು ಹಿಡಿದಾಗಲೇ ಮಂಡಿಸಿದ ಬಜೆಟ್ನಲ್ಲಿ ರಾಜ್ಯದ ಇತರೆ ಹಿಂದುಳಿದ ಜಾತಿ-ಪಂಗಡಗಳ ಜನಸಂಖ್ಯೆ, ಅವರ ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಸ್ಥಾನ-ಮಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ವಿವರಗಳನ್ನು ಒಳಗೊಂಡ ಸಮಗ್ರ ಸ್ವರೂಪದ ಸಮೀಕ್ಷೆಗೆ ಇಪ್ಪತ್ತು ಕೋಟಿ ರುಪಾಯಿಗಳನ್ನು ಒದಗಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಕೆಲಸ ಪ್ರಾರಂಭವಾಗಲೇ ಇಲ್ಲ. ಅಂತಹ ಸಮೀಕ್ಷೆಯ ವರದಿ ಕೈಯಲ್ಲಿಲ್ಲದೇ ಯಾವ ಸರ್ಕಾರವೂ ಅರ್ಥಪೂರ್ಣ, ಶಾಸ್ತ್ರೀಯ, ಸಾಮಾಜಿಕ ನ್ಯಾಯ ವಿತರಣೆಯ ನೀತಿಯನ್ನು ರೂಪಿಸುವುದು ಅಸಾಧ್ಯ.
ಈಗಾಗಲೇ ಪರಿಶಿಷ್ಟ ಜಾತಿ - ಪಂಗಡಗಳಿಗೆ ಸಂಬಂಧಿಸಿದಂತೆ, ಸರ್ವಸಮ್ಮತವಾದ, ಸಂವಿಧಾನದ ಮಾನ್ಯತೆಪಡೆದಿರುವ ಒಂದು ನೀತಿ ಇದೆ. ಆದರೆ ಅಲ್ಲಿ ಒಳಪಂಗಡಗಳಿಗೆ ಅನ್ವಯವಾಗುವಂತಹ ಮೀಸಲೊಳಗಿನ ಮೀಸಲು ನೀತಿ ಇನ್ನೂ ರೂಪಗೊಂಡಿಲ್ಲ. ಅದಕ್ಕೆ ಬೇಕಾದ ಜನಜೀವನದ ಮಾದರಿಯ ಸಮೀಕ್ಷಾ ವರದಿ ಇಲ್ಲ.
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಪ್ರಕಟವಾಗಿದ್ದರೂ, ಅದನ್ನು ಸರ್ಕಾರ ಒಪ್ಪಿಕೊಂಡರೂ, ಅದು ಜಾರಿಗೆ ಬರುವುದು ಕಡುಕಷ್ಟ. ಆ ಜನವರ್ಗಗಳಲ್ಲಿ ತಮ್ಮ ಜಾತಿ ಯಾವುದು ಎನ್ನುವುದೇ ಗೊತ್ತಿಲ್ಲದ ಪರಿಸ್ಥಿತಿ ಇದೆ. ಇನ್ನು ಹಿಂದುಳಿದ ಜಾತಿಗಳಲ್ಲಿ ಒಳಜಾತಿಗಳ ಸಮಸ್ಯೆಯೂ ಇದ್ದಿದ್ದೇ. ಯಾವ ಜಾತಿಯೂ ತನ್ನ ಅಸ್ತಿತ್ವವನ್ನು ಬಿಟ್ಟು ಕೊಡಲು ಸಿದ್ಧವಾಗಿಲ್ಲ. ಹಾಗೆಂದು ಸರ್ಕಾರ ಈ ಸಮಸ್ಯೆಯನ್ನು ಎದುರಿಸದೇ ಇರುವುದು ಸಾಧ್ಯವಿಲ್ಲ. ಇತರೆ ಹಿಂದುಳಿದ ಜಾತಿ-ಪಂಗಡಗಳ ವಿಶೇಷ ಜನಗಣತಿಗೆ ಹಣವನ್ನು ಒದಗಿಸಿದರೂ, ಸರ್ಕಾರ ತನ್ನ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗಳು, ಪಟ್ಟಣ ಪಂಚಾಯಿತಿಗಳು, ನಗರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆಗಳಿಗೆ ಒಪ್ಪಿಸಿ ಸುಮ್ಮನಾಗುವಂತಿಲ್ಲ.
ಹಿಂದೆ ಇಪ್ಪತ್ತು ಕೋಟಿ ರುಪಾಯಿಗಳಲ್ಲಿ ಆಗಬಹುದಾಗಿದ್ದ ಕೆಲಸಕ್ಕೆ ಈಗ ನೂರು ಕೋಟಿ ರುಪಾಯಿಗಳೇ ಬೇಕಾಗಬಹುದು. ಅದಕ್ಕೆ ಸರ್ಕಾರ ಸಿದ್ಧವಾದರೂ ಆ ಕೆಲಸವನ್ನು ಸ್ಥಳೀಯ ಸಂಸ್ಥೆಗಳ ಹೆಗಲಿಗೆ ಹೇರಿದರೆ, ಅವು ಗುತ್ತಿಗೆ ಕೆಲಸಗಾರರನ್ನು ನೇಮಿಸಿಕೊಂಡು ಕೆಲಸ ಮಾಡಲು ಮುಂದಾದರೆ, ಮತದಾರರ ಪಟ್ಟಿಯ ಸಿದ್ಧತೆಯ ವ್ಯವಹಾರದಲ್ಲಿ ಆದಂತೆಯೇ ಗೊಂದಲವಾಗುವುದು ಖಚಿತ. ಜನರಿಂದ ಕುಟುಂಬದ ಮೂಲ ಹಾಗೂ ಇತರ ವಿವರಗಳ ಸಂಗ್ರಹದಲ್ಲಿ ಗೊಂದಲಕ್ಕೆ ಅವಕಾಶವಾದರೆ ಅದನ್ನು ಸರಿಪಡಿಸುವುದು ಸಾಧ್ಯವೇ ಇಲ್ಲ. ಈ ಕೆಲಸಕ್ಕಾಗಿ ಇಡೀ ರಾಜ್ಯದಲ್ಲಿ ಕೆಲಸ ಮಾಡಬಹುದಾದ ಸ್ಥಳೀಯರನ್ನೇ ಒಳಗೊಂಡ ವಿಶೇಷ ಪಡೆಗಳನ್ನು ಸೃಷ್ಟಿಸಿ, ಅವುಗಳ ಕೆಲಸದ ಉಸ್ತುವಾರಿಯ ಹೊಣೆಯನ್ನು ಒಂದು ಜವಾಬ್ದಾರಿಯುತವಾದ ಸಂಸ್ಥೆಗೆ ವಹಿಸುವುದು ಸೂಕ್ತ.
ಈ ಜಾತಿ ಪಂಗಡಗಳ ಸ್ಥಿತಿಗತಿಗಳ ಎಲ್ಲ ವಿವರಗಳೂ ಕರಾರುವಾಕ್ಕಾಗಿ ಲಭ್ಯವಾದಾಗಲೇ ಒಂದು ಅರ್ಥಪೂರ್ಣ, ಕಾರ್ಯಸಾಧುವಾದ ಹಿಂದುಳಿದವರ ಸಮಗ್ರ ಪ್ರಗತಿಯ ಯೋಜನೆಯನ್ನು ರೂಪಿಸುವುದೂ ಸಾಧ್ಯ. ಅದಕ್ಕೆ ಬೇಕಾದ ಪಾಂಡಿತ್ಯ, ಅನುಭವ ಹಾಗೂ ಪ್ರತಿಭೆ ರಾಜ್ಯ ಸರ್ಕಾರದಲ್ಲೇ ಇದೆ. ಈಗ ಕೊರತೆ ಕಂಡು ಬಂದಿರುವುದು ಬೇರು ಮಟ್ಟದಲ್ಲಿ. ಮೇಲ್ಮಟ್ಟದ ಚಿಂತನೆ ಹಾಗೂ ಯೋಜನೆಗಳಲ್ಲಿ ಅಲ್ಲ. ಯಾವ ಯಾವ ಜನವರ್ಗಗಳು ವಿಶೇಷ ನೆರವಿಗೆ ಅರ್ಹ, ಯಾವ ವರ್ಗಗಳು ಅನರ್ಹ ಎನ್ನುವುದನ್ನು ನಿರ್ಧರಿಸುವುದೇ ಕಡುಕಷ್ಟದ ಕೆಲಸ.
ಶನಿವಾರ ಸಿದ್ದರಾಮಯ್ಯ ಪಾಲುಗೊಂಡಿದ್ದು ರಾಜ್ಯ ನೇಕಾರರ ಸಂಘಟನೆಯ ಸಮಾರಂಭದಲ್ಲಿ. ದೇಶದಲ್ಲಿ ಕೃಷಿಯನ್ನು ಬಿಟ್ಟರೆ ಎರಡನೇ ಗ್ರಾಮೀಣ ಉದ್ಯೋಗದಾತ ಕಸುಬು ಎಂದರೆ ನೇಕಾರಿಕೆ. ಈ ಕಸುಬಿನಲ್ಲಿ ನಿರತರಾಗಿರುವವರಲ್ಲೇ ಹದಿನೇಳು - ಹದಿನೆಂಟು ಪಂಗಡಗಳಿವೆಯಂತೆ, ಇದು ಒಂದು ಸಮುದಾಯದ ಸಮಸ್ಯೆ ಅಲ್ಲ. ಜನಗಣತಿಯಿಂದಲೇ ಬೆಳಕಿಗೆ ಬರುವ ಹಲವಾರು ಸಮಸ್ಯೆಗಳನ್ನು ಈಗ ಊಹಿಸುವುದೂ ಕಷ್ಟ. ಸಿದ್ದರಾಮಯ್ಯ ಅವರ ಚಿಂತನೆ ದಿಕ್ಕು ಸರಿ. ಆದರೆ ಅವರು ಸರಿಯಾದ ಮಾರ್ಗ ಹಾಗೂ ಮಾರ್ಗದರ್ಶಕರನ್ನು ಆರಿಸಿಕೊಳ್ಳಬೇಕು.