ತಪ್ಪಾಯ್ತು ತಿದ್ಕೋತೀವಿ
ಕ್ರೀಡಾಪುಟದ ಕುರಿತು ಕೆಲಸಮಯದಿಂದ ದೂರುಗಳು ಕಡಿಮೆಯಾಗಿದ್ದವು. ಆದರೆ ಕಳೆದ ವಾರದಲ್ಲಿ ಕ್ರೀಡಾಪುಟದ ತಪ್ಪುಗಳ ಕುರಿತು ದೂರುಗಳು ಹೆಚ್ಚಾಗಿವೆ. ಬೆಂಗಳೂರಿನ ಉತ್ತರಹಳ್ಳಿಯಿಂದ ಸುಧೀಂದ್ರ ಕಂಚಿತೋಟ ಅವರು ಬರೆಯುತ್ತಾರೆ- 'ಕ್ರೀಡಾ ಪುಟದ ತಪ್ಪುಗಳು ಕೆಲವೊಮ್ಮೆ ತೀರಾ ಅಸಹನೀಯವಾಗಿರುತ್ತವೆ. ನಾನು ಗಮನಿಸಿದಂತೆ ಹೆಚ್ಚಿನ ತಪ್ಪುಗಳನ್ನು ಕೇವಲ ಕಣ್ತಪ್ಪಿನಿಂದ ಆದವುಗಳು ಎಂಬುದನ್ನು ನಾನು ಒಪ್ಪಲು ಸಿದ್ಧನಿಲ್ಲ. ಕೆಲವು ತಪ್ಪುಗಳಿಗೆ ಕನ್ನಡ ಭಾಷೆಯ ಅಜ್ಞಾನವೇ ಕಾರಣ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ಲಭಿಸುತ್ತವೆ.'
'ಮಾ.2ರ ಕ್ರೀಡಾಪುಟದಲ್ಲಿ (ಪುಟ 16) 'ನ್ಯೂಜಿಲೆಂಡ್ ಪ್ರವಾಸದಲ್ಲಿ ಖಡಿತ' ಎಂಬ ಶೀರ್ಷಿಕೆಯಲ್ಲಿ ಸುದ್ದಿಯೊಂದನ್ನು ಪ್ರಕಟಿಸಲಾಗಿದೆ. 'ಖಡಿತ' ಎಂಬ ಶಬ್ದವಿಲ್ಲ. 'ಖಂಡಿತ' ಎಂಬ ಶಬ್ದವಿದೆ. ಆದ್ದರಿಂದ ಅದು 'ಕಡಿತ' ಎಂದಾಗಬೇಕಿತ್ತು. ಕೇವಲ ಶೀರ್ಷಿಕೆಯಲ್ಲಿ ತಪ್ಪಾಗಿದ್ದರೆ ಅದು ಕಣ್ತಪ್ಪಿನಿಂದ ಆಗಿದ್ದು ಎಂದು ಒಪ್ಪಿಕೊಳ್ಳಬಹುದಾಗಿತ್ತು. ಆದರೆ ಸುದ್ದಿಯ ತುಂಬೆಲ್ಲ 'ಖಡಿತ'ಗಳ ಸರಮಾಲೆ! ಅದರರ್ಥ ನಿಮ್ಮ ಕ್ರೀಡಾ ವರದಿಗಾರರು 'ಕಡಿತ' ಎಂಬುದನ್ನು 'ಖಡಿತ' ಅಂತಲೇ ಭಾವಿಸಿದ್ದಾರೆ ಮತ್ತು ಅದೇ ಸರಿ ಎಂದು ಅಂದುಕೊಂಡಿದ್ದಾರೆ. ಆದ್ದರಿಂದಲೇ ಈ ರೀತಿಯಾಗಿದೆ.'
'ಇದೇ ಸುದ್ದಿಯ 5ನೇ ಪ್ಯಾರಾದಲ್ಲಿ 'ಯಾವುದೇ ಒಪ್ಪಂಧವಾಗಿಲ್ಲ' ಎಂದು ಬರೆಯಲಾಗಿದೆ. 'ಬಂಧ' ಎಂಬ ಬಳಕೆಯಿದೆ. ಅಲ್ಲಿ 'ಧ' ಮಹಾಪ್ರಾಣ. ಆದರೆ 'ಒಪ್ಪಂದ'ದಲ್ಲಿರುವ 'ದ' ಮಹಾಪ್ರಾಣವಲ್ಲ.'
'ಫೆ.27ರಂದು ಕ್ರೀಡಾ ಪುಟದಲ್ಲಿ (ಪುಟ 16) ಮೇಲ್ಭಾಗದಲ್ಲಿ 'ಭಾರತದ ಯಶಸ್ವಿ ಟೆಸ್ಟ್ ನಾಯಕರು' ಎಂಬ ಶೀರ್ಷಿಕೆಯಲ್ಲಿ ಅಂಕಿ-ಅಂಶಗಳನ್ನು ಒಳಗೊಂಡ ಬಾಕ್ಸ್ ಒಂದನ್ನು ಪ್ರಕಟಿಸಲಾಗಿದೆ. ಅದರಲ್ಲಿ ನಾಯಕ, ಒಟ್ಟು ಪಂದ್ಯಗಳು, ಜಯ ಎಂಬ ಮೂರು ವಿಭಾಗ ಮಾಡಿಕೊಳ್ಳಲಾಗಿದೆ. ಭಾರತ ತಂಡದ ಈಗಿನ ನಾಯಕ ಮಹೇಂದ್ರ ಸಿಂಗ್ ಧೋನಿ ಒಟ್ಟು 44 ಪಂದ್ಯಗಳನ್ನಾಡಿದ್ದು, 21ರಲ್ಲಿ ಜಯಗಳಿಸಿದ್ದಾರೆ. ಇದೊಂದೇ ಸರಿಯಾಗಿರುವುದು. ಉಳಿದ ನಾಯಕರೆಲ್ಲ ಆಡಿದ ಒಟ್ಟು ಪಂದ್ಯಗಳಿಗಿಂತ ಹೆಚ್ಚಿನ ಪಂದ್ಯಗಳನ್ನು ಗೆದ್ದಿದ್ದಾರೆ. ಇದು ಹೇಗೆ ಸಾಧ್ಯ?'
'ಗಂಗೂಲಿ ಒಟ್ಟು ಪಂದ್ಯಗಳು 21, ಜಯ 44, ಅಜರುದ್ದೀನ್ ಒಟ್ಟು ಪಂದ್ಯಗಳು 14, ಜಯ 47, ಗವಾಸ್ಕರ್ ಒಟ್ಟು ಪಂದ್ಯಗಳು 9, ಜಯ 47 ಎಂದಿದೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಗವಾಸ್ಕರ್ ಮತ್ತು ಅಜರುದ್ದೀನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ಯಶಸ್ವೀ ನಾಯಕರಾಗಬೇಕು. ಆದರೆ ಇದರ ಪಕ್ಕದಲ್ಲೇ 'ಗಂಗೂಲಿ ಸಾಧನೆ ಸರಿಗಟ್ಟಿದ ಮಹೇಂದ್ರ ಸಿಂಗ್ ಧೋನಿ' ಎಂದು ದಪ್ಪಕ್ಷರಗಳಲ್ಲಿ ಕಣ್ಣಿಗೆ ಕುಕ್ಕುವಂತೆ ಮುದ್ರಿಸಲಾಗಿದೆ. ನಿಮ್ಮ ಪತ್ರಿಕೆ ಪ್ರಕಾರ ಧೋನಿ ಗೆದ್ದಿದ್ದು 21 ಪಂದ್ಯ, ಗಂಗೂಲಿ ಗೆದ್ದಿದ್ದು 44 ಪಂದ್ಯ. ಯಾವ ಅರ್ಥದಲ್ಲಿ ಧೋನಿ ಅವರು ಗಂಗೂಲಿ ಸಾಧನೆಯನ್ನು ಸರಿಗಟ್ಟಿದರು?' ಎಂದು ಪ್ರಶ್ನಿಸಿದ್ದಾರೆ.
ಜಯಗಳಿಸಿದ ಪಂದ್ಯಗಳ ಸಂಖ್ಯೆಯನ್ನು ಒಟ್ಟು ಪಂದ್ಯಗಳು ಎಂದಿರುವಲ್ಲಿ ಬರೆದು, ಜಯಗಳಿಸಿದ ಪಂದ್ಯಗಳ ಸಂಖ್ಯೆ ಬರೆಯಬೇಕಾದಲ್ಲಿ ನಾಯಕರಾಗಿದ್ದ ಒಟ್ಟು ಪಂದ್ಯಗಳ ಸಂಖ್ಯೆಯನ್ನು ಬರೆದಿರುವುದೇ ಈ ತಪ್ಪಿಗೆ ಕಾರಣ. ಇಂತಹ ತಪ್ಪುಗಳ ಕುರಿತು ಓದುಗರು ಪ್ರಶ್ನಿಸಿದಾಗ ತಲೆತಗ್ಗಿಸುವುದು ಬಿಟ್ಟು ಬೇರೇನೂ ಮಾಡಲಾಗದು. ಇದರ ಅರಿವು ಸುದ್ದಿ ಬರೆಯುವಾಗ ಕ್ರೀಡಾ ವರದಿಗಾರರಿಗೆ ಇದ್ದರೆ ಉತ್ತಮ.
- ವಿಶ್ವೇಶ್ವರ ಭಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.