ಸ್ವಾತಂತ್ರ್ಯಸೇನಾನಿ ರಾಜಾ ವೆಂಕಟಪ್ಪ ನಾಯಕ
ಸುರಪುರದ ರಾಜಾ ವೆಂಕಟಪ್ಪನಾಯಕ ತನ್ನ ಎಂಟನೇ ವಯಸ್ಸಿನಲ್ಲಿಯೇ ಸಿಂಹಾಸನವನ್ನೇರಿದ ಧೀರ. ಬ್ರಿಟಿಷ್ ಅಧಿಕಾರಿ ಕ್ಯಾಪ್ಟನ್ ಮೋಡೋಸ್ ಟೇಲರ್ ಎಂಬ ಆಂಗ್ಲ ಅಧಿಕಾರಿಯ ಕಣ್ಗಾವಲಿನಲ್ಲಿ ಬೆಳೆದ ವೆಂಕಟಪ್ಪನಾಯಕನನ್ನು ಕಣ್ಣುರೆಪ್ಪೆಯಂತೆ ನೋಡಿಕೊಳ್ಳಲಾಯಿತು. ಟೇಲರನು ನಾಯಕನಿಗೆ ಉತ್ತಮ ಶಿಕ್ಷಣ ನೀಡಲು ಒಬ್ಬ ವಿದ್ವಾಂಸರನ್ನು ನೇಮಕ ಮಾಡಿದ. ಸ್ವತಃ ತಾನೇ ಇತಿಹಾಸ ಮತ್ತು ಆಡಳಿತಕ್ಕೆ ಸಂಬಂಧಪಟ್ಟ ವಿಷಯಗಳನ್ನು ಬೋಧಿಸಿದ. ಮುಂದೆ ನಿಂತು ಚೌಲಕಾರ್ಯವನ್ನು ನಡೆಸಿದನು. ಪ್ರತಿ ಹಂತದಲ್ಲಿಯೂ ಅತ್ಯಂತ ಕಾಳಜಿಯಿಂದ ಬೆಳೆಸಿ ಅವನನ್ನು ಪರಿಪೂರ್ಣ ದೊರೆಯನ್ನಾಗಿ ರೂಪಿಸಿದ ಕೀರ್ತಿ ಟೇಲರನಿಗೆ ಸಲ್ಲುತ್ತದೆ. ಹೀಗಾಗಿ ವೆಂಕಟಪ್ಪನಾಯಕ ಟೇಲರನನ್ನು 'ಅಪ್ಪ' ಎಂದೇ ಕರೆಯುತ್ತಿದ್ದ. ಟೇಲರನಿಂದ ಶಿಕ್ಷಣದ ಜೊತೆಗೆ ಸ್ವಾಭಿಮಾನವನ್ನೂ ಕಲಿತ ನಾಯಕ ಒಬ್ಬ ಸಮರ್ಥ ಆಡಳಿತಗಾರನಾದ. ಟೇಲರನೂ ಸಹ ಹಳ್ಳಿಹಳ್ಳಿ ಸುತ್ತಾಡಿ ಕಂದಾಯ ವಸೂಲು ಮಾಡುವುದು, ಪಿತೂರಿ ಮಾಡುವವರನ್ನು ಹಿಡಿದು ಶಿಕ್ಷಿಸುವುದು, ನಿಜಾಮನಿಂದ ಪಡೆದ ಸಾಲವನ್ನು ತೀರಿಸುವುದು ಹೀಗೆ ಎಲ್ಲ ವಿಷಯಗಳಲ್ಲಿಯೂ ವೆಂಕಟಪ್ಪನಾಯಕನಿಗೆ ನೆರವಾಗಿ ಅವನ ಗೌರವಕ್ಕೆ ಪಾತ್ರನಾಗಿದ್ದ. ಇಂತಹ ಟೇಲರನನ್ನು ಬ್ರಿಟಿಷರು ಬಿಹಾರದ ಜಿಲ್ಲಾಧಿಕಾರಿಯಾಗಿ ನೇಮಿಸಿದರು. ಸ್ವತಂತ್ರವಾಗಿ ಆಡಳಿತ ನಡೆಸುತ್ತಿದ್ದ ವೆಂಕಟಪ್ಪನಾಯಕನು ಅಪ್ರತಿಮ ದೇಶಭಕ್ತನಾಗಿದ್ದ.
1857ರ ಪ್ರಥಮ ಸ್ವಾತಂತ್ರ್ಯ ಸಮರದಲ್ಲಿ ನಾನಾಸಾಹೇಬನಿಗೆ ಬೆಂಬಲ ಸೂಚಿಸಿ, ಬ್ರಿಟಿಷರಿಂದ ದೇಶವನ್ನು ಸ್ವಾತಂತ್ರ್ಯಗೊಳಿಸುವ ಕೆಲಸದಲ್ಲಿ ಪಾಲ್ಗೊಂಡ. ಬ್ರಿಟಿಷ್ ಸೈನ್ಯದಲ್ಲಿ ಕ್ರಾಂತಿಯ ಕಹಳೆ ಊದಲು ನೆರವಾಗಲು ಕೊಲ್ಲಾಪುರ, ಧಾರವಾಡ ಮತ್ತು ಬೆಳಗಾವಿ ಮುಂತಾದೆಡೆ ಮಹಿಪಾಲ ಸಿಂಗ್ ಎನ್ನುವ ಗೂಢಚಾರನನ್ನು ಕಳುಹಿಸಿದ. ಎಲ್ಲ ಕ್ರಾಂತಿಕಾರರ ಸಂಪರ್ಕ ಹೊಂದಿ ದಕ್ಷಿಣ ಭಾರತದಲ್ಲಿ ಸ್ವಾತಂತ್ರ್ಯ ಚಳವಳಿಯ ನೇತಾರನಾಗುತ್ತಿದ್ದ ವೆಂಕಟಪ್ಪನಾಯಕನ ಚರ್ಯೆಯನ್ನರಿತ ಬ್ರಿಟಿಷರು ಸುಮ್ಮನೆ ಕೂಡಲಿಲ್ಲ. ವೆಂಕಟಪ್ಪನ ಮೇಲೆ ಯುದ್ಧಸಾರುವ ಮೊದಲು ಕ್ಯಾಂಬೆಲ್ ಎಂಬ ಅಧಿಕಾರಿಯನ್ನು ಕಳುಹಿಸಿ ಎಚ್ಚರಿಸಿದರು.
ಆದರೆ ಸ್ವಾತಂತ್ರ್ಯ ಪ್ರಿಯನಾದ ವೆಂಕಟಪ್ಪನಾಯಕ ಬ್ರಿಟಿಷರಿಗೆ ತಲೆಬಾಗದೇ ಯುದ್ಧ ಸನ್ನದ್ಧನಾದ. ಕೆಲವು ಕುತಂತ್ರಿಗಳ ನೆರವಿನಿಂದ ವೆಂಕಟಪ್ಪನಾಯಕನನ್ನು ಬಂಧಿಸಿ ಸೆರೆಮನೆಗೆ ಕಳುಹಿಸಲಾಯಿತು. ಅವನಿಗೆ ಬುದ್ಧಿಹೇಳಲು ಟೇಲರನನ್ನು ಕರೆಸಲಾಯಿತು. ಟೇಲರನು ರೆಸಿಡಂಟನನ್ನು ಕಂಡು ಕ್ಷಮೆ ಬೇಡಿ ರಾಜ್ಯ ಉಳಿಸಿಕೊಳ್ಳಲು ಸಲಹೆ ನೀಡಿದ. ಆದರೆ ಸ್ವಾಭಿಮಾನಿಯಾದ ವೆಂಕಟಪ್ಪನಾಯಕ, 'ನಾನವನಲ್ಲಿ ಕ್ಷಮೆ ಬೇಡುವುದಿಲ್ಲ, ಷಂಡನಂತೆ ಪ್ರಜಾದ್ರೋಹ ಮಾಡಲಾರೆ' ಎಂದುಬಿಟ್ಟನು. ಕೊನೆಗೆ ವೆಂಕಟಪ್ಪನಾಯಕನಿಗೆ ಮರಣದಂಡನೆ ವಿಧಿಸಲಾಯಿತು. ಆದರೆ ಟೇಲರನ ಮಧ್ಯಸ್ಥಿಕೆಯಿಂದ ಆ ಶಿಕ್ಷೆಯನ್ನು ರದ್ದು ಮಾಡಿ ನಾಲ್ಕು ವರ್ಷದ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ಬಂಧನವನ್ನು ಬಯಸದ ಸುರಪುರದ ಈ ಕೇಸರಿ ಸೆರಮನೆಗೆ ಹೋಗುವ ಮನ್ನವೇ ತಲೆಗೆ ಗುಂಡು ಹಾರಿಸಿಕೊಂಡು ಅಸುನೀಗಿ ಅಮರನಾದ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ