ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ವಿದ್ಯಾರಣ್ಯಪುರದಿಂದ ಎಚ್. ಆನಂದರಾಮ ಶಾಸ್ತ್ರಿಯವರು ಬರೆಯುತ್ತಾರೆ- 'ಫೆ.26ರಂದು 'ಕುಪ್ಪಳಿ' ಕುರಿತು 'ತಪ್ಪಾಯ್ತು ತಿದ್ಕೋತೀವಿ'ಯಲ್ಲಿ ಓದಿದವನೇ ಈ ಪತ್ರಬರೆಯುತ್ತಿದ್ದೇನೆ. 'ಕುಪ್ಪಳ್ಳಿ' ಎಂಬುದು ಸರ್ವಥಾ ತಪ್ಪು ಬಳಕೆ. 'ಕುಪ್ಪಳಿ'ಯೇ ಸರಿಯಾದ ಪದ. ಮಲೆನಾಡಿನ ಆ ಪ್ರದೇಶದಲ್ಲಿ 'ಕುಪ್ಪಳದ ಹಕ್ಕಿ' ಎಂಬೊಂದು ಬಗೆಯ ಹಕ್ಕಿ ಇದೆ. ಇದನ್ನು 'ಕುಪ್ಪಳಿ ಹಕ್ಕಿ' ಎಂದೂ ಕರೆಯುವುದುಂಟು. 'ಹುರುಳಿ ಹಕ್ಕಿ, ಮಳೆ ಹಕ್ಕಿ' ಎಂಬ ಹೆಸರುಗಳೂ ಈ ಹಕ್ಕಿಗೆ ಇವೆ. 'ಕುಪ್ಪಳ' ಎಂದರೆ 'ಬೊಕ್ಕೆ, ಗುಳ್ಳೆ' ಎಂದರ್ಥ. ಪಾರಿವಾಳದಂತೆ ಕಾಣುವ ಈ ಹಕ್ಕಿಯ ಮೈಮೇಲೆ ಹುರುಳಿ ಕಾಳುಗಳಂತಹ ಗುರುತುಗಳಿದ್ದು, ಈ ಹಕ್ಕಿಯು ಮರದ ಪೊಟರೆಯಲ್ಲಿ ಸೇರಿಕೊಂಡಿರುತ್ತದೆ. 'ಕ್ವಟ್ರ ಚಕ್ಕಿ ಕೊಡೋ ಕೊಡೊ' ಎಂದು (ನನ್ನಂತಹ ಕವಿಭಾವಜೀವಿಗಳಿಗೆ) ಭಾಸವಾಗುವಂತೆ ದನಿ ಹೊರಡಿಸುತ್ತದೆ.'
'ಅಪರೂಪವೂ, ಆಕರ್ಷಕವೂ ಆಗಿರುವ ಈ ಹಕ್ಕಿಯ ಬಾಹುಳ್ಯದಿಂದಾಗಿ ಆ ಗ್ರಾಮಕ್ಕೆ 'ಕುಪ್ಪಳಿ' ಎಂದು ಹೆಸರು ಬಳಕೆಗೆ ಬಂದಿರಬೇಕೆಂಬುದು ನನ್ನ ಅಭಿಪ್ರಾಯ. ಈ ಹಕ್ಕಿಯ ಅಂದ, ದನಿಯ ವಿಶೇಷ, ಮಳೆಗಾಲದಲ್ಲಿ ಇದರ ಚಟುವಟಿಕೆ ಇವು ಕುವೆಂಪು ಅವರ ಕಾಣ್ಕೆಗೆ ಕಾಣಿಕೆ ನೀಡಿರಲಿಕ್ಕೂ ಸಾಕು.'
'ಇನ್ನೊಂದು ಸಾಧ್ಯತೆಯೆಂದರೆ, 'ರಾಶಿ' ಅಥವಾ 'ಗುಂಪು' ಎಂಬ ಅರ್ಥ ಹೊಂದಿರುವ 'ಕುಪ್ಪಳಿ' ಪದವೇ ಆ ಹಳ್ಳಿಯ ಹೆಸರಾಗಿ, ಪ್ರಾಕೃತಿಕ ಅಥವಾ ಕೃಷಿ ಸಂಬಂಧಿತ ಕಾರಣದಿಂದಾಗಿ, ಬಳಕೆಗೆ ಬಂದಿರಬಹುದು. ಇಷ್ಟಕ್ಕೂ, ಲಾಗಾಯ್ತಿನಿಂದಲೂ ಅಧಿಕೃತ ದಾಖಲೆಗಳಲ್ಲೆಲ್ಲ ಆ ಹಳ್ಳಿಯ ಹೆಸರು 'ಕುಪ್ಪಳಿ' ಎಂದೇ ಇದೆ. ಕನ್ನಡ ನಾಡಿನ ಸಾವಿರಾರು ಹಳ್ಳಿಗಳ ಪೈಕಿ ಇದೊಂದೇ ಹೆಸರು ಬ್ರಿಟಿಷರ ಬಾಯಲ್ಲಿ, ಅಪಭ್ರಂಶಕ್ಕೀಡಾಯಿತೆಂದರೆ ನಂಬಲಾಗದು. ಕುಪ್ಪಳಿಗೆ ಅನತಿ ದೂರದಲ್ಲೇ ಮೇಗರವಳ್ಳಿ, ತೀರ್ಥಹಳ್ಳಿ ಮೊದಲಾದ ಊರುಗಳಿದ್ದು, ಅವು ಯಾವುವೂ ಹೀಗೆ ಅಪಭ್ರಂಶಕ್ಕೀಡಾಗದೇ ಇರುವಾಗ 'ಕುಪ್ಪಳ್ಳಿ'ಯೊಂದೇ 'ಕುಪ್ಪಳಿ'ಯಾಗಲು ಸಾಧ್ಯವಿಲ್ಲ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವೂ 'ಕುಪ್ಪಳಿ' ಎಂಬ ಪದವನ್ನೇ ಬಳಸುತ್ತಿದ್ದು, 'ಕುಪ್ಪಳ್ಳಿ' ಎಂಬ ತಪ್ಪು ಬಳಕೆಯ ಬಗ್ಗೆ ಆ ಪ್ರತಿಷ್ಠಾನದವರೊಬ್ಬರ ಬಳಿ ನಾನು ಬೇಸರ ವ್ಯಕ್ತಪಡಿಸಿದಾಗ ಅವರೂ ಸಹಮತ ವ್ಯಕ್ತಪಡಿಸಿದರು.'
"ಮೈಸೂರ ಮಲ್ಲಿಗೆ' ಕೃತಿಯು 'ಮೈಸೂರು ಮಲ್ಲಿಗೆ' ಎಂದು ತಪ್ಪಾಗಿ ಗುರುತಿಸಲ್ಪಡುತ್ತಿರುವಂತೆ 'ಕುಪ್ಪಳಿ' ಕೂಡ ತಪ್ಪಾಗಿ 'ಕುಪ್ಪಳ್ಳಿ' ಎಂದು ನಮ್ಮ ನಾಲಗೆಯಿಂದಲೇ ವಿರೂಪ ಹೊಂದಿದಿಯೇ ಹೊರತು ಬ್ರಿಟಿಷರಿಂದಲ್ಲ. ಅಂದಹಾಗೆ 'ಲೆ ಮಿಸಾರೆಬ್' ಎಂಬ ಆಂಗ್ಲ ಚಲನಚಿತ್ರದ ಈ ಹೆಸರನ್ನು 'ಲೆಸ್ ಮಿಸರೆಬಲ್ಸ್' ಎಂದು ನಮ್ಮವೇ ಅನೇಕ ಕನ್ನಡ ಪತ್ರಿಕೆಗಳು ಬರೆಯುತ್ತಿರುವುದನ್ನು ನೀವು ನೋಡಿರಬಹುದು' ಎಂದಿದ್ದಾರೆ.
ಬೆಂಗಳೂರಿನಿಂದ ಬಿ.ಎಸ್. ರಮೇಶ್ ಅವರು ಬರೆಯುತ್ತಾರೆ- "ಕುಪ್ಪಳಿ' ಬಗ್ಗೆ ಚರ್ಚೆ ಅಗತ್ಯವೇ ಇಲ್ಲ. 'ಕುಪ್ಪಳಿ' ಇದ್ದದ್ದು 'ಕುಪ್ಪಳ್ಳಿ' ಅಂತ ಜನರ ಬಾಯಿಂದ ಬಾಯಿಗೆ ಹರಡಿರಬಾರದೇಕೆ? ಉದಾಹರಣಗೆ 'ಹುಬ್ಬಳಿ'ಯನ್ನೂ ಆಂಗ್ಲದಲ್ಲಿ ಉಚ್ಛರಿಸುವಂತೆ ಕನ್ನಡದಲ್ಲಿ 'ಹುಬ್ಬಳ್ಳಿ' ಅಂತ ಕರೀತೀವಿ. ಇಲ್ಲಿ 'ಳಿ'ಗೆ 'ಳ್ಳಿ' ಒತ್ತು ಇದ್ದರೆ, ಆಂಗ್ಲಭಾಷೆಯಲ್ಲಿ ಏ್ಡಛಿಟ್ಝ ಅಷ್ಟೇ ಇದೆ.'
'ಇನ್ನೂ ಒಂದು ಸಂಗತಿಯನ್ನು ಹೇಳುವುದಾದರೆ, ನಗರದ 'ನೆಟ್ಟಕಲ್ಲಪ್ಪ' ಸರ್ಕಲ್ ಯಾವ ರೀತಿ ಬರಹ ಇದೆ ನೋಡಿ. 'ನೆಟ್ಟಕಲಪ್ಪ' ಅಂತ ಬರೆಸಲಾಗಿದೆ. ಇದು 'ನೆಟ್ಟಕಲ್ಲಪ್ಪ' ಅಲ್ಲವೇ? ಈ ರೀತಿ ತಪ್ಪುಗಳು ಆಗ್ತಾನೇ ಇರುತ್ತವೆ' ಎಂದಿದ್ದಾರೆ.
- ವಿಶ್ವೇಶ್ವರ ಭಟ್