ಸಾಲ ಮನ್ನ: ಭಾರಿ ಅವ್ಯವಹಾರ
ನಮ್ಮ ದೇಶದಲ್ಲಿ 1971 ರ ಗರೀಬಿ ಹಟಾವೋ ದಿನಗಳಿಂದಲೂ ಜನಹಿತ, ಜನಕಲ್ಯಾಣ ಕಾರ್ಯಕ್ರಮಗಳಿಗೆ ಬರವೇನೂ ಇಲ್ಲ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳು, ರಾಜ್ಯಗಳ ಸರ್ಕಾರದ ಕಾರ್ಯಕ್ರಮಗಳೆಲ್ಲವೂ ಸರಿಯಾದ ರೀತಿಯಲ್ಲಿ ಜಾರಿಗೆ ಬಂದು ಅರ್ಹರಿಗೆ, ಸತ್ಪಾತ್ರರಿಗೇ ಸೌಲಭ್ಯ ಪೂರ್ಣ ಪ್ರಮಾಣದಲ್ಲಿ ದೊರಕಿದ್ದರೆ ಈ ನಾಲ್ಕು ದಶಕಗಳಲ್ಲಿ ಭಾರತದ ಚಿತ್ರವೇ ಬೇರೆಯಾಗುತ್ತಿತ್ತು. ಆದರೆ ಅಗ್ಗದ ಜನಪ್ರಿಯತೆಯ ಸ್ಪರ್ಧೆಯಲ್ಲಿ, ಕಾರ್ಯಕ್ರಮಗಳನ್ನು ಜಾರಿಗೆ ತರುವುದಕ್ಕೆ ನಮಗಿರುವ ಸಾಧನ ಸಂಪತ್ತು ಹಾಗೂ ಸಿಬ್ಬಂದಿಯ ಗುಣಮಟ್ಟದ ಕಡೆಗೆ ಸರ್ಕಾರಗಳು ಗಮನ ಹರಿಸಲೇ ಇಲ್ಲ.
ರೈತರಿಗೆ ವಿಶೇಷವಾದ ನೆರವನ್ನು ಒದಗಿಸಿ, ಅವರ ಬೆನ್ನೆಲುಬನ್ನು ಭದ್ರಪಡಿಸುವ ಯೋಜನೆಗಳಿಗಂತೂ ಲೆಕ್ಕವೇ ಇಲ್ಲ. ಗ್ರಾಮೀಣ ಜೀವನದ ಸ್ವರೂಪವನ್ನೇ ಬದಲಾಯಿಸಬಹುದಾಗಿದ್ದ ಭೂ ಸುಧಾರಣೆಯಿಂದ ಹಿಡಿದು ಉಚಿತ ನೀರಾವರಿ ಸೌಲಭ್ಯ, ಅಗ್ಗದ ಬಡ್ಡಿಯ ಸಾಲ, ಗೊಬ್ಬರ-ಬೀಜಕ್ಕೆ ಸಬ್ಸಿಡಿಯಂತಹ ಯೋಜನೆಗಳು ಬೇಕಾದಷ್ಟಿವೆ. ಆ ಸಾಲಿಗೆ 1977 ರ ಅನಂತರ ಕೃಷಿ ಸಾಲ ಮನ್ನಾ ಯೋಜನೆಗಳೂ ಸೇರಿಕೊಂಡವು. 2008 ರಲ್ಲಿ ಕೇಂದ್ರ ಪ್ರಕಟಿಸಿದ "ಕೃಷಿ ಸಾಲ ಮನ್ನ ಹಾಗೂ ಸಾಲ ಪರಿಹಾರ" ಯೋಜನೆಯಂತೆ ಸುಮಾರು 52000 ಕೋಟಿ ರುಪಾಯಿಗಳ ಸಾಲವನ್ನು ಮನ್ನ ಮಾಡಲಾಯಿತು. ಸುಮಾರು 369 ಲಕ್ಷ ಬಡರೈತರು ಹಾಗೂ 60 ಲಕ್ಷ ಇತರ ರೈತರಿಗೆ ಈ ಸೌಲಭ್ಯ ಸಿಗಬೇಕಾಗಿತ್ತು. ಸರ್ಕಾರದ ಆಡಿಟರ್ ಜನರಲ್ ಈ ಬೃಹತ್ ರೈತ ಕಲ್ಯಾಣ ಯೋಜನೆಯ ಜಾರಿ ಕುರಿತಂತೆ ಪರೀಕ್ಷಾರ್ಥವಾಗಿ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 22 ರಷ್ಟು ಪ್ರಕರಣಗಳಲ್ಲಿ ವಿಧವಿಧವಾದ ದೋಷ, ಭ್ರಷ್ಟಾಚಾರವಿದೆ ಎನ್ನುವುದರ ಅರಿವಾಯಿತು. ಹಿಂದೆಯೇ ಈ ಆಡಿಟ್ ವರದಿಯ ಕರಡನ್ನು ಪ್ರಕಟಿಸಿದಾಗ ದೇಶದ ಅನೇಕ ಕಡೆಗಳಲ್ಲಿ ರೈತರ ಹೆಸರಲ್ಲಿ ಯಾರು ಯಾರೋ ಲಾಭ ಪಡೆಯುತ್ತಿದ್ದಾರೆನ್ನುವ ಕೂಗು ಕೇಳಿಬಂದಿತ್ತು. ಈಗ ಆಡಿಟ್ ವರದಿ ಸಂಸತ್ತಿನಲ್ಲಿ ಮಂಡನೆಯಾಗಿ ಅಧಿಕೃತ ಸ್ವರೂಪವನ್ನೇ ಪಡೆದಿದೆ. ಕರಡು ವರದಿಗೂ, ಅಂತಿಮ ವರದಿಗೂ ಏನೂ ವ್ಯತ್ಯಾಸವಿಲ್ಲ. ಕೃಷಿಗೆ ಸಂಬಂಧವಿಲ್ಲದ ಉದ್ದೇಶಗಳಿಗೆ ಪಡೆದ ಸಾಲಗಳೂ ಮನ್ನ ಆಗಿವೆ. ಅಪಾತ್ರರಿಗೆ ಸೌಲಭ್ಯ ಸಿಕ್ಕಿದೆ. ಅನೇಕ ಸತ್ಪಾತ್ರರಿಗೆ ಸಿಗಬೇಕಾದ ಪರಿಹಾರ- ಸೌಲಭ್ಯ ಸಿಕ್ಕಿಲ್ಲ. ಸಣ್ಣ ಹಣಕಾಸು ಸಂಸ್ಥೆಗಳಿಗೂ ಅನುಕೂಲವಾಗಿದೆ. ಅದು ಕಾಯಿದೆಯ ಉದ್ದೇಶವಾಗಿರಲಿಲ್ಲ.
ಬ್ಯಾಂಕ್ಗಳು ಅನೇಕ ರೈತರ ಖಾತೆಗಳಲ್ಲಿನ ವಿವರಗಳನ್ನೇ ಕೊಟ್ಟಿಲ್ಲ. ಬೇಕಾದಷ್ಟು ಪ್ರಕರಣಗಳಲ್ಲಿ ದಾಖಲೆಗಳನ್ನೇ ತಿದ್ದಲಾಗಿದೆ. ಫಲಾನುಭವಿ ರೈತರಿಂದ ಬ್ಯಾಂಕ್ಗಳು ಖಾತ್ರಿಪತ್ರವನ್ನು ಪಡೆಯಬೇಕೆನ್ನುವ ನಿಯಮವೂ ಜಾರಿಗೆ ಬಂದಿಲ್ಲ. ಈ ಪದ್ಧತಿಯೇ ತಪ್ಪು. ಸಾಲ ಕೊಡುವ ಸಂಸ್ಥೆಗಳೇ, ಸಾಲ ಮನ್ನ ಕಾರ್ಯಕ್ರಮದ ಯಶಸ್ಸಿನ ಮಾಪನವನ್ನು ಮಾಡುವುದು ಸರಿಯಲ್ಲ ಎಂದು ಆಡಿಟ್ ವರದಿ ತಿಳಿಸಿದೆ. ನಮ್ಮಲ್ಲಿ ಅವ್ಯವಹಾರಕ್ಕೆ ಅವಕಾಶವೇ ಇಲ್ಲದಂತೆ ಏನನ್ನೂ ಮಾಡುವುದು ಸಾಧ್ಯವಿಲ್ಲವೇ?